ನೇಪಾಳ ಪ್ರವಾಹ: ಸಾವಿನ ಸಂಖ್ಯೆ 1,127ಕ್ಕೆ ಏರಿಕೆ; ನಾಪತ್ತೆಯಾಗಿರುವ 4,858 ಮಂದಿಗಾಗಿ ಮುಂದುವರೆದ ಶೋಧ!
ಗುರುತು ಪತ್ತೆಯಾಗದ ಸ್ಥಿತಿಯಲ್ಲಿ ದೊರೆತ ಮೃತದೇಹಗಳನ್ನು ಮಾತ್ರ ಸರ್ಕಾರ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಗುರುತಿಸಲು ಸಹಾಯವಾಗುವಂತೆ ಡಿಎನ್‌ಎ ಮಾದರಿ ಸೇರಿದಂತೆ ಇತರ ಸಾಕ್ಷ್ಯಗಳನ್ನು ಸಂರಕ್ಷಿಸಲಾಗುತ್ತಿದೆ.

ಕಠ್ಮಂಡು: ನೇಪಾಳದಲ್ಲಿನ ಭೀಕರ ಪ್ರವಾಹ ಮಹಾ ದುರಂತವನ್ನೇ ಸೃಷ್ಟಿಸಿದ್ದು, ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಜಲಪ್ರಳಯದಲ್ಲಿ ಈ ವರೆಗೂ 1,127 ಮಂದಿ ಸಾವನ್ನಪ್ಪಿದ್ದು, ಸಾವಿರಾರು ಮಂದಿಯನ್ನು ರಕ್ಷಿಸಲಾಗಿದ್ದರೂ ಇನ್ನೂ 4,858 ಮಂದಿ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಅಧಿಕಾರಿಗಳು ಮತ್ತಷ್ಟು ತೀವ್ರಗೊಳಿಸಿದ್ದು, ಅಪಾಯಕಾರಿ ಪ್ರದೇಶಗಳಲ್ಲಿ ಭಾರತ ಮತ್ತು ಚೀನಾದ ವಿಶೇಷ ರಕ್ಷಣಾ ತಂಡಗಳ ನೆರವನ್ನೂ ಪಡೆಯಲಾಗುತ್ತಿದೆ.
ನೇಪಾಳ ಪೊಲೀಸ್ ಇಲಾಖೆ ಬುಧವಾರ ನೀಡಿದ ಮಾಹಿತಿಯಂತೆ, ಪ್ರವಾಹದಲ್ಲಿ ಮೃತಪಟ್ಟವರ ಪೈಕಿ ರಸುವಾದಲ್ಲಿ 45, ನುವಾಕೋಟ್‌ನಲ್ಲಿ 155, ಧಾದಿಂಗ್‌ನಲ್ಲಿ 59, ಚಿತ್ವಾನ್‌ನಲ್ಲಿ 348, ಗೋರ್ಖಾದಲ್ಲಿ 66, ತನಹುನ್‌ನಲ್ಲಿ 38, ನವಲಪರಾಸಿ ಪೂರ್ವದಲ್ಲಿ 217 ಹಾಗೂ ನವಲಪರಾಸಿ ಪಶ್ಚಿಮದಲ್ಲಿ 190 ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಭಾರತದಲ್ಲಿಯೂ ಒಂಬತ್ತು ಮೃತದೇಹಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.
