ಕ್ರೀಡೆ

Cristiano Ronaldo: ಪೋರ್ಚುಗಲ್​ ಟ್ರೋಫಿ ಕನಸು ಭಗ್ನ; ವಿಶ್ವಕಪ್​ಗೆ ಫುಟ್ಬಾಲ್‌ ಲೆಜೆಂಡ್ ರೊನಾಲ್ಡೊ ಕಣ್ಣೀರಿನ ವಿದಾಯ; Video

ಪಂದ್ಯದ ಅಂತಿಮ ಸೀಟಿ ಮೊಳಗಿದ ಬಳಿಕ ಸೋಲಿನ ನೋವಿನಿಂದ ಕಣ್ಣೀರಿಟ್ಟಿದ್ದ ರೊನಾಲ್ಡೊ ಅವರ ಬಳಿಗೆ ಸ್ಪೇನ್‌ನ ಯುವ ತಾರೆ ಲಮಿನ್ ಯಮಾಲ್ ತೆರಳಿ ಅವರನ್ನು ಅಪ್ಪಿಕೊಂಡು ಸಾಂತ್ವನ ಹೇಳಿದರು. ಈ ಹೃದಯಸ್ಪರ್ಶಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು.

Cristiano Ronaldo: ಪೋರ್ಚುಗಲ್​ ಟ್ರೋಫಿ ಕನಸು ಭಗ್ನ; ವಿಶ್ವಕಪ್​ಗೆ ಫುಟ್ಬಾಲ್‌ ಲೆಜೆಂಡ್ ರೊನಾಲ್ಡೊ ಕಣ್ಣೀರಿನ ವಿದಾಯ; Video
ಸ್ಪೇನ್ ವಿರುದ್ಧ ಪೋರ್ಚುಗಲ್ ಸೋತ ಬಳಿಕ ಕಣ್ಣೀರಿಟ್ಟ ರೊನಾಲ್ಡೊಗೆ ಲಮಿನ್ ಯಮಾಲ್ ಸಾಂತ್ವನ
Published On :

ಫಿಫಾ ವಿಶ್ವಕಪ್ ಗೆಲ್ಲುವ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕನಸು ಭಗ್ನಗೊಂಡಿದೆ. ಪ್ರೀಕ್ವಾರ್ಟರ್ ಪಂದ್ಯದಲ್ಲಿ ಪೋರ್ಚುಗಲ್ ತಂಡವು ಸ್ಪೇನ್ ವಿರುದ್ಧ 1-0 ಗೋಲುಗಳ ಅಂತರದಲ್ಲಿ ಸೋಲು ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿತು. ಪಂದ್ಯದ ಬಳಿಕ ನಡೆದ ಭಾವನಾತ್ಮಕ ಕ್ಷಣವೊಂದು ವಿಶ್ವದಾದ್ಯಂತ ಗಮನ ಸೆಳೆಯಿತು.

ಪಂದ್ಯದ ಅಂತಿಮ ಸೀಟಿ ಮೊಳಗಿದ ಬಳಿಕ ಸೋಲಿನ ನೋವಿನಿಂದ ಕಣ್ಣೀರಿಟ್ಟಿದ್ದ ರೊನಾಲ್ಡೊ ಅವರ ಬಳಿಗೆ ಸ್ಪೇನ್‌ನ ಯುವ ತಾರೆ ಲಮಿನ್ ಯಮಾಲ್ ತೆರಳಿ ಅವರನ್ನು ಅಪ್ಪಿಕೊಂಡು ಸಾಂತ್ವನ ಹೇಳಿದರು. ಈ ಹೃದಯಸ್ಪರ್ಶಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು.

ಡಲ್ಲಾಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಹೆಚ್ಚುವರಿ ಸಮಯದಲ್ಲಿ ಮಿಕೆಲ್ ಮೆರಿನೊ ಗಳಿಸಿದ ನಿರ್ಣಾಯಕ ಗೋಲಿನ ನೆರವಿನಿಂದ ಸ್ಪೇನ್ ಕ್ವಾರ್ಟರ್‌ಫೈನಲ್ ಪ್ರವೇಶಿಸಿತು. ಇದೇ ಗೋಲು ಪೋರ್ಚುಗಲ್‌ನ ವಿಶ್ವಕಪ್ ಅಭಿಯಾನಕ್ಕೆ ತೆರೆ ಎಳೆಯಿತು.

