ವಿದೇಶ

'ಸೌದಿ ಅರೇಬಿಯಾ ಮ್ಯಾಟ್ರಲ್ಲಿ ತಲೆ ಹಾಕಿದ್ರೋ ಹುಷಾರ್': 'ಬ್ಲಡ್ ಬ್ರದರ್' ಪಾಕ್`ಗೆ ಹೌತಿ ಬಂಡುಕೋರರ ಧಮ್ಕಿ!

ಸೌದಿ ಅರೇಬಿಯಾ ಪರವಾಗಿ ಯೆಮೆನ್‌ನ ಹೌತಿ ಬಂಡುಕೋರರ ವಿರುದ್ಧದ ಯಾವುದೇ ಸೇನಾ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಅಥವಾ ಟರ್ಕಿ ಭಾಗಿಯಾದರೆ, ‘ನಿರ್ಣಾಯಕ ಹಾಗೂ ನೋವಿನ ಪ್ರತಿಕ್ರಿಯೆ’ ನೀಡುವುದಾಗಿ ಹೌತಿಗಳು ಎಚ್ಚರಿಕೆ ನೀಡಿದ್ದಾರೆ.

'ಸೌದಿ ಅರೇಬಿಯಾ ಮ್ಯಾಟ್ರಲ್ಲಿ ತಲೆ ಹಾಕಿದ್ರೋ ಹುಷಾರ್': 'ಬ್ಲಡ್ ಬ್ರದರ್' ಪಾಕ್`ಗೆ ಹೌತಿ ಬಂಡುಕೋರರ ಧಮ್ಕಿ!
ಪಾಕಿಸ್ತಾನ-ಟರ್ಕಿಗೆ ಹೌತಿಗಳ ಎಚ್ಚರಿಕೆ
Published On :

ನವದೆಹಲಿ: ಸೌದಿ ಅರೇಬಿಯಾ ಮೇಲೆ ಯೆಮೆನ್‌ನ ಹೌತಿ ಬಂಡುಕೋರರು ನಡೆಸುತ್ತಿರುವ ದಾಳಿ ಮುಂದುವರೆದಿರುವಂತೆಯೇ ಇತ್ತ ಸೌದಿ ಮಿತ್ರರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಟರ್ಕಿಗೆ ಬಂಡುಕೋರರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಹೌದು.. ಸೌದಿ ಅರೇಬಿಯಾ ಪರವಾಗಿ ಯೆಮೆನ್‌ನ ಹೌತಿ ಬಂಡುಕೋರರ ವಿರುದ್ಧದ ಯಾವುದೇ ಸೇನಾ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಅಥವಾ ಟರ್ಕಿ ಭಾಗಿಯಾದರೆ, ‘ನಿರ್ಣಾಯಕ ಹಾಗೂ ನೋವಿನ ಪ್ರತಿಕ್ರಿಯೆ’ ನೀಡುವುದಾಗಿ ಹೌತಿಗಳು ಎಚ್ಚರಿಕೆ ನೀಡಿದ್ದಾರೆ.

ಸೌದಿ ಅರೇಬಿಯಾ ವಿರುದ್ಧದ ಹೌತಿಗಳ ದಾಳಿಗೆ ಪ್ರತಿಯಾಗಿ ಎರಡೂ ದೇಶಗಳು ಕ್ರಮ ಕೈಗೊಳ್ಳುವ ಸಾಧ್ಯತೆಗಳ ವರದಿಗಳ ನಡುವೆ ಈ ಎಚ್ಚರಿಕೆ ಹೊರಬಿದ್ದಿದೆ ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

ಹೌತಿ ರಾಜಕೀಯ ಮುಖಂಡ ಹಾಗೂ ಧಮಾರ್ ಪ್ರಾಂತ್ಯದ ಗವರ್ನರ್ ಮೊಹಮ್ಮದ್ ಅಲ್-ಬುಖೈತಿ, ಇರಾಕ್‌ನ ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಪಾಕಿಸ್ತಾನ ಮತ್ತು ಟರ್ಕಿ ಸಂಘರ್ಷದಲ್ಲಿ ಮಧ್ಯಪ್ರವೇಶಿಸಿದರೆ “ಕಬ್ಬಿಣದ ಮುಷ್ಟಿಯಿಂದ ಹೊಡೆಯುತ್ತೇವೆ” ಮತ್ತು ಅವರಿಗೆ ಮರೆಯಲಾಗದ “ಪಾಠ ಕಲಿಸುತ್ತೇವೆ” ಎಂದು ಹೇಳಿದ್ದಾರೆ.

