ದೇಶ

ಸಚಿವರಿಗೆ ಸ್ವಾಗತ, ಹೂಮಳೆಯಲ್ಲಿ JDU ನಾಯಕ ತಲ್ಲೀನ; ಕುತ್ತಿಗೆಯಲ್ಲಿದ್ದ 7 ಲಕ್ಷ ರೂ ಮೌಲ್ಯದ ಚಿನ್ನದ ಸರ ಎಗರಿಸಿದ ಖತರ್ನಾಕ್ ಕಳ್ಳ! Video

ನಿಶಾಂತ್ ಕುಮಾರ್ ಅವರ ಸ್ವಾಗತಕ್ಕೆ ಒಂದು ಕಡೆ ಹೂಮಳೆ ಸುರಿಯುತ್ತಿದ್ದರೆ, ಮತ್ತೊಂದೆಡೆ ಜನಜಂಗುಳಿಯನ್ನೇ ಬಳಸಿಕೊಂಡ ಖದೀಮನೊಬ್ಬ ಜೆಡಿಯು (JDU) ನಾಯಕನ ಕುತ್ತಿಗೆಯಿಂದ ಬರೋಬ್ಬರಿ 7 ಲಕ್ಷ ಮೌಲ್ಯದ ಚಿನ್ನದ ಸರ ಎಗರಿಸಿದ್ದಾನೆ.

ಸಚಿವರಿಗೆ ಸ್ವಾಗತ, ಹೂಮಳೆಯಲ್ಲಿ JDU ನಾಯಕ ತಲ್ಲೀನ; ಕುತ್ತಿಗೆಯಲ್ಲಿದ್ದ 7 ಲಕ್ಷ ರೂ ಮೌಲ್ಯದ ಚಿನ್ನದ ಸರ ಎಗರಿಸಿದ ಖತರ್ನಾಕ್ ಕಳ್ಳ! Video
7 ಲಕ್ಷ ರೂ ಮೌಲ್ಯದ ಚಿನ್ನದ ಸರ ಕಳೆದುಕೊಂಡ ಜೆಡಿಯು ನಾಯಕ
Published On :

ಮುಜಫ್ಫರ್‌ಪುರ: ಸಚಿವರೊಬ್ಬರ ಸ್ವಾಗತದ ವೇಳೆ ನಾಯಕರು ಹೂ ಎರಚುವುದರಲ್ಲಿ ತಲ್ಲೀನರಾಗಿದ್ದ ವೇಳೆ ನಾಯಕನೊಬ್ಬನ ಕುತ್ತಿಗೆಯಲ್ಲಿದ್ದ 7 ಲಕ್ಷ ರೂ ಮೌಲ್ಯದ ಚಿನ್ನದ ಸರವನ್ನು ಖತರ್ನಾಕ್ ಕಳ್ಳನೋರ್ವ ಕದ್ದು ಪರಾರಿಯಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಹೌದು.. ಬಿಹಾರ ಸರ್ಕಾರದ ಆರೋಗ್ಯ ಸಚಿವ ಹಾಗೂ ಮಾಜಿ ಸಿಎಂ ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್ ಬಿಹಾರದ ಮುಜಫ್ಫರ್‌ಪುರ ಜಿಲ್ಲೆಗೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ.

ನಿಶಾಂತ್ ಕುಮಾರ್ ಅವರ ಸ್ವಾಗತಕ್ಕೆ ಒಂದು ಕಡೆ ಹೂಮಳೆ ಸುರಿಯುತ್ತಿದ್ದರೆ, ಮತ್ತೊಂದೆಡೆ ಜನಜಂಗುಳಿಯನ್ನೇ ಬಳಸಿಕೊಂಡ ಖದೀಮನೊಬ್ಬ ಜೆಡಿಯು (JDU) ನಾಯಕನ ಕುತ್ತಿಗೆಯಿಂದ ಬರೋಬ್ಬರಿ 7 ಲಕ್ಷ ಮೌಲ್ಯದ ಚಿನ್ನದ ಸರ ಎಗರಿಸಿದ್ದಾನೆ.

ಈ ಹೈಪ್ರೊಫೈಲ್ ಕಳ್ಳತನದ ಘಟನೆ ಬಿಹಾರದ ಮುಜಫ್ಫರ್‌ಪುರ ಜಿಲ್ಲೆಯ ತುರ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಸಕ್ರಿ ಚೌಕ್‌ನಲ್ಲಿ ನಡೆದಿದೆ.

ಆಗಿದ್ದೇನು?

ಮೂಲಗಳ ಪ್ರಕಾರ ಸೆಪ್ಟೆಂಬರ್ 3ರಂದು ಬಿಹಾರ ಆರೋಗ್ಯ ಸಚಿವ ನಿಶಾಂತ್ ಕುಮಾರ್ ಮುಜಫ್ಫರ್‌ಪುರಕ್ಕೆ ಆಗಮಿಸಿದ್ದರು. ಸಚಿವರ ಸ್ವಾಗತಕ್ಕಾಗಿ ಜೆಡಿಯು ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದರು.