ಸ್ಪೇನ್ ಆಟಗಾರರು ಗೆಲುವಿನ ಸಂಭ್ರಮದಲ್ಲಿದ್ದಾಗ, ಯಮಾಲ್ ಕೆಲ ಕ್ಷಣ ಸಂಭ್ರಮದಿಂದ ದೂರ ಸರಿದು ರೊನಾಲ್ಡೊ ಅವರನ್ನು ಸಮಾಧಾನಪಡಿಸಿದರು. ಬಳಿಕ ಇದೇ ತಮ್ಮ ಕೊನೆಯ ವಿಶ್ವಕಪ್ ಎಂದು ರೊನಾಲ್ಡೊ ದೃಢಪಡಿಸಿದರು.

ಈ ಪಂದ್ಯವನ್ನು ಎರಡು ತಲೆಮಾರುಗಳ ನಡುವಿನ ಹಣಾಹಣಿಯಾಗಿ ಬಣ್ಣಿಸಲಾಗಿತ್ತು. ವಿಶ್ವ ಫುಟ್‌ಬಾಲ್‌ನ ಉದಯೋನ್ಮುಖ ತಾರೆ ಯಮಾಲ್ ಮತ್ತು ಸಾರ್ವಕಾಲಿಕ ಅಗ್ರ ಗೋಲುಗಾರ ರೊನಾಲ್ಡೊ ಒಂದೇ ಮೈದಾನದಲ್ಲಿ ಮುಖಾಮುಖಿಯಾಗಿದ್ದರು.

ರೊನಾಲ್ಡೊ ಪೂರ್ಣ 90 ನಿಮಿಷ ಆಡಿದರೂ ಪಂದ್ಯದ ಮೇಲೆ ನಿರ್ಣಾಯಕ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಅವರ ಅತ್ಯುತ್ತಮ ಪ್ರಯತ್ನವನ್ನು ಸ್ಪೇನ್ ಗೋಲ್‌ಕೀಪರ್ ಉನೈ ಸಿಮೋನ್ ಸುಲಭವಾಗಿ ತಡೆದರು. ನಂತರ ಹೆಚ್ಚುವರಿ ವೇಳೆಯಲ್ಲಿ ಮೆರಿನೊ ಗಳಿಸಿದ ಗೋಲು ಪಂದ್ಯದ ಫಲಿತಾಂಶ ನಿರ್ಧರಿಸಿತು.

ಈ ಸೋಲಿನೊಂದಿಗೆ 2016ರ ಯುರೋಪಿಯನ್ ಚಾಂಪಿಯನ್‌ಶಿಪ್ ಹಾಗೂ 2019 ಮತ್ತು 2025ರ ಯುಇಎಫ್‌ಎ ನೇಷನ್ಸ್ ಲೀಗ್ ಪ್ರಶಸ್ತಿಗಳನ್ನು ಗೆದ್ದಿರುವ ರೊನಾಲ್ಡೊ ಅವರ ಟ್ರೋಫಿ ಪಟ್ಟಿಗೆ ವಿಶ್ವಕಪ್ ಸೇರಿಸಿಕೊಳ್ಳುವ ಕನಸು ನನಸಾಗಲಿಲ್ಲ.

'ಭವಿಷ್ಯದ ಬಗ್ಗೆ ಈಗ ಯಾವುದೇ ತೀರ್ಮಾನ ಇಲ್ಲ'

ಪಂದ್ಯದ ಬಳಿಕ ಮಾತನಾಡಿದ ರೊನಾಲ್ಡೊ, ಸೋಲನ್ನು ಒಪ್ಪಿಕೊಳ್ಳುವುದು ತುಂಬಾ ಕಷ್ಟ ಎಂದು ಹೇಳಿದರೂ, ತಮ್ಮ ಅಂತಾರಾಷ್ಟ್ರೀಯ ಭವಿಷ್ಯದ ಬಗ್ಗೆ ತಕ್ಷಣ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ರೀತಿಯಲ್ಲಿ ವಿಶ್ವಕಪ್‌ಗೆ ವಿದಾಯ ಹೇಳುತ್ತಿರುವುದು ನನಗೆ ತುಂಬಾ ದುಃಖ ತಂದಿದೆ. ನಾನು ನನ್ನಿಂದಾದ ಎಲ್ಲ ಪ್ರಯತ್ನ ಮಾಡಿದ್ದೇನೆ. ಮನಸ್ಸಿಗೆ ಯಾವುದೇ ಬೇಸರವಿಲ್ಲ. ಹೌದು, ಇದು ನನ್ನ ಕೊನೆಯ ವಿಶ್ವಕಪ್. ಕುಟುಂಬದೊಂದಿಗೆ ಸಮಯ ಕಳೆಯುತ್ತೇನೆ ಮತ್ತು ಎಲ್ಲವನ್ನೂ ಶಾಂತವಾಗಿ ಆಲೋಚಿಸುತ್ತೇನೆ. ಯಾವುದೇ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಹೇಳಿದರು.

