ಪ್ರೇಮದ ಊರಲಿ ಯಶಸ್ಸಿಗೆ ಗಣೇಶ್ ಸಾಥ್: ಬೃಂದಾವಿಹಾರಿ ರಿಲೀಸ್ ದಿನಾಂಕ ದಿಢೀರ್ ಬದಲಾವಣೆ
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ ಬೃಂದಾವಿಹಾರಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಆ ಕುರಿತ ವರದಿ ಇಲ್ಲಿದೆ:
ಹುಬ್ಬಳ್ಳಿ (ಧಾರವಾಡ): ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ ಬೃಂದಾವಿಹಾರಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಅಕ್ಟೋಬರ್ 16ರಂದು ಚಿತ್ರಮಂದಿರಗಳಲ್ಲಿ ಅಬ್ಬರಿಸಬೇಕಿದ್ದ ಈ ಚಿತ್ರ, ಸದ್ಯ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿರುವ ಹೊಸಬರ ಪ್ರೇಮದ ಊರಲಿ ಸಿನಿಮಾದ ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ ತನ್ನ ಓಟವನ್ನು ಬದಲಿಸಿಕೊಂಡಿದೆ. ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿರುವಂತೆ ಬೃಂದಾವಿಹಾರಿ ಸಿನಿಮಾ ಇದೀಗ ನವೆಂಬರ್ 20ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಆ ಕುರಿತ ವರದಿ ಇಲ್ಲಿದೆ:
ಪ್ರೇಮದ ಊರಲಿ ಸಿನಿಮಾಗೆ ತೊಂದರೆಯಾಗಬಾರದು
ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ಮಾಪಕ ಸಮೃದ್ಧಿ ಮಂಜುನಾಥ್, ಸೆಪ್ಟೆಂಬರ್ 25ರಂದು ಬಿಡುಗಡೆಯಾಗಿದ್ದ ಮನೋಜ್ ಕುಮಾರ್ ನಿರ್ದೇಶನದ ಶ್ರೀರಾಮ್ ಮತ್ತು ತಪಸ್ವಿನಿ ಪೂಣಚ್ಚ ಅಭಿನಯದ ಪ್ರೇಮದ ಊರಲಿ ಚಿತ್ರಕ್ಕೆ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಕರ್ನಾಟಕದಲ್ಲಿ ಈ ಚಿತ್ರ ಈಗಾಗಲೇ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಚಿತ್ರಮಂದಿರಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ಹೊತ್ತಿನಲ್ಲಿ ದೊಡ್ಡ ಬಜೆಟ್ನ ಬೃಂದಾವಿಹಾರಿ ಸಿನಿಮಾ ಬಂದರೆ ಆ ಹೊಸಬರ ಚಿತ್ರದ ಯಶಸ್ವಿ ಓಟಕ್ಕೆ ಅಡ್ಡಿಯಾಗಬಹುದು ಎಂಬ ಕಾರಣದಿಂದ ಮುಂದೂಡಲಾಗಿದೆ ಎಂದರು.
ಮುಂದುವರೆದು ಮಾತನಾಡಿದ ಗಣೇಶ್, "ಚಿತ್ರರಂಗಕ್ಕೆ ಬರುವ ಪ್ರತಿಯೊಬ್ಬರೂ ಒಂದು ಹಂತದಲ್ಲಿ ಹೊಸಬರೇ ಆಗಿರುತ್ತಾರೆ. 'ಪ್ರೇಮದ ಊರಲಿ' ಸಿನಿಮಾ ತುಂಬಾ ಚೆನ್ನಾಗಿ ಓಡುತ್ತಿದ್ದು, ಇಂತಹ ಒಳ್ಳೆಯ ಪ್ರಯತ್ನಗಳ ಬೆನ್ನು ತಟ್ಟಿ ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ. ಆ ಚಿತ್ರಕ್ಕೆ ಇನ್ನೂ ಹೆಚ್ಚಿನ ಅವಕಾಶ ಸಿಗಲಿ ಎಂದು ನಮ್ಮ ಸಿನಿಮಾವನ್ನು ನವೆಂಬರ್ 20ಕ್ಕೆ ಮುಂದೂಡಿದ್ದೇವೆ" ಎಂದು ತಿಳಿಸಿದ್ದಾರೆ.
1945ರ ಕಾಲಘಟ್ಟದ ಕಥೆ
ಬೃಂದಾವಿಹಾರಿ ಸಿನಿಮಾ ಗಣೇಶ್ ಅವರ ವೃತ್ತಿಜೀವನದಲ್ಲೇ ವಿಭಿನ್ನವಾದ ಪ್ರಯತ್ನವಾಗಿದೆ. ಇದು 1945ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದ್ದು, ಗಣೇಶ್ ಅವರು ಇದರಲ್ಲಿ ಮಾಧವ ಎಂಬ ವಿಭಿನ್ನ ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೇಕ್ಷಕರಿಗೆ ಈ ಚಿತ್ರದಲ್ಲಿ ಹೊಚ್ಚ ಹೊಸ ರೂಪದ ಗಣೇಶ್ ನೋಡಲು ಸಿಗಲಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


