ದೇಶ

ಜಿಯೋ v/s ಏರ್‌ಟೆಲ್ v/s ಸ್ಟಾರ್‌ಲಿಂಕ್‌: ಭಾರತದಲ್ಲಿ ಸ್ಯಾಟಲೈಟ್ ಇಂಟರ್ನೆಟ್ ಕ್ರಾಂತಿಗೆ ಪ್ರಾಬ್ಲಂ ಏನು?

ಭಾರತದಲ್ಲಿ ಸ್ಯಾಟಲೈಟ್ ಇಂಟರ್ನೆಟ್ ಕ್ರಾಂತಿ ಶುರುವಾಗುವ ಮೊದಲೇ ಎಲಾನ್ ಮಸ್ಕ್ ಹಾಗೂ ಮುಕೇಶ್ ಅಂಬಾನಿ ನಡುವೆ ಮುಸುಕಿನ ಗುದ್ದಾಟ ತಾರಕಕ್ಕೇರಿದೆ. ಹಾಗಾದರೆ ಜಗತ್ತಿನಲ್ಲೇ ಸಂಚಲನ ಮೂಡಿಸಿರುವ ಸ್ಟಾರ್‌ಲಿಂಕ್‌ಗೆ ಭಾರತದ ಬಾಗಿಲು ಇನ್ನೂ ತೆರೆಯದಿರಲು ನಿಜವಾದ ಕಾರಣವೇನು? ಆ ಕುರಿತ ವರದಿ ಇಲ್ಲಿದೆ:

ಜಿಯೋ v/s ಏರ್‌ಟೆಲ್ v/s ಸ್ಟಾರ್‌ಲಿಂಕ್‌: ಭಾರತದಲ್ಲಿ ಸ್ಯಾಟಲೈಟ್ ಇಂಟರ್ನೆಟ್ ಕ್ರಾಂತಿಗೆ ಪ್ರಾಬ್ಲಂ ಏನು?
ಭಾರತದಲ್ಲಿ ಸ್ಯಾಟಲೈಟ್ ಇಂಟರ್ನೆಟ್ ವಿಳಂಬದ ಹಿಂದಿರುವ ಅಸಲಿ ರಹಸ್ಯವೇನು? — Online Desk
Published On :

ನವದೆಹಲಿ: ಭಾರತದಲ್ಲಿ ಎಲಾನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್ ಸ್ಯಾಟಲೈಟ್ ಇಂಟರ್ನೆಟ್ ಸೇವೆಗೆ ಅನುಮತಿ ವಿಳಂಬವಾಗುತ್ತಿರುವುದರ ಕುರಿತು ಕೇಂದ್ರ ಸರ್ಕಾರ ಮತ್ತು ಮಸ್ಕ್ ನಡುವೆ ತೀವ್ರ ವಿವಾದ ಭುಗಿಲೆದ್ದಿದೆ. ಅದರಲ್ಲೂ, ಇತ್ತೀಚೆಗೆ ಎಲಾನ್ ಮಸ್ಕ್ ಅವರು ಭಾರತದ ಕೆಲವು ಪ್ರಭಾವಿ ಉದ್ಯಮಿಗಳು ಭಾರತೀಯ ಗ್ರಾಹಕರ ಮೇಲಿನ ತಮ್ಮ ಏಕಸ್ವಾಮ್ಯವನ್ನು ಉಳಿಸಿಕೊಳ್ಳಲು ಸ್ಟಾರ್‌ಲಿಂಕ್ ಪ್ರವೇಶವನ್ನು ತಡೆಯುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ. ಅಲ್ಲದೆ, "ಅಂಬಾನಿ ಅವರೇನು ಭಾರತದ ಅಸಲಿ ಬಾಸ್ ಅಂದುಕೊಂಡಿದ್ದಾರಾ?" ಎಂದು ಮುಕೇಶ್ ಅಂಬಾನಿ ಅವರನ್ನು ಗುರಿಯಾಗಿಸಿ ಮಸ್ಕ್ ಪ್ರಶ್ನಿಸಿದ್ದಾರೆ. ಹಾಗಾದ್ರೆ, ಭಾರತ ಇನ್ನೂ ಸ್ಟಾರ್‌ಲಿಂಕ್‌ಗೆ ಅನುಮತಿ ಯಾಕೆ ನೀಡಿಲ್ಲ? ಇದರ ಹಿಂದಿನ ಕಾರಣವೇನು?

