ಡೇಟಾ ಸೆಂಟರ್ ಸಾಮರ್ಥ್ಯ 1GWಗೆ ಹೆಚ್ಚಿಸುವ ಗುರಿ; ₹1,300 ಕೋಟಿ ನೀತಿ ವೆಚ್ಚ: ಸಚಿವ ಪ್ರಿಯಾಂಕ್ ಖರ್ಗೆ
ರಾಜ್ಯದಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಡೇಟಾ ಸೆಂಟರ್ ಪರಿಸರ ವ್ಯವಸ್ಥೆ ನಿರ್ಮಿಸುವ ಉದ್ದೇಶದಿಂದ ರೂಪಿಸಿರುವ ಐದು ವರ್ಷಗಳ ಈ ನೀತಿಯ ಅನುಷ್ಠಾನಕ್ಕೆ ₹1,300.45 ಕೋಟಿ ಮೀಸಲಿಡಲಾಗಿದೆ.

ಸರ್ಕಾರವು ಸುಸ್ಥಿರ ಡೇಟಾ ಸೆಂಟರ್ ನೀತಿ 2026-31ಕ್ಕೆ ಅನುಮೋದನೆ ನೀಡಿದ್ದು, 2031ರ ವೇಳೆಗೆ ಭಾರತದ ಒಟ್ಟು ಡೇಟಾ ಸೆಂಟರ್ ಸಾಮರ್ಥ್ಯದಲ್ಲಿ ರಾಜ್ಯದ ಪಾಲನ್ನು ಶೇ.10-12ಕ್ಕೆ ಹೆಚ್ಚಿಸುವುದು ಹಾಗೂ ಒಟ್ಟು 1 ಗಿಗಾವ್ಯಾಟ್ (GW) ಸಾಮರ್ಥ್ಯ ಸಾಧಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ನಿಗದಿಪಡಿಸಿದೆ.
ರಾಜ್ಯದಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಡೇಟಾ ಸೆಂಟರ್ ಪರಿಸರ ವ್ಯವಸ್ಥೆ ನಿರ್ಮಿಸುವ ಉದ್ದೇಶದಿಂದ ರೂಪಿಸಿರುವ ಐದು ವರ್ಷಗಳ ಈ ನೀತಿಯ ಅನುಷ್ಠಾನಕ್ಕೆ ₹1,300.45 ಕೋಟಿ ಮೀಸಲಿಡಲಾಗಿದೆ. ನವೀಕರಿಸಬಹುದಾದ ಇಂಧನ ಬಳಕೆಗೆ ಉತ್ತೇಜನ, ಸುಧಾರಿತ ಕೂಲಿಂಗ್ ತಂತ್ರಜ್ಞಾನ, ನೀರಿನ ನಿರ್ವಹಣೆ ಹಾಗೂ ಪವರ್ ಯೂಸೇಜ್ ಎಫೆಕ್ಟಿವ್‌ನೆಸ್ (PUE) ಮತ್ತು ವಾಟರ್ ಯೂಸೇಜ್ ಎಫೆಕ್ಟಿವ್‌ನೆಸ್ (WUE) ಮೇಲ್ವಿಚಾರಣೆಗೆ ನೀತಿಯಲ್ಲಿ ಒತ್ತು ನೀಡಲಾಗಿದೆ.
ಡೇಟಾ ಸೆಂಟರ್ ಕ್ಷೇತ್ರವು ವೇಗವಾಗಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ ಈ ನೀತಿ ಜಾರಿಗೆ ಬರುತ್ತಿದೆ. ಗೃಹ, ಐಟಿ-ಬಿಟಿ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ, ಕೇವಲ ಡೇಟಾ ಸೆಂಟರ್‌ಗಳ ಸಾಮರ್ಥ್ಯವನ್ನು ಹೆಚ್ಚಿಸುವುದು ಸರ್ಕಾರದ ಉದ್ದೇಶವಲ್ಲ; ಸರಿಯಾದ ಸ್ಥಳದಲ್ಲಿ, ಸರಿಯಾದ ಮೂಲಸೌಕರ್ಯದೊಂದಿಗೆ, ಅಗತ್ಯಕ್ಕೆ ತಕ್ಕ ಸಾಮರ್ಥ್ಯವನ್ನು ನಿರ್ಮಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಇದರರ್ಥ ನವೀಕರಿಸಬಹುದಾದ ಇಂಧನದ ಹೆಚ್ಚಿನ ಬಳಕೆ, ಹೊಸ ಕೂಲಿಂಗ್ ತಂತ್ರಜ್ಞಾನಗಳ ಅಳವಡಿಕೆ, ಉತ್ತಮ ನೀರಿನ ನಿರ್ವಹಣೆ ಹಾಗೂ ಬಲಿಷ್ಠ ಸಂಪರ್ಕ ವ್ಯವಸ್ಥೆ ರೂಪಿಸುವುದಾಗಿದೆ. ಇದರೊಂದಿಗೆ ಬೆಂಗಳೂರಿನಾಚೆಗೂ ಹೊಸ ಅವಕಾಶಗಳನ್ನು ಸೃಷ್ಟಿಸಲಾಗುವುದು. ಭಾರತದ ಡಿಜಿಟಲ್ ಮೂಲಸೌಕರ್ಯದ ಮುಂದಿನ ಹಂತವನ್ನು ಮುನ್ನಡೆಸಲು ಕರ್ನಾಟಕದಲ್ಲಿ ತಂತ್ರಜ್ಞಾನ ಪರಿಸರ ವ್ಯವಸ್ಥೆ ಹಾಗೂ ಪ್ರತಿಭಾವಂತ ಮಾನವ ಸಂಪನ್ಮೂಲವಿದೆ. ಈ ಬೆಳವಣಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿರುವುದರ ಜೊತೆಗೆ ಸುಸ್ಥಿರವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಈ ನೀತಿಯನ್ನು ರೂಪಿಸಲಾಗಿದೆ ಎಂದು ಹೇಳಿದರು.
