ಜೀವನಶೈಲಿ

ದಾಳಿಂಬೆ ಹಣ್ಣಿನಲ್ಲಿ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ಮಾಹಿತಿ...

ಪ್ರಕೃತಿ ಮನುಷ್ಯನ ಆರೋಗ್ಯಕ್ಕಾಗಿ ಹಲವಾರು ನೈಸರ್ಗಿಕ ಸತ್ವಗಳನ್ನು ಉಡುಗೊರೆಯಾಗಿ ಕೊಟ್ಟಿದೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ದೊರೆಯುವ ಹಲವಾರು ಹಣ್ಣು-ಹಂಪಲುಗಳು, ಗಿಡಮೂಲಿಕೆಗಳು ಆರೋಗ್ಯ ವೃದ್ಧಿಸುವಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ.

ದಾಳಿಂಬೆ ಹಣ್ಣಿನಲ್ಲಿ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ಮಾಹಿತಿ...
ಸಂಗ್ರಹ ಚಿತ್ರ
Published On :

ಪ್ರಕೃತಿ ಮನುಷ್ಯನ ಆರೋಗ್ಯಕ್ಕಾಗಿ ಹಲವಾರು ನೈಸರ್ಗಿಕ ಸತ್ವಗಳನ್ನು ಉಡುಗೊರೆಯಾಗಿ ನೀಡಿದೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ದೊರೆಯುವ ಹಲವಾರು ಹಣ್ಣು-ಹಂಪಲುಗಳು, ಗಿಡಮೂಲಿಕೆಗಳು ಆರೋಗ್ಯ ವೃದ್ಧಿಸುವಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ.

ನಮ್ಮ ಸುತ್ತಲೂ ಸಾಮಾನ್ಯವಾಗಿ ಸಿಗುವ ದಾಳಿಂಬೆ ಹಣ್ಣು ತನ್ನಲ್ಲಿ ಹಲವಾರು ಆರೋಗ್ಯದಾಯಕ ಅಂಶಗಳನ್ನು ಹೊಂದಿದೆ. ದಾಳಿಂಬೆ ಹಣ್ಣು ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ವೈರಲ್ ಮತ್ತು ಆ್ಯಂಟಿ ಟ್ಯೂಮರ್ ಗುಣಲಕ್ಷಣಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇ ಮತ್ತು ಫೋಲಿಕ್ ಆಮ್ಲ ಕೂಡ ಇದೆ. ಪ್ರತಿನಿತ್ಯ ದಾಳಿಂಬೆಯನ್ನು ತಿನ್ನುವುದು ಅಥವಾ ಜ್ಯೂಸ್ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಕೂಡ ವೃದ್ಧಿಯಾಗಲಿದೆ.

ಹೃದಯದ ಸಮಸ್ಯೆ ಪರಿಹಾರ
ದಾಳಿಂಬೆ ಹಣ್ಣಿನಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿ ಇರುವ ಕಾರಣ ಹೃದಯಕ್ಕೆ ಮಾರಕ ಎನಿಸುವ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಉತ್ತಮ ಪರಿಹಾರ ಕಾರ್ಯನಿರ್ವಹಿಸುತ್ತದೆ ಮತ್ತು ಇದು ದೇಹದಲ್ಲಿ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆ.

Story image

ನಮ್ಮ ಮಾನಸಿಕ ಒತ್ತಡವನ್ನು ನಿವಾರಣೆ ಮಾಡುವ ಮೂಲಕ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಿ ರಕ್ತದ ಒತ್ತಡವನ್ನು ನಿಯಂತ್ರಣಕ್ಕೆ ತರುವ  ಮೂಲಕ ಹೃದಯದ ಆರೋಗ್ಯಕ್ಕೆ ಅನುಕೂಲವಾಗುವಂತಹ ಗುಣಲಕ್ಷಣಗಳು ದಾಳಿಂಬೆ ಹಣ್ಣಿನ ಸಿಪ್ಪೆಯಲ್ಲಿ ಕಂಡುಬರುತ್ತದೆ. ದಾಳಿಂಬೆ ಹಣ್ಣಿನ ಪುಡಿಯನ್ನು ಒಂದು ಗ್ಲಾಸ್ ಬೆಚ್ಚಗಿನ ನೀರಿನಲ್ಲಿ ಹಾಕಿ  ದಿನ ಬಿಟ್ಟು ದಿನ ಸೇವಿಸುವುದರಿಂದ ಹೃದಯವು ಆರೋಗ್ಯಯುತವಾಗಿರುತ್ತದೆ.

