ವಿದೇಶ

Nepal Floods: 'ನೀವೇನ್ ದಾನ ಕೊಡ್ತಿಲ್ಲ.. ಪ್ರವಾಹಕ್ಕೆ ನೀವೇ ಕಾರಣ.. ಪರಿಹಾರ ಕೊಡಿ ಅಷ್ಟೇ..'; ಭಾರತ, ಚೀನಾ, ಅಮೆರಿಕಕ್ಕೆ ನೇಪಾಳ ಆಗ್ರಹ!

“ಇದು ದಾನವಲ್ಲ” ಎಂದು ಹೇಳಿರುವ ಖನಾಲ್, ಪ್ರಮುಖ ಮಾಲಿನ್ಯಕಾರ ರಾಷ್ಟ್ರಗಳು ಹವಾಮಾನ ದುರಂತಗಳಿಂದ ಬಾಧಿತ ದೇಶಗಳಿಗೆ ನೆರವು ನೀಡುವುದು ನೈತಿಕ ಹಾಗೂ ಕಾನೂನುಬದ್ಧ ಹೊಣೆಗಾರಿಕೆ ಎಂದು ಪ್ರತಿಪಾದಿಸಿದ್ದಾರೆ.

Nepal Floods: 'ನೀವೇನ್ ದಾನ ಕೊಡ್ತಿಲ್ಲ.. ಪ್ರವಾಹಕ್ಕೆ ನೀವೇ ಕಾರಣ.. ಪರಿಹಾರ ಕೊಡಿ ಅಷ್ಟೇ..'; ಭಾರತ, ಚೀನಾ, ಅಮೆರಿಕಕ್ಕೆ ನೇಪಾಳ ಆಗ್ರಹ!
ನೇಪಾಳ ಪ್ರವಾಹ
Published On :

ಕಠ್ಮಂಡು: ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ತತ್ತರಿಸಿರುವ ನೇಪಾಳ, ಹವಾಮಾನ ಬದಲಾವಣೆಗೆ ಕಾರಣವಾಗುತ್ತಿರುವ ಪ್ರಮುಖ ಹಸಿರುಮನೆ ಅನಿಲ ಹೊರಸೂಸುವ ರಾಷ್ಟ್ರಗಳಾದ ಭಾರತ, ಚೀನಾ ಮತ್ತು ಅಮೆರಿಕದಿಂದ ಪರಿಹಾರ ನೀಡುವಂತೆ ಆಗ್ರಹಿಸಿದೆ.

ಜಾಗತಿಕ ಹೊರಸೂಸುವಿಕೆಯಲ್ಲಿ ದೊಡ್ಡ ಪಾಲು ಹೊಂದಿರುವ ರಾಷ್ಟ್ರಗಳು, ಹವಾಮಾನ ಬದಲಾವಣೆಯಿಂದ ತೀವ್ರ ನಷ್ಟ ಅನುಭವಿಸುತ್ತಿರುವ ದೇಶಗಳ ಹೊಣೆಗಾರಿಕೆಯನ್ನು ಹಂಚಿಕೊಳ್ಳಬೇಕು ಎಂದು ನೇಪಾಳ ವಾದಿಸಿದೆ.

ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದಲ್ಲಿ 1,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿರಾರು ಜನರು ನಾಪತ್ತೆಯಾಗಿದ್ದಾರೆ.

ವ್ಯಾಪಕ ಹಾನಿ ಸಂಭವಿಸಿರುವ ಹಿನ್ನೆಲೆಯಲ್ಲಿ, ಮನೆಗಳು, ರಸ್ತೆಗಳು, ಸೇತುವೆಗಳು ಸೇರಿದಂತೆ ಮೂಲಸೌಕರ್ಯಗಳ ಪುನರ್‌ನಿರ್ಮಾಣಕ್ಕೆ ಕೋಟ್ಯಂತರ ಡಾಲರ್ ಅಗತ್ಯವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಹವಾಮಾನ ಹಣಕಾಸು ನೆರವಿಗಾಗಿ ನೇಪಾಳ ತನ್ನ ಪ್ರಯತ್ನವನ್ನು ಮತ್ತಷ್ಟು ಚುರುಕುಗೊಳಿಸಿದೆ.

