ಕ್ರಿಕೆಟ್

Cricket: ಮಹಿಳಾ Asia Cup ಗೆದ್ದ ಭಾರತಕ್ಕೆ ಪ್ರಧಾನಿ ಮೋದಿ ಅಭಿನಂದನೆ; ‘ಭಾರತೀಯ ಕ್ರಿಕೆಟ್‌ಗೆ ಹೆಮ್ಮೆಯ ಕ್ಷಣ’

ಭಾನುವಾರ ನಡೆದ 2026ರ ಮಹಿಳಾ ಏಷ್ಯಾ ಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾವನ್ನು 72 ರನ್‌ಗಳಿಂದ ಮಣಿಸಿತು. ಈ ಗೆಲುವಿನೊಂದಿಗೆ ಭಾರತ ದಾಖಲೆಯ ಎಂಟನೇ ಬಾರಿಗೆ ಮಹಿಳಾ ಏಷ್ಯಾ ಕಪ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

Cricket: ಮಹಿಳಾ Asia Cup ಗೆದ್ದ ಭಾರತಕ್ಕೆ ಪ್ರಧಾನಿ ಮೋದಿ ಅಭಿನಂದನೆ; ‘ಭಾರತೀಯ ಕ್ರಿಕೆಟ್‌ಗೆ ಹೆಮ್ಮೆಯ ಕ್ಷಣ’
ಪ್ರಶಸ್ತಿ ಗೆದ್ದ ಭಾರತ ಮಹಿಳಾ ಕ್ರಿಕೆಟ್ ತಂಡ ಮತ್ತು ಪ್ರಧಾನಿ ಮೋದಿ
Published On :

ನವದೆಹಲಿ: ಮಹಿಳಾ ಏಷ್ಯಾ ಕಪ್‌ ಟ್ರೋಫಿ ಗೆದ್ದ ಭಾರತ ಮಹಿಳಾ ಕ್ರಿಕೆಟ್‌ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಭಿನಂದನೆ ಸಲ್ಲಿಸಿದ್ದಾರೆ.

ಭಾನುವಾರ ನಡೆದ 2026ರ ಮಹಿಳಾ ಏಷ್ಯಾ ಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾವನ್ನು 72 ರನ್‌ಗಳಿಂದ ಮಣಿಸಿತು. ಈ ಗೆಲುವಿನೊಂದಿಗೆ ಭಾರತ ದಾಖಲೆಯ ಎಂಟನೇ ಬಾರಿಗೆ ಮಹಿಳಾ ಏಷ್ಯಾ ಕಪ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಇದೇ ವಿಚಾರವಾಗಿ ಭಾರತೀಯ ಮಹಿಳಾ ಕ್ರಿಕೆಟ್ ಅಭಿಮಾನಿಗಳನ್ನು ಶ್ಲಾಘಿಸಿರುವ ಪ್ರಧಾನಿ ಮೋದಿ, 'ಟೂರ್ನಿಯುದ್ದಕ್ಕೂ ತಂಡ ಪ್ರದರ್ಶಿಸಿದ ಆತ್ಮವಿಶ್ವಾಸ, ಸ್ಥಿರತೆ ಹಾಗೂ ಅದ್ಭುತ ಹೋರಾಟದ ಮನೋಭಾವವನ್ನು ಶ್ಲಾಘಿಸಿರುವ ಅವರು, ಈ ಗೆಲುವು ದೇಶದ ಕೋಟ್ಯಂತರ ಯುವಕರಿಗೆ ಸ್ಫೂರ್ತಿಯಾಗಲಿ' ಎಂದು ಹಾರೈಸಿದ್ದಾರೆ.

‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಪ್ರಧಾನಿ ಮೋದಿ, “ಭಾರತೀಯ ಕ್ರಿಕೆಟ್‌ಗೆ ಹೆಮ್ಮೆಯ ಕ್ಷಣ! ಏಷ್ಯಾ ಕಪ್‌ ಗೆದ್ದ ಭಾರತ ಮಹಿಳಾ ತಂಡಕ್ಕೆ ಅಭಿನಂದನೆಗಳು. ಟೂರ್ನಿಯುದ್ದಕ್ಕೂ ಅವರ ಆತ್ಮವಿಶ್ವಾಸ, ಸ್ಥಿರತೆ ಹಾಗೂ ಅದ್ಭುತ ಹೋರಾಟದ ಮನೋಭಾವ ಎದ್ದು ಕಾಣುತ್ತಿತ್ತು. ಈ ಗೆಲುವು ದೇಶದ ಕೋಟ್ಯಂತರ ಯುವಕರಿಗೆ ಕ್ರಿಕೆಟ್‌ ಆಡಲು ಹಾಗೂ ಸಾಧನೆ ಮಾಡಲು ಸ್ಫೂರ್ತಿ ನೀಡಲಿ” ಎಂದು ತಿಳಿಸಿದ್ದಾರೆ.

2024ರ ಸೋಲಿಗೆ ಸೇಡು ತೀರಿಸಿಕೊಂಡ ಭಾರತ

2024ರ ಏಷ್ಯಾ ಕಪ್‌ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಅನುಭವಿಸಿದ್ದ ಸೋಲಿಗೆ ಭಾರತ ಈ ಬಾರಿ ಸೇಡು ತೀರಿಸಿಕೊಂಡಿದೆ. ಟೂರ್ನಿಯುದ್ದಕ್ಕೂ ಶ್ರೀಲಂಕಾ ತಂಡದ ವಿರುದ್ಧ ಮೇಲುಗೈ ಸಾಧಿಸಿದ್ದ ಭಾರತ, ಫೈನಲ್‌ನಲ್ಲೂ ತನ್ನ ಪ್ರಾಬಲ್ಯ ಮುಂದುವರಿಸಿತು.

