ರಾಜ್ಯ

US-Israel Iran War: ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದೇ ಆದರೆ, ರಾಜ್ಯದ ಆರ್ಥಿಕತೆ ಮೇಲೆ ಭಾರೀ ಹೊಡೆತ..!

ಜಾಗತಿಕ ಕಚ್ಚಾ ತೈಲ ಸರಬರಾಜು ಮಾರ್ಗಗಳಲ್ಲಿ ವ್ಯತ್ಯಯ ಉಂಟಾದರೆ ಪೆಟ್ರೋಲ್–ಡೀಸೆಲ್ ಬೆಲೆ ಏರಿಕೆಯಾಗುವ ಸಂಭವವಿದ್ದು, ಇದರಿಂದ ಸಾರಿಗೆ, ಕೃಷಿ, ರಫ್ತು ಮತ್ತು ಕೈಗಾರಿಕಾ ವಲಯಗಳು ಒತ್ತಡಕ್ಕೆ ಸಿಲುಕುವ ಸಾಧ್ಯತೆಗಳಿವೆ.

US-Israel Iran War: ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದೇ ಆದರೆ, ರಾಜ್ಯದ ಆರ್ಥಿಕತೆ ಮೇಲೆ ಭಾರೀ ಹೊಡೆತ..!
ಇಸ್ರೇಲ್-ಇರಾನ್ ಯುದ್ಧ
Published On :

ಬೆಂಗಳೂರು: ಮಧ್ಯಪ್ರಾಚ್ಯವನ್ನು ಅಗ್ನಿಕುಂಡ ಮಾಡಿರುವ ಇರಾನ್, ಇಸ್ರೇಲ್, ಅಮೆರಿಕಾ ಯುದ್ಧ 4ನೇ ದಿನವೂ ತೀವ್ರ ಸ್ವರೂಪದಲ್ಲೇ ಮುಂದುವರೆದಿದ್ದು, ಜಾಗತಿಕವಾಗಿ ಭಾರೀ ಆತಂಕ ಸೃಷ್ಟಿಸಿದೆ.

ಈ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡಿದ್ದೇ ಆದರೆ, ಅದರ ಪರಿಣಾಮ ಕರ್ನಾಟಕದ ಆರ್ಥಿಕತೆಯ ಮೇಲೆ ನೇರವಾಗಿ ಬೀಳುವ ಸಾಧ್ಯತೆ ಇದೆ.

ಜಾಗತಿಕ ಕಚ್ಚಾ ತೈಲ ಸರಬರಾಜು ಮಾರ್ಗಗಳಲ್ಲಿ ವ್ಯತ್ಯಯ ಉಂಟಾದರೆ ಪೆಟ್ರೋಲ್–ಡೀಸೆಲ್ ಬೆಲೆ ಏರಿಕೆಯಾಗುವ ಸಂಭವವಿದ್ದು, ಇದರಿಂದ ಸಾರಿಗೆ, ಕೃಷಿ, ರಫ್ತು ಮತ್ತು ಕೈಗಾರಿಕಾ ವಲಯಗಳು ಒತ್ತಡಕ್ಕೆ ಸಿಲುಕುವ ಸಾಧ್ಯತೆಗಳಿವೆ.

ಮೊದಲ ಹಂತದಲ್ಲೇ ರಾಜ್ಯದ ಸಾರಿಗೆ ಮತ್ತು ಕೃಷಿ ವಲಯಗಳು ಹೊಡೆತ ಅನುಭವಿಸಬಹುದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (Agricultural Produce Market Committee) ಸಲಹೆಗಾರ ರಮೇಶ್ ಚಂದ್ರ ಲಾಹೋಟಿ ಅವರು ಮಾತನಾಡಿ, ರಾಜ್ಯದಲ್ಲಿ ಸರಕು ಸಾಗಾಣಿಕೆಯ ಶೇ.80ರಷ್ಟು ರಸ್ತೆ ಸಾರಿಗೆಯ ಮೇಲೆಯೇ ಅವಲಂಬಿತವಾಗಿದೆ. “ಡೀಸೆಲ್ ಬೆಲೆಯಲ್ಲಿ ಸ್ವಲ್ಪ ಪ್ರಮಾಣದ ಏರಿಕೆಯಾದರೂ ಸಾರಿಗೆ ವೆಚ್ಚ ಹೆಚ್ಚಾಗಿ, ಅಗತ್ಯ ವಸ್ತುಗಳ ದರ ಏರಿಕೆಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.

