ರಷ್ಯಾಗೆ ಟ್ರಂಪ್ ಬಿಗ್ ಶಾಕ್: ಶೇ.100ರಷ್ಟು ಸುಂಕಕ್ಕೆ ಅಸ್ತು; ಭಾರತ-ಚೀನಾ ಮೇಲೂ ನಿರ್ಬಂಧದ ತೂಗುಗತ್ತಿ..!
ಈ ಕ್ರಮದ ವ್ಯಾಪ್ತಿಗೆ ಚೀನಾ ಮತ್ತು ಭಾರತವೂ ಒಳಪಡಬಹುದಾಗಿದೆ. ಇದರ ಮೂಲಕ ರಷ್ಯಾದ ಯುದ್ಧಕ್ಕೆ ಹಣಕಾಸು ಒದಗಿಸುವ ಪ್ರಮುಖ ಆದಾಯ ಮೂಲಗಳನ್ನು ಕಡಿತಗೊಳಿಸುವ ಪ್ರಯತ್ನವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ.

ವಾಷಿಂಗ್ಟನ್: ಉಕ್ರೇನ್ ಮೇಲಿನ ಯುದ್ಧಕ್ಕೆ ಧನಸಹಾಯ ನೀಡುತ್ತಿರುವ ರಷ್ಯಾದ ಆದಾಯದ ಮೂಲಗಳಿಗೆ ಸಂಪೂರ್ಣವಾಗಿ ಪೆಟ್ಟು ನೀಡಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸ ಆರ್ಥಿಕ ನಿರ್ಬಂಧಗಳ ಕಾಯ್ದೆಗೆ ಸಹಿ ಹಾಕಿದ್ದಾರೆ.
ರಷ್ಯಾ ವಿರುದ್ಧ ವ್ಯಾಪಕ ಹೊಸ ನಿರ್ಬಂಧಗಳನ್ನು ವಿಧಿಸಲು ಅಧಿಕಾರ ನೀಡುವ ಮಸೂದೆಗೆ ಟ್ರಂಪ್ ಅವರು ಶುಕ್ರವಾರ ಸಹಿ ಹಾಕಿದ್ದಾರೆ. ಈ ವಾರ ಅಮೆರಿಕದ ಕಾಂಗ್ರೆಸ್‌ನಲ್ಲಿ ಮಸೂದೆಗೆ ಅನುಮೋದನೆ ದೊರೆತ ಬೆನ್ನಲ್ಲೇ ಟ್ರಂಪ್ ಸಹಿ ಮಾಡಿದ್ದಾರೆ.
ರಷ್ಯಾದ ಇಂಧನ ಮತ್ತು ರಕ್ಷಣಾ ವಲಯಗಳ ಜತೆಗೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಇತರ ಹಿರಿಯ ಅಧಿಕಾರಿಗಳನ್ನೂ ಈ ಮಸೂದೆ ಗುರಿಯಾಗಿಸಿಕೊಂಡಿದೆ.
ಉಕ್ರೇನ್ ವಿರುದ್ಧದ ಯುದ್ಧಕ್ಕೆ ಸಂಬಂಧಿಸಿದಂತೆ ರಷ್ಯಾ ಮೇಲೆ ಒತ್ತಡ ಹೆಚ್ಚಿಸುವ ಉದ್ದೇಶದಿಂದ ಈ ನಿರ್ಬಂಧಗಳನ್ನು ಜಾರಿಗೆ ತರಲಾಗುತ್ತಿದೆ.
ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧಗಳನ್ನು ತಪ್ಪಿಸಲು ಬಳಸಲಾಗುತ್ತಿದೆ ಎನ್ನಲಾದ ರಷ್ಯಾದ ‘ನೌಕಾಪಡೆ’ಯ ತೈಲ ಸಾಗಣೆ ಟ್ಯಾಂಕರ್‌ಗಳ ಮೇಲೂ ಕ್ರಮ ಕೈಗೊಳ್ಳಲು ಮಸೂದೆ ಅವಕಾಶ ನೀಡುತ್ತದೆ. ಅಲ್ಲದೆ, ರಷ್ಯಾದ ತೈಲ ಮತ್ತು ಅನಿಲವನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುವ ದೇಶಗಳ ಮೇಲೆ ಶೇ.100ರವರೆಗೆ ಸುಂಕ ವಿಧಿಸುವ ಅಧಿಕಾರವನ್ನು ಟ್ರಂಪ್ ಅವರಿಗೆ ನೀಡುತ್ತದೆ.
