ಮಳೆ, 15,500 ಅಡಿ ಎತ್ತರದಲ್ಲಿ ಸೇನಾ ಕಾರ್ಯಾಚರಣೆ; ಪಾಕ್ ಉಗ್ರನ ಬೇಟೆ, 3 ಪ್ರಮುಖ ದಾಳಿಗಳಲ್ಲಿ ಶಾಮೀಲಾಗಿದ್ದ Yasir ಹತ
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆ ಮತ್ತು ಜಮ್ಮು ವಲಯದ ಪೂಂಚ್ ಜಿಲ್ಲೆಯ ಗಡಿಗಳ ಸಮೀಪವಿರುವ ಪಿರ್ ಪಂಜಾಲ್ ಪರ್ವತ ಶ್ರೇಣಿಯ ಎತ್ತರದ ಪ್ರದೇಶಗಳಲ್ಲಿ ನಿನ್ನೆ ಸೇನೆ ಮತ್ತು ಉಗ್ರರ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿತ್ತು.

ಶ್ರೀನಗರ: ಜಮ್ಮು-ಕಾಶ್ಮೀರದ ಮಧ್ಯ ಕಾಶ್ಮೀರದ ಯುಸ್ಮಾರ್ಗ್‌ನ ಎತ್ತರದ ಪ್ರದೇಶದಲ್ಲಿ ಶುಕ್ರವಾರ ಭಾರತೀಯ ಸೇನೆಯ ಗುಂಡಿಗೆ ಬಲಿಯಾದ ಉಗ್ರನನ್ನು ಪಾಕಿಸ್ತಾನಿ ಪ್ರಜೆ ಹಾಗೂ ನಿಷೇಧಿತ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಉಗ್ರ ಯಾಸಿರ್ ಎಂದು ಗುರುತಿಸಲಾಗಿದೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆ ಮತ್ತು ಜಮ್ಮು ವಲಯದ ಪೂಂಚ್ ಜಿಲ್ಲೆಯ ಗಡಿಗಳ ಸಮೀಪವಿರುವ ಪಿರ್ ಪಂಜಾಲ್ ಪರ್ವತ ಶ್ರೇಣಿಯ ಎತ್ತರದ ಪ್ರದೇಶಗಳಲ್ಲಿ ನಿನ್ನೆ ಸೇನೆ ಮತ್ತು ಉಗ್ರರ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಓರ್ವ ಉಗ್ರ ಹತನಾಗಿದ್ದ. ಇದೀಗ ಆ ಉಗ್ರನ ವಿವರ ಪತ್ತೆಯಾಗಿದ್ದು, ಲಷ್ಕರ್ ಉಗ್ರ ಯಾಸಿರ್ ಎಂದು ಗುರುತಿಸಲಾಗಿದೆ.
2024ರಲ್ಲಿ ನಡೆದ ಕನಿಷ್ಠ ಮೂರು ಪ್ರಮುಖ ಭಯೋತ್ಪಾದಕ ದಾಳಿಗಳಲ್ಲಿ ಈ ಯಾಸಿರ್ ಭಾಗಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವುಗಳಲ್ಲಿ ಪೂಂಚ್‌ನಲ್ಲಿ ಭಾರತೀಯ ವಾಯುಪಡೆಯ (IAF) ಬೆಂಗಾವಲು ವಾಹನಗಳ ಮೇಲಿನ ದಾಳಿ, ಸೋನಾಮಾರ್ಗ್‌ನಲ್ಲಿ ನಿರ್ಮಾಣ ಕಾರ್ಮಿಕರ ಮೇಲಿನ ದಾಳಿ ಹಾಗೂ ಬೋಟಾ ಪಾತ್ರಿ ಪ್ರದೇಶದಲ್ಲಿ ಸೇನೆಯ ಮೇಲಿನ ದಾಳಿ ಸೇರಿವೆ ಎಂದು ಪಿಟಿಐ ವರದಿ ಮಾಡಿದೆ.
ಇದೇ ವೇಳೆ, ಬೃಹತ್ ಬಂಡೆಗಳು ಹಾಗೂ ನೈಸರ್ಗಿಕ ಗುಹೆಗಳ ಹಿಂದೆ ಅಡಗಿರುವ ಮತ್ತೊಬ್ಬ ಉಗ್ರ ಮೂಸಾನಿಗಾಗಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಮುಂದುವರಿಸಿವೆ.
