ರೇಣುಕಾ ಸ್ವಾಮಿ ಕೊಲೆ ಪ್ರಕರಣ: ವಿಚಾರಣೆ ವೇಳೆ ದರ್ಶನ್ ಖುದ್ದು ಹಾಜರಿಗೆ ಹೈಕೋರ್ಟ್ ನಕಾರ! ಕೊಟ್ಟ ಆಯ್ಕೆಗಳೇನು?
ವಿಡಿಯೋ ಕಾನ್ಫರೆನ್ಸ್ನಲ್ಲೇ ಖಾಸಗಿತನದ ಮಾತುಕತೆಗೆ ವ್ಯವಸ್ಥೆ ಮಾಡಿಕೊಡುತ್ತೇವೆ, ಕೋರ್ಟ್ ಕಲಾಪಕ್ಕೆ 15 ನಿಮಿಷ ಮುನ್ನ ನಿಮ್ಮ ಕಕ್ಷಿದಾರರ ಜೊತೆಗೆ ಮಾತನಾಡಿಕೊಂಡು ಕಲಾಪ ಆರಂಭಿಸಿ ಎಂದು ಸಲಹೆ ನೀಡಿದರು.

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ವೇಳೆ ತಾವು ಖುದ್ದಾಗಿ ನ್ಯಾಯಾಲಯದಲ್ಲಿ ಹಾಜರಿರಲು ಅನುಮತಿ ನೀಡಬೇಕೆಂದು ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮೂಲಕ ಸಲ್ಲಿಸಿದ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ನಲ್ಲಿ ನಡೆಯಿತು. ಸಾಕಷ್ಟು ಹೊತ್ತು ನಡೆದ ವಿಚಾರಣೆಯಲ್ಲಿ ಹೈಕೋರ್ಟ್, ದರ್ಶನ್ಗೆ ಹಲವಾರು ಆಯ್ಕೆಗಳನ್ನು ನೀಡಿತು. ಆದರೆ ಖುದ್ದು ಹಾಜರಿ ಅಸಾಧ್ಯ ಎಂದಿದೆ.
ನ್ಯಾಯಮೂರ್ತಿ ವಿ ಶ್ರೀಶಾನಂದ ಅವರಿದ್ದ ಹೈಕೋರ್ಟ್ ಪೀಠದ ಮುಂದೆ ನಡೆದ ವಿಚಾರಣೆ ವೇಳೆ ದರ್ಶನ್ ಹಾಜರಿ ಅಗತ್ಯವಿದೆ ಎಂದು ದರ್ಶನ್ ಪರ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಿದರು. ಈಗ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯುತ್ತಿದ್ದು, ಈ ವೇಳೆ ಕಕ್ಷಿದಾರರೊಂದಿಗೆ (ದರ್ಶನ್) ಚರ್ಚೆ ಅಸಾಧ್ಯವಾಗಿದೆ. ನಾನು ಕಕ್ಷಿದಾರರ (ದರ್ಶನ್) ಜೊತೆ ಮಾತನಾಡಿದ್ದು ಇತರೆ ಆರೋಪಿಗಳು, ಸಾಕ್ಷಿಗಳು ಎಲ್ಲರಿಗೂ ಕೇಳುತ್ತದೆ. ಗೌಪ್ಯತೆ ಇರುವುದಿಲ್ಲ ಎಂದು ಹಷ್ಮತ್ ವಾದ ಮಂಡಿಸಿದರು.
ಅವರ ಸಮಸ್ಯೆಗೆ ಪರಿಹಾರ ಸೂಚಿಸಿದ ನ್ಯಾಯಮೂರ್ತಿಗಳು, ನಿಮ್ಮ ಕಕ್ಷಿದಾರರೊಂದಿಗೆ ಮಾತನಾಡುವುದು ಎಲ್ಲರಿಗೂ ಕೇಳುತ್ತದೆಂಬುದು ನಿಮ್ಮ ಆಕ್ಷೇಪ ಆಗಿದ್ದಾದಲ್ಲಿ, ವಿಡಿಯೋ ಕಾನ್ಫರೆನ್ಸ್ನಲ್ಲೇ ಖಾಸಗಿತನದ ಮಾತುಕತೆಗೆ ವ್ಯವಸ್ಥೆ ಮಾಡಿಕೊಡುತ್ತೇವೆ, ಕೋರ್ಟ್ ಕಲಾಪಕ್ಕೆ 15 ನಿಮಿಷ ಮುನ್ನ ನಿಮ್ಮ ಕಕ್ಷಿದಾರರ ಜೊತೆಗೆ ಮಾತನಾಡಿಕೊಂಡು ಕಲಾಪ ಆರಂಭಿಸಿ ಎಂದು ಸಲಹೆ ನೀಡಿದರು.
