NSA ಅಡಿ ಸಂಭಲ್ ಹಿಂಸಾಚಾರದ ಆರೋಪಿಯ ಬಂಧನ ರದ್ದುಗೊಳಿಸಿದ ಸುಪ್ರೀಂ ಕೋರ್ಟ್; ಉತ್ತರ ಪ್ರದೇಶ ಸರ್ಕಾರಕ್ಕೆ ದಂಡ!
ಅಕ್ರಮ ಬಂಧನದ ಆದೇಶವನ್ನು ಹೊರಡಿಸಿದ್ದಕ್ಕಾಗಿ ಸರ್ಕಾರಕ್ಕೆ 10 ಲಕ್ಷ ರೂಪಾಯಿಗಳ ದಂಡವನ್ನು ನ್ಯಾಯಾಲಯ ವಿಧಿಸಿದೆ.

ಸಂಭಾಲ್ ಹಿಂಸಾಚಾರ ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯ (NSA) ಅಡಿಯಲ್ಲಿ ಆರೋಪಿಯೊಬ್ಬರನ್ನು ಬಂಧಿಸಿದ್ದ ಕ್ರಮವನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ.
NSA ಅಡಿಯಲ್ಲಿ ವ್ಯಕ್ತಿಯನ್ನು ಬಂಧಿಸಲು ಕೇವಲ ತಪ್ಪೊಪ್ಪಿಗೆ ಹೇಳಿಕೆಯನ್ನು ಆಧಾರವಾಗಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಶೀಲ್ ನಾಗು ಅವರನ್ನೊಳಗೊಂಡ ಪೀಠವು, ಪೊಲೀಸ್ ವಶದಲ್ಲಿದ್ದಾಗ ಆರೋಪಿ ನೀಡಿದರೆನ್ನಲಾದ ತಪ್ಪೊಪ್ಪಿಗೆ ಹೇಳಿಕೆಯ ಆಧಾರದ ಮೇಲೆ ಉತ್ತರ ಪ್ರದೇಶ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಬಂಧನದ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಅಕ್ರಮ ಬಂಧನದ ಆದೇಶವನ್ನು ಹೊರಡಿಸಿದ್ದಕ್ಕಾಗಿ ಸರ್ಕಾರಕ್ಕೆ 10 ಲಕ್ಷ ರೂಪಾಯಿಗಳ ದಂಡವನ್ನು ನ್ಯಾಯಾಲಯ ವಿಧಿಸಿದೆ.
ಉತ್ತರ ಪ್ರದೇಶದ ಸಂಭಾಲ್‌ನಲ್ಲಿರುವ ಶಾಹಿ ಜಾಮಾ ಮಸೀದಿಯ ಸಮೀಕ್ಷೆಯ ಸಂದರ್ಭದಲ್ಲಿ ನವೆಂಬರ್ 2024ರಲ್ಲಿ ಭುಗಿಲೆದ್ದ ಹಿಂಸಾಚಾರದ ಹಿಂದಿನ ಪ್ರಮುಖ ಸಂಚುಕೋರ ಎಂಬ ಆರೋಪ ಮುಲ್ಲಾ ಅಫ್ರೋಜ್ ಮೇಲಿದೆ. ಅಲಹಾಬಾದ್ ಹೈಕೋರ್ಟ್‌ನಿಂದ ಜಾಮೀನು ಪಡೆದ ಕೆಲವೇ ದಿನಗಳಲ್ಲಿ, ಅಕ್ಟೋಬರ್ 2025ರಲ್ಲಿ ಯುಪಿ ಸರ್ಕಾರ ಅವರನ್ನು NSA ಅಡಿಯಲ್ಲಿ ಮತ್ತೆ ಬಂಧಿಸಿತ್ತು.
ವಿಚಾರಣೆಯ ಸಂದರ್ಭದಲ್ಲಿ, ಯುಪಿ ಸರ್ಕಾರದ ಕ್ರಮಗಳ ಬಗ್ಗೆ ನ್ಯಾಯಾಲಯ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು.