ಏಷ್ಯಾ ಕಪ್‌ ಫೈನಲ್‌ ಪಂದ್ಯಗಳಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕೆ ಇದು ಆರನೇ ಗೆಲುವಾಗಿದೆ. ಏಕದಿನ ಮಾದರಿ ಸೇರಿದಂತೆ, 2004ರ ಎರಡು ತಂಡಗಳ ಟೂರ್ನಿಯಲ್ಲಿ ಭಾರತವು ಶ್ರೀಲಂಕಾವನ್ನು 5-0 ಅಂತರದಲ್ಲಿ ಮಣಿಸಿದ್ದೂ ಈ ಗೆಲುವಿನ ದಾಖಲೆಯಲ್ಲಿ ಸೇರಿದೆ.

ಶಫಾಲಿ–ಸ್ಮೃತಿ ಅಬ್ಬರ; ಭಾರತಕ್ಕೆ ಬೃಹತ್‌ ಮೊತ್ತ

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 183 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು. ಆರಂಭಿಕರಾದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನಾ ಮೊದಲ ವಿಕೆಟ್‌ಗೆ ದಾಖಲೆಯ 129 ರನ್‌ಗಳ ಜೊತೆಯಾಟ ನೀಡುವ ಮೂಲಕ ಗೆಲುವಿಗೆ ಭದ್ರ ಬುನಾದಿ ಹಾಕಿದರು.

ಶಫಾಲಿ ವರ್ಮಾ ಕೇವಲ 39 ಎಸೆತಗಳಲ್ಲಿ 68 ರನ್‌ ಸಿಡಿಸಿದರು. ಈ ವೇಳೆ ಅವರು 24 ಎಸೆತಗಳಲ್ಲೇ ಅರ್ಧಶತಕ ಪೂರೈಸಿ, ಏಷ್ಯಾ ಕಪ್‌ ಇತಿಹಾಸದಲ್ಲೇ ಅತಿ ವೇಗದ ಅರ್ಧಶತಕ ದಾಖಲಿಸಿದರು. ಸ್ಮೃತಿ ಮಂಧಾನಾ 39 ಎಸೆತಗಳಲ್ಲಿ 59 ರನ್‌ ಗಳಿಸಿ ಉತ್ತಮ ಕೊಡುಗೆ ನೀಡಿದರು. ಆದರೆ, ಇನ್ನಿಂಗ್ಸ್‌ನ ಕೊನೆಯ ಹಂತದಲ್ಲಿ ಶ್ರೀಲಂಕಾ ಬೌಲರ್‌ಗಳು ಭಾರತದ ರನ್‌ ವೇಗಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು.

ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಮೂರನೇ ಕ್ರಮಾಂಕದಲ್ಲಿ 14 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ರಿಚಾ ಘೋಷ್‌ 17 ರನ್‌ ಗಳಿಸಿ ಔಟಾದರು. ಟೂರ್ನಿಯಲ್ಲಿ ಮೊದಲ ಪಂದ್ಯವಾಡಿದ ಜಿ. ಕಮಲಿನಿ ಕೇವಲ ಐದು ಎಸೆತಗಳಲ್ಲಿ 15 ರನ್‌ ಸಿಡಿಸಿ ತಂಡಕ್ಕೆ ಉತ್ತಮ ಅಂತ್ಯ ಒದಗಿಸಿದರು.

ಶ್ರೀಲಂಕಾ ಬ್ಯಾಟಿಂಗ್‌ ಧ್ವಂಸಗೊಳಿಸಿದ ಭಾರತೀಯ ಬೌಲರ್‌ಗಳು

ಭಾರತ ನೀಡಿದ 184 ರನ್‌ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು ಭಾರತೀಯ ಬೌಲರ್‌ಗಳ ದಾಳಿಗೆ ತತ್ತರಿಸಿ 111 ರನ್‌ಗಳಿಗೆ ಆಲೌಟ್‌ ಆಯಿತು. ಶ್ರೀಲಂಕಾ ನಾಯಕಿ ಚಮಾರಿ ಅಥಪತ್ತು 36 ರನ್‌ ಗಳಿಸಿದರೆ, ನಿಲಾಕ್ಷಿಕಾ ಸಿಲ್ವಾ 22 ರನ್‌ ಗಳಿಸಿದರು. ಭಾರತದ ಪರ ಶ್ರೀ ಚರಣಿ 4 ವಿಕೆಟ್‌ ಕಬಳಿಸಿ ಮಿಂಚಿದರು. ದೀಪ್ತಿ ಶರ್ಮಾ 3 ವಿಕೆಟ್‌ ಪಡೆದು ಶ್ರೀಲಂಕಾ ಬ್ಯಾಟಿಂಗ್‌ ಪಡೆಯನ್ನು ಕಟ್ಟಿಹಾಕಿದರು. ಅಂತಿಮವಾಗಿ ಭಾರತ 72 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಎಂಟನೇ ಬಾರಿ ಏಷ್ಯಾ ಕಪ್‌ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.