ಭಾರತ ಸೇರಿ ರಷ್ಯಾದ ಇತರ ವ್ಯಾಪಾರ ಪಾಲುದಾರ ದೇಶಗಳ ಮೇಲೆ ಶೇ.100 ಸುಂಕ: ಮಸೂದೆಗೆ ಅಮೆರಿಕ ಸಂಸತ್ತು ಅನುಮೋದನೆ
ಉಕ್ರೇನ್ ವಿರುದ್ಧದ ಯುದ್ಧ ನಡೆಸಲು ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲಗಳನ್ನು ಕಡಿತಗೊಳಿಸುವ ಉದ್ದೇಶದಿಂದ ಅಮೆರಿಕ ಸಂಸತ್ ಸದಸ್ಯರು ಈ ಕ್ರಮ ಕೈಗೊಂಡಿದ್ದಾರೆ.

ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ರಷ್ಯಾ ವಿರುದ್ಧ ನಿರ್ಬಂಧಗಳನ್ನು ವಿಧಿಸಲು ಹಾಗೂ ಭಾರತ, ಚೀನಾ ಸೇರಿದಂತೆ ರಷ್ಯಾದ ತೈಲ ಮತ್ತು ಅನಿಲದ ವ್ಯಾಪಾರ ಪಾಲುದಾರ ರಾಷ್ಟ್ರಗಳ ಮೇಲೆ ಭಾರಿ ಸುಂಕ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅಧಿಕಾರ ನೀಡುವ ಮಸೂದೆಯನ್ನು ಅಂಗೀಕರಿಸಿದೆ.
ಉಕ್ರೇನ್ ವಿರುದ್ಧದ ಯುದ್ಧ ನಡೆಸಲು ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲಗಳನ್ನು ಕಡಿತಗೊಳಿಸುವ ಉದ್ದೇಶದಿಂದ ಅಮೆರಿಕ ಸಂಸತ್ ಸದಸ್ಯರು ಈ ಕ್ರಮ ಕೈಗೊಂಡಿದ್ದಾರೆ.
ಸೆನೆಟ್ ಕಳೆದ ತಿಂಗಳು ಅಂಗೀಕರಿಸಿದ್ದ ‘ಲಿಂಡ್ಸೆ ಓ. ಗ್ರಹಾಂ ಸ್ಯಾಂಕ್ಷನಿಂಗ್ ರಷ್ಯಾ ಅಂಡ್ ಇರಾನ್ ಆ್ಯಕ್ಟ್ ಆಫ್ 2026’ ಮಸೂದೆಯನ್ನು ನಿನ್ನೆ ಬುಧವಾರ ಸಂಜೆ ಹೌಸ್ 262-159 ಮತಗಳಿಂದ ಅಂಗೀಕರಿಸಿದೆ. ಇದೀಗ ಮಸೂದೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿಗಾಗಿ ಹೋಗಲಿದ್ದು, ಅವರು ಸಹಿ ಹಾಕುವ ಮೂಲಕ ಅದು ಕಾನೂನು ಆಗಿ ಜಾರಿಗೆ ಬರಲಿದೆ.
203 ರಿಪಬ್ಲಿಕನ್ನರು, 58 ಡೆಮಾಕ್ರಾಟ್‌ಗಳು ಹಾಗೂ ಒಬ್ಬ ಸ್ವತಂತ್ರ ಸದಸ್ಯರು ಮಸೂದೆಯ ಪರವಾಗಿ ಮತ ಚಲಾಯಿಸಿದರು. ಏಳು ರಿಪಬ್ಲಿಕನ್ನರು ಮತ್ತು 152 ಡೆಮಾಕ್ರಾಟ್‌ಗಳು ಮಸೂದೆಯನ್ನು ವಿರೋಧಿಸಿದರು.
ಡೆಮಾಕ್ರಾಟ್‌ಗಳ ವಿರೋಧವು ಮುಖ್ಯವಾಗಿ ಅಧ್ಯಕ್ಷ ಟ್ರಂಪ್‌ಗೆ ನೀಡಲಾಗಿರುವ ಸುಂಕ ವಿಧಿಸುವ ಅಧಿಕಾರದ ಸುತ್ತ ಕೇಂದ್ರೀಕೃತವಾಗಿತ್ತು.
