Duleep Trophy: 57 ವರ್ಷಗಳ ದಾಖಲೆ ಉಡೀಸ್; ಕೇವಲ 8 ರನ್ ಅಂತರದಲ್ಲಿ ಶತಕ ತಪ್ಪಿಸಿಕೊಂಡ Vaibhav Sooryavanshi
ಕಿರಿಯ ವಯಸ್ಸಿನಲ್ಲಿ ಅರ್ಧಶತಕ ಸಿಡಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವೈಭವ್ ಕೇವಲ 8 ರನ್ ಅಂತರದಲ್ಲಿ ದುಲೀಪ್ ಟ್ರೋಫಿ ಇತಿಹಾಸದಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಶತಕ ಸಿಡಿಸಿದ ಬ್ಯಾಟರ್ ಎಂಬ ದಾಖಲೆ..

ಬೆಂಗಳೂರು: ಭಾರತದ ಟೀನೇಜ್ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಮತ್ತೊಮ್ಮೆ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿದ್ದು, ಆದರೆ ಕೇವಲ 8 ರನ್ ಅಂತರದಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಾಣದಿಂದ ವಂಚಿತರಾಗಿದ್ದಾರೆ.
ಹೌದು.. ದುಲೀಪ್ ಟ್ರೋಫಿ ಇತಿಹಾಸದಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಅರ್ಧಶತಕ ಸಿಡಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವೈಭವ್ ಕೇವಲ 8 ರನ್ ಅಂತರದಲ್ಲಿ ದುಲೀಪ್ ಟ್ರೋಫಿ ಇತಿಹಾಸದಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಶತಕ ಸಿಡಿಸಿದ ಬ್ಯಾಟರ್ ಎಂಬ ದಾಖಲೆ ನಿರ್ಮಿಸುವುದರಿಂದ ವಂಚಿತರಾಗಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ನಡೆದ ದುಲೀಪ್ ಟ್ರೋಫಿ 2026 ಸೆಮಿಫೈನಲ್‌ನಲ್ಲಿ ಈಸ್ಟ್ ಝೋನ್ ಮತ್ತು ಸೆಂಟ್ರಲ್ ಝೋನ್ ಪಂದ್ಯದಲ್ಲಿ ವೈಭವ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ 15 ವರ್ಷದ ವೈಭವ್, ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಅರ್ಧಶತಕದ ಗಡಿ ದಾಟಿದರು.
57 ವರ್ಷಗಳ ಹಳೆಯ ದಾಖಲೆ ಉಡೀಸ್
ಈ ಮೂಲಕ ವೈಭವ್ ಸೂರ್ಯವಂಶಿ 57 ವರ್ಷಗಳ ಹಳೆಯ ದಾಖಲೆಯನ್ನು ಛಿದ್ರಗೊಳಿಸಿದರು. ವೈಭವ್ ಸೂರ್ಯವಂಶಿ 15 ವರ್ಷ 175 ದಿನಗಳ ವಯಸ್ಸಿನಲ್ಲಿ ದುಲೀಪ್ ಟ್ರೋಫಿಯಲ್ಲಿ ಅರ್ಧಶತಕ ಸಿಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ಇದಕ್ಕೂ ಮೊದಲು ಲಕ್ಷ್ಮಣ್ ಸಿಂಗ್ ಅವರು 1969ರಲ್ಲಿ 16 ವರ್ಷ 23 ದಿನಗಳ ವಯಸ್ಸಿನಲ್ಲಿ ದುಲೀಪ್ ಟ್ರೋಫಿಯಲ್ಲಿ ಅರ್ಧಶತಕ ಸಿಡಿಸಿ ಕಿರಿಯ ಬ್ಯಾಟರ್ ಎಂಬ ದಾಖಲೆ ಹೊಂದಿದ್ದರು. ಇದೀಗ ಆ ದಾಖಲೆಯನ್ನು 15ರ ಹರೆಯದ ವೈಭವ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಶತಕದ ಹೊಸ್ತಿಲಲ್ಲಿ ಎಡವಿದ ವೈಭವ್
ದಾಖಲೆ ಬರೆದ ಬಳಿಕವೂ ವೈಭವ್ ಬ್ಯಾಟ್ ಸದ್ದು ನಿಲ್ಲಲಿಲ್ಲ. ಸೆಂಟ್ರಲ್ ಝೋನ್ ಬೌಲರ್‌ಗಳ ಮೇಲೆ ಸತತ ದಾಳಿ ನಡೆಸಿದ ಅವರು 81 ಎಸೆತಗಳಲ್ಲಿ 92 ರನ್ ಸಿಡಿಸಿದರು. ಅವರ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಹಾಗೂ 7 ಸಿಕ್ಸರ್‌ಗಳು ಸೇರಿದ್ದವು.
