ಯುಎಸ್ ಕಾಂಗ್ರೆಸ್ ನಲ್ಲಿ Graham Bill ಅಂಗೀಕಾರ: ಅನಿಶ್ಚಿತ ಸ್ಥಿತಿಯಲ್ಲಿ ಅಮೆರಿಕ-ಭಾರತ ವ್ಯಾಪಾರ ಸಂಬಂಧ
ತೈಲ ಬೆಲೆ ಏರಿಕೆ, ಜಾಗತಿಕ ಬಾಂಡ್ಗಳ ಬಡ್ಡಿ ಇಳುವರಿ ಹೆಚ್ಚಳ ಮತ್ತು ಭೌಗೋಳಿಕ ರಾಜಕೀಯ ಅನಿಶ್ಚಿತತೆ ಹೆಚ್ಚಿರುವುದು ಭಾರತದ ಮುಂದಿರುವ ಬಾಹ್ಯ ಸವಾಲುಗಳನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹಣಕಾಸು ಸಚಿವಾಲಯದ ಇತ್ತೀಚಿನ ಮಾಸಿಕ ಆರ್ಥಿಕ ಪರಿಶೀಲನೆ ತಿಳಿಸಿದೆ.

ಅಮೆರಿಕ ಕಾಂಗ್ರೆಸ್ನಲ್ಲಿ ಗ್ರಹಾಂ ಮಸೂದೆ ಅಂಗೀಕಾರಗೊಂಡು, ಅದಕ್ಕೆ ಅಧ್ಯಕ್ಷರ ಅನುಮೋದನೆಯೂ ದೊರೆತಿರುವ ಹಿನ್ನೆಲೆಯಲ್ಲಿ ಅಮೆರಿಕದೊಂದಿಗಿನ ಭಾರತದ ವ್ಯಾಪಾರ ಸಂಬಂಧಗಳು ಇನ್ನೂ ಅನಿಶ್ಚಿತವಾಗಿಯೇ ಉಳಿದಿವೆ.
ಇದರ ನಡುವೆ ತೈಲ ಬೆಲೆ ಏರಿಕೆ, ಜಾಗತಿಕ ಬಾಂಡ್ಗಳ ಬಡ್ಡಿ ಇಳುವರಿ ಹೆಚ್ಚಳ ಮತ್ತು ಭೌಗೋಳಿಕ ರಾಜಕೀಯ ಅನಿಶ್ಚಿತತೆ ಹೆಚ್ಚಿರುವುದು ಭಾರತದ ಮುಂದಿರುವ ಬಾಹ್ಯ ಸವಾಲುಗಳನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹಣಕಾಸು ಸಚಿವಾಲಯದ ಇತ್ತೀಚಿನ ಮಾಸಿಕ ಆರ್ಥಿಕ ಪರಿಶೀಲನೆ ತಿಳಿಸಿದೆ.
ರಷ್ಯಾದ ಕಚ್ಚಾ ತೈಲ ಖರೀದಿಸುವ ದೇಶಗಳ ಮೇಲೆ ಶೇ.100ರವರೆಗೆ ಸುಂಕ ವಿಧಿಸಲು ಅಮೆರಿಕ ಅಧ್ಯಕ್ಷರಿಗೆ ಗ್ರಹಾಂ ಮಸೂದೆ ಅಧಿಕಾರ ನೀಡುತ್ತದೆ.
ಜಾಗತಿಕ ಪರಿಸ್ಥಿತಿ ಮತ್ತೊಮ್ಮೆ ಪ್ರತಿಕೂಲವಾಗಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ. ಸೆಪ್ಟೆಂಬರ್ನಲ್ಲಿ ತೈಲ ಬೆಲೆಗಳು ತೀವ್ರವಾಗಿ ಏರಿಕೆಯಾಗಿದ್ದು, ಜಾಗತಿಕ ಬಾಂಡ್ಗಳ ಇಳುವರಿಯೂ ಗಣನೀಯವಾಗಿ ಹೆಚ್ಚಾಗಿದೆ. ಭಾರತದ ಬಾಂಡ್ಗಳ ಇಳುವರಿ ತುಸು ಕಡಿಮೆ ಪ್ರಮಾಣದಲ್ಲಿ ಏರಿಕೆಯಾಗಿದ್ದರೂ, ಕಡಿಮೆ ಅಪಾಯದ ಪ್ರೀಮಿಯಂ ರೂಪಾಯಿ ಮೇಲೆ ಒತ್ತಡ ಹೇರುತ್ತಿದೆ ಎಂದು ಪರಿಶೀಲನಾ ವರದಿ ಹೇಳಿದೆ.
