Budgam encounter: LET ಮೋಸ್ಟ್ ವಾಂಟೆಡ್ ಉಗ್ರ ಹಾಶಿಮ್ ಮೂಸಾ ಹತ; Video
ಕಾಶ್ಮೀರದ ಯೂಸ್ಮಾರ್ಗ್‌ನ ಕೊರಾಗ್ ಪ್ರದೇಶದಲ್ಲಿ ಇತರ ಭದ್ರತಾ ಪಡೆಗಳೊಂದಿಗೆ ಸೇನೆ ಕಾರ್ಯಾಚರಣೆ ಆರಂಭಿಸಲಾಗಿದ್ದು, ಈ ವೇಳೆ ಭದ್ರತಾ ಪಡೆಗಳು ಅನುಮಾನಾಸ್ಪದ ಚಟುವಟಿಕೆಯನ್ನು ಗಮನಿಸಿ, ಉಗ್ರರಿಗೆ ಶರಣಾಗುವಂತೆ ಸೂಚಿಸಿದಾಗ ಅವರು ಗುಂಡಿನ ದಾಳಿ ನಡೆಸಿದರು.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್-ಇ-ತೊಯ್ಬಾ (LeT) ಸಂಘಟನೆಯ ಮೋಸ್ಟ್ ವಾಂಟೆಡ್ ಉಗ್ರನನ್ನು ಹೊಡೆದುರುಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಬುದ್ಗಾಂ ಜಿಲ್ಲೆಯ ಪಾಲ್ಮೈದಾನ್ ಪ್ರದೇಶದಲ್ಲಿ ಬುಧವಾರ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ (ಎಲ್‌ಇಟಿ) ಉಗ್ರ ಸಂಘಟನೆಯ ಮೊಹಮ್ಮದ್ ಆಸಿಫ್ ಅಲಿಯಾಸ್ ಹಶೀಂ ಮೂಸಾ ಎಂಬಾತನನ್ನು ಹೊಡೆದುರುಳಿಸಿದ್ದು, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಮೂಸಾ ಹತನಾಗಿರುವುದನ್ನು ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ ಖಚಿತಪಡಿಸಿದೆ. “ಪಾಲ್ಮೈದಾನ್ ಪ್ರದೇಶದಲ್ಲಿ ಮುಂಜಾನೆ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಉಗ್ರ ಮೊಹಮ್ಮದ್ ಆಸಿಫ್ ಅಲಿಯಾಸ್ ಹಶೀಂ ಮೂಸಾನ ಮೃತದೇಹ ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದೆ.
ನಿರ್ದಿಷ್ಟ ಗುಪ್ತಚರ ಮಾಹಿತಿ ಆಧರಿಸಿ ಸೇನೆ ಹಾಗೂ ಇತರ ಭದ್ರತಾ ಸಂಸ್ಥೆಗಳು ಬುಧವಾರ ಯೂಸ್ಮಾರ್ಗ್ ಪ್ರದೇಶದಲ್ಲಿ ‘ಆಪರೇಷನ್ ಕೊರಾಗ್’ ಕಾರ್ಯಾಚರಣೆ ಆರಂಭಿಸಿದ್ದವು.
ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದ ಭದ್ರತಾ ಪಡೆಗಳು ಅನುಮಾನಾಸ್ಪದ ಚಲನವಲನವನ್ನು ಗಮನಿಸಿ, ಅಲ್ಲಿದ್ದ ವ್ಯಕ್ತಿಗಳಿಗೆ ಸವಾಲು ಹಾಕಿದ ಬಳಿಕ ಜಂಟಿ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು.
ಇದಕ್ಕೆ ಉಗ್ರರು ಗುಂಡಿನ ದಾಳಿ ನಡೆಸುವ ಮೂಲಕ ಪ್ರತಿಕ್ರಿಯಿಸಿದ್ದು, ಬಳಿಕ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಮೂಸಾನನ್ನು ಹತ್ಯೆಗೈಯಲಾಯಿತು ಎಂದು ತಿಳಿದುಬಂದಿದೆ.