12 ಸಾವಿರದಿಂದ 15,500 ಅಡಿ ಎತ್ತರದಲ್ಲಿ ಸೇನಾ ಕಾರ್ಯಾಚರಣೆ
ಯುಸ್ಮಾರ್ಗ್‌ನ ಎನ್‌ಕೌಂಟರ್ ನಡೆದ ಪ್ರದೇಶವು ಪಿರ್ ಪಂಜಾಲ್ ಪರ್ವತಶ್ರೇಣಿಯಲ್ಲಿ ಸಮುದ್ರಮಟ್ಟದಿಂದ ಸುಮಾರು 12,000ರಿಂದ 15,500 ಅಡಿ ಎತ್ತರದಲ್ಲಿದೆ. ನಿರಂತರ ಮಳೆ ಹಾಗೂ ಕೇವಲ ಐದು ಮೀಟರ್‌ವರೆಗೂ ಇಳಿದಿರುವ ಗೋಚರತೆಯಿಂದ ಕಾರ್ಯಾಚರಣೆಗೆ ತೀವ್ರ ಅಡಚಣೆ ಎದುರಾಗಿದ್ದರೂ, ಸೇನೆ ತನ್ನ ಕಾರ್ಯಾಚರಣೆ ಮುಂದುವರೆಸಿದೆ. ಇದೇ ಕಣಿವೆ ಪ್ರದೇಶದಲ್ಲಿ ಉಗ್ರರು ಅವಿತಿದ್ದು, ಉಗ್ರರು ತಪ್ಪಿಸಿಕೊಳ್ಳದಂತೆ ಸೇನೆ ಹಾಗೂ ವಿಶೇಷ ಪಡೆಗಳು ಪ್ರದೇಶವನ್ನು ಸುತ್ತುವರಿದಿವೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
3 ಉಗ್ರ ದಾಳಿಗಳಲ್ಲಿ ಭಾಗಿ, 2024ರಿಂದಲೇ ಯಾಸಿರ್ ಮೇಲೆ ನಿಗಾ
ಅಧಿಕಾರಿಗಳ ಪ್ರಕಾರ, ಯಾಸಿರ್‌ನ ಇರುವಿಕೆ ಮೊದಲ ಬಾರಿಗೆ 2024ರಲ್ಲಿ ಪತ್ತೆಯಾಗಿತ್ತು. ಅದೇ ವರ್ಷ ನಡೆದ ಮೂರು ಪ್ರಮುಖ ಉಗ್ರ ದಾಳಿಗಳಲ್ಲಿ ಆತನ ಪಾತ್ರವಿರುವ ಕುರಿತು ಗುಪ್ತಚರ ಮಾಹಿತಿ ಲಭ್ಯವಾಗಿತ್ತು. 2024ರ ಮೇ 4ರಂದು ಪೂಂಚ್‌ನಲ್ಲಿ ನಡೆದ IAF ಬೆಂಗಾವಲು ಪಡೆ ಮೇಲಿನ ದಾಳಿಯಲ್ಲಿ ಓರ್ವ ವಾಯುಪಡೆ ಸಿಬ್ಬಂದಿ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದರು. ಸಂಜೆ ಸುಮಾರು 6.15ಕ್ಕೆ ಸುರನ್‌ಕೋಟ್ ಪ್ರದೇಶದ ಶಾಹಸಿತಾರ್ ಬಳಿ ಈ ದಾಳಿ ನಡೆದಿತ್ತು. ಸನಾಯಿ ಟಾಪ್‌ನಲ್ಲಿರುವ ನೆಲೆಗೆ ಯೋಧರು ಮರಳುತ್ತಿದ್ದ ವೇಳೆ ಉಗ್ರರು ದಾಳಿ ನಡೆಸಿದ್ದರು.
