ರೊಮ್ಯಾಂಟಿಕ್ ಡ್ರಾಮಾ 'ಲವ್ ಮಿ or ಹೇಟ್ ಮೀ': ಮೊದಲ ಬಾರಿಗೆ ರಚಿತಾ ರಾಮ್, ಡಾರ್ಲಿಂಗ್ ಕೃಷ್ಣ ಒಟ್ಟಿಗೆ ತೆರೆ ಮೇಲೆ!
ಲವ್ ಮಾಕ್ಟೇಲ್ ಚಿತ್ರ ಯಶಸ್ಸಿನ ಬಳಿಕ ಸಾಕಷ್ಟು ಚಿತ್ರಗಳಲ್ಲಿ ತೊಡಗಿಸಿಕೊಂಡಿರುವ ನಟ ಡಾರ್ಲಿಂಗ್ ಕೃಷ್ಣ ಇದೇ ಮೊದಲ ಬಾರಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ರೊಂದಿಗೆ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಬೆಂಗಳೂರು: ಲವ್ ಮಾಕ್ಟೇಲ್ ಚಿತ್ರದ ಯಶಸ್ಸಿನ ಬಳಿಕ ಸಾಕಷ್ಟು ಚಿತ್ರಗಳಲ್ಲಿ ತೊಡಗಿಸಿಕೊಂಡಿರುವ ನಟ ಡಾರ್ಲಿಂಗ್ ಕೃಷ್ಣ ಇದೇ ಮೊದಲ ಬಾರಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ರೊಂದಿಗೆ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ನಟ 'ಡಾರ್ಲಿಂಗ್' ಕೃಷ್ಣ ಹಾಗೂ ರಚಿತಾ ರಾಮ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, 'ಲವ್ ಮೀ or ಹೇಟ್ ಮೀ' ಎಂದು ಟೈಟಲ್ ಇಡಲಾಗಿದೆಯಂತೆ. ಟೈಟಲ್ ನೋಡಿದರೆ ಇದು ಲವ್ ಸ್ಟೋರಿ ಎಂದು ಮೇಲ್ನೋಟಕ್ಕೆ ಗೊತ್ತಾಗುವುದು. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಮೊದಲ ಬಾರಿಗೆ ಕೃಷ್ಣ ಹಾಗೂ ರಚಿತಾ ರಾಮ್ ಒಟ್ಟಿಗೆ ನಟಿಸುತ್ತಿರುವುದು ವಿಶೇಷ.
ಈ ರೊಮ್ಯಾಂಟಿಕ್ ಡ್ರಾಮಾ ಚಿತ್ರವನ್ನು ನಿರ್ದೇಶಕ ದೀಪಕ್ ಗಂಗಾಧರ್ ನಿರ್ದೇಶಿಸುತ್ತಿದ್ದಾರೆ. ದೀಪಕ್ ಗೆ ಇದು ಮೊಟ್ಟ ಮೊದಲ ಚಿತ್ರವಾಗಿದ್ದು, ಈ ಹಿಂದೆ 'ಕಾಳಿದಾಸ ಕನ್ನಡ ಮೇಷ್ಟ್ರು', 'ನನ್ನ ಪ್ರಕಾರ' ಮುಂತಾದ ನೂರಕ್ಕೂ ಹೆಚ್ಚು ಸಿನಿಮಾಗಳನ್ನು ವಿತರಣೆ ಮಾಡಿ, ತೂಗುದೀಪ ಪ್ರೊಡಕ್ಷನ್ ನಡಿಯಲ್ಲಿ ದೀಪಕ್ ಕೆಲಸ ಮಾಡಿದ್ದರು. ಅಲ್ಲದೆ ನಿರ್ದೇಶಕರಾದ ಎಂಡಿ ಶ್ರೀಧರ್, ಕವಿರಾಜ್ ಜೊತೆ ಸಹ ನಿರ್ದೇಶಕರಾಗಿಯೂ ಕೆಲಸ ಮಾಡಿ ಸಿನಿಮಾರಂಗದಲ್ಲಿ ಅನುಭವ ಪಡೆದಿರುವ ದೀಪಕ್ ಗಂಗಾಧರ್ ಅವರು ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ.