ತನ್ನ ಕ್ರಮವನ್ನು ಸಮರ್ಥಿಸಿಕೊಂಡ ಯುಪಿ ಸರ್ಕಾರ, ಅಫ್ರೋಜ್ ಅವರ ಬಿಡುಗಡೆ ಆ ಪ್ರದೇಶದಲ್ಲಿ ಮತ್ತೆ ಹಿಂಸಾಚಾರ ಭುಗಿಲೇಳುವ ಅಥವಾ ಸಾರ್ವಜನಿಕ ಶಾಂತಿ-ಸುವ್ಯವಸ್ಥೆ ಹದಗೆಡುವ ಗಂಭೀರ ಅಪಾಯವನ್ನು ಉಂಟುಮಾಡುತ್ತದೆ ಎಂದು ವಾದಿಸಿತು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಈ ಮುನ್ನೆಚ್ಚರಿಕೆ ಬಂಧನ ಅಗತ್ಯ ಎಂದು ಅದು ಪ್ರತಿಪಾದಿಸಿತು.
ಆದರೆ, ಪೊಲೀಸ್ ವಶದಲ್ಲಿ ನೀಡಲಾದ ಹೇಳಿಕೆಯು - ನ್ಯಾಯಾಲಯದಲ್ಲಿ ಕಾನೂನುಬದ್ಧವಾಗಿ ಸ್ವೀಕಾರಾರ್ಹವಲ್ಲದ ಹೇಳಿಕೆಯು - NSA ಅಡಿಯಲ್ಲಿ ಬಂಧನಕ್ಕೆ ಆಧಾರವಾಗಬಹುದೇ ಎಂದು ನ್ಯಾಯಾಲಯ ಪ್ರಶ್ನಿಸಿದೆ. NSA ಅಡಿಯಲ್ಲಿ ಅಫ್ರೋಜ್ ಅವರ ಬಂಧನವನ್ನು ಎತ್ತಿಹಿಡಿದಿದ್ದ ಅಲಹಾಬಾದ್ ಹೈಕೋರ್ಟ್‌ನ ಆದೇಶವನ್ನೂ ನ್ಯಾಯಾಲಯ ರದ್ದುಗೊಳಿಸಿತು.
"ಭಾರತದ ರಕ್ಷಣೆಗೆ ಹಾನಿಕಾರಕ" ರೀತಿಯಲ್ಲಿ ವರ್ತಿಸುವುದನ್ನು ತಡೆಯಲು ವ್ಯಕ್ತಿಗಳನ್ನು ಬಂಧಿಸುವ ಅಧಿಕಾರವನ್ನು NSA ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೀಡುತ್ತದೆ. ಇದರಡಿ ಗರಿಷ್ಠ ಬಂಧನದ ಅವಧಿ 12 ತಿಂಗಳುಗಳಾಗಿರುತ್ತದೆ, ಆದಾಗ್ಯೂ ಇದನ್ನು ಮೊದಲೇ ಹಿಂಪಡೆಯಬಹುದು.
ಸ್ಥಳೀಯ ಆಡಳಿತ NSA ನ್ನು ಜಾರಿಗೊಳಿಸಬಹುದು ಮತ್ತು ಇದನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದ ಮಂಡಳಿಯು ಅನುಮೋದಿಸಬೇಕಾಗುತ್ತದೆ. ಇದು ದಂಡನಾತ್ಮಕ ಬಂಧನವಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿರುವುದರಿಂದ, ಬಂಧಿತ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಯಾವುದೇ ಕಾನೂನುಬದ್ಧ ಬಾಧ್ಯತೆ ಇರುವುದಿಲ್ಲ. ನವೆಂಬರ್ 2024ರಲ್ಲಿ ಸಂಬಲ್‌ನಲ್ಲಿ ನಡೆದ ಮಸೀದಿ ಸಮೀಕ್ಷೆಯ ಸಂದರ್ಭದ ಹಿಂಸಾಚಾರದ ನಂತರ, ಪೊಲೀಸ್ ವಶದಲ್ಲಿದ್ದಾಗ ನೀಡಿದ ಹೇಳಿಕೆಯ ಆಧಾರದ ಮೇಲೆ ಅಫ್ರೋಜ್ ಅವರನ್ನು ಸುಮಾರು 54 ದಿನಗಳ ನಂತರ ಬಂಧಿಸಲಾಯಿತು. ಅಲಹಾಬಾದ್ ಹೈಕೋರ್ಟ್ ಅವರಿಗೆ ಜಾಮೀನು ನೀಡಿದ್ದರೂ, ಅಕ್ಟೋಬರ್ 13, 2025ರಂದು ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯ (NSA) ಅಡಿಯಲ್ಲಿ ಬಂಧನ ಆದೇಶವನ್ನು ಹೊರಡಿಸಲಾಯಿತು.