ತೈಲ ಬೆಲೆಗಳ ತೀವ್ರ ಏರಿಕೆಯು ಭಾರತದ ಆಮದು ವೆಚ್ಚ, ಹಣದುಬ್ಬರ ಮತ್ತು ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರುವುದರಿಂದ ಮತ್ತೊಂದು ಪ್ರಮುಖ ಆತಂಕವಾಗಿದೆ. ಆಗಸ್ಟ್ನಲ್ಲಿ ಸರಕುಗಳ ಆಮದು ಹೆಚ್ಚಳಕ್ಕೆ ಕಚ್ಚಾ ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಗಮನಾರ್ಹ ಕೊಡುಗೆ ನೀಡಿವೆ.
ಇಂಧನ ಮತ್ತು ವಿದ್ಯುತ್ ಕ್ಷೇತ್ರದ ಹಣದುಬ್ಬರ ಕೂಡ ಆಗಸ್ಟ್ನಲ್ಲಿ ಮತ್ತೆ ಏರಿಕೆಯಾಗಿದ್ದು, ಸುಮಾರು ಶೇ.23ಕ್ಕೆ ತಲುಪಿದೆ. ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಹಣದುಬ್ಬರ ಸುಮಾರು ಶೇ.34ರಷ್ಟಿತ್ತು.
ಬಂಡವಾಳ ಹರಿವನ್ನು ಆಕರ್ಷಿಸುವಲ್ಲಿ ಭಾರತವು ಕಠಿಣ ಸವಾಲನ್ನು ಎದುರಿಸುತ್ತಿದೆ ಎಂದು ಪರಿಶೀಲನಾ ವರದಿ ಹೇಳಿದೆ. ದೇಶಗಳು ಹೂಡಿಕೆಗಾಗಿ ಪರಸ್ಪರ ಪೈಪೋಟಿ ನಡೆಸುತ್ತಿದ್ದು, ಜಾಗತಿಕ ಪೂರೈಕೆ ಸರಪಳಿಗಳು ಕ್ರಮೇಣ ಭೌಗೋಳಿಕ-ರಾಜಕೀಯ ಸಾಧನಗಳಾಗಿ ಬಳಸಲ್ಪಡುತ್ತಿರುವುದು ಇದಕ್ಕೆ ಕಾರಣವಾಗಿದೆ.
ಭಾರತದ ವಿದೇಶಿ ವಿನಿಮಯ ಮೀಸಲು ಮೊನ್ನೆ ಸೆಪ್ಟೆಂಬರ್ 18ರ ವೇಳೆಗೆ ಭಾರತದ ವಿದೇಶಿ ವಿನಿಮಯ ಮೀಸಲು 765.9 ಬಿಲಿಯನ್ ಡಾಲರ್ನಷ್ಟಿತ್ತು.
ಬಂಡವಾಳ ಹರಿವಿನ ಮೇಲೆ ಪರಿಣಾಮ ಬೀರಬಹುದಾದ ಮತ್ತೊಂದು ಜಾಗತಿಕ ಬೆಳವಣಿಗೆಯಾದ ಕೃತಕ ಬುದ್ಧಿಮತ್ತೆ (AI) ಹೂಡಿಕೆ ಏರಿಕೆಯ ಬಗ್ಗೆಯೂ ಪರಿಶೀಲನಾ ವರದಿ ಗಮನ ಸೆಳೆದಿದೆ.
