SIR ನಿರ್ಧಾರದಲ್ಲಿ ಸರ್ವಾನುಮತವಿತ್ತೇ?: CEC ಅಧಿಕಾರದ ಕುರಿತು ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ..!
ಚುನಾವಣಾ ಆಯೋಗ ಕಾರ್ಯನಿರ್ವಹಿಸಿರುವ ರೀತಿಯನ್ನು ನೋಡಿದರೆ, ಎಸ್‌ಐಆರ್ ಕುರಿತು ಆಯೋಗವು ಸರ್ವಾನುಮತದ ನಿರ್ಧಾರ ಕೈಗೊಂಡಿತೇ ಎಂಬ ಬಗ್ಗೆ ಗಂಭೀರ ಅನುಮಾನವಿದೆ.

ನವದೆಹಲಿ: ಭಾರತದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ಏಕಪಕ್ಷೀಯ ನಿರ್ಧಾರಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಹೊಸ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡದ್ದು, ಮುಂದಿನ ವಾರ ಕೈಗೆತ್ತಿಕೊಳ್ಳಲು ಸಮ್ಮತಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠದ ಮುಂದೆ ಹಿರಿಯ ವಕೀಲ ವಿಕಾಸ್ ಸಿಂಗ್ ಮಂಗಳವಾರ ಈ ಅರ್ಜಿಯನ್ನು ಪ್ರಸ್ತಾಪಿಸಿದರು.
ಬಹುಸದಸ್ಯ ಚುನಾವಣಾ ಆಯೋಗದ ನಿರ್ಧಾರಗಳು ಸರ್ವಾನುಮತದಿಂದ ಅಥವಾ ಬಹುಮತದ ಆಧಾರದ ಮೇಲೆ ಕೈಗೊಳ್ಳಬೇಕು ಎಂಬುದು ಕಾನೂನುಬದ್ಧ ವ್ಯವಸ್ಥೆಯಲ್ಲಿದೆ ಎಂದು ಅವರು ವಾದಿಸಿದರು.
ಚುನಾವಣಾ ಆಯೋಗ ಕಾರ್ಯನಿರ್ವಹಿಸಿರುವ ರೀತಿಯನ್ನು ನೋಡಿದರೆ, ಎಸ್‌ಐಆರ್ ಕುರಿತು ಆಯೋಗವು ಸರ್ವಾನುಮತದ ನಿರ್ಧಾರ ಕೈಗೊಂಡಿತೇ ಎಂಬ ಬಗ್ಗೆ ಗಂಭೀರ ಅನುಮಾನವಿದೆ.
ಆಯೋಗವು ಸರ್ವಾನುಮತದ ನಿರ್ಧಾರ ಕೈಗೊಂಡಿಲ್ಲದಿದ್ದರೆ, ನ್ಯಾಯಾಲಯ ಕೈಗೊಂಡಿರುವ ನಿರ್ಧಾರವೂ ಆಯೋಗದ ನಿರ್ಧಾರವನ್ನು ಆಧರಿಸಿದೆ. ಹೀಗಾಗಿ ಇದು ಗಂಭೀರ ವಿಚಾರ” ಎಂದು ವಿಕಾಸ್ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, “ಮುಂದಿನ ವಾರ ವಿಚಾರಣೆಗೆ ಪಟ್ಟಿ ಮಾಡುತ್ತೇವೆ” ಎಂದು ಹೇಳಿದರು.
ರಾಕೇಶ್ ಕುಮಾರ್ ಸಿಂಗ್ ಅವರು ಸಂವಿಧಾನದ 32ನೇ ವಿಧಿಯಡಿ ಈ ಅರ್ಜಿ ಸಲ್ಲಿಸಿದ್ದಾರೆ. ಸಂವಿಧಾನದ 324ನೇ ವಿಧಿಯಡಿ ಚುನಾವಣಾ ಆಯೋಗಕ್ಕೆ ನೀಡಲಾಗಿರುವ ಅಧಿಕಾರಗಳನ್ನು ಮುಖ್ಯ ಚುನಾವಣಾ ಆಯುಕ್ತರು ವೈಯಕ್ತಿಕವಾಗಿ ಅಲ್ಲದೆ, ಬಹುಸದಸ್ಯ ಆಯೋಗವಾಗಿ ಬಳಸಬೇಕು ಎಂದು ಘೋಷಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ಚುನಾವಣಾ ಆಯೋಗದ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಆಯೋಗದ ಹೆಸರಿನಲ್ಲಿ ಕೈಗೊಳ್ಳಲಾದ ಕೆಲವು ನಿರ್ಧಾರಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾದ ಹಿನ್ನೆಲೆಯಲ್ಲಿ ಈ ಅರ್ಜಿ ಸಲ್ಲಿಸಲಾಗಿದೆ.
2025ರ ಅಕ್ಟೋಬರ್‌ನಿಂದ 2026ರ ಆಗಸ್ಟ್‌ವರೆಗೆ ಆಯೋಗದ ಅನುಮೋದನೆಯಿಲ್ಲದೆ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪರಿಗಣಿಸಿ ಇಬ್ಬರು ಚುನಾವಣಾ ಆಯುಕ್ತರು ಕನಿಷ್ಠ 14 ಬಾರಿ ಆಕ್ಷೇಪ ದಾಖಲಿಸಿದ್ದರು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಇದು ಸಿಇಸಿ ಜ್ಞಾನೇಶ್ ಕುಮಾರ್ ಅವರು ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎನ್ನಲಾದ ವಿಚಾರದಲ್ಲಿ ಆಯೋಗದೊಳಗಿನ ಭಿನ್ನಾಭಿಪ್ರಾಯವನ್ನು ಸೂಚಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