ಶತಕ ಗಳಿಸಲು ಇನ್ನೇನು 8 ರನ್ ಬೇಕಿತ್ತು ಎನ್ನುವಷ್ಟರಲ್ಲಿ ವೈಭವ್ ಅವರ ಇನ್ನಿಂಗ್ಸ್‌ಗೆ ತೆರೆ ಬಿದ್ದಿತು. ಹರ್ಷ್ ದುಬೆ ಎಸೆತದಲ್ಲಿ ವೈಭವ್ ವಿಕೆಟ್ ಕಳೆದುಕೊಂಡರು. ಅರ್ಷದ್ ಖಾನ್ ಕ್ಯಾಚ್ ಪಡೆದು ಅವರ ಅದ್ಭುತ ಇನ್ನಿಂಗ್ಸ್‌ಗೆ ಅಂತ್ಯ ಹಾಡಿದರು.
ಈಸ್ಟ್ ಝೋನ್‌ಗೆ ಬಲ ತುಂಬಿದ 92 ರನ್
ವೈಭವ್ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ಈಸ್ಟ್ ಝೋನ್ ಬಲಿಷ್ಠ ಸ್ಥಿತಿಗೆ ತಲುಪಿತು. 31 ಓವರ್‌ಗಳ ಆಟ ಮುಗಿದಾಗ ಊಟದ ವಿರಾಮಕ್ಕೆ ಈಸ್ಟ್ ಝೋನ್ 2 ವಿಕೆಟ್‌ಗೆ 183 ರನ್ ಗಳಿಸಿತ್ತು. ಸೆಂಟ್ರಲ್ ಝೋನ್‌ಗಿಂತ ಈಸ್ಟ್ ಝೋನ್ ಇನ್ನೂ 83 ರನ್ ಹಿನ್ನಡೆಯಲ್ಲಿತ್ತು. ವೈಭವ್ ಸೂರ್ಯವಂಶಿಯ 92 ರನ್ ಈ ಅವಧಿಯ ಪ್ರಮುಖ ಆಕರ್ಷಣೆಯಾಗಿತ್ತು. ಅವರ ವಿಕೆಟ್ ಪತನದೊಂದಿಗೆ ದಾಖಲೆಯ ಸ್ಫೋಟಕ ಇನ್ನಿಂಗ್ಸ್ ಅಂತ್ಯಗೊಂಡಿತು.
ಇನ್ನೊಂದು ತುದಿಯಲ್ಲಿ ಅಭಿಮನ್ಯು ಈಶ್ವರನ್ ಉತ್ತಮ ಬೆಂಬಲ ನೀಡಿದ್ದು, 84 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 60 ರನ್ ಗಳಿಸಿ ಅಜೇಯರಾಗಿದ್ದರು. ಶತಕ ಕೈತಪ್ಪಿದರೂ 57 ವರ್ಷಗಳ ದಾಖಲೆ ಮುರಿದು ದುಲೀಪ್ ಟ್ರೋಫಿ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದ ವೈಭವ್ ಸೂರ್ಯವಂಶಿ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