ತಮ್ಮ ಭವಿಷ್ಯದ ಕುರಿತ ಚರ್ಚೆ ಪೋರ್ಚುಗಲ್ ತಂಡದ ಅಭಿಯಾನವನ್ನು ಮರೆಮಾಚಬಾರದು ಎಂದೂ ಅವರು ತಿಳಿಸಿದರು. ನಾನು ಕ್ಷಣಿಕ ಭಾವೋದ್ವೇಗದಲ್ಲಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದರು.

ಪೋರ್ಚುಗಲ್ ರಾಷ್ಟ್ರೀಯ ತಂಡದೊಂದಿಗೆ ತಮ್ಮ ಸಾಧನೆಗಳನ್ನೂ ಅವರು ನೆನಪಿಸಿಕೊಂಡರು. ನಾನು ಪೋರ್ಚುಗಲ್ ಪರ ಮೂರು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿದ್ದೇನೆ. ಕ್ರಿಸ್ಟಿಯಾನೊ ರೊನಾಲ್ಡೊಗೂ ಮೊದಲು ಪೋರ್ಚುಗಲ್ ಒಂದೇ ಒಂದು ಪ್ರಮುಖ ಪ್ರಶಸ್ತಿಯನ್ನೂ ಗೆದ್ದಿರಲಿಲ್ಲ. 2016ರ ಯುರೋಪಿಯನ್ ಚಾಂಪಿಯನ್‌ಶಿಪ್ ನಮ್ಮ ರಾಷ್ಟ್ರೀಯ ತಂಡದ ಅತ್ಯಂತ ದೊಡ್ಡ ಸಾಧನೆ. ಅದು ನನಗೆ ವಿಶ್ವಕಪ್ ಗೆಲುವಿನಷ್ಟೇ ಮಹತ್ವದ್ದಾಗಿದೆ ಎಂದು ಹೇಳಿದರು.

ರೌಂಡ್ ಆಫ್ 16ರ ಸೋಲಿನೊಂದಿಗೆ ಅಧಿಕಾರಾವಧಿ ಮುಗಿಸಿದ ಮುಖ್ಯ ಕೋಚ್ ರಾಬರ್ಟೊ ಮಾರ್ಟಿನೆಜ್ ಅವರಿಗೂ ರೊನಾಲ್ಡೊ ಧನ್ಯವಾದ ಅರ್ಪಿಸಿದರು.

ಅವರೊಂದಿಗೆ ಕೆಲಸ ಮಾಡುವುದು ನನಗೆ ತುಂಬಾ ಇಷ್ಟವಾಗಿತ್ತು. ಅವರು ಅತ್ಯುತ್ತಮ ಕೋಚ್ ಹಾಗೂ ಅದ್ಭುತ ವ್ಯಕ್ತಿ. ಪೋರ್ಚುಗಲ್‌ಗಾಗಿ ಅವರು ಮಾಡಿದ ಸೇವೆ ಪ್ರಶಂಸನೀಯ. ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಮತ್ತು ಮುಂದಿನ ಜೀವನಕ್ಕೆ ಶುಭ ಹಾರೈಸುತ್ತೇನೆ ಎಂದು ರೊನಾಲ್ಡೊ ಹೇಳಿದರು.

ದೊಡ್ಡ ಟೂರ್ನಿಯಿಂದ ಹೊರಬೀಳುವುದು ಯಾವಾಗಲೂ ನೋವಿನ ಸಂಗತಿ. ಇದು ವಿಶ್ವಕಪ್. ನಮ್ಮ ತಂಡ ಉತ್ತಮವಾಗಿ ಆಡಿತ್ತು. ಪಂದ್ಯ ಯಾವ ದಿಕ್ಕಿಗೂ ತಿರುಗಬಹುದಿತ್ತು. ಆದರೆ ಅದೇ ಫುಟ್‌ಬಾಲ್. ಈಗ ನಾವು ಮತ್ತೆ ಎದ್ದು ಮುಂದೆ ಸಾಗಬೇಕು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.