ಇದುವರೆಗೆ ಪತ್ತೆಯಾದ ಮೃತದೇಹಗಳ ಪೈಕಿ 95 ಮಂದಿಯನ್ನು ಮಾತ್ರ ಗುರುತಿಸಲಾಗಿದ್ದು, ಅವರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಇದಕ್ಕೂ ಮುನ್ನ ನೇಪಾಳ ಪ್ರಧಾನಿ ಬಾಲೇಂದ್ರ ಶಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಪ್ರವಾಹದಲ್ಲಿ ಮೃತಪಟ್ಟವರ ಪೈಕಿ ಗುರುತು ಪತ್ತೆಯಾಗದ ಮೃತದೇಹಗಳನ್ನೂ ಕಾನೂನು ಹಾಗೂ ವೈಜ್ಞಾನಿಕ ವಿಧಾನಗಳ ಮೂಲಕ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಗುರುತು ಪತ್ತೆಯಾಗದ ಸ್ಥಿತಿಯಲ್ಲಿ ದೊರೆತ ಮೃತದೇಹಗಳನ್ನು ಮಾತ್ರ ಸರ್ಕಾರ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಗುರುತಿಸಲು ಸಹಾಯವಾಗುವಂತೆ ಡಿಎನ್‌ಎ ಮಾದರಿ ಸೇರಿದಂತೆ ಇತರ ಸಾಕ್ಷ್ಯಗಳನ್ನು ಸಂರಕ್ಷಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ನೇಪಾಳ ಸೇನೆ, ನೇಪಾಳ ಪೊಲೀಸ್ ಹಾಗೂ ಸಶಸ್ತ್ರ ಪೊಲೀಸ್ ಪಡೆಯ ನೆರವಿನಿಂದ ಮೃತದೇಹಗಳ ಗುರ್ತಿಸಲಾಗುತ್ತಿದ್ದು, ಗುರುತಿಸಲಾದ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
7,912 ಪೊಲೀಸರಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ, ಪರಿಹಾರ ವಿತರಣೆ ಹಾಗೂ ಪತ್ತೆಯಾದ ಮೃತದೇಹಗಳ ನಿರ್ವಹಣೆಗಾಗಿ ಒಟ್ಟು 7,912 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದುವರೆಗೆ ಪ್ರವಾಹ ಪೀಡಿತ ಪ್ರದೇಶಗಳಿಂದ 6,541 ಮಂದಿಯನ್ನು ರಕ್ಷಿಸಲಾಗಿದೆ. ನಾಪತ್ತೆಯಾಗಿರುವ 4,858 ಮಂದಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತ, ಚೀನಾದಿಂದ ವಿಶೇಷ ರಕ್ಷಣಾ ತಂಡಗಳ ನಿಯೋಜನೆ
ಭೋಟೆ ಕೋಶಿ ನದಿಯಿಂದ ಉಂಟಾದ ಭೀಕರ ಹಠಾತ್ ಪ್ರವಾಹದ ಹಿನ್ನೆಲೆಯಲ್ಲಿ ಪ್ರಮುಖ ಜಲವಿದ್ಯುತ್ ಯೋಜನೆಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಭಾರತ ಮತ್ತು ಚೀನಾದ ವಿಶೇಷ ಅಂತಾರಾಷ್ಟ್ರೀಯ ಸುರಂಗ ರಕ್ಷಣಾ ತಂಡಗಳನ್ನು ನೇಪಾಳ ಸೇನೆಯೊಂದಿಗೆ ನಿಯೋಜಿಸಲಾಗಿದೆ ಎಂದು ನೇಪಾಳ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಕಠ್ಮಂಡುವಿನಲ್ಲಿ ನಡೆದ ಸಚಿವಾಲಯದ ನಾಲ್ಕನೇ ಅಧಿಕೃತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕ್ತಾರ ಹಾಗೂ ಸಾರ್ವಜನಿಕ ರಾಜತಾಂತ್ರಿಕ ವಿಭಾಗದ ಮುಖ್ಯಸ್ಥ ಲೋಕ ಬಹಾದೂರ್ ಛೇತ್ರಿ, ಭೂಗತ ಮಾರ್ಗಗಳಲ್ಲಿ ಅತ್ಯಂತ ಅಪಾಯಕಾರಿ ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ವಿಶೇಷ ಅಂತಾರಾಷ್ಟ್ರೀಯ ತಾಂತ್ರಿಕ ಪರಿಣತಿಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ನಮ್ಮ ರಾಷ್ಟ್ರೀಯ ಆದ್ಯತೆ ಸ್ಪಷ್ಟವಾಗಿದೆ. ಜೀವಗಳನ್ನು ಉಳಿಸುವುದು, ನಾಪತ್ತೆಯಾದವರನ್ನು ಪತ್ತೆಹಚ್ಚುವುದು, ಬದುಕುಳಿದವರನ್ನು ರಕ್ಷಿಸುವುದು, ತುರ್ತು ಪರಿಹಾರ ಒದಗಿಸುವುದು ಹಾಗೂ ನೇಪಾಳಿ ಮತ್ತು ವಿದೇಶಿ ಪ್ರಜೆಗಳು ಸೇರಿದಂತೆ ಎಲ್ಲ ಪೀಡಿತರಿಗೆ ಅಗತ್ಯ ನೆರವು ಮತ್ತು ಸಹಾಯವನ್ನು ಖಚಿತಪಡಿಸುವುದು ನಮ್ಮ ಉದ್ದೇಶ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



