11/9 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!
ಗಾಜಾಕ್ಕಾಗಿ ಪ್ರತೀಕಾರ ತೀರಿಸಿಕೊಳ್ಳಲು ನಾನು ಇದನ್ನು ಮಾಡಿದೆ. ಹುತಾತ್ಮನಾಗಿ ಸಾಯಲು ಬಯಸಿದ್ದೆ ಎಂದು ಹಮಾಮ್ ಅಲ್-ಹಮ್ಮಾಮಿ, ಯುಎಇ ತನಿಖಾಧಿಕಾರಿಗಳ ವಿಚಾರಣೆ ವೇಳೆ ಹೇಳಿದ್ದಾನೆ.

ದುಬೈ: ಇತ್ತೀಚೆಗೆ ದುಬೈನಿಂದ ಇಸ್ರೇಲ್‌ನ ಟೆಲ್ ಅವಿವ್‌ಗೆ ಹೊರಟಿದ್ದ ಫ್ಲೈದುಬೈ (flydubai) ವಾಣಿಜ್ಯ ವಿಮಾನವನ್ನು ಆಕಾಶದಲ್ಲೇ ಪತನಗೊಳಿಸಲು ಯತ್ನಿಸಿದ್ದ ಒಮಾನ್ ಮೂಲದ ಸಹ-ಪೈಲಟ್ ಜಂಟಿ ತನಿಖಾಧಿಕಾರಿಗಳ ಮುಂದೆ ಆಘಾತಕಾರಿ ಸತ್ಯವನ್ನು ಬಾಯಿಬಿಟ್ಟಿದ್ದಾನೆ.
ಗಾಜಾ ಮೇಲಿನ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಮತ್ತು ತಾನು ಹುತಾತ್ಮನಾಗಲು (Martyr) ಈ ಭಯೋತ್ಪಾದನಾ ಕೃತ್ಯಕ್ಕೆ ಕೈಹಾಕಿದ್ದೆ ಎಂದು ತನಿಖಾ ಸಂಸ್ಥೆಗಳ ಎದುರು ಒಪ್ಪಿಕೊಂಡಿದ್ದಾನೆಂದು ಇಸ್ರೇಲಿ ಆನ್‌ಲೈನ್ ಸುದ್ದಿ ಪೋರ್ಟಲ್ ಮಾಕೊ ವರದಿ ಮಾಡಿದೆ.
ಗಾಜಾಕ್ಕಾಗಿ ಪ್ರತೀಕಾರ ತೀರಿಸಿಕೊಳ್ಳಲು ನಾನು ಇದನ್ನು ಮಾಡಿದೆ. ಹುತಾತ್ಮನಾಗಿ ಸಾಯಲು ಬಯಸಿದ್ದೆ ಎಂದು ಹಮಾಮ್ ಅಲ್-ಹಮ್ಮಾಮಿ, ಯುಎಇ ತನಿಖಾಧಿಕಾರಿಗಳ ವಿಚಾರಣೆ ವೇಳೆ ಹೇಳಿದ್ದಾನೆ ಎನ್ನಲಾಗಿದೆ.
ಅಲ್-ಹಮಾಮಿಯನ್ನು ಕಳೆದ ವರ್ಷ ಒಮಾನ್‌ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಿಂದ ಉಗ್ರರ ವಿಚಾರಧಾರೆಗಳ ಕುರಿತು ಉಂಟಾದ ಆತಂಕದ ಹಿನ್ನೆಲೆಯಲ್ಲಿ ತೆಗೆದುಹಾಕಲಾಗಿತ್ತು ಎಂಬ ವರದಿಗಳೂ ಇದೀಗ ಹೊರಬಿದ್ದಿವೆ.
ಸಿಎನ್‌ಎನ್ ವರದಿ ಪ್ರಕಾರ, ಆತನ ಹೆಸರಿನಲ್ಲಿದ್ದ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಇಸ್ರೇಲಿ ವಿಮಾನಗಳ ಕಾಕ್‌ಪಿಟ್ ದೃಶ್ಯಗಳು ಮತ್ತು ಅಲ್-ಖೈದಾ ಸಂಘಟನೆಯ ಪ್ರಮುಖರ ಚಿತ್ರಗಳು ಹಾಗೂ ಮಾಹಿತಿಗಳು ಕಾಣಿಸಿಕೊಂಡಿದ್ದವು ಎಂದು ತಿಳಿದುಬಂದಿದೆ.
ಈ ಹಿಂದೆ ಹೇಳಿಕೆ ನೀಡಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಸಹ ಪೈಲಟ್ ತೀವ್ರ ಇಸ್ಲಾಮಿಸ್ಟ್ ಸಿದ್ಧಾಂತದಿಂದ ಪ್ರಭಾವಿತನಾಗಿರಬಹುದು ಎಂದು ಹೇಳಿದ್ದರು.
