'ಹಿಂದೂ ಧರ್ಮ ಒಂದು ಜೀವನ ಶೈಲಿ, ದೇವಾಲಯಕ್ಕೆ ಹೋಗೋದು ಕಡ್ಡಾಯವಲ್ಲ': Supreme Court
ಹಿಂದೂ ಆಗಿ ಉಳಿಯಲು ಕಡ್ಡಾಯವಾಗಿ ದೇವಾಲಯಕ್ಕೆ ಹೋಗುವುದು ಅಥವಾ ನಿರ್ದಿಷ್ಟ ವಿಧಿ-ವಿಧಾನಗಳನ್ನು ಪಾಲಿಸುವುದು ಅಗತ್ಯವಿಲ್ಲ.

ನವದೆಹಲಿ: ಹಿಂದೂ ಧರ್ಮ ಒಂದು ಜೀವನ ಶೈಲಿಯಾಗಿದ್ದು, ದೇವಾಲಯಕ್ಕೆ ಹೋಗುವುದು ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಇಡೀ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದ್ದ ಶಬರಿಮಲ ದೇಗುಲ (Sabarimala Temple) ವಿವಾದ ಸಂಬಂಧದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ರೀತಿ ಅಭಿಪ್ರಾಯಪಟ್ಟಿದ್ದು, ಹಿಂದೂ ಆಗಿ ಉಳಿಯಲು ಕಡ್ಡಾಯವಾಗಿ ದೇವಾಲಯಕ್ಕೆ ಹೋಗುವುದು ಅಥವಾ ನಿರ್ದಿಷ್ಟ ವಿಧಿ-ವಿಧಾನಗಳನ್ನು ಪಾಲಿಸುವುದು ಅಗತ್ಯವಿಲ್ಲ. ಮನೆಯೊಳಗೆ ಒಂದು ದೀಪ ಹಚ್ಚುವುದೇ ವ್ಯಕ್ತಿಯ ನಂಬಿಕೆಯನ್ನು ಸಾಬೀತುಪಡಿಸಲು ಸಾಕು ಎಂದು ಕೂಡ ಪೀಠ ತಿಳಿಸಿತು.
ವಿಚಾರಣೆ ವೇಳೆ, ಮಧ್ಯಪ್ರವೇಶಕರ ಪರ ವಾದ ಮಂಡಿಸಿದ ವಕೀಲ ಡಾ. ಜಿ ಮೋಹನ್ ಗೋಪಾಲ್, ಧಾರ್ಮಿಕ ಸಮುದಾಯಗಳ ಒಳಗಿನಿಂದಲೇ ಸಾಮಾಜಿಕ ನ್ಯಾಯಕ್ಕಾಗಿ ಬೇಡಿಕೆಗಳು ಉದ್ಭವಿಸುತ್ತಿವೆ ಎಂದು ಹೇಳಿದರು.
