ವಿದೇಶ

ನೇಪಾಳ ಪ್ರವಾಹ: ಸಾವಿನ ಸಂಖ್ಯೆ 768ಕ್ಕೆ ಏರಿಕೆ; 2,500ಕ್ಕೂ ಹೆಚ್ಚು ಮಂದಿ ನಾಪತ್ತೆ; ಸುರಂಗದೊಳಗೆ 100ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಶಂಕೆ!

ಉತ್ತರ ಮತ್ತು ಮಧ್ಯ ನೇಪಾಳದ ಹಲವು ಪ್ರದೇಶಗಳಲ್ಲಿ ಪ್ರವಾಹ ಭಾರಿ ಪ್ರಮಾಣದ ಹಾನಿ ಉಂಟುಮಾಡಿದೆ. ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಇದುವರೆಗೆ 8,730 ಮಂದಿಯನ್ನು ರಕ್ಷಿಸಲಾಗಿದೆ.

ನೇಪಾಳ ಪ್ರವಾಹ: ಸಾವಿನ ಸಂಖ್ಯೆ 768ಕ್ಕೆ ಏರಿಕೆ; 2,500ಕ್ಕೂ ಹೆಚ್ಚು ಮಂದಿ ನಾಪತ್ತೆ; ಸುರಂಗದೊಳಗೆ 100ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಶಂಕೆ!
ನೇಪಾಳ ಪ್ರವಾಹ, ಸುರಂದೊಳಗೆ ಸಿಲುಕಿರ ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಾಚರಣೆ
Published On :

ಕಠ್ಮಂಡು: ನೇಪಾಳದಲ್ಲಿ ಭೀಕರ ಪ್ರವಾಹದ ಬಳಿಕ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರೆದಿದ್ದು, ಸಾವಿನ ಸಂಖ್ಯೆ 768ಕ್ಕೆ ಏರಿಕೆಯಾಗಿದೆ. 2,500ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.

ಅವಶೇಷಗಳಡಿ ಸಿಲುಕಿರುವವರಿಗಾಗಿ ರಕ್ಷಣಾ ತಂಡಗಳು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಆಗಸ್ಟ್‌ 26ರಂದು ನೇಪಾಳ-ಟಿಬೆಟ್‌ ಗಡಿ ಸಮೀಪ ಹಿಮನದಿ ಕುಸಿತದ ಬಳಿಕ ಸಂಭವಿಸಿದ ಹಿಮ-ಬಂಡೆಗಳ ಭಾರಿ ಕುಸಿತದಿಂದ ಹಠಾತ್ ಪ್ರವಾಹ ಉಂಟಾಗಿತ್ತು.

ಉತ್ತರ ಮತ್ತು ಮಧ್ಯ ನೇಪಾಳದ ಹಲವು ಪ್ರದೇಶಗಳಲ್ಲಿ ಪ್ರವಾಹ ಭಾರಿ ಪ್ರಮಾಣದ ಹಾನಿ ಉಂಟುಮಾಡಿದೆ. ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಇದುವರೆಗೆ 8,730 ಮಂದಿಯನ್ನು ರಕ್ಷಿಸಲಾಗಿದೆ.

2,500ಕ್ಕೂ ಹೆಚ್ಚು ಮಂದಿ ನಾಪತ್ತೆ, ತೀವ್ರ ಶೋಧ

ಪ್ರವಾಹದಿಂದ ಹಾನಿಗೊಳಗಾದ ಮೂರು ಜಿಲ್ಲೆಗಳಲ್ಲಿ 238 ವಿದ್ಯಾರ್ಥಿಗಳು ಮತ್ತು 18 ಶಿಕ್ಷಕರು ನಾಪತ್ತೆಯಾಗಿದ್ದಾರೆ ಎಂದು ಶಿಕ್ಷಣ ಸಚಿವಾಲಯದ ಪ್ರಾಥಮಿಕ ಮಾಹಿತಿಯಲ್ಲಿ ತಿಳಿಸಲಾಗಿದೆ.