'ನೀವೇನ್ ದಾನ ಕೊಡ್ತಿಲ್ಲ.. ಪ್ರವಾಹಕ್ಕೆ ನೀವೇ ಕಾರಣ.. ಪರಿಹಾರ ಕೊಡಿ ಅಷ್ಟೇ'

ಏತನ್ಮಧ್ಯೆ ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್, ಹವಾಮಾನ ಬಿಕ್ಕಟ್ಟಿಗೆ ನೇಪಾಳದ ಕೊಡುಗೆ ತುಲನಾತ್ಮಕವಾಗಿ ಅತ್ಯಲ್ಪವಾಗಿದ್ದರೂ, ಅದರ ಪರಿಣಾಮಗಳಿಂದ ಉಂಟಾಗುವ ಆರ್ಥಿಕ ಹೊರೆಯನ್ನು ದೇಶವೇ ಸಂಪೂರ್ಣವಾಗಿ ಭರಿಸಬೇಕೆಂದು ನಿರೀಕ್ಷಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

“ಇದು ದಾನವಲ್ಲ” ಎಂದು ಹೇಳಿರುವ ಖನಾಲ್, ಪ್ರಮುಖ ಮಾಲಿನ್ಯಕಾರ ರಾಷ್ಟ್ರಗಳು ಹವಾಮಾನ ದುರಂತಗಳಿಂದ ಬಾಧಿತ ದೇಶಗಳಿಗೆ ನೆರವು ನೀಡುವುದು ನೈತಿಕ ಹಾಗೂ ಕಾನೂನುಬದ್ಧ ಹೊಣೆಗಾರಿಕೆ ಎಂದು ಪ್ರತಿಪಾದಿಸಿದ್ದಾರೆ.

ಅಲ್ಲದೆ “ನಾವು ನಮ್ಮ ರಾಜತಾಂತ್ರಿಕ ಚೌಕಟ್ಟನ್ನು ‘ನೆರವು’ಯಿಂದ ‘ನ್ಯಾಯ ಮತ್ತು ಪರಿಹಾರ’ದತ್ತ ಬದಲಾಯಿಸುತ್ತಿದ್ದೇವೆ. ಇದು ದಾನದ ವಿಚಾರವಲ್ಲ; ಕಾನೂನು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆ. ವಿಶ್ವದ ಅತಿ ಹೆಚ್ಚು ಹಸಿರುಮನೆ ಅನಿಲ ಹೊರಸೂಸುವ ಚೀನಾ, ಎರಡನೇ ಸ್ಥಾನದಲ್ಲಿರುವ ಅಮೆರಿಕ ಮತ್ತು ಮೂರನೇ ಸ್ಥಾನದಲ್ಲಿರುವ ಭಾರತ, ನೇಪಾಳದಂತಹ ಹವಾಮಾನ ಬದಲಾವಣೆಗೆ ಹೆಚ್ಚು ದುರ್ಬಲವಾಗಿರುವ ರಾಷ್ಟ್ರಗಳಿಗೆ ಪರಿಹಾರ ನೀಡುವಲ್ಲಿ ಐತಿಹಾಸಿಕ ಹೊಣೆಗಾರಿಕೆ ಹೊಂದಿವೆ” ಎಂದು ಖನಾಲ್ ದಿ ಕಠ್ಮಂಡು ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ನೇಪಾಳದ ಈ ಬೇಡಿಕೆ, ಹವಾಮಾನ ಬದಲಾವಣೆಯಿಂದ ಉಂಟಾಗುವ ‘ನಷ್ಟ ಮತ್ತು ಹಾನಿ’ (Loss and Damage)ಗೆ ಸಂಬಂಧಿಸಿದ ಅಂತರರಾಷ್ಟ್ರೀಯ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿದೆ. ಹವಾಮಾನ ಬದಲಾವಣೆಯಿಂದ ಉಂಟಾಗುವ ವಿನಾಶಕ್ಕೆ ಆರ್ಥಿಕ ನೆರವು ಪಡೆಯಲು ಅಭಿವೃದ್ಧಿಶೀಲ ಹಾಗೂ ದುರ್ಬಲ ರಾಷ್ಟ್ರಗಳಿಗೆ ಈ ವ್ಯವಸ್ಥೆ ನೆರವಾಗಲಿದೆ. ಇತ್ತೀಚಿನ ದುರಂತದ ಹಿನ್ನೆಲೆಯಲ್ಲಿ ನೇಪಾಳವು Fund for Responding to Loss and Damageನಿಂದ ನೆರವು ಕೋರಿ ಸಂಪರ್ಕಿಸಿದೆ.

