'ಬಂಗಾಳದಲ್ಲಿ ಮುಸ್ಲಿಮರು ಸುರಕ್ಷಿತವಾಗಿಲ್ಲ ಅಂದ್ರೆ, ಬಾಂಗ್ಲಾದೇಶದಲ್ಲಿ ಹಿಂದೂಗಳು ಸುರಕ್ಷಿತವಾಗಿರುವುದಿಲ್ಲ': ವಿಷಕಾರಿದ ಮೌಲಾನ ಇನಾಯುತ್ತಲ್ಲಾ ಅಬ್ಬಾಸಿ
ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಸುರಕ್ಷಿತರಾಗಿರದಿದ್ದರೆ, ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗೂ ಸುರಕ್ಷತೆ ಇರುವುದಿಲ್ಲ ಎಂದು ಭಾರತ ವಿರೋಧಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರುತ್ತಲೇ ಅತ್ತ ಬಾಂಗ್ಲಾದೇಶದಲ್ಲಿ ಭಾರತದ ವಿರುದ್ಧ ವಿಷಕಾರುವ ಮಂದಿಯ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗಿದೆ.
ಹೌದು.. ಪಶ್ಚಿಮ ಬಂಗಾಳಗಲ್ಲಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರದ ಅಧಿಕಾರಕ್ಕೇರುತ್ತಲೇ ಅಲ್ಲಿನ ಅಕ್ರಮ ಬಾಂಗ್ಲಾ ವಲಸಿಗರು ರಾಜ್ಯ ಬಿಟ್ಟು ತವರಿನತ್ತ ಮುಖ ಮಾಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಬಾಂಗ್ಲಾದೇಶದ ತೀವ್ರವಾದಿ ಧರ್ಮಗುರು ಮೌಲಾನ ಇನಾಯುತ್ತಲ್ಲಾ ಅಬ್ಬಾಸಿ (Maulana Inayatullah Abbasi) ಭಾರತದ ವಿರುದ್ಧ ಕಿಡಿಕಾರಿದ್ದಾನೆ.
ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಸುರಕ್ಷಿತರಾಗಿರದಿದ್ದರೆ, ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗೂ ಸುರಕ್ಷತೆ ಇರುವುದಿಲ್ಲ ಎಂದು ಭಾರತ ವಿರೋಧಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಮಾತ್ರವಲ್ಲದೇ ಬಾಂಗ್ಲಾದೇಶದ ಮುಸ್ಲಿಮರು ದೆಹಲಿಯಲ್ಲಿ ಇಸ್ಲಾಮಿಕ್ ಧ್ವಜ ಹಾರಿಸಲಿದ್ದಾರೆ ಎಂದೂ ಇನಾಯುತ್ತುಲ್ಲಾ ಅಬ್ಬಾಸಿ ಎಚ್ಚರಿಕೆ ನೀಡಿದ್ದಾನೆ.
ಭಾರತೀಯ ಮುಸ್ಲಿಮರ ಕುರಿತು ಮಾತನಾಡಿದ ಅಬ್ಬಾಸಿ, “ಭಾರತದಲ್ಲಿ ಹಿಂದೂ ಕೇಂದ್ರಿತ ವ್ಯವಸ್ಥೆ ನಿರ್ಮಿಸುವುದು ಯಹೂದಿ ಮಾದರಿಯಂತಾಗುತ್ತದೆ. ಈಗ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಇದೇ ದಿಕ್ಕಿನಲ್ಲಿ ಸಾಗುತ್ತಿದೆ. ಗೋಮಾಂಸ ಅಂಗಡಿಗಳನ್ನು ಧ್ವಂಸ ಮಾಡಲಾಗುತ್ತಿದೆ ಮತ್ತು ಮುಸ್ಲಿಮರನ್ನು ಹಿಂಸಿಸಲಾಗುತ್ತಿದೆ. ಇದನ್ನು ಯಾವುದೇ ಬೆಲೆ ತೆತ್ತಾದರೂ ಸರಿ ವಿರೋಧಿಸಬೇಕು” ಎಂದು ಕರೆ ನೀಡಿದ್ದಾನೆ.
