Video: 'ನನ್ನ ಕೆಲಸವೇ ನನ್ನ ಸರ್ವಸ್ವ ಎಂದು ಭಾವಿಸಿದ್ದೆ.. ಆದ್ರೆ ಏಕಾಏಕಿ ಕಿತ್ತೆಸೆದರು': wake-up call ಎಂದ ಬೆಂಗಳೂರು ಮಹಿಳೆ
ತನ್ನ ಕೆಲಸವನ್ನೇ ಸರ್ವಸ್ವವಾಗಿ ಭಾವಿಸಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ದಿಢೀರ್ ಕೆಲಸ ಹೋದ ಕುರಿತು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಬೆಂಗಳೂರು: ಕಾರ್ಪೋರೇಟ್ ಜಗತ್ತಿನಲ್ಲಿ ಯಾರು ಎಷ್ಟೇ ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ಒಂದಲ್ಲಾ ಒಂದು ದಿನ ಅವರ ಕೆಲಸಕ್ಕೆ ಕುತ್ತು ಬರುತ್ತದೆ. ಇಂತಹುದೇ ಮತ್ತೊಂದು ಘಟನೆ ಇದೀಗ ವೈರಲ್ ಆಗುತ್ತಿದೆ.
ಹೌದು.. ತನ್ನ ಕೆಲಸವನ್ನೇ ಸರ್ವಸ್ವವಾಗಿ ಭಾವಿಸಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ದಿಢೀರ್ ಕೆಲಸ ಹೋದ ಕುರಿತು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರಿನ ನಿಧಿ ಎಂಬ ಮಹಿಳೆಯ ಇನ್‌ಸ್ಟಾಗ್ರಾಮ್ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. "ನನ್ನ ಕೆಲಸವೇ ನನ್ನ ಇಡೀ ಜೀವನ ಎಂದು ಭಾವಿಸಿದ್ದೆ, ಆದರೆ ಕೆಲಸದಿಂದ ವಜಾ ಆಗಿದ್ದು ನನ್ನ ಪಾಲಿಗೆ ಒಂದು ಎಚ್ಚರಿಕೆಯ ಕರೆ (Wake-up call) ಆಗಿತ್ತು" ಎಂದು ಅವರು ಹೇಳಿಕೊಂಡಿದ್ದಾರೆ.
ಈ ವಿಡಿಯೋ ಕಾರ್ಪೊರೇಟ್ ಕೆಲಸದ ಒತ್ತಡ ಮತ್ತು ಜೀವನದ ಸಮತೋಲನದ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
ವಿಡಿಯೋದಲ್ಲಿ ತನ್ನ ಕೆಲಸವೇ ತನ್ನ ಪ್ರಪಂಚ ಎಂದು ಬದುಕುತ್ತಿದ್ದಾಗ ತನ್ನ ಜೀವನ ಹೇಗಿತ್ತು ಎಂಬುದನ್ನು ನಿಧಿ ವಿವರಿಸಿದ್ದಾರೆ. ಕೆಲಸದ ಭರದಲ್ಲಿ ವ್ಯಾಯಾಮ, ಆರೋಗ್ಯಕರ ಆಹಾರ ಮತ್ತು ಸ್ನೇಹಿತರೊಂದಿಗೆ ಬೆರೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರು.
ಆಕೆಯ ದಿನಚರಿ ಕೇವಲ ಕಚೇರಿಗೆ ಹೋಗುವುದು ಮತ್ತು ಮನೆಗೆ ಬಂದು ಮತ್ತೆ ಕೆಲಸ ಮಾಡುವುದಕ್ಕೆ ಮಾತ್ರ ಸೀಮಿತವಾಗಿತ್ತು. ನನ್ನ ಇಡೀ ಪ್ರಪಂಚ ಕೇವಲ ಮೀಟಿಂಗ್‌ಗಳು, ಡೆಡ್‌ಲೈನ್‌ಗಳು ಮತ್ತು ಮಾನಸಿಕ ಒತ್ತಡದ ಸುತ್ತಲೇ ಸುತ್ತುತ್ತಿತ್ತು" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ನಿಧಿ ಹೇಳಿದ್ದೇನು?