ಅಂತಾರಾಷ್ಟ್ರೀಯ ರೆಡ್‌ಕ್ರಾಸ್‌ ಸಮಿತಿಯ ಅಂದಾಜಿನ ಪ್ರಕಾರ, ನೇಪಾಳದಲ್ಲಿ 93,000ಕ್ಕೂ ಹೆಚ್ಚು ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ. ತಾತ್ಕಾಲಿಕ ಪರಿಹಾರ ಶಿಬಿರಗಳಿಗೆ ಮಾನವೀಯ ನೆರವು ತಲುಪುತ್ತಿದ್ದರೂ, ಹಲವು ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಪರಿಹಾರ ಸಾಮಗ್ರಿಗಳ ಅಗತ್ಯವಿದೆ.

ಸುರಂಗದೊಳಗೆ ಸಿಲುಕಿದ 100ಕ್ಕೂ ಹೆಚ್ಚು ಕಾರ್ಮಿಕರು

ಇದರ ನಡುವೆ, ಪ್ರವಾಹದ ಅವಶೇಷಗಳಿಂದ ತುಂಬಿರುವ ಸುರಂಗಗಳೊಳಗೆ ಸಿಲುಕಿರುವ ಶಂಕೆಯಿರುವ ಜಲವಿದ್ಯುತ್‌ ಯೋಜನೆಗಳ ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ. 100ಕ್ಕೂ ಹೆಚ್ಚು ಕಾರ್ಮಿಕರು ಹಲವು ಜಲವಿದ್ಯುತ್‌ ಯೋಜನೆಗಳ ಸುರಂಗಗಳಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಸದ್ಯ ಅಪ್ಪರ್‌ ತ್ರಿಶೂಲಿ 3ಎ ಮತ್ತು 3ಬಿ ಯೋಜನೆಗಳ ಮೇಲೆ ರಕ್ಷಣಾ ತಂಡಗಳು ಹೆಚ್ಚಿನ ಗಮನ ಹರಿಸಿವೆ.

ನುವಾಕೋಟ್‌ನ ತ್ರಿಶೂಲಿ 3ಎ ಜಲವಿದ್ಯುತ್‌ ಯೋಜನೆಯಲ್ಲಿ ರಕ್ಷಣಾ ಸಿಬ್ಬಂದಿ ಕೆಸರು ಮತ್ತು ಅವಶೇಷಗಳಿಂದ ತುಂಬಿರುವ ಸುರಂಗಕ್ಕೆ ತಲುಪಲು ಕೊರೆಯುವ ಕಾರ್ಯ ನಡೆಸಿದ್ದಾರೆ. ಸುರಂಗದೊಳಗೆ ಗಾಳಿ ಪಂಪ್‌ ಮಾಡಲಾಗಿದ್ದು, ಕ್ಯಾಮೆರಾಗಳನ್ನು ಕಳುಹಿಸಿ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದೆ. ಒಂದು ಪ್ರವೇಶ ದ್ವಾರದ ಮೂಲಕ ಸಿಬ್ಬಂದಿ ಒಳಗೆ ಇಳಿದರೂ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ.

ಇದೀಗ ರಕ್ಷಣಾ ತಂಡಗಳು ಪ್ರವೇಶ ದ್ವಾರವನ್ನು ಮತ್ತಷ್ಟು ವಿಸ್ತರಿಸುತ್ತಿದ್ದು, ಆಮ್ಲಜನಕ ಸಿಲಿಂಡರ್‌ಗಳೊಂದಿಗೆ ರಕ್ಷಣಾ ಸಿಬ್ಬಂದಿಯನ್ನು ಸುರಂಗದೊಳಗೆ ಕಳುಹಿಸಿ ಬದುಕುಳಿದವರಿಗಾಗಿ ಹುಡುಕಾಟ ನಡೆಸಲು ಸಿದ್ಧತೆ ನಡೆಸಿವೆ.

