10 ನಿಮಿಷದಲ್ಲಿ 5 ಸ್ಟಾರ್ ರುಚಿ: ವೀಕೆಂಡ್ ಸ್ಪೆಷಲ್, ಮಕ್ಕಳಿಗೆ ಮನೆಯಲ್ಲೇ ಮಾಡಿ ಹೆಲ್ದಿ ರವೆ Pizza
ಹೊರಗಡೆ ಸಿಗುವ ಪಿಜ್ಜಾನಲ್ಲಿ ಮೈದಾ ಇರುತ್ತೆ ಎಂಬ ಕಾರಣಕ್ಕೆ ಪಿಜ್ಜಾ ಕನಸನ್ನೇ ಮರೆತಿದ್ದೀರಾ.! ಹಾಗಾದರೆ, ಇನ್ನು ಮರೆಯಬೇಡಿ. ಕೇವಲ ಒಂದು ಕಪ್ ರವೆ ಇದ್ದರೆ ಸಾಕು, ಅಂಗಡಿಗಿಂತಲೂ ಗರಿಗರಿಯಾದ ಪಿಜ್ಜಾ, ಮನೆಯಲ್ಲೇ ಮಾಡಬಹುದು. ಅದರ ಸಿಂಪಲ್ ರೆಸಿಪಿ ಇಲ್ಲಿದೆ:

ಇತ್ತೀಚಿನ ದಿನಗಳಲ್ಲಿ ಜಂಕ್ ಫುಡ್ ತಿನ್ನುವುದರಿಂದ ಆರೋಗ್ಯ ಹಾಳಾಗುತ್ತದೆ ಎಂಬ ಆತಂಕ ಎಲ್ಲರಲ್ಲೂ ಇರುತ್ತದೆ ಅದರಲ್ಲೂ ಪಿಜ್ಜಾ ಎಂದರೆ ಮೈದಾ ಇರುವುದರಿಂದ ಅನೇಕರು ಇದನ್ನು ಇಷ್ಟಪಟ್ಟರೂ ತಿನ್ನಲು ಹಿಂಜರಿಯುತ್ತಾರೆ. ಆದರೆ, ಈಗ ಆ ಟೆನ್ಷನ್ ಬಿಡಿ.! ಯಾಕಂದ್ರೆ, ಮೈದಾ ಇಲ್ಲದೆ ಕೇವಲ ರವೆ ಬಳಸಿ ಮನೆಯಲ್ಲೇ ರುಚಿಕರವಾದ ಮತ್ತು ಆರೋಗ್ಯಕರ ಪಿಜ್ಜಾ ಮಾಡಬಹುದು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇಷ್ಟಪಟ್ಟು ತಿನ್ನುವ ಈ ರವೆ ಪಿಜ್ಜಾ ನಿಮ್ಮ ಅಡುಗೆ ಮನೆಯ ಹೊಸ ಫೇವರಿಟ್ ಆಗೋದು ಗ್ಯಾರಂಟಿ. ಹಾಗಾಗಿ, ಮೈದಾ ಬಳಸದೆ ಕೇವಲ ರವೆಯಿಂದ ಮನೆಯಲ್ಲಿಯೇ ತವಾ ಮೇಲೆ ಮಾಡಬಹುದಾದ
ರುಚಿಕರ ರವೆ ಪಿಜ್ಜಾ ವಿಧಾನ ಇಲ್ಲಿದೆ...
ಬೇಕಾಗುವ ಪದಾರ್ಥಗಳು:
ಈ ಆರೋಗ್ಯಕರ ಪಿಜ್ಜಾ ತಯಾರಿಸಲು ಒಂದು ಕಪ್ ರವೆ, ಅರ್ಧ ಕಪ್ ಗಟ್ಟಿ ಮೊಸರು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅರ್ಧ ಚಮಚ ಅಡುಗೆ ಸೋಡಾ ಬೇಕಾಗುತ್ತದೆ.
ಪಿಜ್ಜಾ ಬೇಸ್ ತಯಾರಾದ ನಂತರ ಅದರ ಮೇಲೆ ಸವರಲು ಪಿಜ್ಜಾ ಸಾಸ್ ಅಥವಾ ಟೊಮೆಟೊ ಕೆಚಪ್, ಕತ್ತರಿಸಿದ ಈರುಳ್ಳಿ, ದಪ್ಪ ಮೆಣಸಿನಕಾಯಿ ಅಂದರೆ ಕ್ಯಾಪ್ಸಿಕಂ, ಬೇಯಿಸಿದ ಜೋಳದ ಕಾಳುಗಳು ಮತ್ತು ಸಾಕಷ್ಟು ಮೊಜರೆಲ್ಲಾ ಚೀಸ್ ಬೇಕಾಗುತ್ತದೆ. ಇದರೊಂದಿಗೆ, ನಿಮ್ಮ ಇಷ್ಟದ ತರಕಾರಿಗಳನ್ನು ನೀವು ಬಳಸಬಹುದು.
ರವೆ ಪಿಜ್ಜಾ ಬೇಸ್ ತಯಾರಿಸುವ ಹಂತಗಳು:
ಮೊದಲಿಗೆ ಒಂದು ಪಾತ್ರೆಯಲ್ಲಿ ರವೆ, ಮೊಸರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಅದಕ್ಕೆ ಸ್ವಲ್ಪ ನೀರು ಸೇರಿಸಿ ದೋಸೆ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಇರಲಿ.