AI ಬಬಲ್ನ ‘ಅನಿವಾರ್ಯವಾದ ಅರ್ಥಪೂರ್ಣ ಕುಸಿತ’ ಇನ್ನೂ ಆರಂಭವಾಗಿಲ್ಲ ಎಂದು ವರದಿ ಹೇಳಿದೆ. ಬದಲಿಗೆ, AI ಕ್ಷೇತ್ರದ ಬೆಳವಣಿಗೆಯು ಗಡಿಯಾಚೆಗಿನ ಬಂಡವಾಳ ಹೂಡಿಕೆ ಮತ್ತು ಬಂಡವಾಳ ಹರಿವನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಇದೇ ವೇಳೆ ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ಪುನರುಜ್ಜೀವನಗೊಳ್ಳುತ್ತಿರುವ ಉತ್ಪಾದನಾ ವಲಯದ ಮಹತ್ವಾಕಾಂಕ್ಷೆಗಳಿಗೆ ಹಣಕಾಸು ಒದಗಿಸಲು ಹೂಡಿಕೆಗಳನ್ನು ಆಕರ್ಷಿಸುವ ಸ್ಪರ್ಧೆಯಲ್ಲಿ ತೊಡಗಿವೆ.
ಭಾರತ ಸೇರಿದಂತೆ ಅಭಿವೃದ್ಧಿಶೀಲ ಆರ್ಥಿಕತೆಗಳಿಗೆ ಇದು ಬಂಡವಾಳ ಆಕರ್ಷಿಸುವ ಪರಿಸರವನ್ನು ಮತ್ತಷ್ಟು ಕಠಿಣಗೊಳಿಸಿದೆ. ಜಾಗತಿಕ ಪೂರೈಕೆ ಸರಪಳಿಗಳು ಹೆಚ್ಚು ವಿಭಜಿತವಾಗುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆಗಾಗಿ ದೇಶಗಳ ನಡುವಿನ ಸ್ಪರ್ಧೆ ಹೆಚ್ಚುತ್ತಿದೆ.
ಆದಾಗ್ಯೂ, ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತಕ್ಕೆ ಬರುವ ನಿವ್ವಳ ವಿದೇಶಿ ನೇರ ಹೂಡಿಕೆ (FDI) ಒಳಹರಿವು ಉತ್ತಮವಾಗಿರಲಿದೆ ಎಂದು ಪರಿಶೀಲನಾ ವರದಿ ನಿರೀಕ್ಷಿಸಿದೆ.
ಈ ಸವಾಲುಗಳ ನಡುವೆಯೂ ಭಾರತದ ವ್ಯಾಪಾರ ವಹಿವಾಟು ಉತ್ತಮವಾಗಿದೆ. ಆಗಸ್ಟ್ನಲ್ಲಿ ಒಟ್ಟು ರಫ್ತು ವರ್ಷದಿಂದ ವರ್ಷಕ್ಕೆ ಶೇ.25.4ರಷ್ಟು ಏರಿಕೆಯಾಗಿ ದಾಖಲೆಯ 82.7 ಬಿಲಿಯನ್ ಡಾಲರ್ಗೆ ತಲುಪಿದೆ. ಇದೇ ವೇಳೆ ಆಮದು ಶೇ.18.8ರಷ್ಟು ಏರಿಕೆಯಾಗಿ 92.1 ಬಿಲಿಯನ್ ಡಾಲರ್ ಆಗಿದೆ. ಇದರ ಪರಿಣಾಮವಾಗಿ ಒಟ್ಟಾರೆ ವ್ಯಾಪಾರ ಕೊರತೆ ಹಿಂದಿನ ವರ್ಷದ 11.6 ಬಿಲಿಯನ್ ಡಾಲರ್ನಿಂದ 9.4 ಬಿಲಿಯನ್ ಡಾಲರ್ಗೆ ಇಳಿದಿದೆ.