ಕರ್ನಾಟಕ ಪ್ರಮುಖ ಅಕ್ಕಿ ಉತ್ಪಾದನಾ ರಾಜ್ಯವಾಗಿದ್ದು, ಗಲ್ಫ್ ಪ್ರದೇಶಗಳಿಗೆ ರಫ್ತು ಮಾಡುವಲ್ಲಿ ದುಬೈ ಪ್ರಮುಖ ಟ್ರಾನ್ಸಿಟ್ ಕೇಂದ್ರವಾಗಿದೆ. ಅಕ್ಕಿ, ಬೇಳೆ, ಮಸಾಲೆ ಸೇರಿದಂತೆ ಹಲವಾರು ಉತ್ಪನ್ನಗಳು ದುಬೈ ಮೂಲಕ ಪಶ್ಚಿಮ ಏಷ್ಯಾ, ಯುರೋಪ್ ಮತ್ತು ಇತರೆ ದೇಶಗಳಿಗೆ ಸಾಗುತ್ತವೆ. ಹಡಗು ಸಂಚಾರದಲ್ಲಿ ವಿಳಂಬ ಅಥವಾ ಬಂದರು ನಿರ್ಬಂಧ ಉಂಟಾದರೆ ರಫ್ತು ಚಟುವಟಿಕೆಗಳಿಗೆ ಅಡ್ಡಿಯಾಗಬಹುದು ಎಂದು ಎಚ್ಚರಿಸಿದ್ದಾರೆ.

ಕೈಗಾರಿಕಾ ತಜ್ಞ ಕೆ. ಶಿವ ಶಣ್ಮುಗಂ ಅವರು ಮಾತನಾಡಿ, ಕಚ್ಚಾ ವಸ್ತುಗಳ ಸರಬರಾಜಿನಲ್ಲಿ ವಿಳಂಬ ಉಂಟಾದರೆ ಉತ್ಪಾದನಾ ವೇಳಾಪಟ್ಟಿಗೆ ಧಕ್ಕೆಯಾಗಬಹುದು. ತೈಲ ಬೆಲೆ ಏರಿಕೆಯ ಪರಿಣಾಮ ತಕ್ಷಣ ಗೋಚರಿಸದಿದ್ದರೂ, ಉದ್ವಿಗ್ನತೆ ಮುಂದುವರಿದರೆ ಕೆಲವು ವಾರಗಳಲ್ಲಿ ಅದರ ಪರಿಣಾಮ ತಿಳಿಯಲಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಬಾಲಾಜಿ ರಾವ್ ಅವರು ಮಾತನಾಡಿ, ಕಚ್ಚಾ ತೈಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾದರೆ ಪೆಟ್ರೋಲ್–ಡೀಸೆಲ್ ದರ ಏರಿಕೆ ಅನಿವಾರ್ಯ. “ಇಂಧನ ದರ ಏರಿದರೆ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಸಹಜವಾಗಿ ಏರಿಕೆಯಾಗುತ್ತವೆ. ಸಾರಿಗೆ ವೆಚ್ಚವು ಆಹಾರ, ತರಕಾರಿ ಮತ್ತು ದೈನಂದಿನ ಬಳಕೆಯ ವಸ್ತುಗಳ ದರದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ ಎಂದು ಹೇಳಿದ್ದಾರೆ.

ಇದಲ್ಲದೆ ಪ್ರವಾಸೋದ್ಯಮ ವಲಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ. ತೈಲ ಬೆಲೆ ಏರಿಕೆಯಿಂದ ರೂಪಾಯಿ ಮೌಲ್ಯ ಕುಸಿತವಾಗುವ ಸಾಧ್ಯತೆ ಇದ್ದು, ಆಮದು ವೆಚ್ಚ ಹೆಚ್ಚಾಗಬಹುದು.

ಈ ನಡುವೆ ಪೂರ್ಣ ಪ್ರಮಾಣದ ಯುದ್ಧ ಸಂಭವಿಸುವ ಸಾಧ್ಯತೆ ಕಡಿಮೆ ಎಂದು ತಜ್ಞರು ಹೇಳುತ್ತಿದ್ದರೂ, ಉದ್ವಿಗ್ನತೆ ತೀವ್ರಗೊಂಡರೆ ಅದರ ಪರಿಣಾಮ ಕರ್ನಾಟಕದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.