ಸ್ಟಾರ್‌ಲಿಂಕ್‌ಗೆ ಅನುಮತಿ ಸಿಗದಿರಲು ಕಾರಣವೇನು?

ಸ್ಟಾರ್‌ಲಿಂಕ್ ಈಗಾಗಲೇ ಆರಂಭಿಕ ಪರವಾನಗಿ ಮತ್ತು ಬಾಹ್ಯಾಕಾಶ ನಿಯಂತ್ರಕ ಸಂಸ್ಥೆಯಾದ IN-SPACe ಅನುಮೋದನೆಯನ್ನು ಪಡೆದುಕೊಂಡಿದೆ. ಆದರೆ, ವಾಣಿಜ್ಯ ಸೇವೆ ಆರಂಭಿಸಲು ಅಗತ್ಯವಿರುವ ಗೃಹ ಸಚಿವಾಲಯದ ಅಂತಿಮ ಭದ್ರತಾ ಕ್ಲಿಯರೆನ್ಸ್ ಮತ್ತು ಸ್ಪೆಕ್ಟ್ರಂ ಹಂಚಿಕೆ ಪ್ರಕ್ರಿಯೆ ಬಾಕಿ ಉಳಿದಿದೆ. ಹಾಗಾದ್ರೆ, ಸರ್ಕಾರದ ಮುಖ್ಯ ಆತಂಕಗಳೆನು?

  • ರಾಷ್ಟ್ರೀಯ ಭದ್ರತೆ ಮತ್ತು ಗಡಿ ಸುರಕ್ಷತೆ: ಸ್ಟಾರ್‌ಲಿಂಕ್ ಸಾಧನಗಳನ್ನು ಇರಾನ್‌ನಂತಹ ದೇಶಗಳಲ್ಲಿ ಅನುಮತಿ ಇಲ್ಲದಿದ್ದರೂ ಯುದ್ಧದ ಸಮಯದಲ್ಲಿ ಬಳಸಲಾದ ವರದಿಗಳು ಬಂದಿವೆ. ಭಾರತದ ಗಡಿ ಭಾಗಗಳಲ್ಲಿ (ಮಣಿಪುರ ಹಾಗೂ ಅಂಡಮಾನ್ ನಿಕೋಬಾರ್ ದ್ವೀಪಗಳು) ಕೆಲವು ಸ್ಟಾರ್‌ಲಿಂಕ್ ಸಾಧನಗಳು ಪತ್ತೆಯಾಗಿದ್ದು ಸರ್ಕಾರದ ಕಳವಳಕ್ಕೆ ಕಾರಣವಾಗಿತ್ತು. ವಿದೇಶಿ ಕಂಪನಿಯೊಂದು ಭಾರತದ ಭದ್ರತಾ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುತ್ತದೆಯೇ ಎಂಬ ಆತಂಕ ಸರ್ಕಾರಕ್ಕಿದೆ.

  • ಡೇಟಾ ಲೋಕಲೈಸೇಶನ್ (ಭಾರತದಲ್ಲೇ ಡೇಟಾ ಸಂಗ್ರಹಣೆ): ಭಾರತೀಯ ಬಳಕೆದಾರರ ಡೇಟಾವನ್ನು ಭಾರತದ ಗಡಿಯೊಳಗೆ ಇರುವ ಸರ್ವರ್‌ಗಳಲ್ಲೇ ಸಂಗ್ರಹಿಸಬೇಕು ಎಂಬುದು ಸರ್ಕಾರದ ಕಟ್ಟುನಿಟ್ಟಿನ ನಿಯಮ. ಸ್ಟಾರ್‌ಲಿಂಕ್ ಇದಕ್ಕಾಗಿ ಭಾರತದಲ್ಲೇ 20 ಕ್ಕೂ ಹೆಚ್ಚು ಗೇಟ್‌ವೇ ಸೈಟ್‌ಗಳನ್ನು ನಿರ್ಮಿಸಿರುವುದಾಗಿ ಹೇಳಿದರೂ, ತಪಾಸಣೆ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ.

