ಅಮೆರಿಕ ಅಷ್ಟೇ ಅಲ್ಲ, ಭಾರತಕ್ಕೂ ಕಾದಿತ್ತು ಕಂಟಕ: 9/11 ರಕ್ತಚರಿತ್ರೆಗೂ ಮುನ್ನ INDIA ಮೇಲಿತ್ತು ಲಾಡೆನ್ ಕಣ್ಣು; 25 ವರ್ಷಗಳ ಬಳಿಕ ಕರಾಳ ರಹಸ್ಯ ಬಯಲು..!
1998ರ ಆಗಸ್ಟ್ 28ರಂದು ಸಿದ್ಧಪಡಿಸಲಾದ ಅಧ್ಯಕ್ಷೀಯ ಗುಪ್ತಚರ ವರದಿಯಲ್ಲಿ ಬಿನ್ ಲಾಡೆನ್ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ದಾಳಿ ನಡೆಸಲು ಬಯಸಿದ್ದ ಎಂದು ಉಲ್ಲೇಖಿಸಲಾಗಿದೆ.

ವಾಷಿಂಗ್ಟನ್: 2001ರ ಸೆಪ್ಟೆಂಬರ್ 11 ರಂದು ಅಮೆರಿಕದ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಗೂ ಮುನ್ನವೇ, ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಭಾರತದ ಮೇಲೂ ದಾಳಿ ನಡೆಸಲು ಸಂಚು ರೂಪಿಸಿದ್ದ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಅಮೆರಿಕದ ಗುಪ್ತಚರ ಸಂಸ್ಥೆ 'ಸಿಐಎ' (CIA) ಬಹಿರಂಗಗೊಳಿಸಿರುವ ಅತ್ಯಂತ ರಹಸ್ಯ ದಾಖಲೆಗಳಿಂದ ಈ ಮಾಹಿತಿ ಬಹಿರಂಗವಾಗಿದೆ.
9/11 ದಾಳಿಯ 25ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸಿಐಎ ಶುಕ್ರವಾರ ಬಿನ್ ಲಾಡೆನ್‌ಗೆ ಸಂಬಂಧಿಸಿದ 70ಕ್ಕೂ ಹೆಚ್ಚು ಅಧ್ಯಕ್ಷೀಯ ಗುಪ್ತಚರ ವರದಿಗಳನ್ನು ಬಿಡುಗಡೆ ಮಾಡಿದೆ.
100ಕ್ಕೂ ಹೆಚ್ಚು ಪುಟಗಳ ದಾಖಲೆಗಳು ಇದರಲ್ಲಿ ಸೇರಿವೆ. 2001ರಲ್ಲಿ ನ್ಯೂಯಾರ್ಕ್‌ನ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದ 9/11 ಭಯೋತ್ಪಾದಕ ದಾಳಿಗೆ ಮುನ್ನ ಹಾಗೂ ನಂತರದ ಪ್ರಮುಖ ಗುಪ್ತಚರ ಮಾಹಿತಿಗಳು ಈ ದಾಖಲೆಗಳಲ್ಲಿವೆ.
1998ರ ಆಗಸ್ಟ್ 28ರಂದು ಸಿದ್ಧಪಡಿಸಲಾದ ಅಧ್ಯಕ್ಷೀಯ ಗುಪ್ತಚರ ವರದಿಯಲ್ಲಿ ಬಿನ್ ಲಾಡೆನ್ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ದಾಳಿ ನಡೆಸಲು ಬಯಸಿದ್ದ ಎಂದು ಉಲ್ಲೇಖಿಸಲಾಗಿದೆ.
ವರದಿಯ ಕೆಲವು ಭಾಗಗಳನ್ನು ಗೌಪ್ಯವಾಗಿರಿಸಲಾಗಿದೆ. ಅದರಲ್ಲಿ ಭಾರತವಲ್ಲದೆ ಪಾಕಿಸ್ತಾನ, ಈಜಿಪ್ಟ್, ಕುವೈತ್, ಸೌದಿ ಅರೇಬಿಯಾ, ಯೆಮೆನ್, ಉಗಾಂಡಾ ಹಾಗೂ ‘ಬಹುಶಃ’ ನೈಜೀರಿಯಾ ದೇಶಗಳ ಹೆಸರೂ ಉಲ್ಲೇಖಗೊಂಡಿವೆ.
