18 ಎಸೆತ, 38 ರನ್: ಜೂನಿಯರ್ Dravid ಅಬ್ಬರಕ್ಕೆ ಆಸಿಸ್ ತತ್ತರ; 7 ರನ್‌ಗಳಿಂದ ಗೆದ್ದ ಭಾರತ U-19 ತಂಡ
ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಆರ್ಯವೀರ್ 26 ಎಸೆತಗಳಲ್ಲಿ 28 ರನ್ ಗಳಿಸಿದರು. ಅವರ ಬ್ಯಾಟ್‌ನಿಂದ 5 ಬೌಂಡರಿಗಳು ಬಂದವು. ನಾಯಕ ಲಕ್ಷ್ಯ ರೈಚಂದಾನಿ ಜತೆಗೂಡಿ ಮೊದಲ ವಿಕೆಟ್‌ಗೆ 45 ರನ್‌ಗಳ ಜೊತೆಯಾಟ..

ರಾಜ್‌ಕೋಟ್: ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಅಂಡರ್ 19 ಭಾರತ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು.
ರಾಜ್ ಕೋಟ್ ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಅಂಡರ್ 19 ಯೂತ್ ಏಕದಿನ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಪ್ರಬಲ ಆಸ್ಟ್ರೇಲಿಯಾ ವಿರುದ್ಧ 7 ರನ್ ಗಳ ರೋಚಕ ಗೆಲುವು ಸಾಧಿಸಿತು.
ಮಳೆಯಿಂದಾಗಿ ಪಂದ್ಯವನ್ನು ತಲಾ 20 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಭಾರತ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 182 ರನ್ ಗಳಿಸಿತು.
ಸೆಹ್ವಾಗ್ ಹಾಜರಿ
ಇನ್ನು ಈ ಪಂದ್ಯದಲ್ಲಿ ಮಾಜಿ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಭಾರತ U-19 ಪರ ಚೊಚ್ಚಲ ಪಂದ್ಯವನ್ನಾಡಿದ್ದು ವಿಶೇಷವಾಗಿತ್ತು. ತಮ್ಮ ಮಗನ ಪದಾರ್ಪಣೆಯ ಪಂದ್ಯವನ್ನು ವೀಕ್ಷಿಸಲು ಸೆಹ್ವಾಗ್ ಕೂಡ ಕ್ರೀಡಾಂಗಣದಲ್ಲಿ ಹಾಜರಿದ್ದರು.
ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಆರ್ಯವೀರ್ 26 ಎಸೆತಗಳಲ್ಲಿ 28 ರನ್ ಗಳಿಸಿದರು. ಅವರ ಬ್ಯಾಟ್‌ನಿಂದ 5 ಬೌಂಡರಿಗಳು ಬಂದವು. ನಾಯಕ ಲಕ್ಷ್ಯ ರೈಚಂದಾನಿ ಜತೆಗೂಡಿ ಮೊದಲ ವಿಕೆಟ್‌ಗೆ 45 ರನ್‌ಗಳ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.
ಸಂಕಷ್ಟದಲ್ಲಿದ್ದ ಭಾರತಕ್ಕೆ ಅನ್ವಯ್ ದ್ರಾವಿಡ್ ಆಸರೆ
ಆದರೆ ಭಾರತದ ಇನಿಂಗ್ಸ್ 12ನೇ ಓವರ್‌ನಲ್ಲಿ 88 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ 6ನೇ ಕ್ರಮಾಂಕದಲ್ಲಿ ಬಂದ ಅನ್ವಯ್ ದ್ರಾವಿಡ್ ಸ್ಫೋಟಕ ಬ್ಯಾಟಿಂಗ್ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಿಸಿದರು.
ಅನ್ವಯ್ ಕೇವಲ 18 ಎಸೆತಗಳಲ್ಲಿ 38 ರನ್ ಸಿಡಿಸಿದರು. ಎರಡು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳನ್ನು ಬಾರಿಸಿದ ಅವರ ಸ್ಟ್ರೈಕ್‌ರೇಟ್ 211.11 ಆಗಿತ್ತು. ಅಂತಿಮ ಹಂತದಲ್ಲಿ ಭಾರತಕ್ಕೆ ಅಗತ್ಯವಿದ್ದ ವೇಗವನ್ನು ಅನ್ವಯ್ ಅವರ ಬ್ಯಾಟಿಂಗ್ ಒದಗಿಸಿತು.