ಅಜೀರ್ಣದ ಸಮಸ್ಯೆ ಪರಿಹಾರ
ಸಾಮಾನ್ಯವಾಗಿ ಮಕ್ಕಳಲ್ಲಿ ಹಾಗೂ ದೊಡ್ಡವರಲ್ಲಿ ಕಂಡುಬರುವ ಅಜೀರ್ಣದ ಸಮಸ್ಯೆಗೆ ದಾಳಿಂಬೆ ಸಿಪ್ಪೆಯು ಉತ್ತಮ ಔಷಧವಾಗಿದ್ದು, ಅತಿಸಾರ ಭೇದಿ ಉಂಟಾದಾಗ ಅಥವಾ ರಕ್ತ ಭೇದಿ ಸಮಸ್ಯೆ ಉಂಟಾದಾಗ ಒಣಗಿಸಿದ ದಾಳಿಂಬೆಯ ಸಿಪ್ಪೆಯನ್ನು ಲಿಂಬೆ ಹಣ್ಣಿನಲ್ಲಿ ತೇದಿ ಚೂರ್ಣವಾಗಿ ಮಾಡಿ ಸೇವಿಸುವುದರಿಂದ ಅತಿಸಾರದ ಸಮಸ್ಯೆ ಶೀರ್ಘವಾಗಿ ಗುಣಮುಖವಾತ್ತದೆ.

ಚರ್ಮದ ಕ್ಯಾನ್ಸರ್ ತಡೆಗಟ್ಟಲಿದೆ
ದಾಳಿಂಬೆ ಬೀಜಗಳಿಂದ ಎಣ್ಣೆಯನ್ನೂ ತೆಗೆಯಬಹುದು. ಇದರಲ್ಲಿ ಪ್ಯೂನಿಕ್ ಆಮ್ಲದಲ್ಲಿ ಸಮೃದ್ಧವಾಗಿರುತ್ತದೆ. ಇದು ಇತರೆ ಹಣ್ಣುಗಳಲ್ಲಿ ಇರುವುದಿಲ್ಲ. ಈ ಎಣ್ಣೆಯಲ್ಲಿ ಈಸ್ಟ್ರೊಜೆನ್ ಅಧಿಕವಾಗಿರಲಿದ್ದು, ಈಸ್ಟ್ರೊಜೆನ್ ಮಟ್ಟ ಕಡಿಮೆ ಇರುವ ಋತುಬಂಧಕ್ಕೊಳಗಾದ ಮಹಿಳೆಯರಿಗೆ ನೀಡಬಹುದು. ಈ ಬೀಜಗಳು UV ಮತ್ತು AV ಕಿರಣಗಳಿಂದ ನಮ್ಮನ್ನು ರಕ್ಷಿಸುತ್ತದೆ ಎಂಬುದನ್ನು ಅಧ್ಯಯನಗಳು ಸಾಬೀತುಪಡಿಸುತ್ತವೆ, ಆದ್ದರಿಂದ ಇದು ಚರ್ಮದ ಕ್ಯಾನ್ಸರ್'ನ್ನು ತಡೆಗಟ್ಟಲಿದೆ.

ನೈಸರ್ಗಿಕ ಕಾಮೋತ್ತೇಜಕ
ಈ ಬೀಜಗಳು ಮನೋಭಾವ ಹಾಗೂ ರಕ್ತಪರಿಚಲನೆಯ ಮೇಲೆ ನೇರವಾದ ಪ್ರಭಾವ ಬೀರುತ್ತದೆ. ವಿಶೇಷವಾಗಿ ಇವುಗಳ ಸೇವನೆಯಿಂದ ಜನನಾಂಗಗಳಲ್ಲಿ ರಕ್ತಪರಿಚಲನೆ ಹೆಚ್ಚುವ ಮೂಲಕ ನಿಮಿರು ದೌರ್ಬಲ್ಯ ಕಡಿಮೆಯಾಗುತ್ತದೆ. ಅಲ್ಲದೇ ಪುರುಷರಲ್ಲಿ ಟೆಸ್ಟ್ರೋಸ್ಟೆರಾನ್ ರಸದೂತದ ಮಟ್ಟವನ್ನು ಏರಿಸುವ ಮೂಲಕ ಕಾಮೋತ್ಸಾಹವನ್ನೂ ಹೆಚ್ಚಿಸುತ್ತದೆ.