ಈ ಮಸೂದೆಗೆ ದಕ್ಷಿಣ ಕೆರೊಲಿನಾದ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಅವರ ಹೆಸರಿಡಲಾಗಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಮಸೂದೆಗೆ ಬೆಂಬಲ ಕ್ರೋಢೀಕರಿಸಲು ಶ್ರಮಿಸಿದ್ದ ಅವರು ಕಳೆದ ಜುಲೈನಲ್ಲಿ ನಿಧನರಾಗಿದ್ದರು.
ಮಸೂದೆ ಏನು ಮಾಡುತ್ತದೆ?
ಈ ಅಧ್ಯಕ್ಷರಿಗೆ ಮತ್ತಷ್ಟು ಸುಂಕ ವಿಧಿಸುವ ಅಧಿಕಾರ ನೀಡುವುದನ್ನು ನಾವು ಬೆಂಬಲಿಸುವುದಿಲ್ಲ ಎಂದು ಮಸೂದೆ ಮೇಲಿನ ಚರ್ಚೆ ವೇಳೆ ಡೆಮಾಕ್ರಟಿಕ್ ಸಂಸದ ರಿಚರ್ಡ್ ನೀಲ್ ಹೇಳಿದರು.
ರಷ್ಯಾದ ನಾಯಕತ್ವ ಮತ್ತು ಇಂಧನ ವಲಯದ ಮೇಲೆ ಮಾತ್ರವಲ್ಲದೆ, ತೈಲ ಸಾಗಣೆಯ ಮೇಲಿನ ನಿರ್ಬಂಧಗಳನ್ನು ತಪ್ಪಿಸಿಕೊಳ್ಳಲು ರಷ್ಯಾಗೆ ನೆರವಾಗುತ್ತಿರುವ ‘ಶ್ಯಾಡೋ ಫ್ಲೀಟ್’ ಎಂದು ಕರೆಯಲಾಗುವ ಹಡಗುಗಳ ಮೇಲೂ ನಿರ್ಬಂಧ ವಿಧಿಸುವ ಉದ್ದೇಶವನ್ನು ಮಸೂದೆ ಹೊಂದಿದೆ.
ರಷ್ಯಾದ ತೈಲ ಮತ್ತು ಅನಿಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಂತೆ ಚೀನಾ, ಭಾರತ ಸೇರಿದಂತೆ ಇತರ ದೇಶಗಳ ಮೇಲೆ ಕಠಿಣ ಸುಂಕ ವಿಧಿಸಲು ಅಮೆರಿಕ ಸರ್ಕಾರಕ್ಕೆ ಅಧಿಕಾರ ನೀಡುವುದರ ಜೊತೆಗೆ, ಇರಾನ್ ವಿರುದ್ಧ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಲು ಕೂಡ ಮಸೂದೆ ಅವಕಾಶ ಕಲ್ಪಿಸುತ್ತದೆ.
ಚೀನಾ ಮತ್ತು ಭಾರತ, ನೀವು ನಿಮ್ಮ ತೈಲ ಮತ್ತು ಅನಿಲವನ್ನು ಬೇರೆಡೆಯಿಂದ ಖರೀದಿಸುವುದು ಉತ್ತಮ ಎಂದು ಮಸೂದೆ ಅಂಗೀಕಾರದ ಬಳಿಕ ಡೆಮಾಕ್ರಟಿಕ್ ಸೆನೆಟರ್ ರಿಚರ್ಡ್ ಬ್ಲೂಮೆಂಥಾಲ್ ಸುದ್ದಿಗಾರರಿಗೆ ತಿಳಿಸಿದರು.