ಭದ್ರತಾ ಪಡೆಗಳ ಪ್ರಕಾರ ಕಾರ್ಯಾಚರಣೆ ಮುಂದುವರಿದಿದ್ದು, ಪ್ರದೇಶದಲ್ಲಿ ಸಿಬ್ಬಂದಿ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.
2025ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಪ್ರಮುಖ ಶಂಕಿತರ ಪೈಕಿ ಮೂಸಾನೂ ಒಬ್ಬನಾಗಿದ್ದ ಎಂದು ತಿಳಿದುಬಂದಿದೆ. ಈ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು. ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನಿ ಪ್ರಜೆಗಳು ಹಾಗೂ ಲಷ್ಕರ್-ಎ-ತೊಯ್ಬಾ ಉಗ್ರರಾದ ಆದಿಲ್ ಹುಸೇನ್ ಠೋಕರ್, ಅಲಿ ಭಾಯ್ ಮತ್ತು ಹಶೀಂ ಮೂಸಾ ಅವರ ಬಂಧನಕ್ಕೆ ನೆರವಾಗುವ ಮಾಹಿತಿ ನೀಡಿದವರಿಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ರೂ.20 ಲಕ್ಷ ಬಹುಮಾನ ಘೋಷಿಸಿದ್ದರು.
ಭದ್ರತಾ ಸಂಸ್ಥೆಗಳ ಮೂಲಗಳ ಪ್ರಕಾರ, ಮೂಸಾ ಈ ಹಿಂದೆ ಪಾಕಿಸ್ತಾನದ ವಿಶೇಷ ಪಡೆ (ಎಸ್‌ಎಸ್‌ಜಿ)ಯಲ್ಲಿ ಪ್ಯಾರಾ ಕಮಾಂಡೋ ಆಗಿ ಸೇವೆ ಸಲ್ಲಿಸಿದ್ದ.
ಪಹಲ್ಗಾಮ್ ದಾಳಿ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಈ ಹಿಂದೆ ಏಳು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ ಹಾಗೂ ಅದರ ಪರ್ಯಾಯ ಹೆಸರಾಗಿರುವ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್‌ಎಫ್) ಕೂಡ ಈ ಪ್ರಕರಣದಲ್ಲಿ ಆರೋಪಿಗಳಾಗಿ ಉಲ್ಲೇಖಗೊಂಡಿವೆ. ಎರಡೂ ಸಂಘಟನೆಗಳನ್ನು ನಿಷೇಧಿತ ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸಲಾಗಿದೆ.
1,597 ಪುಟಗಳ ಆರೋಪಪಟ್ಟಿಯಲ್ಲಿ ಪಹಲ್ಗಾಮ್ ದಾಳಿಗೆ ಸಂಬಂಧಿಸಿದ ಸಂಚು ಹಾಗೂ ಪಾಕಿಸ್ತಾನ ಮೂಲದ ಕಾರ್ಯಕರ್ತರಿಗೆ ಆರೋಪಿಸಲಾಗಿರುವ ಪಾತ್ರಗಳ ಕುರಿತು ಎನ್‌ಐಎ ವಿವರಿಸಿದೆ.
ದಾಳಿಯ ಯೋಜನೆ, ನೆರವು ಹಾಗೂ ಅನುಷ್ಠಾನದಲ್ಲಿ ಲಷ್ಕರ್-ಇ-ತೊಯ್ಬಾ/ಟಿಆರ್‌ಎಫ್‌ನ ಪಾತ್ರವಿದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಹ್ಯಾಂಡ್ಲರ್ ಸಜಿದ್ ಜಟ್‌ನನ್ನೂ ಆರೋಪಿಯಾಗಿ ಹೆಸರಿಸಲಾಗಿದೆ.
ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್ನಷ್ಟು ಉಗ್ರರು ಅಡಗಿರುವ ಸಾಧ್ಯತೆ ಪರಿಶೀಲಿಸಲು ಹಾಗೂ ಹೆಚ್ಚುವರಿ ಶಸ್ತ್ರಾಸ್ತ್ರಗಳು ಮತ್ತು ಇತರ ವಸ್ತುಗಳನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



