ಸಮಯಪ್ರಜ್ಞೆಯಿಂದ ಸಾವಿರಾರು ಮಕ್ಕಳ ಜೀವ ಉಳಿಸಿದ ನೇಪಾಳ ಪ್ರಾಂಶುಪಾಲ: ಪ್ರವಾಹಕ್ಕೆ ಕೊಚ್ಚಿಹೋದ ಶಾಲೆಯ ಪುನರ್ನಿರ್ಮಾಣಕ್ಕೆ ಭಾರತ ನೆರವು..!
ಆಗಸ್ಟ್ 26ರಂದು ಪ್ರವಾಹದ ಅಪಾಯವನ್ನು ಅರಿತ ರಾಜೇಂದ್ರ ಅವರು, ತಕ್ಷಣವೇ ಶಾಲೆಯ ಗಂಟೆ ಬಾರಿಸಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಆವರಣದಿಂದ ಹೊರಗೆ ಕಳುಹಿಸಿದ್ದರು.

ಕಠ್ಮಂಡು: ನೇಪಾಳದ ಭೀಕರ ಪ್ರವಾಹದಲ್ಲಿ 1,600 ಕ್ಕೂ ಹೆಚ್ಚು ಮಕ್ಕಳ ಪ್ರಾಣ ಉಳಿಸಿದ ಪ್ರಾಂಶುಪಾಲರ ಸಾಹಸಕ್ಕೆ ಗೌರವ ಸಲ್ಲಿಸಲು ಮುಂದಾಗಿರುವ ಭಾರತ ಸರ್ಕಾರ, ಪ್ರವಾಹದಲ್ಲಿ ಕೊಚ್ಚಿಹೋದ ಶಾಲೆಯನ್ನು ಸಂಪೂರ್ಣವಾಗಿ ಮರುನಿರ್ಮಾಣ ಮಾಡುವುದಾಗಿ ಘೋಷಿಸಿದೆ.
ಮಕ್ಕಳ ಜೀವ ಉಳಿಸಿದ ಮುಖ್ಯೋಪಾಧ್ಯಾಯ ರಾಜೇಂದ್ರ ದವಾಡಿ ಅವರನ್ನು ನೇಪಾಳದಲ್ಲಿರುವ ಭಾರತದ ರಾಯಭಾರಿ ನವೀನ್ ಶ್ರೀವಾಸ್ತವ್ ಭೇಟಿಯಾಗಿ ಅಭಿನಂದಿಸಿದ್ದಾರೆ.
ನುವಾಕೋಟ್ನ ಬಿದೂರ್ನಲ್ಲಿರುವ ತ್ರಿಭುವನ್ ತ್ರಿಶೂಲಿ ಶಾಲೆಯ ಮುಖ್ಯೋಪಾಧ್ಯಾಯ ರಾಜೇಂದ್ರ ದವಾಡಿ ಅವರನ್ನು ಭೇಟಿಯಾದ ಬಳಿಕ ರಾಯಭಾರಿ ನವೀನ್ ಶ್ರೀವಾಸ್ತವ್ ಅವರು, ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಆಗಸ್ಟ್ 26ರಂದು ಪ್ರವಾಹದ ಅಪಾಯವನ್ನು ಅರಿತ ರಾಜೇಂದ್ರ ಅವರು, ತಕ್ಷಣವೇ ಶಾಲೆಯ ಗಂಟೆ ಬಾರಿಸಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಆವರಣದಿಂದ ಹೊರಗೆ ಕಳುಹಿಸಿದ್ದರು.
ಮಕ್ಕಳು ಶಾಲೆಯಿಂದ ಹೊರಬಂದ ಕೆಲವೇ ಕ್ಷಣಗಳಲ್ಲಿ ಪ್ರವಾಹದ ನೀರು ಶಾಲಾ ಆವರಣಕ್ಕೆ ನುಗ್ಗಿ ಇಡೀ ಕಟ್ಟಡವನ್ನು ಕೊಚ್ಚಿಕೊಂಡು ಹೋಗಿತ್ತು. ಸಮಯಪ್ರಜ್ಞೆಯಿಂದ ಕೈಗೊಂಡ ಈ ನಿರ್ಧಾರದಿಂದ ಭಾರಿ ಜೀವಹಾನಿ ತಪ್ಪಿತ್ತು.
ರಾಜೇಂದ್ರ ದವಾಡಿ ಅವರೊಂದಿಗೆ ನಡೆದ ಭೇಟಿಯ ವೇಳೆ, ಶಾಲೆಯ ಸಂಪೂರ್ಣ ಪುನರ್ನಿರ್ಮಾಣಕ್ಕೆ ಭಾರತ ಭವಿಷ್ಯದಲ್ಲಿ ಅಗತ್ಯ ನೆರವು ನೀಡಲಿದೆ ಎಂದು ನವೀನ್ ಶ್ರೀವಾಸ್ತವ್ ಭರವಸೆ ನೀಡಿದ್ದಾರೆ.
1950ರ ದಶಕದಲ್ಲಿ ಭಾರತದ ನೆರವಿನಿಂದ ಈ ಶಾಲೆಯನ್ನು ಸ್ಥಾಪಿಸಲಾಗಿತ್ತು. ತ್ರಿಶೂಲಿ ಜಲವಿದ್ಯುತ್ ಯೋಜನೆಯ ನಿರ್ಮಾಣದಲ್ಲಿ ಭಾಗಿಯಾಗಿದ್ದ ಭಾರತೀಯ ಎಂಜಿನಿಯರ್ ಒಬ್ಬರು ಶಾಲೆಯ ಮೂಲ ಕಟ್ಟಡದ ವಿನ್ಯಾಸ ರೂಪಿಸಿದ್ದರು ಎಂದು ರಾಯಭಾರಿ ತಿಳಿಸಿದ್ದಾರೆ.
ಶಾಲೆಯ ಹೊಸ ಕಟ್ಟಡವನ್ನು 2022ರಲ್ಲಿ ಭಾರತ ಸರ್ಕಾರದ ಅನುದಾನದಡಿ ಹೈ ಇಂಪ್ಯಾಕ್ಟ್ ಕಮ್ಯುನಿಟಿ ಡೆವಲಪ್ಮೆಂಟ್ ಪ್ರೋಗ್ರಾಂ (HICDP) ಮೂಲಕ ನಿರ್ಮಿಸಲಾಗಿತ್ತು.
ಇದೀಗ ಭೀಕರ ಪ್ರವಾಹದಲ್ಲಿ ಶಾಲೆ ಕೊಚ್ಚಿಹೋಗಿರುವ ಹಿನ್ನೆಲೆಯಲ್ಲಿ ಅದರ ಪುನರ್ನಿರ್ಮಾಣಕ್ಕೂ ಭಾರತ ಬೆಂಬಲ ನೀಡಲಿದೆ ಎಂದು ಅವರು ಹೇಳಿದ್ದಾರೆ.
ಆಗಸ್ಟ್ 26ರಂದು ರಸುವಾ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹದ ವೇಳೆ ಮುಖ್ಯೋಪಾಧ್ಯಾಯರ ಸಮಯೋಚಿತ ನಿರ್ಧಾರದಿಂದ 1,600ಕ್ಕೂ ಹೆಚ್ಚು ಮಕ್ಕಳ ಜೀವ ಉಳಿದಿರುವುದು ನೇಪಾಳದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