  • ಸ್ಪೆಕ್ಟ್ರಂ ದರ ಮತ್ತು ಹಂಚಿಕೆ: ಉಪಗ್ರಹ ತರಂಗಾಂತರಗಳನ್ನು ಹರಾಜು ಮಾಡಬೇಕೇ ಅಥವಾ ಮುಕ್ತವಾಗಿ ಹಂಚಿಕೆ ಮಾಡಬೇಕೇ ಮತ್ತು ಅದಕ್ಕೆ ಎಷ್ಟು ಶುಲ್ಕ ವಿಧಿಸಬೇಕು ಎಂಬ ಚೌಕಟ್ಟು ಇನ್ನು ಅಂತಿಮ ನಿರ್ಧಾರಕ್ಕೆ ಬಂದಿಲ್ಲ.

ಮುಂದುವರೆದು, ಭಾರತದ ದೂರಸಂಪರ್ಕ ಸಚಿವಾಲಯ ಸ್ಪಷ್ಟಪಡಿಸಿರುವಂತೆ, ಸ್ಟಾರ್‌ಲಿಂಕ್ ಮಾತ್ರವಲ್ಲದೆ ಭಾರತೀಯ ಕಂಪನಿಗಳಾದ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಬೆಂಬಲಿತ ಒನ್‌ವೆಬ್ ಕೂಡ ಒಂದೇ ನಿಯಂತ್ರಕ ಹಂತದಲ್ಲಿದ್ದು, ಮೂರೂ ಕಂಪನಿಗಳ ಭದ್ರತಾ ತಪಾಸಣೆಗಳು ಒಟ್ಟಿಗೆ ನಡೆಯುತ್ತಿವೆ.

  • ಯೂಟೆಲ್‌ಸಾಟ್ ಒನ್‌ವೆಬ್ (ಏರ್‌ಟೆಲ್ ಬೆಂಬಲಿತ): ಇಂಗ್ಲೆಂಡ್ ಮೂಲದ ಈ ಸಂಸ್ಥೆಯಲ್ಲಿ ಭಾರತದ ಭಾರ್ತಿ ಏರ್‌ಟೆಲ್ ಪ್ರಮುಖ ಪಾಲುದಾರಿಕೆ ಹೊಂದಿದೆ. ಇದು ಈಗಾಗಲೇ ಜಾಗತಿಕವಾಗಿ ಉಪಗ್ರಹಗಳನ್ನು ನೆಟ್‌ವರ್ಕ್‌ಗೆ ಜೋಡಿಸಿದ್ದು, ಭಾರತದಲ್ಲಿ ವಾಣಿಜ್ಯ ಸೇವೆ ನೀಡಲು ಅಗತ್ಯವಿರುವ ಆರಂಭಿಕ ಪರವಾನಗಿಗಳನ್ನು ಪಡೆದಿದೆ. ಭದ್ರತಾ ಕ್ಲಿಯರೆನ್ಸ್ ಸಿಕ್ಕ ತಕ್ಷಣ ಸೇವೆ ಆರಂಭಿಸಲು ಸಜ್ಜಾಗಿದೆ. ಅದರಂತೆ, ಕೇವಲ ಸ್ಟಾರ್‌ಲಿಂಕ್ ಮಾತ್ರವಲ್ಲ, ಒನ್‌ವೆಬ್ ಮತ್ತು ಜಿಯೋ ಕೂಡ ಅಂತಿಮ ಭದ್ರತಾ ಪರವಾನಗಿ ಮತ್ತು ಸ್ಪೆಕ್ಟ್ರಂ ಹಂಚಿಕೆಗಾಗಿ ಕಾಯುತ್ತಿವೆ. ಸುನಿಲ್ ಮಿತ್ತಲ್ ಅವರ ಪ್ರಕಾರ, ಎಲ್ಲ ಕಂಪನಿಗಳೂ ಒಂದೇ ಹಂತದ ಪ್ರಕ್ರಿಯೆಯಲ್ಲವೆ.