ಸರಕು ರಫ್ತು ಶೇ.26.1ರಷ್ಟು ಏರಿಕೆಯಾಗಿ 43.8 ಬಿಲಿಯನ್ ಡಾಲರ್ಗೆ ತಲುಪಿದ್ದರೆ, ಸೇವಾ ರಫ್ತು ಶೇ.24.6ರಷ್ಟು ಹೆಚ್ಚಾಗಿ 38.9 ಬಿಲಿಯನ್ ಡಾಲರ್ ಆಗಿದೆ. 17.5 ಬಿಲಿಯನ್ ಡಾಲರ್ಗಳ ಸೇವಾ ವಹಿವಾಟಿನ ಹೆಚ್ಚುವರಿ, ಸರಕು ವ್ಯಾಪಾರ ಕೊರತೆಯ ಶೇ.65ರಷ್ಟನ್ನು ಸರಿದೂಗಿಸಿದೆ.
ಭಾರತದ ಮೇಲಿನ ಹೂಡಿಕೆದಾರರ ಆಸಕ್ತಿ ಕಡಿಮೆಯಾಗಿಲ್ಲ, ಆದರೆ ಅಮೆರಿಕದೊಂದಿಗಿನ ವ್ಯಾಪಾರ ಸಂಬಂಧದಲ್ಲಿನ ಅನಿಶ್ಚಿತತೆ, ಸುಂಕದ ಒತ್ತಡ, ಕಚ್ಚಾ ತೈಲ ಬೆಲೆಗಳು ಮತ್ತು ಜಾಗತಿಕ AI ಸಂಬಂಧಿತ ಬೆಳವಣಿಗೆಗಳಲ್ಲಿ ಭಾರತದ ನಿರ್ದಿಷ್ಟ ಪಾತ್ರದ ಕೊರತೆ ಇವೆಲ್ಲವೂ ಹೂಡಿಕೆ ತಾಣವಾಗಿ ಭಾರತದ ಆಕರ್ಷಣೆಯ ಮೇಲೆ ಪರಿಣಾಮ ಬೀರುತ್ತಿವೆ.
ಕಾಲಕ್ರಮೇಣ ಈ ಕೆಲವು ಅನಿಶ್ಚಿತತೆಗಳು ಕಡಿಮೆಯಾಗುವ ನಿರೀಕ್ಷೆಯಿದ್ದು, ಭಾರತದ ಮೂಲಭೂತ ಆರ್ಥಿಕ ಬೆಳವಣಿಗೆಯ ಸಾಮರ್ಥ್ಯ ಮತ್ತೆ ಹೂಡಿಕೆದಾರರ ಗಮನ ಸೆಳೆಯಬಹುದು. ಭೌಗೋಳಿಕ ರಾಜಕೀಯ ಮತ್ತು ಭೌಗೋಳಿಕ ಆರ್ಥಿಕ ಅನಿಶ್ಚಿತತೆ ಮುಂದುವರಿಯುವುದರಿಂದ, ಕೋವಿಡ್ ನಂತರದ ಭಾರತದ ಆರ್ಥಿಕ ಬೆಳವಣಿಗೆಯ ವೇಗವನ್ನು ಲೆಕ್ಕಿಸದೆ ಮುಂದುವರಿಯಲು ಸಾಧ್ಯವಿಲ್ಲ ಎಂದು ಅದು ಎಚ್ಚರಿಸಿದೆ.
ಏನಿದು ಗ್ರಹಾಂ ಮಸೂದೆ?
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮುಖ ಮಿತ್ರರಾಗಿದ್ದ ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಾಂ ಅವರು `ಅಲ್ಪಕಾಲದ ಮತ್ತು ಹಠಾತ್ ಅನಾರೋಗ್ಯ'ದ ಕಾರಣ ಕಳೆದ ಜುಲೈಯಲ್ಲಿ ತೀರಿಕೊಂಡಿದ್ದರು. ಈ ವರ್ಷದ ಜನವರಿಯಲ್ಲಿ ಗ್ರಹಾಂ ಅವರು, ತಾವು ಸಿದ್ಧಪಡಿಸಿದ `ಗ್ರಹಾಂ-ಬ್ಲೂಮೆಂಥಾಲ್ ನಿರ್ಬಂಧಗಳ ಮಸೂದೆ'ಗೆ ಟ್ರಂಪ್ ಹಸಿರು ನಿಶಾನೆ ತೋರಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




