ಬ್ರಿಕ್ಸ್ ಶೃಂಗಸಭೆ ಔತಣಕೂಟದ ಮೆನು ವಿವಾದ: ಎಪಿಜೆ ಅಬ್ದುಲ್ ಕಲಾಂಗೆ ಸಸ್ಯಾಹಾರಿ ಆಹಾರ ಬಡಿಸಿದ್ದೆವು ಎಂದ ಐಸ್ಲ್ಯಾಂಡ್ ಮಾಜಿ ಅಧ್ಯಕ್ಷ!
1996 ರಿಂದ 2016 ರವರೆಗೆ ಐಸ್‌ಲ್ಯಾಂಡ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಗ್ರಿಮ್ಸನ್, ಕಲಾಂ ಅವರು ಐಸ್‌ಲ್ಯಾಂಡ್ ಮತ್ತು ವಿಶಾಲ ನಾರ್ಡಿಕ್ ಪ್ರದೇಶಕ್ಕೆ ಭೇಟಿ ನೀಡಿದಾಗ ಅವರಿಗೆ ಆತಿಥ್ಯ ವಹಿಸಿದ್ದರು.
ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಾಹಾರಿ ಮೆನುವಿನ ಬಗ್ಗೆ ವಿರೋಧ ಪಕ್ಷದ ಟೀಕೆಗಳ ನಡುವೆ, ಐಸ್ಲ್ಯಾಂಡ್ ಮಾಜಿ ಅಧ್ಯಕ್ಷ ಓಲಾಫರ್ ರಾಗ್ನರ್ ಗ್ರಿಮ್ಸನ್ 2005ರಲ್ಲಿ ಐಸ್ಲ್ಯಾಂಡ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಗಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಸಂಪೂರ್ಣ ಸಸ್ಯಾಹಾರಿ ಊಟವನ್ನು ಬಡಿಸಿದ್ದಾಗಿ ನೆನಪಿಸಿಕೊಂಡರು.
'ನಾರ್ಡಿಕ್ ದೇಶಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತದ ರಾಷ್ಟ್ರಪತಿಗಳಿಗೆ ರಾಜ್ಯ ಭೋಜನವನ್ನು ಆಯೋಜಿಸಿದಾಗ, ನಾನು ಸಂಪೂರ್ಣ ಸಸ್ಯಾಹಾರಿ ಮೆನುವನ್ನು ಸಹ ನೀಡಿದ್ದೇನೆ. 20 ವರ್ಷಗಳ ಹಿಂದೆ! ಮತ್ತು ಸಸ್ಯಾಹಾರಿಯಾಗುವುದು ಸುಲಭವಲ್ಲದ ಐಸ್ಲ್ಯಾಂಡ್‌ನಲ್ಲಿ!!' ಎಂದು ಗ್ರಿಮ್ಸನ್ X ನಲ್ಲಿ ಬರೆದಿದ್ದಾರೆ.
1996 ರಿಂದ 2016 ರವರೆಗೆ ಐಸ್‌ಲ್ಯಾಂಡ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಗ್ರಿಮ್ಸನ್, ಕಲಾಂ ಅವರು ಐಸ್‌ಲ್ಯಾಂಡ್ ಮತ್ತು ವಿಶಾಲ ನಾರ್ಡಿಕ್ ಪ್ರದೇಶಕ್ಕೆ ಭೇಟಿ ನೀಡಿದಾಗ ಅವರಿಗೆ ಆತಿಥ್ಯ ವಹಿಸಿದ್ದರು.
ಬ್ರಿಕ್ಸ್ (BRICS) ರಾಷ್ಟ್ರಗಳ ಔತಣಕೂಟದಲ್ಲಿ ಸಂಪೂರ್ಣವಾಗಿ ಸಸ್ಯಾಹಾರಿ ಭಕ್ಷ್ಯಗಳನ್ನಷ್ಟೇ ಬಡಿಸಿದ್ದನ್ನು ಲೇವಡಿ ಮಾಡುವ ಟೀಕೆಗಳಿಗೆ ಪ್ರತಿಕ್ರಿಯೆಯಾಗಿ ಅವರು ಈ ಹೇಳಿಕೆಯನ್ನು ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ 'ಭಾರತ ಮಂಟಪ'ದಲ್ಲಿ ಬ್ರಿಕ್ಸ್ (BRICS) ನಾಯಕರಿಗೆ ಔತಣಕೂಟವನ್ನು ಏರ್ಪಡಿಸಿದ್ದರು. ಈ ಔತಣಕೂಟದ ಮೆನುವಿನಲ್ಲಿ ಭಾರತೀಯ ಪಾಕಪದ್ಧತಿಗೆ ಒತ್ತು ನೀಡಲಾಗಿದ್ದು, ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿಯ ವೈವಿಧ್ಯಮಯ ಸಸ್ಯಾಹಾರಿ ಖಾದ್ಯಗಳನ್ನು ಬಡಿಸಲಾಯಿತು.
ಬಡಿಸಲಾದ ಖಾದ್ಯಗಳಲ್ಲಿ ಖಾಂಡ್ವಿ, ಪನೀರ್ ಲಬಾಬ್‌ದಾರ್, ಗುಚ್ಚಿ ಮಾರ್ಮಿಕ್, ಸಿರಿಧಾನ್ಯದ ಪುಲಾವ್, ಮಶ್ರೂಮ್ ಗಲೌಟಿ ಮತ್ತು ಜಲೇಬಿ ಮುಂತಾದವು ಸೇರಿದ್ದವು.
