ಡೇಟಾ ಬೇಡ, ಕೇವಲ ಕಾಲ್ ಮಾಡೋಕೆ ಮಾತ್ರ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ತನ್ನಿ: ಜಿಯೋ, ಏರ್‌ಟೆಲ್‌ಗೆ ಟ್ರಾಯ್ ಖಡಕ್ ಆದೇಶ
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ, ಎಲ್ಲಾ ಕಂಪನಿಗಳು ಮೊಬೈಲ್ ಡೇಟಾ ಬೇಡದ, ಕೇವಲ ವಾಯ್ಸ್ ಕರೆ ಮತ್ತು ಎಸ್‌ಎಮ್‌ಎಸ್ ಮಾತ್ರ ಬಯಸುವ ಬಳಕೆದಾರರಿಗಾಗಿ ಪ್ರತ್ಯೇಕ ಅಗ್ಗದ ರಿಚಾರ್ಜ್ ಪ್ಲಾನ್‌ಗಳನ್ನು ಕಡ್ಡಾಯವಾಗಿ ತರಬೇಕು ಎಂದು ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: ನನ್ನ ಬಳಿಯಿರುವ ಸಿಮ್‌ಗೆ ಕೇವಲ ಕರೆ ಮಾಡಲು ಮಾತ್ರವೇ ರಿಚಾರ್ಜ್ ಸಾಕು. ಆದರೆ, ಕಂಪನಿಗಳು ಕೇವಲ ವಾಯ್ಸ್ ರಿಚಾರ್ಜ್ ಪ್ಲಾನ್ ನೀಡದೆ, ಮೊಬೈಲ್ ಡೇಟಾ (ಇಂಟರ್ನೆಟ್) ಪ್ಲಾನ್‌ಗಳನ್ನು ಕೂಡ ಸೇರಿಸಿ ಬೇರೆ ಆಯ್ಕೆ ನೀಡದೆ ಸತಾಯಿಸುತ್ತಿವೆ ಎಂದು ಹಲವು ಗ್ರಾಹಕರು ಹೇಳುತ್ತಾರೆ. ಈಗ ಗ್ರಾಹಕರ ಆ ಸಮಸ್ಯೆಗೆ ಪರಿಹಾರ ಕಂಡುಹಿಡಿದಿರುವ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI), ಎಲ್ಲಾ ಕಂಪನಿಗಳು ಮೊಬೈಲ್ ಡೇಟಾ ಬೇಡದ, ಕೇವಲ ವಾಯ್ಸ್ ಕರೆ ಮತ್ತು ಎಸ್‌ಎಮ್‌ಎಸ್ ಮಾತ್ರ ಬಯಸುವ ಬಳಕೆದಾರರಿಗಾಗಿ ಪ್ರತ್ಯೇಕ ಅಗ್ಗದ ರಿಚಾರ್ಜ್ ಪ್ಲಾನ್‌ಗಳನ್ನು ಕಡ್ಡಾಯವಾಗಿ ತರಬೇಕು ಎಂದು ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:
ಅಗತ್ಯಕ್ಕೆ ತಕ್ಕಂತೆ ಕಡಿಮೆ ದರ
ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ನಂತಹ ಕಂಪನಿಗಳು ಇಂಟರ್ನೆಟ್ ಡೇಟಾವನ್ನು ಕಡ್ಡಾಯವಾಗಿ ಒಳಗೊಂಡಿರುವ ದುಬಾರಿ ಬಂಡಲ್ ಪ್ಲಾನ್‌ಗಳನ್ನು ಮಾತ್ರ ನೀಡುತ್ತಿದ್ದವು. ಇದರಿಂದಾಗಿ ಇಂಟರ್ನೆಟ್ ಬಳಸದ ಗ್ರಾಹಕರು ತಮಗೆ ಬೇಡದ ಡೇಟಾ ಪ್ಯಾಕ್‌ಗಳಿಗೂ ಸೇರಿಸಿ ಹೆಚ್ಚಿನ ಹಣ ಪಾವತಿಸಬೇಕಾಗಿತ್ತು. ಬಳಕೆದಾರರ ದೂರುಗಳನ್ನು ಆಲಿಸಿದ ಟ್ರಾಯ್, ತನ್ನ 'ದೂರಸಂಪರ್ಕ ಗ್ರಾಹಕ ರಕ್ಷಣೆ (13ನೇ ತಿದ್ದುಪಡಿ) ನಿಯಮಾವಳಿಗಳು, 2026' ಅಡಿಯಲ್ಲಿ ಈ ಹೊಸ ಐತಿಹಾಸಿಕ ಆದೇಶ ಹೊರಡಿಸಿದೆ. ಅದರಂತೆ, ಟೆಲಿಕಾಂ ಆಪರೇಟರ್‌ಗಳು ಅಕ್ಟೋಬರ್ 21 ರ ಒಳಗಾಗಿ ಕೇವಲ ವಾಯ್ಸ್ ಕರೆ ಮತ್ತು ಎಸ್‌ಎಮ್‌ಎಸ್ ಸೌಲಭ್ಯವಿರುವ ರಿಚಾರ್ಜ್ ವೋಚರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲೇಬೇಕು.