ಬಾಂಗ್ಲಾದೇಶ ಸರ್ಕಾರವನ್ನೂ ಟೀಕಿಸಿದ ಮೌಲಾನ
ಇದೇ ವೇಳೆ ಮೌಲಾನ ಇನಾಯುತ್ತಲ್ಲಾ ಅಬ್ಬಾಸಿ ಬಾಂಗ್ಲಾದೇಶದ ತಾರಿಖ್ ರೆಹಮಾನ್ (Tarique Rahman) ಸರ್ಕಾರವನ್ನೂ ಟೀಕಿಸಿದ್ದು, “ಈ ಪರಿಸ್ಥಿತಿಯನ್ನು ಎದುರಿಸುವುದು ಬಾಂಗ್ಲಾದೇಶ ಸರ್ಕಾರದ ದೊಡ್ಡ ಜವಾಬ್ದಾರಿಯಾಗಿದೆ. ಭಾರತಕ್ಕೆ ಕಠಿಣ ಎಚ್ಚರಿಕೆ ನೀಡಬೇಕು. ಅಗತ್ಯವಿದ್ದರೆ ವ್ಯಾಪಾರ ಸಂಬಂಧಗಳನ್ನು ಕಡಿತಗೊಳಿಸಬೇಕು” ಎಂದು ಹೇಳಿದ್ದಾನೆ.
ಮುಂದುವರಿದು, “ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಸುರಕ್ಷಿತರಾಗಿರದಿದ್ದರೆ, ಬಾಂಗ್ಲಾದೇಶದಲ್ಲಿ ಹಿಂದೂಗಳು ಸುರಕ್ಷಿತರಾಗಲು ಅವಕಾಶ ನೀಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ರಾಜತಾಂತ್ರಿಕ ಮತ್ತು ರಾಜಕೀಯ ಒತ್ತಡವನ್ನು ತರಬೇಕು,” ಎಂದು ಹೇಳಿದ್ದಾನೆ.
ಭಾರತದ ವಿರೋಧಿ ಹೇಳಿಕೆ ಇದೇ ಮೊದಲೇನಲ್ಲ
ಅಂದಹಾಗೆ ಮೌಲಾನ ಇನಾಯತುಲ್ಲಾ ಅಬ್ಬಾಸಿ ಭಾರತ ವಿರೋಧಿ ಹೇಳಿಕೆ ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಭಾರತ ವಿರೋಧಿ ಹೇಳಿಕೆಗಳ ಮೂಲಕ ವಿವಾದಕ್ಕೀಡಾಗಿದ್ದ. 2023ರಲ್ಲಿ ಅವರು ಮದರಸಾಗಳನ್ನು ಶಸ್ತ್ರಸಜ್ಜಿತಗೊಳಿಸಿ ಸೈನಿಕ ಶಿಬಿರಗಳಾಗಿ ಪರಿವರ್ತಿಸಬೇಕು ಎಂದು ಕರೆ ನೀಡಿದ್ದ.
ಇಷ್ಟಕ್ಕೂ ಯಾರು ಈ ಮೌಲಾನ ಇನಾಯುತುಲ್ಲಾ ಅಬ್ಬಾಸಿ?
ಇನಾಯುತುಲ್ಲಾ ಅಬ್ಬಾಸಿ ಬಾಂಗ್ಲಾದೇಶದ ಕಠಿಣ ಇಸ್ಲಾಮಿಕ್ ಉಪನ್ಯಾಸಕರಾಗಿ ಪರಿಚಿತರಾಗಿದ್ದಾನೆ. ಆತ ಭಾರತ ವಿರೋಧಿ, ಪ್ರಚೋದನಕಾರಿ ಭಾಷಣಗಳು ಮತ್ತು ದ್ವೇಷಪೂರಿತ ಹೇಳಿಕೆಗಳಿಗಾಗಿ ಹಲವು ಬಾರಿ ಸುದ್ದಿಯಾಗಿದ್ದ. ದೆಹಲಿಯಲ್ಲಿ ಇಸ್ಲಾಮಿಕ್ ಧ್ವಜ ಹಾರಿಸುವುದು, ಮದರಸಾಗಳನ್ನು ಶಸ್ತ್ರಸಜ್ಜಿತ ಶಿಬಿರಗಳಾಗಿ ಪರಿವರ್ತಿಸುವುದು ಸೇರಿದಂತೆ ಹಲವು ವಿವಾದಾತ್ಮಕ ಹೇಳಿಕೆಗಳನ್ನು ಆತ ಈ ಹಿಂದೆ ನೀಡಿದ್ದ.
ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧವೂ ಅವಹೇಳನಕಾರಿ ಭಾಷೆ ಬಳಸಿರುವ ಆರೋಪಗಳು ಆತನ ವಿರುದ್ಧ ಕೇಳಿಬಂದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