ಸಚಿವರ ಬೆಂಗಾವಲು ಪಡಿ ಸಕ್ರಿ ಚೌಕ್‌ಗೆ ಬರುತ್ತಿದ್ದಂತೆ, ಸಚಿವರ ಕಾರು ನಿಲ್ಲುತ್ತಿದ್ದಂತೆಯೇ ಕಾರ್ಯಕರ್ತರು ಹೂಮಾಲೆ ಹಾಕಲು ಮುಗಿಬಿದ್ದರು. ಇದೇ ವೇಳೆ ಕುಢ್ನಿ ಬ್ಲಾಕ್‌ನ ಲದೌರಾ ನಿವಾಸಿ ಹಾಗೂ ಜೆಡಿಯು ನಾಯಕ ರಾಜೇಶ್ ಮಂಡಲ್ ಕೂಡ ಸಚಿವರನ್ನು ಸ್ವಾಗತಿಸಲು ಜನರ ಮಧ್ಯೆ ನುಗ್ಗಿ ಮುಂದೆ ಬಂದಿದ್ದರು.

ಸಚಿವರಿಗೆ ಮಾಲೆ ಹಾಕುವ ವೇಳೆ ಉಂಟಾದ ಭಾರೀ ಜನಜಂಗುಳಿಯನ್ನೇ ಬಳಸಿಕೊಂಡ ಖದೀಮನೊಬ್ಬ ರಾಜೇಶ್ ಮಂಡಲ್ ಅವರ ಕುತ್ತಿಗೆಯಲ್ಲಿದ್ದ ಬರೊಬ್ಬರಿ 7 ಲಕ್ಷ ಮೌಲ್ಯದ ಚಿನ್ನದ ಸರವನ್ನು ಎಗರಿಸಿದ್ದಾನೆ ಎನ್ನಲಾಗಿದೆ.

ಜನಜಂಗುಳಿ ಕಡಿಮೆಯಾಗುತ್ತಿದ್ದಂತೆಯೇ ಶಾಕ್! ಪೊಲೀಸ್ ದೂರು ದಾಖಲು

ಈ ಘಟನೆಯ ಕುರಿತು ರಾಜೇಶ್ ಮಂಡಲ್ ಮಾತನಾಡಿ, ತಾವು ಆರೋಗ್ಯ ಸಚಿವ ನಿಶಾಂತ್ ಕುಮಾರ್ ಅವರಿಗೆ ಮಾಲೆ ಹಾಕುತ್ತಿದ್ದ ಸಂದರ್ಭದಲ್ಲಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಳ್ಳತನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸ್ವಾಗತ ಸಮಾರಂಭ ಮುಗಿದು ಜನಜಂಗುಳಿ ಕಡಿಮೆಯಾದ ಬಳಿಕ ಕುತ್ತಿಗೆಯನ್ನು ಮುಟ್ಟಿದಾಗ ಸರ ಕಾಣೆಯಾಗಿರುವುದು ಅವರ ಗಮನಕ್ಕೆ ಬಂದಿದೆ. ತಕ್ಷಣ ಆತಂಕಗೊಂಡ ಅವರು ರಸ್ತೆಯಲ್ಲೇ ಅತ್ತಿತ್ತ ಓಡಾಡುತ್ತಾ ಚಿನ್ನದ ಸರವನ್ನು ಹುಡುಕಿದ್ದಾರೆ.

ಆದರೆ ಸರ ಪತ್ತೆಯಾಗದ ಹಿನ್ನೆಲೆಯಲ್ಲಿ ತುರ್ಕಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ರಾಜೇಶ್ ಮಂಡಲ್ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಪೊಲೀಸರು ಅಪರಿಚಿತ ಕಳ್ಳರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಸಿಸಿಟಿವಿ ದೃಶ್ಯ ಪರಿಶೀಲನೆ

ಘಟನೆಯನ್ನು ತುರ್ಕಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಹಾಗೂ ಸಬ್‌ಇನ್‌ಸ್ಪೆಕ್ಟರ್ ಸೆಂಟು ಕುಮಾರ್ ಖಚಿತಪಡಿಸಿದ್ದಾರೆ. ಜೆಡಿಯು ನಾಯಕ ರಾಜೇಶ್ ಮಂಡಲ್ ಅವರಿಂದ ಚಿನ್ನದ ಸರ ಕಳ್ಳತನವಾಗಿರುವ ಕುರಿತು ದೂರು ಸ್ವೀಕರಿಸಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಚಿವರ ವಿಐಪಿ ಸಂಚಾರದ ವೇಳೆ ಚಿತ್ರೀಕರಿಸಲಾದ ವಿಡಿಯೋ ದೃಶ್ಯಗಳು ಹಾಗೂ ಸಕ್ರಿ ಚೌಕ್ ಮತ್ತು ಸುತ್ತಮುತ್ತ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಶಂಕಿತರನ್ನು ಗುರುತಿಸಿ, ಕಳವಾದ ಚಿನ್ನದ ಸರವನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.