SIR ನಿರ್ಧಾರದಲ್ಲಿ ಸರ್ವಾನುಮತವಿತ್ತೇ?: CEC ಅಧಿಕಾರದ ಕುರಿತು ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ..!
ಏತನ್ಮಧ್ಯೆ, ಒಂದು ಅಪರೂಪದ ಮತ್ತು ಭಾವನಾತ್ಮಕ ಸನ್ನಿವೇಶದಲ್ಲಿ, ಆದೇಶವನ್ನು ಪ್ರಕಟಿಸುವಾಗ ನ್ಯಾಯಮೂರ್ತಿ ದತ್ತಾ ಅವರು ತಮ್ಮ ಕಾನೂನು ಸಹಾಯಕ (ಲಾ ಕ್ಲರ್ಕ್) ರಿತ್ವಿಕ್ ದೇಶ್ವಾಲ್ ಅವರಿಗೆ ಗೌರವ ನಮನ ಸಲ್ಲಿಸಿದರು; ರಿತ್ವಿಕ್ ತಮ್ಮ 27ನೇ ಹುಟ್ಟುಹಬ್ಬಕ್ಕೂ ಮುನ್ನವೇ ನಿಧನರಾಗಿದ್ದರು.
ನ್ಯಾಯಮೂರ್ತಿ ದತ್ತಾ ಅವರು ಈ ತೀರ್ಪನ್ನು ಅವರಿಗೇ ಅರ್ಪಿಸಿದರು. ಸುಪ್ರೀಂ ಕೋರ್ಟ್‌ನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಪ್ರಕರಣದ ವಿಚಾರಣೆಯಲ್ಲಿ ಪೀಠಕ್ಕೆ ನೆರವಾಗಿದ್ದ ಮತ್ತು ಕೆಲವೇ ದಿನಗಳ ಹಿಂದೆ ನಿಧನರಾಗಿದ್ದ ಕಾನೂನು ಸಹಾಯಕರಿಗೆ ತೀರ್ಪೊಂದನ್ನು ಅರ್ಪಿಸಲಾಯಿತು.
ಈ ತೀರ್ಪಿನ ಸಿದ್ಧತೆಯ ಸಂದರ್ಭದಲ್ಲಿ ರಿತ್ವಿಕ್ ಮಹತ್ವದ ಸಂಶೋಧನಾ ನೆರವನ್ನು ನೀಡಿದ್ದರು ಮತ್ತು ಅವರ ಅಂತಿಮ ಕಾರ್ಯದ ಅಳಿಸಲಾಗದ ಛಾಪು ಇದರಲ್ಲಿ ಎದ್ದು ಕಾಣುತ್ತದೆ ಎಂದು ನ್ಯಾಯಮೂರ್ತಿ ದತ್ತಾ ಉಲ್ಲೇಖಿಸಿದರು. ಅವರ ನಿಧನವು ತಮ್ಮ ಜೀವನದಲ್ಲಿ "ಸಹಿಸಲಾಗದಷ್ಟು ಆಳವಾದ ಶೂನ್ಯವನ್ನು" ಸೃಷ್ಟಿಸಿದೆ ಎಂದು ನ್ಯಾಯಮೂರ್ತಿ ದತ್ತಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