  • ಜಿಯೋ ಸ್ಯಾಟಲೈಟ್ (ರಿಲಯನ್ಸ್ ಜಿಯೋ): ಮುಕೇಶ್ ಅಂಬಾನಿ ನೇತೃತ್ವದ ಜಿಯೋ ಉಪಗ್ರಹ ಇಂಟರ್ನೆಟ್ ಮಾರುಕಟ್ಟೆಯಲ್ಲಿ ದೊಡ್ಡ ಹೆಜ್ಜೆ ಇಡುತ್ತಿದೆ. ಲಕ್ಸೆಂಬರ್ಗ್ ಮೂಲದ SES ಕಂಪನಿಯೊಂದಿಗೆ ಪಾಲುದಾರಿಕೆ ಮೂಲಕ  ಜಿಯೋಸ್ಪೇಸ್‌ಫೈಬರ್ ಎಂಬ ಉಪಗ್ರಹ ಇಂಟರ್ನೆಟ್ ಸೇವೆಯನ್ನು ಸಿದ್ಧಪಡಿಸಿದೆ. ಸ್ವಂತವಾಗಿ ಸುಮಾರು 1,600 ಲೋ ಅರ್ಥ್ ಆರ್ಬಿಟ್ ಉಪಗ್ರಹಗಳ ಸಮೂಹವನ್ನು ಬಾಹ್ಯಾಕಾಶಕ್ಕೆ ಉಡಾಯಿಸಲು ಯೋಜಿಸಿದೆ. ಇದರ ಮೊದಲ ಪರೀಕ್ಷಾರ್ಥ ಉಡಾವಣೆ ಮುಂದಿನ ದಿನಗಳಲ್ಲಿ ನಡೆಯಲಿದ್ದು, ಭದ್ರತಾ ಕ್ಲಿಯರೆನ್ಸ್‌ಗಾಗಿ ಕಾಯುತ್ತಿದೆ.

ಹಾಗಾದ್ರೆ, ನಿಜವಾದ ಉದ್ಯಮದ ಪೈಪೋಟಿ ಏನು?

ಈ ವಿವಾದದ ಹಿಂದೆ ದೊಡ್ಡ ಮಾರುಕಟ್ಟೆ ಯುದ್ಧವಿದೆ. ಭಾರತದ $1.9 ಬಿಲಿಯನ್ ಮೌಲ್ಯದ ಸ್ಯಾಟಲೈಟ್ ಇಂಟರ್ನೆಟ್ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಮತ್ತು ಮುಕೇಶ್ ಅಂಬಾನಿ ಅವರ ರಿಲಯನ್ಸ್ ಜಿಯೋ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಸ್ಟಾರ್‌ಲಿಂಕ್ ಜಾಗತಿಕ ನಿಯಮಗಳಂತೆ ತರಂಗಾಂತರಗಳನ್ನು ನೇರವಾಗಿ ಹಂಚಿಕೆ ಮಾಡಬೇಕೆಂದು ಬಯಸಿದರೆ, ದೇಶೀಯ ಮಾರುಕಟ್ಟೆ ಉಳಿಸಿಕೊಳ್ಳಲು ಜಿಯೋ ಇವುಗಳನ್ನು ಹರಾಜಿನ ಮೂಲಕವೇ ನೀಡಬೇಕು ಎಂದು ಒತ್ತಾಯಿಸುತ್ತ ಬಂದಿರುವುದು ಈ ಸಂಘರ್ಷಕ್ಕೆ ಮೂಲ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.