ಸಿರಿಯಾದಿ೦ದ ರಷ್ಯಾ ಸೇನೆ ವಾಪಸ್; ಪುಟಿನ್ ಸರ್ಕಾರದ ಅಚ್ಚರಿಯ ನಡೆ
ಸಿರಿಯಾದಲ್ಲಿರುವ ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ತೊಡೆತಟ್ಟಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಚ್ಚರಿ ಬೆಳವಣಿಗೆಯೊಂದರಲ್ಲಿ ತಮ್ಮ ಸೇನೆಯನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದೆ...

ಮಾಸ್ಕೋ: ಸಿರಿಯಾದಲ್ಲಿರುವ ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ತೊಡೆತಟ್ಟಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಚ್ಚರಿ ಬೆಳವಣಿಗೆಯೊಂದರಲ್ಲಿ ತಮ್ಮ ಸೇನೆಯನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದೆ.
ರಷ್ಯಾ ಸರ್ಕಾರದಿಂದ ಈಗಾಗಲೇ ಅಧಿಕೃತ ಘೋಷಣೆ ಹೊರಬಿದ್ದಿದ್ದು, ಪುಟಿನ್ ಸರ್ಕಾರದ ಈ ನಡೆಗೆ ನಿಖರವಾದ ಕಾರಣ ಮಾತ್ರ ಇನ್ನೂ ತಿಳಿದುಬಂದಿಲ್ಲ. ಕಳೆದ ಐದು ವರ್ಷಗಳಿಂದ ಸಿರಿಯಾದಲ್ಲಿ ಆಂತರಿಕ ಸಂಘರ್ಷ ಮಿತಿ ಮೀರಿದ್ದು, ಇಸ್ಲಾಮಿಕ್ ಸ್ಟೇಟ್ ಉಗ್ರರು ಸಿರಿಯಾ ಸರ್ಕಾರಕ್ಕೆ ತಲೆನೋವಾಗಿ ಪರಿಣಿಸಿದ್ದಾರೆ. ಇಂತಹ ಸದಂರ್ಭದಲ್ಲಿ ಪುಟಿನ್ ಸರ್ಕಾರ ಅಲ್ಲಿನ ಅಧ್ಯಕ್ಷ ಬಶರ್-ಅಲ್-ಅಸಾದ್ ಬೆ೦ಬಲಿಸಿ ಸಿರಿಯಾಕ್ಕೆ ತನ್ನ ಸೇನೆಯನ್ನು ರವಾನೆ ಮಾಡಿತ್ತು. ಕಳೆದ ಸೆಪ್ಟೆ೦ಬರ್‍ನಲ್ಲಿ ಐಸಿಸ್ ಉಗ್ರರನ್ನು ಗುರಿಯಾಗಿರಿಸಿ ವೈಮಾನಿಕ ಬಾ೦ಬ್ ದಾಳಿ ಕೂಡ ನಡೆಸಲಾಗಿತ್ತು.
ಆದರೆ ಇದೀಗ ಸೇನೆಯನ್ನು ಹಿಂಪಡೆಯಲು ರಷ್ಯಾ ಸರ್ಕಾರ ನಿರ್ಧರಿಸಿದ್ದು, ಇದರ ಮೊದಲ ಹ೦ತವಾಗಿ, ಮ್ಯೆಮ್ ವಾಯುನೆಲೆಯಲ್ಲಿರುವ ತನ್ನ ದೂರಗಾಮಿ ದಾಳಿ ನಡೆಸುವ ಸಾಮರ್ಥ್ಯದ ವಿಮಾನಗಳನ್ನು ಮತ್ತು ತ೦ತ್ರಜ್ಞರನ್ನು ಹಿ೦ದಕ್ಕೆ ಕರೆಸಿಕೊಳ್ಳುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ರ ಸೇನಾ ಸಲಹೆಗಾರ ಹಾಗೂ ರಕ್ಷಣಾ ಇಲಾಖೆ ವಕ್ತಾರ ಡಿಮಿಟ್ರಿ ಪೆಶ್ಕೋವ್ ತಿಳಿಸಿದ್ದಾರೆ. ಉಳಿದ೦ತೆ ಸಿರಿಯಾದ ವಾಯು ಮತ್ತು ನೌಕಾನೆಲೆಗೆ ನೀಡಿರುವ ಸೌಲಭ್ಯಗಳನ್ನು ಮು೦ದುವರಿಸುವುದಾಗಿ ತಿಳಿಸಿದ್ದಾರೆ.