ಸಂಧಿವಾತ ಕಡಿಮೆ ಮಾಡುತ್ತದೆ

Story image


ದಾಳಿಂಬೆಯ ಬೀಜಗಳಲ್ಲಿರುವ ಫ್ಲೇವನಾಲ್ ಎಂಬ ಆ್ಯಂಟಿ ಆಕ್ಸಿಡೆಂಟ್ ಗಳು ಸಂಧಿವಾತದ ನೋವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಇವುಗಳು ಉರಿಯೂತ ನಿವಾರಕಗಳಾಗಿ ಕಾರ್ಯನಿರ್ವಹಿಸುವ ಮೂಲಕ ದೇಹದ ಹಲವು ನೋವುಗಳನ್ನು ಕಡಿಮೆ ಮಾಡುತ್ತವೆ. ಒಂದು ವೇಳೆ ಸಂಧಿವಾತದ ತೊಂದರೆ ಇದ್ದರೆ ದಾಳಿಂಬೆಯ ಬೀಜಗಳನ್ನು ನಿತ್ಯವೂ ಕೊಂಚಕೊಂಚವಾಗಿ ಸೇವಿಸುತ್ತಾ ಬರಬೇಕು.

ಮಧುಮೇಹಿಗಳಿಗೂ ಸೂಕ್ತ
ದಾಳಿಂಬೆಯ ಬೀಜಗಳು ಮಧುಮೇಹಿಗಳಿಗೂ ಸೂಕ್ತವಾಗಿವೆ. ಇದರಲ್ಲಿರುವ ಕೆಲವು ಆಮ್ಲಗಳು ಮಧುಮೇಹದ ವಿರುದ್ದ ಕಾರ್ಯನಿರ್ವಹಿಸುವ ಗುಣ ಹೊಂದಿವೆ. ಇದರಲ್ಲಿರುವ ಸಕ್ಕರೆಗಳಲ್ಲಿ ಕೆಲವು ವಿಶಿಷ್ಟ ಆ್ಯಂಟಿ ಅಕ್ಸಿಡೆಂಟುಗಳಿದ್ದು ವಿಶೇಷವಾಗಿ ಟೈಪ್ 2 ಮಧುಮೇಹವನ್ನು ತಡೆಗಟ್ಟುವ ಶಕ್ತಿ ಹೊಂದಿದೆ.

ಉರಿಯೂತ ಕಡಿಮೆ ಮಾಡಲಿದೆ
ದಾಳಿಂಬೆ ಬೀಜಗಳನ್ನು ನಿಯಮಿತವಾಗಿ ಸೇವಿಸುತ್ತಾ ಬರುವ ಮೂಲಕ ದೇಹದಲ್ಲಿ ಎದುರಾಗುವ ಉರಿಯೂತ ಮತ್ತು ಇತರ ಸಂಬಂಧಿತ ತೊಂದರೆಗಳಿಂದ ರಕ್ಷಣೆ ಒದಗುತ್ತದೆ. ಈ ಬಗ್ಗೆ ನಡೆದ ಅಧ್ಯಯನಗಳ ಮೂಲಕ ಫ್ರೀ ರ್ಯಾಡಿಕಲ್ ಎಂಬ ಕಣಗಳ ಉತ್ಕರ್ಷಣಶೀಲ ಘರ್ಷಣೆಯನ್ನು ತಡೆಯುವ ಕ್ಷಮತೆಯನ್ನು ದಾಳಿಂಬೆ ಬೀಜಗಳು ಹೊಂದಿವೆ.

ಒಸಡುಗಳನ್ನು ದೃಢಗೊಳಿಸುತ್ತದೆ
ನಿಯಮಿತವಾಗಿ ದಾಳಿಂಬೆ ಬೀಜಗಳನ್ನು ಸೇವಿಸುವ ಮೂಲಕ ಒಸಡುಗಳು ದೃಢಗೊಳ್ಳುತ್ತವೆ ಹಾಗೂ ಸಡಿಲವಾದ ಹಲ್ಲುಗಳು ಗಟ್ಟಿಯಾಗುತ್ತವೆ. ಅಲ್ಲದೇ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ಈ ಬೀಜಗಳಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ನೆರವಾಗುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