ಎರಡೂ ದೇಶಗಳ ಜನರಲ್ಲಿ ಯೆಮೆನ್ ಪರ ಸಹಾನುಭೂತಿ ಇದೆ ಎಂದು ಒಪ್ಪಿಕೊಂಡಿರುವ ಅವರು, ತಮ್ಮ ಎಚ್ಚರಿಕೆಯನ್ನು ಅಲ್ಲಿನ ಸರ್ಕಾರಗಳ ವಿರುದ್ಧವೇ ನೀಡಿರುವುದಾಗಿ ಹೇಳಿದ್ದಾರೆ.

ಸೌದಿ ವಿರುದ್ಧ ಹೌತಿಗಳ ದಾಳಿ; ಹೆಚ್ಚಿದ ಆತಂಕ

ಇನ್ನು ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿಗಳು ತೀವ್ರಗೊಂಡಿರುವ ಸಂದರ್ಭದಲ್ಲೇ ಈ ಎಚ್ಚರಿಕೆ ಬಂದಿದ್ದು, ಆಗಸ್ಟ್ 7ರಂದು ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಟರ್ಕಿ ನಡುವೆ ಸಹಿ ಹಾಕಲಾದ ಮೆಕ್ಕಾ ಜಂಟಿ ರಕ್ಷಣಾ ಒಪ್ಪಂದವೂ ಇದೀಗ ಗಮನ ಸೆಳೆದಿದೆ.

ಮೆಕ್ಕಾ ಪ್ಯಾಕ್ಟ್ ಒಪ್ಪಂದದ ಪ್ರಕಾರ, ಒಬ್ಬ ಸದಸ್ಯ ರಾಷ್ಟ್ರದ ಮೇಲೆ ನಡೆಯುವ ದಾಳಿಯನ್ನು ಎಲ್ಲ ಸದಸ್ಯರ ಮೇಲಿನ ದಾಳಿ ಎಂದು ಪರಿಗಣಿಸುವ ವ್ಯವಸ್ಥೆ ಇದೆ. ಹೀಗಾಗಿ ಪಾಕಿಸ್ತಾನವು ತನ್ನ ಗಡಿಗಳಿಂದ ದೂರವಿರುವ ಯೆಮೆನ್ ಸಂಘರ್ಷದಲ್ಲಿ ನೇರವಾಗಿ ತೊಡಗಿಸಿಕೊಳ್ಳುವ ಸಾಧ್ಯತೆ ಕುರಿತು ಚರ್ಚೆ ನಡೆಯುತ್ತಿದೆ.

ಸೌದಿಗೆ ನೆರವು ನೀಡಲು ಟರ್ಕಿ-ಪಾಕ್ ಸಿದ್ಧ

ಟರ್ಕಿಯ ವಿದೇಶಾಂಗ ಸಚಿವ ಹಕಾನ್ ಫಿದಾನ್, ಈ ಮೈತ್ರಿಯಡಿ ರಿಯಾದ್‌ಗೆ ತಾಂತ್ರಿಕ ಮತ್ತು ಅಗತ್ಯವಿದ್ದರೆ ಸೇನಾ ನೆರವು ನೀಡಲು ಸಿದ್ಧತೆ ಇರುವುದಾಗಿ ಸೂಚಿಸಿದ್ದಾರೆ. ಅಂತೆಯೇ ಪಾಕಿಸ್ತಾನ ಇದಕ್ಕಿಂತಲೂ ಕಠಿಣ ನಿಲುವು ವ್ಯಕ್ತಪಡಿಸಿದೆ. ಸೌದಿ ಅರೇಬಿಯಾ ಹಾಗೂ ಮೆಕ್ಕಾ-ಮದೀನಾ ಪವಿತ್ರ ಸ್ಥಳಗಳ ರಕ್ಷಣೆ ಯಾವುದೇ ಅಧಿಕೃತ ಒಪ್ಪಂದಕ್ಕಿಂತಲೂ ಮಿಗಿಲಾದ “ಶಾಶ್ವತ” ಧಾರ್ಮಿಕ ಕರ್ತವ್ಯ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾರೆ.