ಜಾಗತಿಕ ವಾಣಿಜ್ಯ ರಿಯಲ್ ಎಸ್ಟೇಟ್ ಸೇವೆ ಮತ್ತು ಹೂಡಿಕೆ ನಿರ್ವಹಣಾ ಸಂಸ್ಥೆ JLLನ ಇತ್ತೀಚಿನ ವರದಿ ಪ್ರಕಾರ, ಜಾಗತಿಕ ಡೇಟಾ ಸೆಂಟರ್ ಸಾಮರ್ಥ್ಯವು 2025ರಲ್ಲಿ ಸುಮಾರು 103 GWನಿಂದ 2030ರ ವೇಳೆಗೆ ಸುಮಾರು 200 GWಗೆ ಏರಿಕೆಯಾಗುವ ನಿರೀಕ್ಷೆಯಿದೆ.
ಕೃತಕ ಬುದ್ಧಿಮತ್ತೆ (AI), ಮೆಷಿನ್ ಲರ್ನಿಂಗ್ (ML), 5G ಹಾಗೂ ಡೇಟಾ ಸ್ಥಳೀಕರಣಕ್ಕೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಭಾರತವು ಡೇಟಾ ಸೆಂಟರ್ ಕ್ಷೇತ್ರದಲ್ಲಿ ಪ್ರಮುಖ ದೇಶವಾಗಿ ಹೊರಹೊಮ್ಮುತ್ತಿದೆ. 2026ರ ಆಗಸ್ಟ್ ವೇಳೆಗೆ ಭಾರತದಲ್ಲಿನ ಡೇಟಾ ಸೆಂಟರ್ ಸಾಮರ್ಥ್ಯವು ಈಗಾಗಲೇ 1.57 GW ದಾಟಿದ್ದು, 2030ರ ವೇಳೆಗೆ ಇದು ಸುಮಾರು 8 GWಗೆ ವಿಸ್ತರಿಸುವ ನಿರೀಕ್ಷೆಯಿದೆ.
ಕರ್ನಾಟಕದ ಡೇಟಾ ಸೆಂಟರ್ ನೀತಿಯನ್ನು ಹಂತ ಹಂತವಾಗಿ ಐದು ವರ್ಷಗಳ ಮಾರ್ಗಸೂಚಿಯ ಮೂಲಕ ಅನುಷ್ಠಾನಗೊಳಿಸಲಾಗುವುದು. ಮೊದಲ ಹಂತದಲ್ಲಿ ನೀತಿಯ ಕಾರ್ಯರೂಪಕ್ಕೆ ತರುವುದು, ಹೂಡಿಕೆದಾರರಿಗೆ ನೆರವು ನೀಡುವುದು ಹಾಗೂ ಡೇಟಾ ಸೆಂಟರ್ ವಲಯಗಳು ಮತ್ತು ಪಾರ್ಕ್‌ಗಳನ್ನು ಗುರುತಿಸುವ ಕಾರ್ಯ ನಡೆಯಲಿದೆ. ಬಳಿಕ ಪರಿಸರ ವ್ಯವಸ್ಥೆಯ ವಿಸ್ತರಣೆ, ಸಂಶೋಧನೆ ಮತ್ತು ಅಭಿವೃದ್ಧಿ (R&D) ಹಾಗೂ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲಾಗುವುದು.
ರಾಜ್ಯದಲ್ಲಿ ಈಗಾಗಲೇ ಹೈಪರ್‌ಸ್ಕೇಲ್, ಕೊಲೊಕೇಶನ್ ಮತ್ತು ಎಡ್ಜ್ ಸೌಲಭ್ಯಗಳನ್ನು ಒಳಗೊಂಡಂತೆ 32 ಡೇಟಾ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿವೆ.
ಇದರ ಜೊತೆಗೆ, ಮಂಗಳೂರನ್ನು ಕಾರ್ಯತಂತ್ರದ ಡೇಟಾ ಸೆಂಟರ್ ಹಬ್ ಆಗಿ ಅಭಿವೃದ್ಧಿಪಡಿಸಲು ಸರ್ಕಾರ ವಿಶೇಷ ಗಮನ ಹರಿಸುತ್ತಿದೆ. ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್‌ಗಳು (GCCs), ಐಟಿ ಸಂಸ್ಥೆಗಳು, ಶೈಕ್ಷಣಿಕ ಹಾಗೂ ಸಂಶೋಧನಾ ಸಂಸ್ಥೆಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಡಿಜಿಟಲ್ ಉದ್ಯಮಗಳಿಂದ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಮಂಗಳೂರನ್ನು ಪ್ರಮುಖ ಡೇಟಾ ಸೆಂಟರ್ ಕೇಂದ್ರವಾಗಿ ರೂಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