"ನನ್ನನ್ನು ಕೆಲಸದಿಂದ ವಜಾ ಮಾಡಲಾಯಿತು, ಮತ್ತು ನಂತರ ನಾನು ಅರಿತುಕೊಂಡ ವಿಷಯಗಳು ತುಂಬಾ ಭಯಾನಕವಾಗಿದ್ದವು. ನಾನು ನನ್ನ ಕೆಲಸವನ್ನು ನನ್ನ ಸರ್ವಸ್ವದಂತೆ ನೋಡಿಕೊಂಡೆ. ನಾನು ನನ್ನ ಬಗ್ಗೆ ಕಾಳಜಿ ವಹಿಸುವುದನ್ನೂ ನಿಲ್ಲಿಸಿದೆ, ಸಾಮಾಜಿಕವಾಗಿ ಇರುವುದನ್ನು ನಿಲ್ಲಿಸಿದೆ, ಹೊರಗೆ ಹೋಗುವುದನ್ನು ನಿಲ್ಲಿಸಿದೆ, ವ್ಯಾಯಾಮ ಮಾಡುವುದನ್ನು ನಿಲ್ಲಿಸಿದೆ, ಆರೋಗ್ಯಕರ ಆಹಾರವನ್ನು ಸೇವಿಸುವುದನ್ನು ನಿಲ್ಲಿಸಿದೆ ಮತ್ತು ಸ್ನೇಹಿತರನ್ನು ಭೇಟಿಯಾಗುವುದನ್ನು ನಿಲ್ಲಿಸಿದೆ.
ನನ್ನ ಇಡೀ ಪ್ರಪಂಚವು ಸಭೆಗಳು, ಡೆಡ್ ಲೈನ್ ಗಳು ಮತ್ತು ಕೇವಲ ಒತ್ತಡದ ಸುತ್ತ ಸುತ್ತುತ್ತದೆ. ನಾನು ನನ್ನ ಕಚೇರಿಗೆ ಹೋಗುತ್ತಿದ್ದೆ, ನಾನು ಮನೆಗೆ ಬರುತ್ತಿದ್ದೆ ಮತ್ತು ನಂತರ ಮತ್ತೆ ಕೆಲಸ ಮಾಡುತ್ತಿದ್ದೆ. ನಾನು ಈ ರೀತಿ ಬದುಕುತ್ತಿರುವ ಏಕೈಕ ವ್ಯಕ್ತಿ ನಾನಲ್ಲ ಎಂದು ನಾನು ಬಾಜಿ ಕಟ್ಟುತ್ತೇನೆ. ಆದ್ದರಿಂದ ಪ್ರಶ್ನೆಯೆಂದರೆ, ನಾವು ನಿಜವಾಗಿಯೂ ಈ ರೀತಿಯ ಜೀವನವನ್ನು ನಡೆಸಲು ಬಯಸುತ್ತೇವೆಯೇ?" ಎಂದು ನಿಧಿ ಹೇಳಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ
ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಕ್ರಿಯೆಗಳು ಬಂದಿದ್ದು, ಅನೇಕರು ತಮಗೂ ಇಂತಹ ಅನುಭವವಾಗಿದೆ ಎಂದು ಹೇಳಿಕೊಂಡಿದ್ದಾರೆ. ಜೀವನದಲ್ಲಿ ಕೆಲಸಕ್ಕಿಂತ ಆರೋಗ್ಯ ಮತ್ತು ನೆಮ್ಮದಿ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾರ್ಪೊರೇಟ್ ಸಂಸ್ಕೃತಿಗೆ ಟೀಕೆ
ಅತಿಯಾದ ಕೆಲಸವನ್ನು ವೈಭವೀಕರಿಸುವ ಕಂಪನಿಗಳ ಸಂಸ್ಕೃತಿಯನ್ನು ನೆಟ್ಟಿಗರು ಟೀಕಿಸಿದ್ದಾರೆ. "ಯಾವುದೇ ಕೆಲಸ ನಿಮ್ಮ ಜೀವನಕ್ಕಿಂತ ದೊಡ್ಡದಲ್ಲ" ಎಂದು ಕಮೆಂಟ್ ಮಾಡಿದ್ದಾರೆ. ಅಂತೆಯೇ ಕೆಲಸ ಕಳೆದುಕೊಂಡಿದ್ದು ಒಂದು ರೀತಿಯಲ್ಲಿ "ಒಳ್ಳೆಯದಕ್ಕೇ ಆಯಿತು", ಇದರಿಂದಲಾದರೂ ನಿಮಗೆ ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಅರಿವು ಮೂಡಿತು ಎಂದು ಕೆಲವರು ಸಮಾಧಾನಪಡಿಸಿದ್ದಾರೆ.
ಒಟ್ಟಾರೆಯಾಗಿ, ಈ ಘಟನೆಯು ಬೆಂಗಳೂರಿನಂತಹ ಐಟಿ ನಗರಗಳಲ್ಲಿ ವೃತ್ತಿಪರರು ಎದುರಿಸುತ್ತಿರುವ ವಿಪರೀತ ಕೆಲಸದ ಒತ್ತಡ ಮತ್ತು 'ಬರ್ನ್‌ಔಟ್' (Burnout) ಸಮಸ್ಯೆಯನ್ನು ಎತ್ತಿ ತೋರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




