ಭಾರತದಿಂದ ಆಮದು ಆಗುವ solar panels ಮೇಲೆ ಅಮೆರಿಕ ಶೇ.126 ಸುಂಕ: ದೇಶೀಯ ಉತ್ಪಾದಕರ ಮೇಲೆ ಪರಿಣಾಮ ಏನು?
ಅಮೆರಿಕಾದ ಸೌರ ಮಾರುಕಟ್ಟೆಯಲ್ಲಿ ನ್ಯಾಯಸಮ್ಮತ ಸ್ಪರ್ಧೆಯನ್ನು ಮತ್ತೆ ತರಲು ಇದು ಮಹತ್ವದ ಹೆಜ್ಜೆ ಎಂದು Alliance for American Solar Manufacturing and Trade ಪರವಾಗಿ ವಕೀಲ ಟಿಮ್ ಬ್ರೈಟ್‌ಬಿಲ್ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಸರ್ಕಾರ ಭಾರತ ಸೇರಿದಂತೆ ಕೆಲವು ದೇಶಗಳಿಂದ ಅಮೆರಿಕಕ್ಕೆ ಬರುವ ಸೌರ ಉತ್ಪನ್ನಗಳ ಮೇಲೆ ತಾತ್ಕಾಲಿಕವಾಗಿ ಶೇಕಡಾ 126ವರೆಗೆ ಸುಂಕ ವಿಧಿಸಿದೆ. ಅಮೆರಿಕ ವಾಣಿಜ್ಯ ಇಲಾಖೆ ಪ್ರಕಾರ, ಸರ್ಕಾರಿ ಸಹಾಯಧನಗಳು ಅಮೆರಿಕದ ಉತ್ಪಾದಕರಿಗೆ ಹಾನಿ ಉಂಟುಮಾಡುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಭಾರತದ ಜೊತೆಗೆ ಇಂಡೋನೇಷ್ಯಾದ ರಫ್ತುದಾರರ ಮೇಲೆ ಶೇಕಡಾ 86ರಿಂದ ಶೇಕಡಾ 143ರವರೆಗೆ ಸುಂಕ ವಿಧಿಸಲಾಗಿದ್ದು, ಲಾವೋಸ್‌ನ ರಫ್ತುದಾರರು ಸುಮಾರು ಶೇಕಡಾ 81ರಷ್ಟು ಸುಂಕವನ್ನು ಎದುರಿಸಬೇಕಾಗಿದೆ. ಇದು ನವೀಕರಿಸಬಹುದಾದ ಇಂಧನ ಸರಪಳಿಯನ್ನು ಗುರಿಯಾಗಿಸಿಕೊಂಡ ಮಹತ್ವದ ವ್ಯಾಪಾರ ಕ್ರಮವೆಂದು ಪರಿಗಣಿಸಲಾಗಿದೆ.
ಅಮೆರಿಕಾ ಈ ಸುಂಕಗಳನ್ನು ಏಕೆ ವಿಧಿಸಿದೆ?
ಭಾರತ, ಇಂಡೋನೇಷ್ಯಾ ಮತ್ತು ಲಾವೋಸ್ ದೇಶಗಳಲ್ಲಿ ಸರ್ಕಾರ ಬೆಂಬಲಿತ ಪ್ರೋತ್ಸಾಹಧನಗಳಿಂದ ಉತ್ಪಾದಕರು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಸೌರ ಮಾಯ್ಡ್ಯೂಲ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಅಮೆರಿಕ ಸರ್ಕಾರ ಭಾವಿಸಿಕೊಂಡಿದ್ದು, ಇದರಿಂದ ಅಮೆರಿಕದ ಸ್ಥಳೀಯ ಸೌರ ಉತ್ಪಾದಕರಿಗೆ ಹಾನಿಯಾಗಿದೆ ಎಂದು ಹೇಳಿ ಹೆಚ್ಚಿನ ಸುಂಕ ವಿಧಿಸಿದೆ.