ಇನ್ನೊಂದೆಡೆ ಯಶವರ್ಧನ್ ಚೌಹಾಣ್ 34 ಎಸೆತಗಳಲ್ಲಿ 54 ರನ್ ಗಳಿಸಿ ಮಿಂಚಿದರು. ಅವರ ಇನಿಂಗ್ಸ್‌ನಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್‌ಗಳಿದ್ದವು. ನಾಲ್ಕನೇ ವಿಕೆಟ್ ಪತನದ ಬಳಿಕ ಕ್ರೀಸ್‌ಗೆ ಬಂದ ಅನ್ವಯ್ ಜತೆಗೂಡಿ ಚೌಹಾಣ್ 69 ರನ್‌ಗಳ ಮಹತ್ವದ ಜೊತೆಯಾಟ ನಡೆಸಿದರು. ಭಾರತ ಅಂತಿಮ 10 ಓವರ್‌ಗಳಲ್ಲಿ ಬರೋಬ್ಬರಿ 108 ರನ್ ಕಲೆಹಾಕಿತು.
ಆಸಿಸ್ ಹೋರಾಟ ವ್ಯರ್ಥ
182 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ U-19 ತಂಡ ಒಂದು ಹಂತದಲ್ಲಿ ಗೆಲುವಿನತ್ತ ಸಾಗುವಂತೆ ಕಂಡುಬಂದಿತ್ತು. ಆರಂಭಿಕರಾದ ನೀಲ್ ಪಟೇಲ್ 31 ಎಸೆತಗಳಲ್ಲಿ 45 ಹಾಗೂ ಹೇಡನ್ ಬಾರ್ಬುಲೋವಿಕ್ 24 ಎಸೆತಗಳಲ್ಲಿ 40 ರನ್ ಗಳಿಸಿ ಉತ್ತಮ ಆರಂಭ ನೀಡಿದರು.
ನಂತರ ನಾಯಕ ಜ್ಯಾಕ್ ಕ್ಜೋಸ್ನೆಕ್ ಅಬ್ಬರಿಸಿದರು. ಅವರು ಕೇವಲ 27 ಎಸೆತಗಳಲ್ಲಿ 55 ರನ್ ಸಿಡಿಸಿ ಆಸ್ಟ್ರೇಲಿಯಾ ಗೆಲುವಿನ ಆಸೆ ಹೆಚ್ಚಿಸಿದರು. ಆದರೆ 19ನೇ ಓವರ್‌ನಲ್ಲಿ ಕ್ಜೋಸ್ನೆಕ್ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಆಸ್ಟ್ರೇಲಿಯಾದ ಗೆಲುವಿನ ಅವಕಾಶವೂ ಕ್ಷೀಣಿಸುತ್ತಾ ಸಾಗಿತು. ಅಂತಿಮವಾಗಿ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 175 ರನ್ ಗಳಿಸಿ 7 ರನ್‌ಗಳಿಂದ ಸೋಲನುಭವಿಸಿತು.
ಭಾರತದ ಪರ ಯಶವರ್ಧನ್ ಚೌಹಾಣ್ ಬ್ಯಾಟಿಂಗ್‌ನಲ್ಲಿ ಅರ್ಧಶತಕ ಸಿಡಿಸಿದ ಬಳಿಕ ಬೌಲಿಂಗ್‌ನಲ್ಲೂ ಮಿಂಚಿದರು. 4 ಓವರ್‌ಗಳಲ್ಲಿ 28 ರನ್ ನೀಡಿ 2 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಗೆಲುವಿನೊಂದಿಗೆ ಭಾರತ U-19 ತಂಡ ಸರಣಿಯಲ್ಲಿ ಶುಭಾರಂಭ ಮಾಡಿದೆ.
ಆರ್ಯವೀರ್ ಸೆಹ್ವಾಗ್ ಅವರ ಚೊಚ್ಚಲ ಪಂದ್ಯ ಭಾರೀ ಗಮನ ಸೆಳೆದರೆ, ಅನ್ವಯ್ ದ್ರಾವಿಡ್ ಈಗಾಗಲೇ ಈ ವರ್ಷದ ಆರಂಭದಲ್ಲಿ ಶ್ರೀಲಂಕಾ ವಿರುದ್ಧದ ಯೂತ್ ಏಕದಿನ ಸರಣಿಯಲ್ಲಿ ಭಾರತ U-19 ತಂಡವನ್ನು ಪ್ರತಿನಿಧಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