‘ಬಿನ್ ಲಾಡೆನ್‌ನ ಭಯೋತ್ಪಾದಕ ಜಾಲ ಇನ್ನೂ ಬೆದರಿಕೆಯಾಗಿದೆ’ ಎಂಬ ಶೀರ್ಷಿಕೆಯ ಈ ವರದಿ ಪ್ರಕಟಿಸಲಾಗಿದೆ. ಆದರೆ, ಈ ಮಾಹಿತಿಯ ಮೂಲವನ್ನು ಬಹಿರಂಗಪಡಿಸಲಾಗಿಲ್ಲ.
ಭಾರತದಲ್ಲಿ ಯಾವ ನಿರ್ದಿಷ್ಟ ಸ್ಥಳವನ್ನು ಗುರಿಯಾಗಿಸಲಾಗಿತ್ತು, ದಾಳಿ ಯಾವಾಗ ನಡೆಯಬೇಕಿತ್ತು ಅಥವಾ ದಾಳಿಯ ನಿಖರ ಕಾರ್ಯಾಚರಣಾ ಯೋಜನೆ ಏನಾಗಿತ್ತು ಎಂಬ ಬಗ್ಗೆ ಯಾವುದೇ ಮಾಹಿತಿ ದಾಖಲೆಗಳಲ್ಲಿ ಇಲ್ಲ.
ಉತ್ತರ ಅಮೆರಿಕ, ಯುರೋಪ್ ಮತ್ತು ಪೂರ್ವ ಏಷ್ಯಾದಲ್ಲಿ ಬಿನ್ ಲಾಡೆನ್ ಹೊಂದಿದ್ದ ಸುಸಜ್ಜಿತ ಜಾಲವು ಈ ಪ್ರದೇಶಗಳಲ್ಲಿನ ಅಮೆರಿಕದ ಹಿತಾಸಕ್ತಿಗಳನ್ನೂ ಆತ ಗುರಿಯಾಗಿಸಬಹುದು ಎಂಬ ವರದಿಗಳಿಗೆ ವಿಶ್ವಾಸಾರ್ಹತೆ ನೀಡುತ್ತದೆ ಎಂದು ದಾಖಲೆಯಲ್ಲಿ ತಿಳಿಸಲಾಗಿದೆ.
ಅಫ್ಘಾನಿಸ್ತಾನದಲ್ಲಿದ್ದ ಬಿನ್ ಲಾಡೆನ್ ಹಾಗೂ ಇತರ ಭಯೋತ್ಪಾದಕ ನಾಯಕರು ಅಮೆರಿಕ ನಡೆಸಿದ ದಾಳಿಯಿಂದ ಬದುಕುಳಿದಿದ್ದು, ಅವರ ಸಂಪರ್ಕ ಜಾಲವೂ ಅಬಾಧಿತವಾಗಿ ಮುಂದುವರಿದಿದೆ ಎಂದು ಗುಪ್ತಚರ ವರದಿ ಅಂದಾಜಿಸಿತ್ತು. ಭಯೋತ್ಪಾದಕ ಸಂಘಟನೆ ಕೆಲವು ತರಬೇತಿ ಶಿಬಿರಗಳಲ್ಲಿ ಮತ್ತೆ ತರಬೇತಿ ಚಟುವಟಿಕೆಗಳನ್ನು ಆರಂಭಿಸಿತ್ತು. ಇನ್ನೂ ಕೆಲವು ಶಿಬಿರಗಳನ್ನು ಸ್ಥಳಾಂತರಿಸಲಾಗುತ್ತಿತ್ತು ಎಂದು ವರದಿಯಲ್ಲಿ ತಿಳಿಸಲಾಗಿತ್ತು.
ಅಫ್ಘಾನಿಸ್ತಾನದ ಅಲ್‌ಖೈದಾ ಶಿಬಿರಗಳ ಮೇಲೆ ಅಮೆರಿಕ ಕ್ಷಿಪಣಿ ದಾಳಿ ನಡೆಸುವ ಕೆಲವೇ ಗಂಟೆಗಳ ಮೊದಲು ಬಿನ್ ಲಾಡೆನ್ ಅಮೆರಿಕ ಮತ್ತು ಬ್ರಿಟನ್ ವಿರುದ್ಧ ಮತ್ತಷ್ಟು ದಾಳಿಗಳನ್ನು ನಡೆಸಲು ಸಿದ್ಧತೆ ನಡೆಸುತ್ತಿದ್ದ ಎಂದು ವರದಿ ತಿಳಿಸಿದೆ.