ಸೋನಾಮಾರ್ಗ್ ದಾಳಿಯಲ್ಲೂ ಕೈವಾಡ
2024ರ ಅಕ್ಟೋಬರ್ 20ರಂದು ಸೋನಾಮಾರ್ಗ್‌ನ ಗಗನಗೀರ್ ಪ್ರದೇಶದಲ್ಲಿ ಉಗ್ರರ ಗುಂಪೊಂದು ನಡೆಸಿದ ದಾಳಿಯಲ್ಲಿ ಸ್ಥಳೀಯ ವೈದ್ಯರೊಬ್ಬರು ಸೇರಿದಂತೆ ಏಳು ಮಂದಿ ಹತರಾಗಿದ್ದರು. ಈ ದಾಳಿಯನ್ನು ನಡೆಸಿದ ಜುನೈದ್ ಅಹ್ಮದ್ ಭಟ್ ನೇತೃತ್ವದ ಉಗ್ರರ ಗುಂಪಿನಲ್ಲಿ ಯಾಸಿರ್ ಕೂಡ ಇದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಷ್ಕರ್-ಎ-ತೊಯ್ಬಾ ಕಮಾಂಡರ್ ಜುನೈದ್ ಅಹ್ಮದ್ ಭಟ್‌ನನ್ನು ಭದ್ರತಾ ಪಡೆಗಳು 2024ರ ಡಿಸೆಂಬರ್ 3ರಂದು ಶ್ರೀನಗರ ಹೊರವಲಯದ ದಚಿಗಾಮ್ ಅರಣ್ಯದಲ್ಲಿ ಹೊಡೆದುರುಳಿಸಿದ್ದವು.
ಬೋಟಾ ಪಾತ್ರಿ ದಾಳಿಯಲ್ಲೂ ಯಾಸಿರ್ ಕೈವಾಡ
2024ರ ಅಕ್ಟೋಬರ್ 24ರಂದು ಗುಲ್ಮಾರ್ಗ್ ಸಮೀಪದ ಬೋಟಾ ಪಾತ್ರಿ ಪ್ರದೇಶದಲ್ಲಿ ಯಾಸಿರ್ ಹಾಗೂ ಇತರ ಉಗ್ರರು ಭಾರತೀಯ ಸೇನೆಯ ವಾಹನದ ಮೇಲೆ ಹೊಂಚುದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಮೂವರು ಯೋಧರು ಹಾಗೂ ಇಬ್ಬರು ಪೋರ್ಟರ್‌ಗಳು ಸೇರಿದಂತೆ ಐವರು ಮೃತಪಟ್ಟಿದ್ದರು.
ಬೋಟಾ ಪಾತ್ರಿ ಎನ್‌ಕೌಂಟರ್ ಬಳಿಕ ಯಾಸಿರ್ ಹಾಗೂ ಮತ್ತೊಬ್ಬ ಲಷ್ಕರ್ ಉಗ್ರ ಮೂಸಾ ಯುಸ್ಮಾರ್ಗ್ ಮತ್ತು ಪುಲ್ವಾಮಾ ಪ್ರದೇಶಗಳಲ್ಲಿ ಅಡಗಿಕೊಂಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ನಂತರ ಕಳೆದ ವರ್ಷ ಪಿರ್ ಪಂಜಾಲ್‌ನ ಉತ್ತರ ಭಾಗದಿಂದ ಜಮ್ಮು ಪ್ರದೇಶದ ದಕ್ಷಿಣ ಭಾಗಕ್ಕೆ ತೆರಳಿದ್ದ ಅವರು, ಈ ತಿಂಗಳ ಆರಂಭದಲ್ಲಿ ಮತ್ತೆ ಕಣಿವೆಗೆ ಪ್ರವೇಶಿಸಿದ್ದರು ಎನ್ನಲಾಗಿದೆ.
