ದೇಶ

ಜಮ್ಮು-ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ: ಇಬ್ಬರು ಉಗ್ರರ ಹೊಡೆದುರುಳಿಸಿದ ಭಾರತೀಯ ಸೇನಾಪಡೆ; Video

ಹತರಾದ ಉಗ್ರರ ಗುರುತು ಮತ್ತು ಅವರು ಯಾವ ಭಯೋತ್ಪಾದಕ ಸಂಘಟನೆಗೆ ಸೇರಿದವರು ಎಂಬ ವಿವರಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ: ಇಬ್ಬರು ಉಗ್ರರ ಹೊಡೆದುರುಳಿಸಿದ ಭಾರತೀಯ ಸೇನಾಪಡೆ; Video
ಸಂಗ್ರಹ ಚಿತ್ರ
Published On :

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಬುಧವಾರ ತಡರಾತ್ರಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ.

ಜಮ್ಮು-ಕಾಶ್ಮೀರದ ಉಧಂಪುರ ಜಿಲ್ಲೆಯ ದೂರದ ಎತ್ತರ ಪ್ರದೇಶದ ದಟ್ಟ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮೂಲದ ಜೈಷ್-ಇ-ಮೊಹಮ್ಮದ್‌ (ಜೆಇಎಂ) ಉಗ್ರ ಸಂಘಟನೆಗೆ ಸೇರಿದವರೆಂದು ಶಂಕಿಸಲಾಗಿರುವ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ.

ನಿರಂತರ ಮಳೆಯ ನಡುವೆಯೂ ಮಜಲ್ತಾ ಪ್ರದೇಶದ ಬ್ರಟ್ಟಲ್ ಸೋಹನ್ ಮತ್ತು ಖುಬ್ಬಾನ್‌ ಭಾಗಗಳಲ್ಲಿ ಭಾರತೀಯ ಸೇನೆ, ಪೊಲೀಸರು ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ. ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿರುವುದನ್ನು ಭಾರತೀಯ ಸೇನೆಯೂ ದೃಢಪಡಿಸಿದೆ.

ಸೆಪ್ಟೆಂಬರ್‌ 16-17ರ ಮಧ್ಯರಾತ್ರಿ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಜಂಟಿ ಕಾರ್ಯಾಚರಣೆ ಆರಂಭಿಸಲಾಗಿತ್ತು. ಉಧಂಪುರದ ಬ್ರಟ್ಟಲ್‌ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು ಎಂದು ಜಮ್ಮು ಮೂಲದ ವೈಟ್ ನೈಟ್‌ ಕಾರ್ಪ್ಸ್‌ ‘ಎಕ್ಸ್‌’ನಲ್ಲಿ ತಿಳಿಸಿದೆ.

ಪ್ರತಿಕೂಲ ಹವಾಮಾನ, ಕಠಿಣ ಭೂಪ್ರದೇಶ ಹಾಗೂ ಕಡಿಮೆ ಗೋಚರತೆಯ ನಡುವೆಯೂ ವೈಟ್ ನೈಟ್‌ ಕಾರ್ಪ್ಸ್‌, ಜಮ್ಮು-ಕಾಶ್ಮೀರದ ಪೊಲೀಸರು ಮತ್ತು ಸಿಆರ್‌ಪಿಎಫ್‌ ಪಡೆಗಳು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಉಗ್ರರನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿವೆ ಎಂದು ತಿಳಿಸಿದೆ.

ಸ್ಥಳದಲ್ಲಿ ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದು, ಪ್ರದೇಶದಲ್ಲಿ ಶೋಧ ಹಾಗೂ ಕಣ್ಗಾವಲು ಕಾರ್ಯ ನಡೆಯುತ್ತಿದೆ. ಉಳಿದಿರುವ ಯಾವುದೇ ಬೆದರಿಕೆಯನ್ನು ಪತ್ತೆಹಚ್ಚಿ ನಿಗ್ರಹಿಸಲು ಭದ್ರತಾ ಪಡೆಗಳು ಸ್ಥಳದಲ್ಲಿ ನಿಯೋಜಿತವಾಗಿವೆ ಎಂದು ಸೇನೆ ಹೇಳಿದೆ.

ಕಳೆದ ವಾರ ದಟ್ಟ ಅರಣ್ಯ ಪ್ರದೇಶದಲ್ಲಿ ಉಗ್ರರ ಗುಂಪೊಂದು ಓಡಾಡುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅವರಿಗಾಗಿ ಪೊಲೀಸರು ಹಾಗೂ ಭದ್ರತಾ ಪಡೆಗಳು ಶೋಧ ನಡೆಸುತ್ತಿದ್ದರು.

ಗುಪ್ತಚರ ಮಾಹಿತಿ ಆಧರಿಸಿ ಬುಧವಾರ ರಾತ್ರಿ 9ರ ಸುಮಾರಿಗೆ ನಿರ್ದಿಷ್ಟ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು, ಬಳಿಕ ಉಗ್ರರೊಂದಿಗೆ ಮೊದಲ ಸಂಪರ್ಕ ಏರ್ಪಟ್ಟಿತ್ತು.

ಕಾರ್ಯಾಚರಣೆ ಆರಂಭವಾದ ಕೆಲವೇ ಸಮಯದಲ್ಲಿ ಕೆಲವು ಸುತ್ತಿನ ಗುಂಡಿನ ದಾಳಿ ಹಾಗೂ ಸ್ಫೋಟಗಳ ಸದ್ದು ಕೇಳಿಸಿತ್ತು. ಬಳಿಕ ರಾತ್ರಿಯಿಡೀ ಪ್ರದೇಶ ಬಹುತೇಕ ಶಾಂತವಾಗಿತ್ತು. ಈ ನಡುವೆ ಗುರುವಾರ ಬೆಳಿಗ್ಗೆ ಅಡಗಿ ಕುಳಿತಿದ್ದ ಉಗ್ರರು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಭದ್ರತಾ ಪಡೆಗಳ ಮೇಲೆ ಭಾರೀ ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರೆದು ಉಗ್ರರ ದಾಳಿಗೆ ದಿಟ್ಟ ಉತ್ತರ ನೀಡಿದರು. ಇದರಂತೆ ಇಬ್ಬರು ಉಗ್ರರನ್ನು ಹತ್ಯೆ ಮಾಡುವಲ್ಲೇ ಯಶಸ್ವಿಯಾಗಿದ್ದಾರೆ. ಇದೀಗ ಸ್ಥಳಕ್ಕೆ ಹೆಚ್ಚುವರಿ ಭದ್ರತಾ ಪಡೆಗಳನ್ನು ರವಾನಿಸಲಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.