'ಓವರ್ ಆ್ಯಕ್ಟಿಂಗ್ ಅನ್ಕೊಂಡ್ರೆ ನಾನೇನ್ ಮಾಡೋಕೆ ಆಗಲ್ಲ, ನಾನು ಹೀಗೇ ಇರಲು ಇಷ್ಟಪಡುತ್ತೇನೆ': ಟ್ರೋಲರ್ಸ್ ಬಗ್ಗೆ ನಟಿ Rashmika Mandanna
ರಣಬಾಲಿ ಚಿತ್ರದ ಪ್ರಚಾರದಲ್ಲಿ ಭಾಗಿಯಾಗಿರುವ ರಶ್ಮಿಕಾ, ಯೂಟ್ಯೂಬ್ ಚಾನೆಲ್‌ವೊಂದರ ಸಂದರ್ಶನದಲ್ಲಿ ತಮ್ಮ ಮೇಲಿನ ಟ್ರೋಲಿಂಗ್ ಕುರಿತು ಮಾತನಾಡಿದ್ದು, ತಮ್ಮ ಸ್ನೇಹಪರ ಹಾಗೂ ದಯೆಯ ಸ್ವಭಾವವನ್ನು ‘ಓವರ್‌ಆ್ಯಕ್ಟಿಂಗ್’..

ಮುಂಬೈ: ತಮ್ಮ ದಯೆಯನ್ನು ಓವರ್ ಆ್ಯಕ್ಟಿಂಗ್ ಅನ್ಕೊಂಡ್ರೆ ನಾನೇನ್ ಮಾಡೋಕೆ ಆಗಲ್ಲ, ನಾನು ಹೀಗೇ ಇರಲು ಇಷ್ಟಪಡುತ್ತೇನೆ ಎಂದು ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ರಣಬಾಲಿ ಚಿತ್ರದ ಪ್ರಚಾರದಲ್ಲಿ ಭಾಗಿಯಾಗಿರುವ ರಶ್ಮಿಕಾ, ಯೂಟ್ಯೂಬ್ ಚಾನೆಲ್‌ವೊಂದರ ಸಂದರ್ಶನದಲ್ಲಿ ತಮ್ಮ ಮೇಲಿನ ಟ್ರೋಲಿಂಗ್ ಕುರಿತು ಮಾತನಾಡಿದ್ದು, ತಮ್ಮ ಸ್ನೇಹಪರ ಹಾಗೂ ದಯೆಯ ಸ್ವಭಾವವನ್ನು ‘ಓವರ್‌ಆ್ಯಕ್ಟಿಂಗ್’ ಎಂದು ಟ್ರೋಲ್ ಮಾಡುವವರಿಗೆ ಖಡಕ್ ತಿರುಗೇಟು ನೀಡಿದ್ದಾರೆ.
ಇತರರ ಟೀಕೆಗಳಿಗೆ ಹೆದರಿ ತಮ್ಮ ವ್ಯಕ್ತಿತ್ವವನ್ನು ಬದಲಿಸಿಕೊಳ್ಳುವ ಯಾವುದೇ ಉದ್ದೇಶ ಇಲ್ಲ. ನಾನು ಹೀಗೇ ಇರಲು ಆಯ್ಕೆ ಮಾಡಿಕೊಂಡಿದ್ದೇನೆ. ಹೀಗಿರುವುದೇ ನನಗೆ ತುಂಬಾ ಖುಷಿ. ದಯೆ ತೋರುವುದು ದೌರ್ಬಲ್ಯವಲ್ಲ ಎಂದು ಹೇಳಿದ್ದಾರೆ.
ದೌರ್ಬಲ್ಯವಲ್ಲ
“ನನ್ನ ಪ್ರಕಾರ ದಯೆ ಎನ್ನುವುದು ದೌರ್ಬಲ್ಯವಲ್ಲ. ಸುತ್ತಮುತ್ತ ಸಾಕಷ್ಟು ನಕಾರಾತ್ಮಕ ಭಾವನೆಗಳಿವೆ. ಹೀಗಾಗಿ ನಾನು ದಯೆ ಮತ್ತು ಸಕಾರಾತ್ಮಕತೆಯನ್ನು ನಂಬಲು ಬಯಸುತ್ತೇನೆ. ಕೆಲವರು ಇದನ್ನು ಓವರ್‌ಆ್ಯಕ್ಟಿಂಗ್ ಎಂದು ಕರೆದರೂ ನನಗೆ ಪರವಾಗಿಲ್ಲ. ಎಲ್ಲರೂ ಎಲ್ಲರಿಗೂ ಇಷ್ಟವಾಗಬೇಕೆಂದೇನಿಲ್ಲ. ನಾನು ಹೀಗೇ ಇರಲು ಆಯ್ಕೆ ಮಾಡಿಕೊಂಡಿದ್ದೇನೆ.