ಎಲ್ಲಾ ವ್ಯಾಲಿಡಿಟಿ ಅವಧಿಗಳಿಗೂ ಲಭ್ಯ
ಪ್ರಸ್ತುತ ಕಂಪನಿಗಳು ನೀಡುತ್ತಿರುವ ಪ್ರತಿ 30 ದಿನಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯ (ಉದಾಹರಣೆಗೆ 28 ದಿನಗಳ) ಡೇಟಾ ಬಂಡಲ್ ಪ್ಲಾನ್‌ಗಳಿಗೆ ಸಮನಾಗಿ, ಡೇಟಾ ಇಲ್ಲದ ಕೇವಲ ಕರೆ/SMS ಪ್ಲಾನ್‌ಗಳನ್ನು ನೀಡಬೇಕು. ಜೊತೆಗೆ, ತಿಂಗಳ ಪ್ಲಾನ್‌ಗಳನ್ನು ಪ್ರತಿ ತಿಂಗಳೂ ಒಂದೇ ನಿಗದಿತ ದಿನಾಂಕದಂದು ನವೀಕರಿಸುವ ಆಯ್ಕೆಯನ್ನು ಗ್ರಾಹಕರಿಗೆ ನೀಡಬೇಕು. ಇದರೊಂದಿಗೆ, ಕನಿಷ್ಠ ಒಂದು ದೀರ್ಘಾವಧಿಯ (ಲಾಂಗ್ ವ್ಯಾಲಿಡಿಟಿ) ವಾಯ್ಸ್-SMS ಮಾತ್ರ ಇರುವ ಪ್ಲಾನ್ ಸಹ ಲಭ್ಯವಿರಬೇಕು.
ಯಾರಿಗೆಲ್ಲಾ ಇದು ಲಾಭದಾಯಕ?
ಹಿರಿಯ ನಾಗರಿಕರು: ಕೇವಲ ಕರೆ ಮಾಡಲು ಕೀಪ್ಯಾಡ್ (ಫೀಚರ್) ಫೋನ್ ಬಳಸುವ ಹಿರಿಯರಿಗೆ ಈ ನಿಯಮ ವರವಾಗಲಿದೆ.
ಎರಡು ಸಿಮ್ ಕಾರ್ಡ್ ಹೊಂದಿರುವವರು: ಕೇವಲ ಬ್ಯಾಂಕ್ ಒಟಿಪಿ ಮತ್ತು ಕರೆಗಳಿಗಾಗಿ ಎರಡನೇ ಸಿಮ್ ಅನ್ನು ಜೀವಂತವಾಗಿ ಇಡಲು ಪ್ರತಿ ತಿಂಗಳು ದುಬಾರಿ ರಿಚಾರ್ಜ್ ಮಾಡುತ್ತಿದ್ದವರಿಗೆ ದೊಡ್ಡ ಮಟ್ಟದ ಆರ್ಥಿಕ ಪರಿಹಾರ ಸಿಗಲಿದೆ.
ಮನೆಯಲ್ಲಿ ವೈ-ಫೈ ಬಳಸುವವರು: ಆಫೀಸ್ ಅಥವಾ ಮನೆಯಲ್ಲಿ ಈಗಾಗಲೇ Wi-Fi Broadband ಇಂಟರ್ನೆಟ್ ಹೊಂದಿದ್ದು, ಮೊಬೈಲ್ ಡೇಟಾ ಅವಶ್ಯಕತೆ ಇಲ್ಲದ ಗ್ರಾಹಕರಿಗೆ ಇದು ಹಣ ಉಳಿಸಲಿದೆ.
ಅದರಲ್ಲೂ, ಖಾಸಗಿ ಟೆಲಿಕಾಂ ಕಂಪನಿಗಳು ಈ ನಿಯಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ, ಗ್ರಾಹಕರ ಹಿತದೃಷ್ಟಿಯಿಂದ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ತನ್ನ ನಿರ್ಧಾರವನ್ನು ಕಡ್ಡಾಯವಾಗಿ ಜಾರಿಗೆ ತಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