ಈ ಮಿಶ್ರಣವನ್ನು ಹದಿನೈದು ನಿಮಿಷಗಳ ಕಾಲ ನೆನೆಯಲು ಬಿಡಿ.
ರವೆ ಚೆನ್ನಾಗಿ ನೆನೆದ ನಂತರ ಹಿಟ್ಟು ದಪ್ಪಗಾಗುತ್ತದೆ.
ಆಗ ಅದಕ್ಕೆ ಅಡುಗೆ ಸೋಡಾ ಹಾಕಿ ಸ್ವಲ್ಪ ನೀರು ಚಿಮುಕಿಸಿ, ನಿಧಾನವಾಗಿ ಮಿಶ್ರಣ ಮಾಡಿ.
ಈಗ ಪಿಜ್ಜಾ ಮಾಡಲು ಹಿಟ್ಟು ಸಿದ್ಧವಾಗುತ್ತದೆ.
ತವಾ ಮೇಲೆ ಪಿಜ್ಜಾ ಬೇಯಿಸುವ ವಿಧಾನ:
ಈಗ ಒಲೆಯ ಮೇಲೆ ಒಂದು ನಾನ್ ಸ್ಟಿಕ್ ತವಾವನ್ನು ಇಟ್ಟು ಅದಕ್ಕೆ ಸ್ವಲ್ಪ ಬೆಣ್ಣೆ ಅಥವಾ ಎಣ್ಣೆ ಸವರಿ.
ನಂತರ ಸಿದ್ಧಪಡಿಸಿದ ರವೆ ಹಿಟ್ಟನ್ನು ತವಾದ ಮಧ್ಯಭಾಗಕ್ಕೆ ಹಾಕಿ ದಪ್ಪ ಇಡ್ಲಿಯಂತೆ ದುಂಡಗೆ ಹರಡಿ. ಇದನ್ನು ತುಂಬಾ ತೆಳುವಾಗಿ ಮಾಡಬೇಡಿ.
ನಂತರ ತವಾವನ್ನು ಮುಚ್ಚಿ ಸಣ್ಣ ಉರಿಯಲ್ಲಿ 2 ನಿಮಿಷಗಳ ಕಾಲ ಬೇಯಿಸಿ.
ಒಂದು ಕಡೆ ತಿಳಿ ಕಂದು ಬಣ್ಣಕ್ಕೆ ಬಂದ ನಂತರ ಅದನ್ನು ಉಲ್ಟಾ ಮಾಡಿ.
ಒಲೆಯನ್ನು ಸಂಪೂರ್ಣವಾಗಿ ಸಣ್ಣ ಉರಿಯಲ್ಲಿ ಇಡಿ.
ಟಾಪಿಂಗ್ಸ್ ಮತ್ತು ಚೀಸ್ ಕರಗಿಸುವಿಕೆ:
ಈಗ ಬೇಯಿಸಿದ ಭಾಗದ ಮೇಲೆ ಮೊದಲು ಪಿಜ್ಜಾ ಸಾಸ್ ಅನ್ನು ಸಮನಾಗಿ ಸವರಿ.
ಅದರ ಮೇಲೆ ಕತ್ತರಿಸಿದ ಈರುಳ್ಳಿ ಕ್ಯಾಪ್ಸಿಕಂ ಮತ್ತು ಜೋಳದ ಕಾಳುಗಳನ್ನು ಅಂದವಾಗಿ ಜೋಡಿಸಿ.
ನಂತರ ಅದರ ಮೇಲ್ಭಾಗದಲ್ಲಿ ನಿಮಗೆ ಬೇಕಾದಷ್ಟು ಚೀಸ್ ಅನ್ನು ಉದುರಿಸಿ.
ಇದರ ಜೊತೆಗೆ ಸ್ವಲ್ಪ ಅಚ್ಚಖಾರದ ಪುಡಿ ಅಥವಾ ಒಣಮೆಣಸಿನಕಾಯಿ ಚೂರುಗಳನ್ನು ಅಂದರೆ ಚಿಲ್ಲಿ ಫ್ಲೇಕ್ಸ್ ಹಾಕಬಹುದು.
ನಂತರ ತವಾವನ್ನು ಮುಚ್ಚಿ ಚೀಸ್ ಸಂಪೂರ್ಣವಾಗಿ ಕರಗುವವರೆಗೆ 2 ನಿಮಿಷ ಬೇಯಿಸಿದರೆ ಬಿಸಿಬಿಸಿಯಾದ ರವೆ ಪಿಜ್ಜಾ ಸಿದ್ಧವಾಗುತ್ತದೆ.
ಈಗ ಬಿಸಿಬಿಸಿಯಾದ, ಮೈದಾ ಇಲ್ಲದ ಆರೋಗ್ಯಕರ ರವೆ ಪಿಜ್ಜಾ ಸವಿಯಲು ಸಿದ್ಧ! ಇದನ್ನು ಚಾಕುವಿನಿಂದ ತ್ರಿಕೋನಾಕಾರದಲ್ಲಿ ಕತ್ತರಿಸಿ ತಿನ್ನಲು ನೀಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