ಹವಾಮಾನ ಬದಲಾವಣೆಯ ಪರಿಣಾಮದಿಂದ ನೇಪಾಳದಂತಹ ರಾಷ್ಟ್ರಗಳು ಅನುಭವಿಸುತ್ತಿರುವ ಅಸಮಾನ ಪ್ರಮಾಣದ ನಷ್ಟವನ್ನು ಇತ್ತೀಚಿನ ಪ್ರವಾಹಗಳು ಮತ್ತೊಮ್ಮೆ ತೋರಿಸಿವೆ ಎಂದು ನೇಪಾಳ ಸರ್ಕಾರ ಹೇಳಿದೆ. ಪ್ರವಾಹ, ಭೂಕುಸಿತ, ಹಿಮನದಿಗಳ ಕರಗುವಿಕೆ ಸೇರಿದಂತೆ ಹವಾಮಾನ ಸಂಬಂಧಿತ ಅಪಾಯಗಳು ಹಿಮಾಲಯ ಪ್ರದೇಶದ ಜನರ ಬದುಕಿಗೆ ದಿನದಿಂದ ದಿನಕ್ಕೆ ದೊಡ್ಡ ಬೆದರಿಕೆಯಾಗುತ್ತಿವೆ.

ಸಂಪೂರ್ಣ ನಾಶ

ಇತ್ತೀಚಿನ ಪ್ರವಾಹದಿಂದ ಮನೆಗಳು, ರಸ್ತೆಗಳು, ಸೇತುವೆಗಳು ಸೇರಿದಂತೆ ಹಲವು ಮೂಲಸೌಕರ್ಯಗಳು ಹಾನಿಗೊಳಗಾಗಿವೆ. ಹಲವು ಪ್ರದೇಶಗಳಲ್ಲಿ ಜನರ ಜೀವನೋಪಾಯವೂ ಅಸ್ತವ್ಯಸ್ತಗೊಂಡಿದೆ. ಪುನರ್‌ನಿರ್ಮಾಣಕ್ಕೆ ಬಿಲಿಯನ್‌ಗಟ್ಟಲೆ ಡಾಲರ್ ವೆಚ್ಚವಾಗಬಹುದು ಎಂದು ನೇಪಾಳ ಅಂದಾಜಿಸಿದೆ.

ನೇಪಾಳದ ಪರಿಹಾರ ಬೇಡಿಕೆ ಅದರ ವಿಶಾಲವಾದ ‘ಹವಾಮಾನ ನ್ಯಾಯ’ ಅಭಿಯಾನದ ಭಾಗವಾಗಿದೆ. ಕಾರ್ಬನ್ ಆಧಾರಿತ ಆರ್ಥಿಕ ಅಭಿವೃದ್ಧಿಯಿಂದ ಹೆಚ್ಚಿನ ಲಾಭ ಪಡೆದ ರಾಷ್ಟ್ರಗಳು, ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸುತ್ತಿರುವ ದೇಶಗಳಿಗೆ ಹೆಚ್ಚಿನ ಆರ್ಥಿಕ ನೆರವು ನೀಡಬೇಕು ಎಂದು ನೇಪಾಳ ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಒತ್ತಾಯಿಸುತ್ತಲೇ ಬಂದಿದೆ.

ಭಾರತ ಮತ್ತು ಚೀನಾ ನೇಪಾಳದ ನೆರೆಯ ರಾಷ್ಟ್ರಗಳಾಗಿರುವುದರ ಜೊತೆಗೆ, ಅದರ ಆರ್ಥಿಕತೆಯ ಮೇಲೂ ಪ್ರಮುಖ ಪ್ರಭಾವ ಹೊಂದಿರುವುದರಿಂದ, ಈ ಬೇಡಿಕೆ ರಾಜತಾಂತ್ರಿಕವಾಗಿ ಸೂಕ್ಷ್ಮ ವಿಚಾರವಾಗಿದೆ. ಇದೇ ವೇಳೆ, ಜಾಗತಿಕ ತಾಪಮಾನ ಏರಿಕೆಗೆ ಅತ್ಯಂತ ದುರ್ಬಲವಾಗಿರುವ ಪ್ರದೇಶಗಳಲ್ಲಿ ಹಿಮಾಲಯವೂ ಒಂದು ಎಂಬುದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಕಠ್ಮಂಡು ಒತ್ತಾಯಿಸುತ್ತಿದೆ.

ದೇಶದಲ್ಲಿ ಸಂಭವಿಸಿರುವ ಭೀಕರ ದುರಂತದ ಬಳಿಕ ಪುನರ್ವಸತಿ ಮತ್ತು ಪುನರ್‌ನಿರ್ಮಾಣಕ್ಕೆ ಅಗತ್ಯವಿರುವ ನೆರವು ಪಡೆಯಲು ನೇಪಾಳ ತನ್ನ ರಾಜತಾಂತ್ರಿಕ ಕಚೇರಿಗಳು ಮತ್ತು ಅಂತರರಾಷ್ಟ್ರೀಯ ಪಾಲುದಾರರನ್ನು ಸಜ್ಜುಗೊಳಿಸಿದೆ ಎಂದು ಖನಾಲ್ ದಿ ಕಠ್ಮಂಡು ಪೋಸ್ಟ್‌ಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.