ಅಲ್‌ಖೈದಾ ಮುಖ್ಯಸ್ಥ ಬಿನ್ ಲಾಡೆನ್ ಕನಿಷ್ಠ 60 ದೇಶಗಳಲ್ಲಿದ್ದ ತನ್ನ ಸಂಪರ್ಕ ಜಾಲದ ವ್ಯಕ್ತಿಗಳು ಹಾಗೂ ಮಿತ್ರ ಭಯೋತ್ಪಾದಕ ಸಂಘಟನೆಗಳ ನೆರವು ಪಡೆದು ದಾಳಿಗಳನ್ನು ನಡೆಸುವ ಸಾಧ್ಯತೆಯಿತ್ತು ಎಂದು ವರದಿ ಮತ್ತಷ್ಟು ಎಚ್ಚರಿಸಿತ್ತು.
ಸಿಐಎ ಬಿಡುಗಡೆ ಮಾಡಿರುವ ಅಧ್ಯಕ್ಷೀಯ ಗುಪ್ತಚರ ವರದಿಗಳ ಈ ದಾಖಲೆಗಳ ಸಂಗ್ರಹವು 1998ರಿಂದ 2001ರವರೆಗೆ ಅಮೆರಿಕದ ಮೇಲೆ ಸಂಭವಿಸಬಹುದಾದ ಭಯೋತ್ಪಾದಕ ದಾಳಿಯ ಕುರಿತು ಗುಪ್ತಚರ ಸಂಸ್ಥೆ ಅಂದಿನ ಅಮೆರಿಕ ಅಧ್ಯಕ್ಷರಿಗೆ ಹಲವು ಬಾರಿ ಎಚ್ಚರಿಕೆ ನೀಡಿತ್ತು ಎಂಬುದನ್ನು ತೋರಿಸುತ್ತದೆ. ಈ ವರದಿಗಳು ಬಿಲ್ ಕ್ಲಿಂಟನ್ ಅಧ್ಯಕ್ಷರಾಗಿದ್ದ ಅವಧಿಯಿಂದ ಆರಂಭವಾಗಿ ಜಾರ್ಜ್ ಡಬ್ಲ್ಯು. ಬುಷ್ ಅವರ ಆಡಳಿತದ ಅವಧಿಯವರೆಗೂ ಮುಂದುವರಿದಿವೆ.
ಈ ದಾಖಲೆಗಳ ಬಿಡುಗಡೆ ಮೂಲಕ ಅಮೆರಿಕದ ಇತಿಹಾಸದ ಅತ್ಯಂತ ಕರಾಳ ಕ್ಷಣಗಳಲ್ಲಿ ಒಂದಾದ 9/11 ದಾಳಿಯ ಹಿಂದಿನ ವರ್ಷಗಳು ಹಾಗೂ ದಾಳಿಯ ಮರುದಿನಕ್ಕೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ಗುಪ್ತಚರ ಪ್ರಕಟಣೆಗಳ ಕುರಿತು ಅಭೂತಪೂರ್ವ ಪಾರದರ್ಶಕತೆ ದೊರೆತಿದೆ ಎಂದು ಸಿಐಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
2001ರ ಸೆಪ್ಟೆಂಬರ್ 11ರಂದು ಅಲ್‌ಖೈದಾದ 19 ಉಗ್ರರು ನಾಲ್ಕು ಪ್ರಯಾಣಿಕ ವಿಮಾನಗಳನ್ನು ಅಪಹರಿಸಿದ್ದರು. ಈ ಪೈಕಿ ಎರಡು ವಿಮಾನಗಳು ನ್ಯೂಯಾರ್ಕ್‌ನ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಗೋಪುರಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ಗಗನಚುಂಬಿ ಕಟ್ಟಡಗಳು ಸಂಪೂರ್ಣವಾಗಿ ಕುಸಿದುಬಿದ್ದವು.
ಮೂರನೇ ವಿಮಾನವು ಅಮೆರಿಕದ ರಕ್ಷಣಾ ಇಲಾಖೆಯ ಕೇಂದ್ರ ಕಚೇರಿಯಾದ ಪೆಂಟಗನ್‌ಗೆ ಅಪ್ಪಳಿಸಿತ್ತು. ನಾಲ್ಕನೇ ವಿಮಾನವು ಶ್ವೇತಭವನ ಅಥವಾ ಅಮೆರಿಕದ ಕಾಂಗ್ರೆಸ್ ಕಟ್ಟಡವನ್ನು ಗುರಿಯಾಗಿಸಿಕೊಂಡಿತ್ತು ಎಂದು ನಂಬಲಾಗಿದ್ದು, ಪ್ರಯಾಣಿಕರು ಉಗ್ರರ ವಿರುದ್ಧ ಪ್ರತಿರೋಧ ತೋರಿದ ಹಿನ್ನೆಲೆಯಲ್ಲಿ ಅದು ಪೆನ್ಸಿಲ್ವೇನಿಯಾದ ಹೊಲವೊಂದರಲ್ಲಿ ಪತನಗೊಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