ಹೀಗಿರುವುದೇ ನನಗೆ ತುಂಬಾ ಖುಷಿ. ಇದು ನನ್ನ ನಿಜವಾದ ಸ್ವಭಾವ. ಯಾರನ್ನಾದರೂ ಖುಷಿಪಡಿಸಲು ನಾನು ನಕಲಿ ವರ್ತನೆ ತೋರಬೇಕಿಲ್ಲ. ನನ್ನ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳು ಖುಷಿಯಾಗಿರುವುದೇ ನನಗೆ ಮುಖ್ಯ” ಎಂದು ರಶ್ಮಿಕಾ ಹೇಳಿದ್ದಾರೆ
ರಶ್ಮಿಕಾಗೆ ವಿಜಯ್ ದೇವರಕೊಂಡ ಸಾಥ್
ಈ ವೇಳೆ ರಶ್ಮಿಕಾ ಪರವಾಗಿ ಮಾತನಾಡಿದ ವಿಜಯ್ ದೇವರಕೊಂಡ, ಸಾಮಾಜಿಕ ಜಾಲತಾಣಗಳಲ್ಲಿ ನಟರು ಮತ್ತು ರಾಜಕಾರಣಿಗಳ ವಿರುದ್ಧ ನಡೆಯುವ ಸಾಕಷ್ಟು ಟ್ರೋಲಿಂಗ್ ವ್ಯವಸ್ಥಿತವಾಗಿ ಸೃಷ್ಟಿಸಲಾಗುತ್ತದೆ ಎಂದು ಕಿಡಿಕಾರಿದರು.
“ನೀವು ಒಬ್ಬ ವ್ಯಕ್ತಿಯನ್ನು ಭೇಟಿಯಾಗಿ, ಅವರೊಂದಿಗೆ ಸಮಯ ಕಳೆದಿದ್ದರೆ ಮಾತ್ರ ಅವರ ಬಗ್ಗೆ ಭಾವನೆ ಅಥವಾ ಅಭಿಪ್ರಾಯ ಬೆಳೆಸಿಕೊಳ್ಳಬಹುದು. ಒಬ್ಬ ವ್ಯಕ್ತಿಯನ್ನು ಭೇಟಿಯೇ ಆಗದೆ ಅವರ ವ್ಯಕ್ತಿತ್ವದ ಬಗ್ಗೆ ಇಷ್ಟು ಗಟ್ಟಿಯಾದ ಅಭಿಪ್ರಾಯ ಹೇಗೆ ಮೂಡುತ್ತದೆ?” ಎಂದು ವಿಜಯ್ ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಹಲವು ಖಾತೆಗಳನ್ನು ಬಳಸಿಕೊಂಡು ಒಂದು ನಿರ್ದಿಷ್ಟ ಅಭಿಪ್ರಾಯ ಅಥವಾ ನಿರೂಪಣೆಯನ್ನು ಸೃಷ್ಟಿಸುವುದು ಸುಲಭವಾಗಿದೆ. ಒಂದು ವರ್ಗದವರು ನಿರ್ದಿಷ್ಟ ಅಭಿಪ್ರಾಯವನ್ನು ಜನರಲ್ಲಿ ಮೂಡಿಸಲು ಮುಂದಾದಾಗ ಅದರ ಹಿಂದೆ ದೊಡ್ಡ ವ್ಯವಸ್ಥೆಯೇ ಕೆಲಸ ಮಾಡುತ್ತದೆ. ಇಂತಹ ಟ್ರೋಲಿಂಗ್ ಕಾರಣಕ್ಕೆ ಯಾರೂ ತಮ್ಮ ಸ್ವಭಾವವನ್ನು ಬದಲಿಸಿಕೊಳ್ಳಬಾರದು ಎಂದು ಅವರು ಹೇಳಿದರು.
7 ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿರುವ ರಶ್ಮಿಕಾ-ವಿಜಯ್
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಬಹುಕಾಲದಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿದ್ದರೂ, ಇಬ್ಬರೂ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಅಧಿಕೃತವಾಗಿ ಘೋಷಿಸಿರಲಿಲ್ಲ. ಆದರೆ ಈ ವರ್ಷದ ಫೆಬ್ರವರಿಯಲ್ಲಿ ಇಬ್ಬರೂ ವಿವಾಹವಾಗುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು.
ಅಂದಹಾಗೆ ಈ ಹಿಂದೆ ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೆಡ್ ಚಿತ್ರದಲ್ಲಿ ನಟಿಸಿದ್ದ ಈ ಸೂಪರ್ ಹಿಟ್ ಜೋಡಿ ಇದೀಗ ಬರೊಬ್ಬರಿ 7 ವರ್ಷಗಳ ಬಳಿಕ ರಣಬಾಲಿ ಚಿತ್ರದ ಮೂಲಕ ಮತ್ತೆ ಒಂದಾಗಿದೆ.
ರಾಹುಲ್ ಸಾಂಕೃತ್ಯಾಯನ್ ನಿರ್ದೇಶನದ ಈ ಪೀರಿಯಡ್ ಡ್ರಾಮಾ 19ನೇ ಶತಮಾನದ ದಕ್ಷಿಣ ಭಾರತವನ್ನು ಹಿನ್ನೆಲೆಯಾಗಿಟ್ಟುಕೊಂಡಿದೆ. ಬ್ರಿಟಿಷರು ಸೃಷ್ಟಿಸಿದ ಬರಗಾಲದ ವಿರುದ್ಧ ಹೋರಾಡಲು ಮುಂದಾಗುವ ವ್ಯಕ್ತಿಯ ಸುತ್ತ ಕಥೆ ಸಾಗುತ್ತದೆ. ಅರ್ನಾಲ್ಡ್ ವೋಸ್ಲೂ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವು ಅಕ್ಟೋಬರ್ 16ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