Story image


ಈ ಬೀಜಗಳ ಸೇವನೆಯಿಂದ ಜೀರ್ಣಾಂಗಗಳ ಕ್ಷಮತೆ ಹೆಚ್ಚುತ್ತದೆ. ಇದಕ್ಕೆ ಇದರಲ್ಲಿರುವ ಬಿ-ಕಾಂಪ್ಲೆಕ್ಸ್ ವಿಟಮಿನ್ನುಗಳು ಕಾರಣ. ಈ ವಿಟಮಿನ್ನುಗಳು ದೇಹದಲ್ಲಿರುವ ಕೊಬ್ಬು, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟುಗಳನ್ನು ಶಕ್ತಿಯನ್ನಾಗಿ ಪರಿವರ್ತಿಸಲು ನೆರವಾಗುತ್ತವೆ. ದಾಳಿಂಬೆ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕರಗದ ನಾರು ಜೀರ್ಣಕ್ರಿಯೆಗೆ ಸಹಕರಿಸುವ ಮೂಲಕ ಜೀರ್ಣಕ್ರಿಯೆ ಸುಲಭವಾಗಲು ನೆರವಾಗುತ್ತದೆ.

ತೂಕ ಇಳಿಕೆಗೆ ಸಹಕಾರಿ
ತೂಕ ಇಳಿಸುವ ಪ್ರಯತ್ನಲ್ಲಿದ್ದವರಿಗೆ ದಾಳಿಂಬೆ ಬೀಜಗಳು ವರದಾನವಾಗಿವೆ. ಇವುಗಳಲ್ಲಿರುವ ಕರಗದ ನಾರು ಹೆಚ್ಚಿನ ಹೊತ್ತು ಹೊಟ್ಟೆ ತುಂಬಿರುವ ಭಾವನೆ ಮೂಡಿಸಿ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ. ಅಲ್ಲದೇ ಇವುಗಳನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬನ್ನು ಬಳಸುವ ಮೂಲಕ ಸ್ಥೂಲಕಾಯದಿಂದ ಬಿಡುಗಡೆ ನೀಡುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಇದರಲ್ಲಿರುವ ಪ್ರಬಲ ಆಂಟಿ ಆಕ್ಸಿಡೆಂಟುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ ಈ ಬೀಜಗಳು ಬ್ಯಾಕ್ಟೀರಿಯಾ ಹಾಗೂ ವೈರಸ್ಸುಗಳನ್ನು ಕೊಂದು ಹಲವಾರು ರೋಗಗಳಿಂದ ರಕ್ಷಣೆ ಒದಗಿಸುತ್ತವೆ. ತನ್ಮೂಲಕ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಗರ್ಭಿಣಿಯರಿಗೆ ಒಳ್ಳೆಯದು
ದಾಳಿಂಬೆಯಲ್ಲಿ ಕಬ್ಬಿಣದ ಅಂಶವು ಸಮೃದ್ಧವಾಗಿದೆ. ಇದು ಕಬ್ಬಿಣದ ಕೊರತೆಯನ್ನು ತಡೆಯಲು ಗರ್ಭಿಣಿಯರಿಗೆ ಸಹಾಯ ಮಾಡುತ್ತದೆ.

ಗಂಟಲು ಸಮಸ್ಯೆಗೆ ಪರಿಹಾರ
ಸಾಮಾನ್ಯವಾಗಿ ಹಲವರನ್ನು ಕಾಡುವ ಗಂಟಲು ಸಮಸ್ಯೆಗೆ ದಾಳಿಂಬೆ ಮದ್ದಾಗಿದ್ದು, ಗಂಟಲು ನೋವು, ಗಂಟಲು ಕಿರಿಕಿರಿ, ಇತ್ಯಾದಿಗಳಿಗೆ ದಾಳಿಂಬೆ ಹಣ್ಣಿನ ಪುಡಿಯನ್ನು ಬಳಕೆ ಮಾಡಬಹುದು.

ಒಂದು ಹಿಡಿ ದಾಳಿಂಬೆ ಹಣ್ಣಿನ ಒಣಗಿದ ಪುಡಿಯನ್ನು ತೆಗೆದುಕೊಂಡು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಇದನ್ನು ಸೋಸಿಕೊಂಡು ಬಾಯಿ ಮುಕ್ಕಳಿಸಿದರೆ ಗಂಟಲು ನೋವು ಮತ್ತು ಗಂಟಲಿನ ಸಮಸ್ಯೆಗಳು ಉಪಶಮನವಾಗುತ್ತದೆ.