ಶ್ಯಾಡೋ ಫ್ಲೀಟ್ ಮೂಲಕ ರಷ್ಯಾ ತನ್ನ ತೈಲ ಮತ್ತು ಅನಿಲವನ್ನು ಮಾರಾಟ ಮಾಡುತ್ತಿದೆ. ಇದರಿಂದ ಅವುಗಳನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಲಾಗುತ್ತಿದ್ದು, ಮುಖ್ಯವಾಗಿ ಚೀನಾ ಮತ್ತು ಭಾರತದಂತಹ ದೇಶಗಳಿಗೆ ಸಾಗಿಸಲಾಗುತ್ತಿದೆ ಎಂದು ಡೆಮಾಕ್ರಟಿಕ್ ಸೆನೆಟರ್ ಜೀನ್ ಶಹೀನ್ ಹೇಳಿದರು.
ರಷ್ಯಾದ ತೈಲ ಮತ್ತು ಅನಿಲದ ಅತಿ ದೊಡ್ಡ ಬಳಕೆದಾರ ಚೀನಾ. ಆದ್ದರಿಂದ ಪುಟಿನ್‌ಗೆ ಮಾತ್ರವಲ್ಲದೆ ಚೀನಾಕ್ಕೂ, ರಷ್ಯಾದ ತೈಲ ಮತ್ತು ಅನಿಲ ಖರೀದಿಸುವ ಪ್ರತಿಯೊಬ್ಬರಿಗೂ ಅವರು ಇದಕ್ಕಾಗಿ ಬೆಲೆ ತೆರಬೇಕಾಗುತ್ತದೆ ಎಂಬ ಅತ್ಯಂತ ಬಲವಾದ ಸಂದೇಶವನ್ನು ರವಾನಿಸಬೇಕಿದೆ ಎಂದು ಶಹೀನ್ ಹೇಳಿದರು.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಲು ಕೆಲವೇ ದಿನಗಳು ಬಾಕಿ ಇರುವಾಗಲೇ ಮಸೂದೆ ಅಂಗೀಕಾರಗೊಂಡಿದೆ.
ಸೆನೆಟ್ ಕಳೆದ ತಿಂಗಳು 86-11 ಮತಗಳ ಭಾರಿ ಬಹುಮತದಿಂದ ಮಸೂದೆಯನ್ನು ಅಂಗೀಕರಿಸಿತ್ತು. ಆದರೆ ಹೌಸ್‌ನಲ್ಲಿ ಮಸೂದೆ ಅಂಗೀಕಾರ ಪ್ರಕ್ರಿಯೆ ನಿಧಾನಗೊಂಡಿತ್ತು.
ನವೆಂಬರ್ 3ರಂದು ನಡೆಯಲಿರುವ ಚುನಾವಣೆಗೂ ಮುನ್ನ ಮತದಾನಕ್ಕಾಗಿ ಹೌಸ್ ಅಧಿವೇಶನ ನಡೆಸುವ ನಿರೀಕ್ಷೆಯಿದ್ದ ಕೊನೆಯ ದಿನದಂದು ಮಸೂದೆ ಅಂಗೀಕಾರಗೊಂಡಿದೆ. ಮಸೂದೆ ಮೇಲಿನ ಮತದಾನ ನಡೆಯುತ್ತಿರುವ ಸಂದರ್ಭದಲ್ಲೇ ಉಕ್ರೇನ್ ಪರ ಸಂಘಟನೆಗಳು ತಮ್ಮ ಬೆಂಬಲಕ್ಕೆ ಲಾಬಿ ನಡೆಸುವ ಪ್ರಯತ್ನಗಳನ್ನು ತೀವ್ರಗೊಳಿಸಿವೆ.
ಅಮೆರಿಕನ್ ಕೊಲಿಷನ್ ಫಾರ್ ಉಕ್ರೇನ್ ಆಯೋಜಿಸಿರುವ ‘ಉಕ್ರೇನ್ ಆ್ಯಕ್ಷನ್ ಸಮಿಟ್’ ನಡೆಯುತ್ತಿದ್ದು, ಉಕ್ರೇನ್ ಗೆ ಅಮೆರಿಕದ ನಿರಂತರ ಬೆಂಬಲ ಮುಂದುವರಿಸುವಂತೆ ಅಮೆರಿಕದ ಸಂಸದರ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