ಈ ಚಿತ್ರವನ್ನು ಮದನ್ ಗಂಗಾಧರ್ ಮತ್ತು ನಂದೀಶ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದು, ಏಪ್ರಿಲ್ ತಿಂಗಳಲ್ಲೇ ಈ ಚಿತ್ರದ ಚಿತ್ರೀಕರಣ ಆರಂಭವಾಗಬೇಕಿತ್ತು. ಈ ಬಗ್ಗೆ ಮಾತನಾಡಿರುವ ನಿರ್ದೇಶಕ ದೀಪಕ್, ಈಗಾಗಲೇ ಚಿತ್ರದ ಸ್ಕ್ರಿಪ್ಟ್ ಸಿದ್ಧವಾಗಿದ್ದು, ರಾಜ್ಯ ಸರ್ಕಾರ ಲಾಕ್ ಡೌನ್ ತೆರವುಗೊಳಿಸಿ ಚಿತ್ರೀಕರಣಕ್ಕೆ ಅನುಮತಿ ನೀಡಿದ ಬಳಿಕ ಚಿತ್ರದ ಚಿತ್ರೀಕರಣವನ್ನು ಆರಂಭಿಸುತ್ತೇವೆ. ಚಿತ್ರದ ಬಾಕಿ ಪಾತ್ರಗಳಿಗೆ ಸ್ಟಾರ್ ನಟರನ್ನು ಅಂತಿಮಗೊಳಿಸಲಾಗುತ್ತಿದೆ. ಪ್ರಮುಖ ಪಾತ್ರಗಳಿಗಾಗಿ ನಟರಾದ ಸಾಧು ಕೋಕಿಲಾ ಮತ್ತು ಚಿಕ್ಕಣ್ಣ ಅವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. "ಎರಡನೇ ನಾಯಕಿ ಪಾತ್ರಕ್ಕಾಗಿ ನಾವು ಹೊಸ ಹೊಸ ನಟಿಯನ್ನು ಹುಡುಕುತ್ತಿದ್ದೇವೆ. ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡುತ್ತಿದ್ದು, ಉಳಿದ ತಂತ್ರಜ್ಞರ ಆಯ್ಕೆ ಕಾರ್ಯ ನಡೆಸುತ್ತಿದೆ ಎಂದು ಹೇಳಿದರು.
ಇನ್ನು ನಟ ಕೃಷ್ಣ ತಮ್ಮದೇ ನಿರ್ದೇಶನದ ಲವ್ ಮಾಕ್ಟೇಲ್ 2, ನಾಗಶೇಖರ್ ಅವರ ಶ್ರೀಕೃಷ್ಣ @ ಜಿಮೇಲ್.ಕಾಮ್, ದೀಪಕ್ ಅರಸ್ ಅವರ ಸಕ್ಕರೆ ಕಾರ್ಖಾನೆ ಮತ್ತು ತಮಿಳು ಸೂಪರ್ ಹಿಟ್ ಓಹ್ ಮೈ ಕಡವುಲೆಯ ಕನ್ನಡ ರಿಮೇಕ್ ಚಿತ್ರ, 'ಶೀಘ್ರಮೇವ ಕಲ್ಯಾಣ ಪ್ರಾಪ್ತಿ ರಸ್ತು', 'ಮಿಸ್ಟರ್ ಬ್ಯಾಚುಲರ್' ದಲ್ಲಿ ಬಿಸಿಯಾಗಿದ್ದಾರೆ.
ಇನ್ನು ನಟಿ ರಚಿತಾ ರಾಮ್ ಕೂಡ ಸಾಕಷ್ಟು ಚಿತ್ರಗಳಲ್ಲಿ ಬಿಸಿಯಾಗಿದ್ದು, ರಮೇಶ್ ಅರವಿಂದ್ ಜೊತೆಗೆ '100', ನಿರ್ದೇಶಕ 'ಜೋಗಿ' ಪ್ರೇಮ್ ಅವರ 'ಏಕ್ ಲವ್ ಯಾ', ಪ್ರಜ್ವಲ್ ದೇವರಾಜ್ ಜೊತೆಗಿನ 'ವೀರಂ', ಡಾಲಿ ಧನಂಜಯ್ ಜೊತೆಗೆ 'ಮಾನ್ಸೂನ್ ರಾಗ', 'ಏಪ್ರಿಲ್', 'ಲಿಲ್ಲಿ', 'ಪಂಕಜ ಕಸ್ತೂರಿ', ತೆಲುಗಿನಲ್ಲಿ 'ಸೂಪರ್ ಮಚ್ಚಿ', ನಟ ಸತೀಶ್ ನೀನಾಸಂ ಜೊತೆಗೆ 'ಮ್ಯಾಟ್ನಿ' ಸಿನಿಮಾಗಳ ಬಿಸಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