ಅಮೆರಿಕಾದ ಸೌರ ಮಾರುಕಟ್ಟೆಯಲ್ಲಿ ನ್ಯಾಯಸಮ್ಮತ ಸ್ಪರ್ಧೆಯನ್ನು ಮತ್ತೆ ತರಲು ಇದು ಮಹತ್ವದ ಹೆಜ್ಜೆ ಎಂದು Alliance for American Solar Manufacturing and Trade ಪರವಾಗಿ ವಕೀಲ ಟಿಮ್ ಬ್ರೈಟ್‌ಬಿಲ್ ಹೇಳಿದ್ದಾರೆ.
ಭಾರತದ ಮೇಲೆ ಇದರ ಪರಿಣಾಮವೇನು?
BloombergNEF ಪ್ರಕಾರ, 2025ರ ಮೊದಲಾರ್ಧದಲ್ಲಿ ಅಮೆರಿಕದ ಸೌರ ಮಾಯ್ಡ್ಯೂಲ್ ಆಮದುಗಳಲ್ಲಿ ಭಾರತ, ಇಂಡೋನೇಷ್ಯಾ ಮತ್ತು ಲಾವೋಸ್ ದೇಶಗಳ ಪಾಲು 57 ಶೇಕಡಾ ಆಗಿತ್ತು. 2024ರಲ್ಲಿ ಅಮೆರಿಕ ಭಾರತದಿಂದ 792.6 ಮಿಲಿಯನ್ ಡಾಲರ್ ಮೌಲ್ಯದ ಸೌರ ಪ್ಯಾನೆಲ್‌ಗಳನ್ನು ಆಮದು ಮಾಡಿಕೊಂಡಿದ್ದು, ಇದು 2022ರಿಂದ ಒಂಬತ್ತು ಪಟ್ಟು ಹೆಚ್ಚಾಗಿದೆ.
Citi ವಿಶ್ಲೇಷಕ ವಿಕ್ರಮ್ ಬಾಗ್ರಿ ಹೇಳುವಂತೆ, ಈ ಹೆಚ್ಚಿದ ಸುಂಕ ಭವಿಷ್ಯದಲ್ಲಿ ಭಾರತೀಯ ಉತ್ಪಾದಕರನ್ನು ಅಮೆರಿಕ ಮಾರುಕಟ್ಟೆಯಿಂದ ಹೊರಗುಳಿಸುವ ಸಾಧ್ಯತೆ ಇದೆ.
ಆದರೆ, ಈ ಪ್ರತಿಹೊಂದಾಣಿಕೆ (countervailing) ಸುಂಕಗಳು ಭಾರತದಲ್ಲಿ ತಯಾರಿಸಲಾದ ಸೌರ ಸೆಲ್‌ಗಳಿಗೆ ಮಾತ್ರ ಅನ್ವಯಿಸುತ್ತವೆ; ವಿದೇಶದಿಂದ ಸೆಲ್‌ಗಳನ್ನು ಆಮದು ಮಾಡಿಕೊಂಡು ಭಾರತದಲ್ಲಿ ಜೋಡಿಸಲಾದ ಪ್ಯಾನೆಲ್‌ಗಳಿಗೆ ಅನ್ವಯಿಸುವುದಿಲ್ಲ.
Waaree Energies ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಹಿತೇಶ್ ದೋಷಿ ಹೇಳುವಂತೆ, ಅಮೆರಿಕವು ಸುಂಕವನ್ನು ಸೌರ ಸೆಲ್‌ಗಳ ಮೂಲ ದೇಶದ ಆಧಾರದ ಮೇಲೆ ವಿಧಿಸಿದೆ ಹೊರತು ಪ್ಯಾನೆಲ್‌ಗಳನ್ನು ಜೋಡಿಸಿದ ದೇಶದ ಆಧಾರದ ಮೇಲೆ ಅಲ್ಲ. ಬಹುತೇಕ ಭಾರತೀಯ ಉತ್ಪಾದಕರು ಕಡಿಮೆ ಸುಂಕ ಇರುವ ದೇಶಗಳಿಂದ ಸೆಲ್‌ಗಳನ್ನು ಆಮದು ಮಾಡಿಕೊಂಡು ಭಾರತದಲ್ಲಿ ಪ್ಯಾನೆಲ್ ತಯಾರಿಸುತ್ತಾರೆ. ಆದ್ದರಿಂದ ಅಮೆರಿಕದ ನಿರ್ಧಾರದ ಪರಿಣಾಮ ಸೀಮಿತವಾಗಿರಬಹುದು.