“ಹಿಂದೂ ಧರ್ಮವನ್ನು ಒಂದು ಧಾರ್ಮಿಕ ವರ್ಗವಾಗಿ ವ್ಯಾಖ್ಯಾನಿಸಲಾಯಿತು. ನಂತರ 1966ರಲ್ಲಿ, ವೇದಗಳನ್ನು ಧರ್ಮ ಮತ್ತು ತತ್ತ್ವಶಾಸ್ತ್ರದ ಎಲ್ಲಾ ವಿಷಯಗಳಲ್ಲಿ ಶ್ರೇಷ್ಠ ಪ್ರಾಧಿಕಾರವೆಂದು ಒಪ್ಪಿಕೊಳ್ಳುವವನೇ ಹಿಂದೂ ಎಂದು ಹೇಳಲಾಯಿತು. ಆದರೆ ಯಾರೂ ನನ್ನನ್ನು ಕೇಳಲಿಲ್ಲ. ನಮ್ಮಲ್ಲಿ ಯಾರೂ ಹಾಗೆ ಹೇಳಿಲ್ಲ. ನನಗೆ ವೇದ-ಉಪನಿಷತ್ತುಗಳಲ್ಲಿ ಅತ್ಯಂತ ಗೌರವವಿದೆ ಹಾಗೂ ಅವುಗಳ ಬಗ್ಗೆ ಅಪಾರ ಮೆಚ್ಚುಗೆಯೂ ಇದೆ. ಆದರೆ ಇಂದಿನ ದಿನದಲ್ಲಿ ಹಿಂದೂ ಎಂದು ವರ್ಗೀಕರಿಸಲ್ಪಟ್ಟ ಪ್ರತಿಯೊಬ್ಬರೂ ವೇದಗಳನ್ನು ಎಲ್ಲಾ ಆಧ್ಯಾತ್ಮಿಕ ಮತ್ತು ತತ್ತ್ವಶಾಸ್ತ್ರದ ವಿಷಯಗಳಲ್ಲಿ ಶ್ರೇಷ್ಠ ಪ್ರಾಧಿಕಾರವೆಂದು ಒಪ್ಪಿಕೊಳ್ಳುತ್ತಾರೆಯೇ?” ಎಂದು ಅವರು ಪ್ರಶ್ನಿಸಿದರು.
ಅವರ ವಾದ ಆಲಿಸಿದ ನ್ಯಾಯಮೂರ್ತಿ B. V. ನಾಗರತ್ನ ಅವರು, ಪೀಠದಲ್ಲಿದ್ದ ಏಕೈಕ ಮಹಿಳಾ ನ್ಯಾಯಮೂರ್ತಿಯಾಗಿ, “ಅದಕ್ಕಾಗಿಯೇ ಹಿಂದೂ ಧರ್ಮವನ್ನು ಜೀವನ ಶೈಲಿ ಎಂದು ಕರೆಯಲಾಗುತ್ತದೆ. ಹಿಂದೂ ಆಗಿ ಉಳಿಯಲು ಕಡ್ಡಾಯವಾಗಿ ದೇವಾಲಯಕ್ಕೆ ಹೋಗುವುದು ಅಥವಾ ವಿಧಿವಿಧಾನಗಳನ್ನು ಮಾಡುವುದು ಅಗತ್ಯವಿಲ್ಲ. ಒಬ್ಬ ವ್ಯಕ್ತಿ ವಿಧಿ-ವಿಧಾನಗಳನ್ನು ಪಾಲಿಸದಿದ್ದರೂ ಪರವಾಗಿಲ್ಲ. ಜನರ ನಂಬಿಕೆಗೆ ಯಾರೂ ಅಡ್ಡಿಯಾಗಲು ಸಾಧ್ಯವಿಲ್ಲ” ಎಂದು ಹೇಳಿದರು.
ಇದೇ ಅಭಿಪ್ರಾಯವನ್ನು ಪ್ರತಿಧ್ವನಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ “ಒಬ್ಬ ವ್ಯಕ್ತಿ ತನ್ನ ಗುಡಿಸಲಿನೊಳಗೆ ಒಂದು ದೀಪ ಹಚ್ಚಿದರೂ, ಅದು ಅವನ ಧರ್ಮವನ್ನು ತೋರಿಸಲು ಸಾಕು,” ಎಂದು ಹೇಳಿದರು.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠವು, ಶಬರಿಮಲೆ ದೇಗುಲ ಸೇರಿ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ಭೇದಭಾವ, ಹಾಗೂ Dawoodi Bohra community ಸೇರಿದಂತೆ ಅನೇಕ ಧರ್ಮಗಳಲ್ಲಿ ಅನುಸರಿಸಲಾಗುತ್ತಿರುವ ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ಈ ಮಹತ್ವದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು.
ತುಷಾರ್ ಮೆಹ್ತಾ ಕೂಡ ಪೀಠದ ಮುಂದೆ ವಾದ ಮಂಡಿಸಿ, ಧಾರ್ಮಿಕ ವಿಷಯಗಳಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಬಾರದು ಎಂದು ಅಭಿಪ್ರಾಯಪಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