ಸೆಪ್ಟೆಂಬರ್ 30ರಂದು 170ಕ್ಕೂ ಹೆಚ್ಚು ಪ್ರಯಾಣಿಕರು, ಬಹುತೇಕ ಇಸ್ರೇಲಿ ನಾಗರಿಕರು, ಫ್ಲೈದುಬೈ ವಿಮಾನ 1073ರಲ್ಲಿ ಪ್ರಯಾಣಿಸುತ್ತಿದ್ದರು. ವಿಮಾನ ಟೆಲ್ ಅವೀವ್‌ನಲ್ಲಿ ಇಳಿಯಲು ಒಂದು ಗಂಟೆಗೂ ಕಡಿಮೆ ಸಮಯವಿದ್ದಾಗ ಅಲ್-ಹಮ್ಮಾಮಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ದಾಳಿ ನಡೆಸಿದ್ದಾನೆ. ವಿಮಾನ ಕೆಲವೇ ಸೆಕೆಂಡ್‌ಗಳಲ್ಲಿ 17,000 ಅಡಿಗೂ ಹೆಚ್ಚು ಎತ್ತರದಿಂದ ಕುಸಿದಿರುವುದು ವಿಮಾನ ಸಂಚಾರದ ಮಾಹಿತಿಯಿಂದ ತಿಳಿದುಬಂದಿದೆ.
ಕ್ಯಾಪ್ಟನ್ ಮಚ್ಚಾರ್ ದಾಳಿಯನ್ನು ಎದುರಿಸಿ ಸಹ ಪೈಲಟ್‌ನನ್ನು ತಡೆದಿದ್ದಾರೆ. ಬಳಿಕ ಕಾಕ್‌ಪಿಟ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾಗಿದ್ದು, ಇದರಿಂದ ಒಳಗೆ ನಡೆಯುತ್ತಿದ್ದ ಘಟನೆ ಪ್ರಯಾಣಿಕರಿಗೆ ಗೋಚರಿಸಿದೆ.
ನಂತರ ಪ್ರಯಾಣಿಕರು ಒಟ್ಟಾಗಿ ಅಲ್-ಹಮ್ಮಾಮಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ವಿಮಾನದಲ್ಲಿದ್ದ ಕರ್ತವ್ಯದಲ್ಲಿರದ ಪೈಲಟ್‌ಗಳು ವಿಮಾನದ ನಿಯಂತ್ರಣವನ್ನು ವಹಿಸಿಕೊಂಡು ಸಂಭವಿಸಬಹುದಾಗಿದ್ದ ಭೀಕರ ಅಪಘಾತವನ್ನು ತಪ್ಪಿಸಿದ್ದಾರೆ.
ಫ್ಲೈದುಬೈ ಘಟನೆಗೆ ಸಂಬಂಧಿಸಿದ ತನಿಖೆಯ ನೇತೃತ್ವ ವಹಿಸಿರುವ ಯುನೈಟೆಡ್ ಅರಬ್ ಎಮಿರೇಟ್ಸ್, ಸಹ ಪೈಲಟ್ ಕಾಕ್‌ಪಿಟ್‌ನಲ್ಲಿದ್ದ ತುರ್ತು ಪರಿಸ್ಥಿತಿಯಲ್ಲಿ ಬಳಸುವ ಕೊಡಲಿಯಿಂದ ಕ್ಯಾಪ್ಟನ್ ಮೇಲೆ ದಾಳಿ ನಡೆಸಿ ವಿಮಾನದ ನಿಯಂತ್ರಣ ಪಡೆಯಲು ಯತ್ನಿಸಿದ್ದಾನೆ. ಈ ಕೃತ್ಯವನ್ನು “ಉಗ್ರ ದಾಳಿ” ಎಂದು ಯುಎಇ ಅಧಿಕಾರಿಗಳು ತಿಳಿಸಿದ್ದಾರೆ.
ಇಟಲಿಯ ಕೊರಿಯೆರೆ ಡೆಲ್ಲಾ ಸೆರಾ ಪತ್ರಿಕೆ ವರದಿ ಪ್ರಕಾರ, ಕ್ಯಾಪ್ಟನ್ ಮಚ್ಚಾರ್ ಅವರನ್ನು ಗುಪ್ತವಾಗಿ ಹತ್ಯೆ ಮಾಡಿ, ವಿಮಾನದ ಎಂಜಿನ್‌ಗಳನ್ನು ಸ್ಥಗಿತಗೊಳಿಸಿ ಟೆಲ್ ಅವೀವ್‌ನಲ್ಲಿರುವ ಕಟ್ಟಡವೊಂದಕ್ಕೆ ವಿಮಾನವನ್ನು ಅಪ್ಪಳಿಸುವ ಯೋಜನೆಯನ್ನು ಅಲ್-ಹಮ್ಮಾಮಿ ರೂಪಿಸಿದ್ದ ಎನ್ನಲಾಗಿದೆ.
ಇಸ್ರೇಲಿ ಮಾಧ್ಯಮಗಳ ವರದಿ ಪ್ರಕಾರ, ಜುಲೈನಲ್ಲೇ ದಾಳಿ ನಡೆಸಲು ಅಲ್-ಹಮ್ಮಾಮಿ ಯೋಚಿಸಿದ್ದ. ಆದರೆ ವಿಮಾನದ ಸಿಬ್ಬಂದಿಯೊಬ್ಬರೊಂದಿಗೆ ಸ್ನೇಹ ಹೊಂದಿದ್ದ ಕಾರಣ ಕೊನೆಯ ಕ್ಷಣದಲ್ಲಿ ಆ ಯೋಜನೆಯನ್ನು ಕೈಬಿಟ್ಟಿದ್ದ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