ಬ್ರಿಕ್ಸ್ ಶೃಂಗಸಭೆಯ ಔತಣಕೂಟದಲ್ಲಿ ಸಂಪೂರ್ಣ ಸಸ್ಯಾಹಾರಿ ಭೋಜನವನ್ನು ಬಡಿಸಿದ ಮರುದಿನವೇ, ಬಿಜೆಪಿ ಈಗ ಪ್ರಪಂಚದಾದ್ಯಂತದ ಗಣ್ಯರ ಮೇಲೆ ತನ್ನ 'ಅತ್ಯಂತ ಸಮಸ್ಯಾತ್ಮಕ' ಆಹಾರ ಪದ್ಧತಿಯನ್ನು ಹೇರುತ್ತಿದೆ ಎಂದು ಕಾಂಗ್ರೆಸ್ ಭಾನುವಾರ ಟೀಕಿಸಿದೆ.
ಎಕ್ಸ್ (X), ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಮಾಹಿತಿಗಾಗಿ ಹೇಳುವುದಾದರೆ: ಶೇ 80ರಷ್ಟು ಭಾರತೀಯರು ಮಾಂಸಾಹಾರಿಗಳು. ಭಾರತೀಯ ಮಾಂಸಾಹಾರವು ಅತ್ಯಂತ ರುಚಿಕರವಾಗಿರುತ್ತದೆ. ನನ್ನ ಸಹೋದರಿ ತಯಾರಿಸುವ 'ಚೋಲೆ ಭಟೂರೆ'ಯೂ ಕೂಡ ಅಷ್ಟೇ ರುಚಿಕರ' ಎಂದು ಬರೆದುಕೊಂಡಿದ್ದಾರೆ. ಜೊತೆಗೆ, ಊಟದ ಮೇಜಿನ ಮೇಲಿರುವ 'ಚೋಲೆ ಭಟೂರೆ'ಯ ಚಿತ್ರವನ್ನೂ ಅವರು ಹಂಚಿಕೊಂಡಿದ್ದಾರೆ.
ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು ಆ ಔತಣಕೂಟದ ಮೆನುವಿನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
'ತಮ್ಮ ಆಹಾರದ ಆದ್ಯತೆಗಳನ್ನು ಸಹ ಭಾರತೀಯರ ಮೇಲೆ ಹೇರುವ ಬಿಜೆಪಿಯ ಚಾಳಿಯು ಈಗಾಗಲೇ ತೀವ್ರ ಸಮಸ್ಯೆಯ ವಿಷಯವಾಗಿದೆ. ಇದೀಗ, ಪ್ರಪಂಚದಾದ್ಯಂತದ ಗಣ್ಯರ ಮೇಲೂ ತಮ್ಮದೇ ಆದ ಆಯ್ಕೆಗಳನ್ನು ಹೇರುವ ಮೂಲಕ ಅವರು ಇದನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ' ಎಂದು ಖೇರಾ 'ಎಕ್ಸ್' (X) ನಲ್ಲಿ ಹೇಳಿದ್ದಾರೆ.
ಭಾರತವು ಶ್ರೀಮಂತ ಹಾಗೂ ವೈವಿಧ್ಯಮಯ ಸಂಸ್ಕೃತಿ ಮತ್ತು ವಿವಿಧ ಬಗೆಯ ಪಾಕಪದ್ಧತಿಗಳನ್ನು ಹೊಂದಿರುವ ದೇಶವಾಗಿದ್ದು, ಇಲ್ಲಿನ ಅತ್ಯುತ್ತಮ ಮಾಂಸಾಹಾರಿ ಖಾದ್ಯಗಳನ್ನು ಪ್ರಪಂಚದಾದ್ಯಂತದ ಜನರು ಸವಿದು ಆನಂದಿಸುತ್ತಾರೆ. ಹಾಗಾದರೆ, ಭಾರತದ ಸಂಸ್ಕೃತಿಯ ಈ ಭಾಗವನ್ನು ಮರೆಮಾಚಲು ಮೋದಿ ಸರ್ಕಾರ ಏಕೆ ನಿರ್ಧರಿಸಿತು ಎಂದು ಖೇರಾ ಪ್ರಶ್ನಿಸಿದರು.
ಭಾರತಕ್ಕೆ ಅದರದೇ ಆದ ವಿಶಿಷ್ಟ ಗುರುತನ್ನು ನೀಡುವ ಈ ವೈವಿಧ್ಯತೆಯ ಬಗ್ಗೆ ಅದಕ್ಕೆ ನಾಚಿಕೆಯಾಗುತ್ತಿದೆಯೇ? ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದರು.
ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಕಾಂಗ್ರೆಸ್‌ನ ಟೀಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. 'ಬ್ರಿಕ್ಸ್ ರಾಷ್ಟ್ರಗಳ ನಾಯಕರಿಗೆ ಬಡಿಸಲಾದ ಆಹಾರದ ವಿಷಯದಲ್ಲೂ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುತ್ತಿರುವುದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ನಮ್ಮ ಅತಿಥಿಗಳು ವೈವಿಧ್ಯಮಯ ಪ್ರಾದೇಶಿಕ ಸಂಪ್ರದಾಯಗಳೊಂದಿಗೆ, ಉತ್ತಮ ರುಚಿ ಮತ್ತು ಪೌಷ್ಟಿಕಾಂಶದ ವೈವಿಧ್ಯತೆಯನ್ನು ಹೊಂದಿರುವ ಭಾರತೀಯ ಸಸ್ಯಾಹಾರಿ ಭಕ್ಷ್ಯಗಳನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು' ಎಂದು ರಿಜಿಜು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