ಮುಖದ ಕಾಂತಿಗೆ ಉಪಕಾರಿ
ಮುಖದಲ್ಲಿ ಸುಕ್ಕುಗಳಾಗಿದ್ದರೆ ಅಥವಾ ಮುಖದ ಚರ್ಮ ಒಣಗಿರುವ ಅನುಭವವಾದಾಗ ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿಮಾಡಿಕೊಳ್ಳಿ. ಬಳಿಕ ಈ ಪುಡಿಗೆ ಹಾಲು ಬೆರಸಿ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿ. ಒಂದು ವೇಳೆ ನಿಮ್ಮದು ಎಣ್ಣೆಯುಕ್ತ ಚರ್ಮವಾಗಿದ್ದರೆ ರೋಸ್ ವಾಟರ್ ಅನ್ನು ಬಳಸಬಹುದಾಗಿದೆ.

100 ಗ್ರಾಂ ದಾಳಿಂಬೆಯಲ್ಲಿ ಪೋಷಕಾಂಶ ಎಷ್ಟಿರುತ್ತದೆ...?

Story image


ಕಾರ್ಬೋಹೈಡ್ರೇಟ್ಗಳು: 18.70 ಗ್ರಾಂ
ಪ್ರೋಟೀನ್: 1.67 ಗ್ರಾಂ
ಕೊಬ್ಬು: 1.2 ಗ್ರಾಂ
ಸಕ್ಕರೆ: 14 ಗ್ರಾಂ
ಫೈಬರ್: 7 ಗ್ರಾಂ

ದಾಳಿಂಬೆಯನ್ನು ಸೇವಿಸುವ ವಿಧಾನ ಹೇಗೆ...?

  • ದಾಳಿಂಬೆಯನ್ನು ಸಲಾಡ್, ಜ್ಯೂಸ್, ಇಲ್ಲ ಹಾಗೇ ಕೂಡ ಸೇವಿಸಬಹುದು.
  • ಬೀಜಗಳಂತಿರುವ ದಾಳಿಂಬೆಯನ್ನು ಹಲವಾರು ಪಾಕಪದ್ಧತಿಯಲ್ಲೂ ಉಪಯೋಗಿಸುತ್ತಾರೆ.
  • ಸಿರಪ್ ಮಾಡಲು, ಕೆಲವರು ಪಚಡಿಯಂತಹ ರೆಸಿಪಿಗಳಿಗೆ ಸೇರಿಸುತ್ತಾರೆ.
  • ಇದು ಐಸ್ ಕ್ರೀಮ್ ಟಾಪಿಂಗ್ ಆಗಿಯೂ ಉತ್ತಮವಾಗಿರುತ್ತದೆ.

ಯಾರೆಲ್ಲಾ ಸೇವಿಸಬಹುದು?
ದಾಳಿಂಬೆ ಹಣ್ಣನ್ನು ಇಂತಹವರು ಮಾತ್ರ ಸೇವಿಸಬೇಕೆಂದೇನೂ ಇಲ್ಲ. ಪ್ರತಿಯೊಬ್ಬರೂ ಈ ಹಣ್ಣನ್ನು ಸೇವಿಸಬಹುದು. ಹಣ್ಣಿನಲ್ಲಿ ಯಾವುದೇ ಹಾನಿಕಾರಕ ಅಂಶಗಳಿಲ್ಲ.

Story image

ಆದರೆ, ಮಧುಮೇಹ ರೋಗಿಗಳು ಈ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸದಂತೆ ಸಲಹೆ ನೀಡಲಾಗುತ್ತದೆ. ಹಣ್ಣಿನಲ್ಲಿ ಸುಕ್ರೋಸ್, ಗ್ಲೂಕೋಸ್ ಮತ್ತು ಫ್ರಕ್ಟೋಸ್‌ನಂತಹ ಸಕ್ಕರೆಯ ಅಂಶಗಳಿರುವುದು ಇದಕ್ಕೆ ಕಾರಣವಾಗಿದೆ. ಹೀಗಾಗಿ ಮಧುಮೇಹ ಅಥವಾ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ತಜ್ಞರು, ವೈದ್ಯರ ಸಲಹೆ ಮೇರೆಗೆ ಹಣ್ಣನ್ನು ಸೇವನೆ ಮಾಡಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.