ಕರಾಚಿಯಲ್ಲಿ ಉಗ್ರರ ದಾಳಿ: ಮೂವರು ಯೋಧರ ಸಾವು; ಭಾರತದತ್ತ ಬೊಟ್ಟು ಮಾಡಿದ ಪಾಕಿಸ್ತಾನ, ಪ್ರತೀಕಾರದ ಎಚ್ಚರಿಕೆ..!
ದಾಳಿಯ ಹೊಣೆಯನ್ನು ಪಾಕಿಸ್ತಾನ ತಾಲಿಬಾನ್ನಿಂದ ಬೇರ್ಪಟ್ಟಿರುವ ಜಮಾತ್-ಉಲ್-ಅಹ್ರಾರ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಆದಾಗ್ಯೂ, ಪಾಕಿಸ್ತಾನ ಸೇನೆ ಈ ಸಂಘಟನೆಯನ್ನು "ಭಾರತದ ಪ್ರಾಕ್ಸಿ" ಎಂದು ಆರೋಪಿಸಿದ್ದು, ಭಾರತದ ಬೆಂಬಲದಿಂದಲೇ ದಾಳಿ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಿದೆ.

ಕರಾಚಿ: ಪಾಕಿಸ್ತಾನದ ಆರ್ಥಿಕ ರಾಜಧಾನಿ ಕರಾಚಿಯಲ್ಲಿ ಶನಿವಾರ ರಾತ್ರಿ ನಡೆದ ಉಗ್ರರ ಭೀಕರ ದಾಳಿಯಲ್ಲಿ ಪಾಕಿಸ್ತಾನ ರೇಂಜರ್ಸ್ನ ಮೂವರು ಯೋಧರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಈ ದಾಳಿಯ ಬಳಿಕ ಯಾವುದೇ ಪುರಾವೆ ನೀಡದೆ ಭಾರತದತ್ತ ಬೊಟ್ಟು ಮಾಡಿರುವ ಪಾಕಿಸ್ತಾನ, ಪ್ರತೀಕಾರದ ಎಚ್ಚರಿಕೆ ನೀಡಿದೆ.
ಕರಾಚಿಯಲ್ಲಿರುವ ಪಾಕಿಸ್ತಾನ ರೇಂಜರ್ಸ್ನ ಪ್ರಾಂತೀಯ ಮುಖ್ಯ ಕಚೇರಿಯನ್ನು ಗುರಿಯಾಗಿಸಿಕೊಂಡು ಸ್ಫೋಟಕ ತುಂಬಿದ ವಾಹನದ ಮೂಲಕ ಆತ್ಮಾಹುತಿ ದಾಳಿ ನಡೆಸಲಾಗಿದೆ.
ಸ್ಫೋಟದ ಬಳಿಕ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ಹಲವು ಗಂಟೆಗಳ ಕಾಲ ಗುಂಡಿನ ಚಕಮಕಿ ಮುಂದುವರಿದಿದೆ ಎಂದು ತಿಳಿದುಬಂದಿದೆ.
ಪಾಕಿಸ್ತಾನ ಸೇನೆಯ ಪ್ರಕಾರ, ಭದ್ರತಾ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಗಾಯಗೊಂಡಿದ್ದ ಮತ್ತೊಬ್ಬ ಉಗ್ರನನ್ನು ಜೀವಂತವಾಗಿ ಬಂಧಿಸಲಾಗಿದೆ ಎಂದು ತಿಳಿಸಿದೆ.
ಬಂಧಿತನನ್ನು ಅಫ್ಘಾನಿಸ್ತಾನದ ಪ್ರಜೆಯೆಂದು ಗುರುತಿಸಲಾಗಿದ್ದು, ಉಗ್ರರ ಸಹಚರರಿಗಾಗಿ ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ತಿಳಿಸಿದೆ.
ಈ ದಾಳಿಯ ಹೊಣೆಯನ್ನು ಪಾಕಿಸ್ತಾನ ತಾಲಿಬಾನ್ನಿಂದ ಬೇರ್ಪಟ್ಟಿರುವ ಜಮಾತ್-ಉಲ್-ಅಹ್ರಾರ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಆದಾಗ್ಯೂ, ಪಾಕಿಸ್ತಾನ ಸೇನೆ ಈ ಸಂಘಟನೆಯನ್ನು "ಭಾರತದ ಪ್ರಾಕ್ಸಿ" ಎಂದು ಆರೋಪಿಸಿದ್ದು, ಭಾರತದ ಬೆಂಬಲದಿಂದಲೇ ದಾಳಿ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಿದೆ. ಆದರೆ, ಈ ಗಂಭೀರ ಆರೋಪಕ್ಕೆ ಯಾವುದೇ ಪುರಾವೆ ಅಥವಾ ಸಾಕ್ಷ್ಯವನ್ನು ಬಹಿರಂಗಪಡಿಸಿಲ್ಲ. ಈ ಹಿಂದೆ ಕೂಡ ಇಂತಹ ಉಗ್ರ ದಾಳಿಗಳ ಬಳಿಕ ಪಾಕಿಸ್ತಾನ ಭಾರತದತ್ತಲೇ ಬೊಟ್ಟು ಮಾಡುತ್ತಲೇ ಬಂದಿದೆ.
ದಾಳಿಯಲ್ಲಿ ಸಾವನ್ನಪ್ಪಿದ ಮೂವರು ರೇಂಜರ್ಸ್ ಯೋಧರಿಗೆ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಶ್ರದ್ಧಾಂಜಲಿ ಸಲ್ಲಿಸಿದ್ದು, ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಗಾಯಗೊಂಡಿರುವ ಭದ್ರತಾ ಸಿಬ್ಬಂದಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಉಗ್ರ ದಾಳಿಯನ್ನು ಖಂಡಿಸಿದ್ದು, ದಾಳಿಯನ್ನು ವಿಫಲಗೊಳಿಸಿದ ಭದ್ರತಾ ಪಡೆಗಳ ಧೈರ್ಯವನ್ನು ಶ್ಲಾಘಿಸಿದ್ದಾರೆ. ಭಯೋತ್ಪಾದನೆಯನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಸಂಕಲ್ಪವನ್ನೂ ಪುನರುಚ್ಚರಿಸಿದ್ದಾರೆ.
ಏತನ್ಮಧ್ಯೆ ಪಾಕಿಸ್ತಾನ ಸೇನೆ ದಾಳಿಗೆ ಕಾರಣರಾದವರ ವಿರುದ್ಧ ತಕ್ಕ ಪ್ರತೀಕಾರ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದು, ಅಗತ್ಯವಿದ್ದರೆ ಗಡಿ ದಾಟಿಯೂ ಕ್ರಮ ಕೈಗೊಳ್ಳುವ ಸೂಚನೆ ನೀಡಿದೆ.
ಈ ಹಿಂದೆ ಉಗ್ರರ ವಿರುದ್ಧದ ಕಾರ್ಯಾಚರಣೆ ಹೆಸರಿನಲ್ಲಿ ಪಾಕಿಸ್ತಾನ ಅಫ್ಘಾನಿಸ್ತಾನದೊಳಗೂ ವೈಮಾನಿಕ ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