ಅಮೆರಿಕದ ಸೌರ ಆಮದುಗಳಲ್ಲಿ ಕೇವಲ ಸುಮಾರು 4 ಶೇಕಡಾ ಮಾತ್ರ ಭಾರತದಲ್ಲಿ ತಯಾರಿಸಲಾದ ಸೆಲ್‌ಗಳನ್ನು ಬಳಸಿ ನಿರ್ಮಿಸಿದ ಪ್ಯಾನೆಲ್‌ಗಳಾಗಿವೆ. ಇದರಿಂದ ಭಾರತದಿಂದ 600–1,000 ಮೆಗಾವಾಟ್ ರಫ್ತುಗಳಿಗೆ ಮಾತ್ರ ಪರಿಣಾಮ ಬೀಳಬಹುದು.
ವ್ಯಾಪಕ ವ್ಯಾಪಾರ ಹಿನ್ನೆಲೆ
ಈ ಹೊಸ ಸುಂಕಗಳು ಕಳೆದ ವಾರ ಅಮೆರಿಕ ಸುಪ್ರೀಂ ಕೋರ್ಟ್ ರದ್ದುಪಡಿಸಿದ ಜಾಗತಿಕ ಸುಂಕಗಳಿಂದ ಪ್ರತ್ಯೇಕವಾಗಿವೆ. ಸುಪ್ರೀಂ ಕೋರ್ಟ್ ತೀರ್ಪಿಗೆ ಪ್ರತಿಕ್ರಿಯೆಯಾಗಿ ಟ್ರಂಪ್ 10 ಶೇಕಡಾ ಹೊಸ ಸುಂಕಗಳನ್ನು ಘೋಷಿಸಿದ್ದು, ಅವು ಜಾರಿಗೆ ಬಂದಿವೆ; ನಂತರ 15 ಶೇಕಡಾಕ್ಕೆ ಹೆಚ್ಚಿಸಿದರೂ ಅದು ಇನ್ನೂ ಜಾರಿಗೆ ಬಂದಿಲ್ಲ.
ಇತ್ತೀಚೆಗೆ ಅಮೆರಿಕ ಮತ್ತು ಭಾರತ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು ಆರ್ಥಿಕ ಉದ್ವಿಗ್ನತೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಹೊಸ ಸುಂಕಗಳು ಗಮನಾರ್ಹವೆಂದು ಪರಿಗಣಿಸಲಾಗುತ್ತಿದೆ.
ಮುಂದೇನು?
ಅಮೆರಿಕ ವಾಣಿಜ್ಯ ಇಲಾಖೆ ಜುಲೈ 6ರೊಳಗೆ ಅಂತಿಮ ತೀರ್ಮಾನ ಪ್ರಕಟಿಸುವ ನಿರೀಕ್ಷೆಯಿದೆ. ಜೊತೆಗೆ ಭಾರತ, ಇಂಡೋನೇಷ್ಯಾ ಮತ್ತು ಲಾವೋಸ್ ದೇಶಗಳಿಂದ ಸೌರ ಸೆಲ್ ಆಮದುಗಳ ವಿರುದ್ಧ ಡಂಪಿಂಗ್ ವಿರೋಧಿ ತನಿಖೆಯೂ ನಡೆಯುತ್ತಿದೆ.
ಡೊನಾಲ್ಡ್ ಟ್ರಂಪ್ ಆಡಳಿತದ ಈ ಕ್ರಮವು ಜಾಗತಿಕ ಸೌರ ಸರಪಳಿಯ ಮೇಲೆ ಕಟ್ಟುನಿಟ್ಟಿನ ನಿಯಂತ್ರಣವನ್ನು ಸೂಚಿಸುತ್ತಿದ್ದು, ಅಮೆರಿಕದ ಸ್ಥಳೀಯ ಉತ್ಪಾದನೆಯನ್ನು ಬಲಪಡಿಸುವ ಉದ್ದೇಶ ಹೊಂದಿದರೂ, ಅಮೆರಿಕದ ಗ್ರಾಹಕರು ಮತ್ತು ಅಭಿವೃದ್ಧಿಪರರಿಗೆ ವೆಚ್ಚವನ್ನು ಹೆಚ್ಚಿಸುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.