ಸಿರಿಯಾ-ರಷ್ಯಾ ಶಾ೦ತಿ ಮಾತುಕತೆಗೆ ಬಲ
ಸಿರಿಯಾದ ಬಹುತೇಕ ಭಾಗಗಳಲ್ಲಿ ರಷ್ಯಾ ಸೈನಿಕರು ಇಸಿಸ್ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಅವರನ್ನು ಕೂಡಲೇ ಹಿಂಪಡೆಯುತ್ತೇವೆ ಮತ್ತು ಬಾ೦ಬ್ ದಾಳಿಯನ್ನು ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಸೋಮವಾರ ರಾತ್ರಿ ರಷ್ಯಾ ಅಧ್ಯಕ್ಷ ಪುಟಿನ್ ಪ್ರಕಟಿಸಿದ್ದರು. ಸಿರಿಯಾದಲ್ಲಿನ ಹಿ೦ಸಾಚಾರವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಜಿನೇವಾದಲ್ಲಿ ಶಾ೦ತಿ ಮಾತುಕತೆ ನಡೆಯುತ್ತಿದ್ದು, ಪ್ರಜಾಸತ್ತಾತ್ಮಕ ಸರ್ಕಾರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸಿರಿಯಾ ಅಧ್ಯಕ್ಷ ಅಸಾದ್ ಮೇಲೆ ಮತ್ತಷ್ಟು ಒತ್ತಡ ಹೇರಲು ವಿಶ್ವದ ಪ್ರಮುಖ ರಾಷ್ಟ್ರಗಳು ಮು೦ದಾಗಿವೆ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ರಷ್ಯಾ ಸರ್ಕಾರವು ಸೇನೆ ಹಿ೦ಪಡೆಯುವ ಮೂಲಕ ಗೊ೦ದಲವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಅದು ಅತ್ಯುತ್ತಮ ನಡೆ ಇಟ್ಟಿದೆ ಎ೦ದು ಹೇಳಲಾಗುತ್ತಿದೆ.
ಸೇನೆ ಹಿಂಪಡೆದ ಬೆನ್ನಲ್ಲೇ ಒಬಾಮ-ಪುಟಿನ್ ಮಾತುಕತೆ
ಅತ್ತ ರಷ್ಯಾ ಸರ್ಕಾರ ಸಿರಿಯಾದಿಂದ ಸೇನೆ ಹಿ೦ಪಡೆಯುವ ಘೋಷಣೆ ಪ್ರಕಟಿಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ದೂರವಾಣಿಯಲ್ಲಿ ಪುಟಿನ್ ರೊಂದಿಗೆ ಮಾತುಕತೆ ನಡೆಸಿದರು. ಸಿರಿಯಾದಲ್ಲಿ ಬ೦ಧಿತರಾಗಿರುವ ಯುದ್ಧ ಕೈದಿಗಳನ್ನು ಬಿಡುಗಡೆಗೊಳಿಸುವ೦ತೆ ಒಬಾಮ ಸಲಹೆ ನೀಡಿದರು ಎ೦ದು ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ. ಸೇನೆ ಹಿ೦ಪಡೆಯುವ ರಷ್ಯಾ ನಿಧಾ೯ರವನ್ನು ವಿಶ್ವಸ೦ಸ್ಥೆಯ ಭದ್ರತಾ ಸಮಿತಿ ಕೂಡ ಸ್ವಾಗತಿಸಿದೆ ಎಂದು ತಿಳಿದುಬಂದಿದೆ.
ಅಧ್ಯಕ್ಷರಾಗಿ ಅಸಾದ್; ರಷ್ಯಾ ಬೆಂಬಲ
ಇನ್ನು ಸಿರಿಯಾದಲ್ಲಿ ಭುಗಿಲೆದ್ದಿರುವ ಆಂತರಿಕ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಸಿರಿಯಾ ಅಧ್ಯಕ್ಷ ಅಸಾದ್ ಅವರು ಈ ಹಿಂದೆ ಅಮಾಯಕರ ಮೇಲೆ ರಾಸಾಯನಿಕ ಅಸ್ತ್ರಗಳನ್ನು ಬಳಸಿ ದಾಳಿ ನಡೆಸಿದ್ದರು. ಇದು ದೊಡ್ಡಣ್ಣ ಅಮೆರಿಕೆ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸಿರಿಯಾ ಅಧ್ಯಕ್ಷ ಅಸಾದ್ ಪದಚ್ಯುತಿಗೆ ಅಮೆರಿಕ ಪಟ್ಟು ಹಿಡಿದಿತ್ತು. ಆದರೆ ಯಾವಾಗ ರಷ್ಯಾ ಅಸಾದ್ ಬೆಂಬಲಕ್ಕೆ ನಿಂತು ತನ್ನ ಸೇನೆಯನ್ನು ಸಿರಿಯಾಕ್ಕೆ ರವಾನಿಸಿತೋ ಆಗ ಅಮೆರಿಕ ಮತ್ತೆಗಾಯಿತು. ಅಸಾದ್ ರನ್ನು ಪದಚ್ಯುತಿಗೊಳಿಸುವ ವಿಚಾರದಲ್ಲಿ ಕೆಲ ತಿ೦ಗಳಿ೦ದ ಅಮೆರಿಕ ತನ್ನ ನಿಲುವಿನಲ್ಲಿ ಸಡಿಲಗೊಳಿಸಿದೆ. ಮತ್ತೊ೦ದೆಡೆ ಪುತಿನ್ ಜತೆಗೆ ಅಸಾದ್ ಉತ್ತಮ ಬಾ೦ಧವ್ಯ ಕಾಪಾಡಿ ಕೊ೦ಡಿರುವ ಹಿನ್ನೆಲೆಯಲ್ಲಿ ಅವರೇ ಮು೦ದಿನ ಅಧ್ಯಕ್ಷರಾಗಿಯೂ ಮು೦ದುವರಿಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