17 ಸಾವಿರ ಮಕ್ಕಳಿಗೆ ತುರ್ತು ನೆರವು

ಪ್ರವಾಹದ ಭೀಕರ ಪರಿಣಾಮ ಮಕ್ಕಳ ಮೇಲೂ ಬೀರಿದೆ. 17,000 ಮಕ್ಕಳಿಗೆ ತಕ್ಷಣ ಮಾನವೀಯ ನೆರವು ಅಗತ್ಯವಿದೆ ಎಂದು ಯುನಿಸೆಫ್‌ ಎಚ್ಚರಿಸಿದೆ. ಶಿಕ್ಷಣ ವ್ಯವಸ್ಥೆಯ ಮೇಲೂ ದುರಂತದ ಪರಿಣಾಮ ಬೀರಿದ್ದು, 18 ಶಾಲೆಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ ಮತ್ತು 20 ಶಾಲೆಗಳು ಹಾನಿಗೊಳಗಾಗಿವೆ. ಇದರಿಂದ ಪ್ರವಾಹ ಪೀಡಿತ ಪ್ರದೇಶಗಳ ಸಾವಿರಾರು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿದೆ.

ಬಿಲಿಯನ್‌ಗಟ್ಟಲೆ ಡಾಲರ್‌ ವೆಚ್ಚವಾಗುವ ಸಾಧ್ಯತೆ

ನೇಪಾಳ ಸರ್ಕಾರ ಅಂತಾರಾಷ್ಟ್ರೀಯ ಸಮುದಾಯದಿಂದ ಹಣಕಾಸು ನೆರವು ಮತ್ತು ವಿಶೇಷ ರಕ್ಷಣಾ ಸಾಧನಗಳ ನೆರವು ಕೋರಿದೆ.

ಹೆವಿ-ಲಿಫ್ಟ್‌ ಡ್ರೋನ್‌ಗಳು, ಡಿಎನ್‌ಎ ಪರೀಕ್ಷಾ ಕಿಟ್‌ಗಳು ಮತ್ತು ಮೃತದೇಹಗಳನ್ನು ಸಂರಕ್ಷಿಸಲು ಫ್ರೀಜರ್‌ ಘಟಕಗಳು ಸೇರಿದಂತೆ ಅಗತ್ಯ ನೆರವು ಕೋರಲಾಗಿದೆ. ವಿದೇಶಾಂಗ ಸಚಿವ ಶಿಶಿರ್ ಖನಾಲ್ ಅವರ ಪ್ರಕಾರ, ಪ್ರವಾಹದಿಂದ ನಾಶವಾಗಿರುವ ಮೂಲಸೌಕರ್ಯಗಳ ಪುನರ್‌ನಿರ್ಮಾಣಕ್ಕೆ ಬಿಲಿಯನ್‌ಗಟ್ಟಲೆ ಡಾಲರ್‌ ವೆಚ್ಚವಾಗುವ ಸಾಧ್ಯತೆ ಇದೆ.

ಹಿಮನದಿಗಳ ಮೇಲೆ ಭಾರತದ ನಿಗಾ

ನೇಪಾಳದ ಭೀಕರ ದುರಂತದ ಬೆನ್ನಲ್ಲೇ ಭಾರತವೂ ಹಿಮನದಿಗಳ ಮೇಲಿನ ನಿಗಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತಿದೆ. ಪ್ರವಾಹಕ್ಕೆ ಸಂಬಂಧಿಸಿದ ಸಂಭವನೀಯ ಅಪಾಯಗಳನ್ನು ಮುಂಚಿತವಾಗಿ ಗುರುತಿಸಲು ಹಿಮನದಿಗಳ ಚಲನವಲನ ಮತ್ತು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಕ್ರಮಗಳಿಗೆ ಭಾರತ ಒತ್ತು ನೀಡುತ್ತಿದೆ.

ನೇಪಾಳದಲ್ಲಿ ಒಂದೆಡೆ ಪರಿಹಾರ ಶಿಬಿರಗಳಿಗೆ ನೆರವು ತಲುಪಿಸುವ ಕಾರ್ಯ ಮುಂದುವರಿದಿದ್ದರೆ, ಮತ್ತೊಂದೆಡೆ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ರಕ್ಷಣಾ ತಂಡಗಳು ಹಗಲು-ರಾತ್ರಿ ಕಾರ್ಯಾಚರಣೆ ನಡೆಸುತ್ತಿವೆ. ಐದನೇ ದಿನವೂ ಜೀವ ಉಳಿಸುವ ಹೋರಾಟ ಮುಂದುವರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.