ಯುಸ್ಮಾರ್ಗ್ ಮೂಲಕ ಪುಲ್ವಾಮಾಗೆ ತೆರಳುತ್ತಿದ್ದ ಉಗ್ರರು
ಸೇನಾ ಮೂಲಗಳ ಪ್ರಕಾರ, ಪೂಂಚ್‌ನ ಅಶ್ದಾರ್ ಗಲಿ ಪ್ರದೇಶದಿಂದ ಯುಸ್ಮಾರ್ಗ್ ಮೂಲಕ ಪುಲ್ವಾಮಾದ ಪಾಖರ್‌ಪೋರಾಗೆ ಉಗ್ರರ ಗುಂಪೊಂದು ಸಾಗುತ್ತಿರುವುದನ್ನು ಸೇನೆ ಪತ್ತೆಹಚ್ಚಿದ ಬಳಿಕ ಪ್ರಸ್ತುತ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭಾರತೀಯ ಸೇನೆಯ ವಿಶೇಷ ಪಡೆಗಳು ಹಾಗೂ ಇತರ ಸೇನಾ ಘಟಕಗಳು 12,000ರಿಂದ 15,500 ಅಡಿ ಎತ್ತರದಲ್ಲಿರುವ ಪರ್ವತ ದಾರಿಗಳಲ್ಲಿ ಹೊಂಚು ಹಾಕಿ ಕಾರ್ಯಾಚರಣೆ ನಡೆಸಿದವು. ಸೆಪ್ಟೆಂಬರ್ 1ರಂದು ಪ್ರದೇಶದಲ್ಲಿ ಬಿಗಿ ಭದ್ರತಾ ಸುತ್ತುವರಿಕೆ ಹಾಕಲಾಗಿತ್ತು. ಸೆಪ್ಟೆಂಬರ್ 3ರಂದು ದೂರದ ಅಲ್ಪೈನ್ ಪರ್ವತಶ್ರೇಣಿಯಾದ ಅಶ್ದಾರ್ ಗಲಿಯಲ್ಲಿ ಉಗ್ರರೊಂದಿಗೆ ಮೊದಲ ಸಂಪರ್ಕ ಸ್ಥಾಪನೆಯಾಗಿತ್ತು.
ಒಬ್ಬ ಉಗ್ರ ಹತ, AK ರೈಫಲ್ ವಶ
“ನಿಖರ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸರು ಹಾಗೂ CRPF ಜಂಟಿಯಾಗಿ ಬುಡ್ಗಾಮ್‌ನಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಎಚ್ಚರಿಕೆಯಿಂದಿದ್ದ ಯೋಧರು ಅನುಮಾನಾಸ್ಪದ ಚಲನವಲನ ಗಮನಿಸಿ ಉಗ್ರರ ಮೇಲೆ ದಾಳಿ ನಡೆಸಿದರು.
ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಬಳಿಕ ಭೀಕರ ಗುಂಡಿನ ಚಕಮಕಿ ನಡೆಯಿತು. ಕಾರ್ಯಾಚರಣೆಯಲ್ಲಿ ಒಬ್ಬ ಉಗ್ರನನ್ನು ಹತ್ಯೆ ಮಾಡಲಾಗಿದ್ದು, ಒಂದು AK ರೈಫಲ್ ವಶಪಡಿಸಿಕೊಳ್ಳಲಾಗಿದೆ” ಎಂದು ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ ಶುಕ್ರವಾರ ಎಕ್ಸ್‌ನಲ್ಲಿ ತಿಳಿಸಿತ್ತು.
ಮತ್ತೊಬ್ಬ ಉಗ್ರ ಮೂಸಾಗಾಗಿ ಬೇಟೆ
ಎನ್‌ಕೌಂಟರ್ ನಡೆದ ಪ್ರದೇಶವು ಬುಡ್ಗಾಮ್‌ನ ದೂಧ್‌ಪಥ್ರಿಯಿಂದ ಸುಮಾರು ಐದು ಗಂಟೆಗಳ ಪ್ರಯಾಣದಷ್ಟು ದೂರದಲ್ಲಿದ್ದು, ಅತ್ಯಂತ ದುರ್ಗಮ ಪ್ರದೇಶವಾಗಿದೆ. ಮೂಸಾನನ್ನು ಪತ್ತೆಹಚ್ಚಲು ಮೇಲ್ದರ್ಜೆಯ ಪ್ರದೇಶಗಳಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.
ಪಿರ್ ಪಂಜಾಲ್‌ನ ಜಮ್ಮು ಭಾಗದಲ್ಲೂ ಉಗ್ರರು ತಪ್ಪಿಸಿಕೊಳ್ಳಬಹುದಾದ ಎಲ್ಲ ಮಾರ್ಗಗಳನ್ನು ಬಂದ್ ಮಾಡಲು ಹೆಚ್ಚಿನ ಸಂಖ್ಯೆಯ ಯೋಧರನ್ನು ನಿಯೋಜಿಸಲಾಗಿದೆ. ಯುಸ್ಮಾರ್ಗ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಂಬಿಂಗ್ ಕಾರ್ಯಾಚರಣೆ ಮುಂದುವರಿದಿದ್ದು, ಉಳಿದಿರುವ ಉಗ್ರರನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ತೀವ್ರ ಶೋಧ ನಡೆಸುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