ಈ ಕ್ರಮದ ವ್ಯಾಪ್ತಿಗೆ ಚೀನಾ ಮತ್ತು ಭಾರತವೂ ಒಳಪಡಬಹುದಾಗಿದೆ. ಇದರ ಮೂಲಕ ರಷ್ಯಾದ ಯುದ್ಧಕ್ಕೆ ಹಣಕಾಸು ಒದಗಿಸುವ ಪ್ರಮುಖ ಆದಾಯ ಮೂಲಗಳನ್ನು ಕಡಿತಗೊಳಿಸುವ ಪ್ರಯತ್ನವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ.
ರಿಪಬ್ಲಿಕನ್ ಪಕ್ಷದ ನೇತೃತ್ವದ ಅಮೆರಿಕದ ಪ್ರತಿನಿಧಿಗಳ ಸಭೆ ಬುಧವಾರ 262-159 ಮತಗಳ ಅಂತರದಲ್ಲಿ ಮಸೂದೆಯನ್ನು ಅಂಗೀಕರಿಸಿತ್ತು.
ರಷ್ಯಾದ ಸೇನೆಗೆ ಬೆಂಬಲ ನೀಡುವ ಕಂಪನಿಗಳು ಮತ್ತು ವಿದೇಶಿ ಸಂಸ್ಥೆಗಳ ಮೇಲೂ ನಿರ್ಬಂಧ ವಿಧಿಸಲು ಮಸೂದೆ ಅವಕಾಶ ನೀಡುತ್ತದೆ. ಇರಾನ್‌ಗೆ ಸಂಬಂಧಿಸಿದ ಕೆಲವು ನಿರ್ಬಂಧಗಳನ್ನೂ ವಿಸ್ತರಿಸುವ ಅಂಶಗಳು ಇದರಲ್ಲಿವೆ. ಆದರೆ, ಇತರ ದೇಶಗಳೊಂದಿಗೆ ವ್ಯಾಪಾರಕ್ಕೆ ಸಂಬಂಧಿಸಿದಂತೆ ಟ್ರಂಪ್ ಅವರಿಗೆ ವ್ಯಾಪಕ ಅಧಿಕಾರ ನೀಡುವ ವಿಚಾರವು ಡೆಮಾಕ್ರಟಿಕ್ ಪಕ್ಷದೊಳಗೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.
ಡೆಮೋಕ್ರಾಟ್‌ಗಳು ಬಹುತೇಕ ಉಕ್ರೇನ್‌ಗೆ ಬೆಂಬಲ ನೀಡುತ್ತಿದ್ದರೂ, ಟ್ರಂಪ್ ಅವರಿಗೆ ವ್ಯಾಪಾರ ನೀತಿಯಲ್ಲಿ ಹೆಚ್ಚಿನ ಅಧಿಕಾರ ನೀಡುವುದನ್ನು ಕೆಲವರು ವಿರೋಧಿಸಿದ್ದಾರೆ.
ಮಸೂದೆ ಅಂಗೀಕಾರಗೊಂಡಿದ್ದನ್ನು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಈ ಹಿಂದೆ ಸ್ವಾಗತಿಸಿದ್ದರು. ಇದರ ಅಂಗೀಕಾರ ಸಾಂಕೇತಿಕ ಮಹತ್ವ ಹೊಂದಿದೆ ಎಂದು ಹೇಳಿದ್ದ ಅವರು, ಅಮೆರಿಕದ ಶಾಸಕರಿಗೆ ಧನ್ಯವಾದ ತಿಳಿಸಿದ್ದರು.
ಇದೇ ವೇಳೆ, ಭಾರತವು ವಿವಿಧ ಮೂಲಗಳಿಂದ ತೈಲ ಖರೀದಿಯನ್ನು ಮುಂದುವರಿಸುವುದಾಗಿ ಗುರುವಾರ ಹೇಳಿದೆ.
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರೊಂದಿಗೆ ಟ್ರಂಪ್ ವಾಷಿಂಗ್ಟನ್‌ನಲ್ಲಿ ಭೇಟಿಯಾಗಲು ಒಂದು ವಾರ ಬಾಕಿ ಇರುವ ಸಂದರ್ಭದಲ್ಲಿ ಈ ಮಸೂದೆಗೆ ಸಹಿ ಹಾಕಿರುವುದು ಗಮನಾರ್ಹವಾಗಿದೆ.

ಭಾರತ ಸೇರಿ ರಷ್ಯಾದ ಇತರ ವ್ಯಾಪಾರ ಪಾಲುದಾರ ದೇಶಗಳ ಮೇಲೆ ಶೇ.100 ಸುಂಕ: ಮಸೂದೆಗೆ ಅಮೆರಿಕ ಸಂಸತ್ತು ಅನುಮೋದನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