ಯಾವುದೇ ಕಿರುಕುಳವಿಲ್ಲದೆ, ಸೌಹಾರ್ದಯುತವಾಗಿ ಹಾಗೂ ಯಾವುದೇ ವಿಳಂಬವಿಲ್ಲದೆ ಪ್ರಕರಣದ ವಿಚಾರಣೆ ಮುಕ್ತಾಯವಾಗಬೇಕು. ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಸಾಕ್ಷಿಗಳ ವಿಚಾರಣೆಯನ್ನು ತಡಮಾಡಬಾರದು. ಸಾಕ್ಷ್ಯಗಳ ವಿಚಾರಣೆ ವಿಳಂಬವಾದಷ್ಟೂ ಅದು ಪ್ರಾಸಿಕ್ಯೂಷನ್‌ಗೆ ಹಿನ್ನಡೆಯಾಗುವ ಅಪಾಯವಿರುತ್ತದೆ. ದರ್ಶನ್ ಅವರನ್ನು ಕೋರ್ಟ್ಗೇ ಕರೆತರಬೇಕೆಂದರೆ ಪೊಲೀಸರ ಭದ್ರತೆ ಕೊಡಬೇಕು, ಜನದಟ್ಟಣೆ ಆಗದಂತೆ ತಡೆಯುವುದು ಕಷ್ಟ, ಬೇಕಿದ್ದರೆ ಪರಪ್ಪನ ಅಗ್ರಹಾರದಲ್ಲೇ ಕೋರ್ಟ್ ವ್ಯವಸ್ಥೆ ಮಾಡಿ, ಅಲ್ಲೇ ವಿಚಾರಣೆ ಮಾಡಲು ಸೂಚನೆ ಕೊಡಬಹುದು ಎಂದು ನ್ಯಾಯಮೂರ್ತಿ ಶ್ರೀಶಾನಂದ ಅವರಿದ್ದ ಪೀಠ ಸಲಹೆ ನೀಡಿತು. ಆದರೆ ಇದಕ್ಕೆ ದರ್ಶನ್ ಪರ ಮತ್ತು ವಿರೋಧ ಎರಡೂ ಕಡೆಯ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.
ಪರಪ್ಪನ ಅಗ್ರಹಾರ ಜೈಲಿನಲ್ಲೇ ಕಲಾಪ ನಡೆದರೆ ಎರಡೂ ಕಡೆಯ ವಕೀಲರಿಗೆ ಸಮಸ್ಯೆ ಆಗುತ್ತದೆ ಎಂದು ಎಸ್ಪಿಪಿ ಪ್ರಸನ್ನ ಹೇಳಿದರು. ಅದಕ್ಕೆ ಪ್ರತಿಯಾಗಿ ನ್ಯಾಯಾಲಯವು, ನಾಳಿನ ಸಾಕ್ಷಿಗಳ ವಿಚಾರಣೆಗೆ ಇಂದೇ ಚರ್ಚಿಸಲು ಅವಕಾಶ ನೀಡಬಹುದು, ಬೇಕಿದ್ದರೆ ಹೆಡ್ಫೋನ್ ವ್ಯವಸ್ಥೆ ಮಾಡಿಕೊಡುತ್ತೇವೆ, ಖಾಸಗಿತನ ಇರಲೆಂದು ಲ್ಯಾಪ್ಟಾಪ್ನಲ್ಲೇ ವಿಡಿಯೋ ಕಾನ್ಫರೆನ್ಸ್ಗೆ ಅವಕಾಶ ಕೊಡಬಹುದು ದರ್ಶನ್ ಪರ ವಕೀಲರಿಗೆ ಹಲವು ಆಯ್ಕೆಗಳನ್ನು ಹೈಕೋರ್ಟ್ ನೀಡಿತು.
ಅಷ್ಟಾಗಿಯೂ ಖುದ್ದಾಗೇ ಹಾಜರಾಗಬೇಕೆಂದಾದರೆ ಪರಪ್ಪನ ಅಗ್ರಹಾರದಲ್ಲೇ ವಿಚಾರಣೆ ನಡೆಯಲಿ, ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಬಹುದು, ಜಯಲಲಿತಾ ಪ್ರಕರಣದ ವಿಚಾರಣೆ ನಡೆದ ಕೋರ್ಟ್ನಲ್ಲೇ ಪ್ರಕ್ರಿಯೆ ನಡೆಸಬಹುದು, ಸಂಬಂಧಪಟ್ಟವರನ್ನು ಬಿಟ್ಟು ಬೇರೆ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ನ್ಯಾಯಮೂರ್ತಿಗಳು ದರ್ಶನ್ ಪರ ವಕೀಲರಿಗೆ ಆಯ್ಕೆ ನೀಡಿದರು.
‘ನಿಮ್ಮ ಕಕ್ಷಿದಾರರಿಗೆ (ದರ್ಶನ್) ಒಳ್ಳೆಯ ಸಂಖ್ಯೆಯ ಅಭಿಮಾನಿಗಳಿದ್ದಾರೆ, ಅವರಿಗೂ ಏನಾಗುತ್ತಿದೆ ಎಂದು ತಿಳಿಯುವ ಕುತೂಹಲವಿರುತ್ತದೆ, ಅಂದಿನ ವಿಚಾರಣೆ ಮುಗಿದ ಬಳಿಕ ಬೇಕಿದ್ದರೆ ಮಾಧ್ಯಮದೊಂದಿಗೂ ಮಾತನಾಡಬಹುದು’ ಎಂದರು
ಅಂತಿಮವಾಗಿ, ದರ್ಶನ್ ಖುದ್ದು ಹಾಜರಿಗೆ ಅವಕಾಶ ನಿರಾಕರಿಸಿದ ನ್ಯಾಯಮೂರ್ತಿಗಳು ಎರಡೂ ಕಡೆಯ ವಕೀಲರು ಈ ಬಗ್ಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಿ, ಸೆಪ್ಟೆಂಬರ್ 16ಕ್ಕೆ ಅಭಿಪ್ರಾಯ ತಿಳಿಸಿ ಎಂದು ಹೇಳಿ ಪ್ರಕರಣದ ವಿಚಾರಣೆಯನ್ನು ಮುಂದೂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