ಪಾಕಿಸ್ತಾನದ ಇಂಟರ್-ಸರ್ವಿಸಸ್ ಪಬ್ಲಿಕ್ ರಿಲೇಷನ್ಸ್ (ISPR) ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶರೀಫ್ ಚೌಧರಿ ಕೂಡ ಸೌದಿ ಅರೇಬಿಯಾ ಮತ್ತು ಪವಿತ್ರ ಸ್ಥಳಗಳ ರಕ್ಷಣೆಗೆ “ಯಾವುದೇ ಹಂತಕ್ಕೂ ಹೋಗುತ್ತೇವೆ” ಎಂಬ ಕಠಿಣ ನಿಲುವು ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನವು ಸೌದಿ ಅರೇಬಿಯಾ ಮೇಲೆ ಹೌತಿಗಳು ನಡೆಸಿದ ದಾಳಿಗಳನ್ನು ಹಲವು ಬಾರಿ ಖಂಡಿಸಿದ್ದು, ವಿಶ್ವಸಂಸ್ಥೆಯಲ್ಲೂ ತನ್ನ ಕಳವಳ ವ್ಯಕ್ತಪಡಿಸಿದೆ. ಆದರೆ ಇದೀಗ ರಿಯಾದ್ ಪರ ಅದರ ಕಠಿಣ ಹೇಳಿಕೆಗಳು ಹಾಗೂ ಹೊಸ ರಕ್ಷಣಾ ಒಪ್ಪಂದವು ಪಾಕಿಸ್ತಾನವನ್ನು ಯೆಮೆನ್ ಸಂಘರ್ಷದಲ್ಲಿ ಇನ್ನಷ್ಟು ಆಳವಾಗಿ ತೊಡಗಿಸಿಕೊಳ್ಳುವ ಸಾಧ್ಯತೆಯನ್ನು ಹೆಚ್ಚಿಸಿದೆ.

ಸಂಘರ್ಷ ವಿಸ್ತರಣೆಯ ಆತಂಕ

ಪಾಕಿಸ್ತಾನದ ಇಂತಹ ಮುಕ್ತ ಬದ್ಧತೆಗಳು ದೇಶವನ್ನು ಅಪಾಯಕಾರಿ ರೀತಿಯಲ್ಲಿ ಸಂಘರ್ಷದೊಳಗೆ ಎಳೆಯಬಹುದು ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಆರ್ಥಿಕ ಒತ್ತಡ ಮತ್ತು ಆಂತರಿಕ ಭದ್ರತಾ ಸವಾಲುಗಳನ್ನು ಎದುರಿಸುತ್ತಿರುವ ಪಾಕಿಸ್ತಾನವು ಯೆಮೆನ್ ಸಂಘರ್ಷದಲ್ಲಿ ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಂಡರೆ ಪ್ರತೀಕಾರದ ದಾಳಿಗಳಿಗೆ ಗುರಿಯಾಗುವ ಸಾಧ್ಯತೆಯೂ ಇದೆ.

ದಾಳಿ ವಿಸ್ತರಿಸಿದ ಹೌತಿಗಳು

ಹೌತಿಗಳು ಈ ಹಿಂದೆ ಹಡಗುಗಳು ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಾಮರ್ಥ್ಯ ತೋರಿಸಿದ್ದಾರೆ. ಸಂಘರ್ಷದ ವ್ಯಾಪ್ತಿ ಪಾಕಿಸ್ತಾನದ ಹಿತಾಸಕ್ತಿಗಳಿಗೂ ವಿಸ್ತರಿಸಿದರೆ ಅದರ ಪರಿಣಾಮ ಗಂಭೀರವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಹೌತಿಗಳ ಈ ಎಚ್ಚರಿಕೆಯಿಂದ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮತ್ತಷ್ಟು ವಿಸ್ತರಿಸುವ ಆತಂಕವೂ ಹೆಚ್ಚಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.