ರಾಜ್ಯ

BDA ಕಾರಂತ ಬಡಾವಣೆ ನಿವೇಶನ ಆಕಾಂಕ್ಷಿಗಳಿಗೆ ಸಂಕಷ್ಟ: ನಿವಾಸ ಪ್ರಮಾಣಪತ್ರ ವಿಳಂಬದಿಂದ ಅರ್ಜಿ ಪ್ರಕ್ರಿಯೆ ಕುಂಠಿತ..!

ಆರಂಭದಲ್ಲಿ ಕಂದಾಯ ಇಲಾಖೆಯು 15 ವರ್ಷಗಳ ನಿವಾಸ ಪ್ರಮಾಣಪತ್ರ ನೀಡಲು ಹಿಂದೇಟು ಹಾಕಿ, ಬದಲಿಗೆ 10 ವರ್ಷಗಳ ನಿವಾಸ ಪ್ರಮಾಣಪತ್ರಗಳನ್ನು ನೀಡುತ್ತಿತ್ತು. ಇದರಿಂದ ಅನೇಕ ಅರ್ಜಿದಾರರಲ್ಲಿ ಗೊಂದಲ ಉಂಟಾಗಿತ್ತು.

BDA ಕಾರಂತ ಬಡಾವಣೆ ನಿವೇಶನ ಆಕಾಂಕ್ಷಿಗಳಿಗೆ ಸಂಕಷ್ಟ: ನಿವಾಸ ಪ್ರಮಾಣಪತ್ರ ವಿಳಂಬದಿಂದ ಅರ್ಜಿ ಪ್ರಕ್ರಿಯೆ ಕುಂಠಿತ..!
ಶಿವರಾಮ ಕಾರಂತ ಬಡಾವಣೆ — Online Desk
Published On :

ಬೆಂಗಳೂರು: ಡಾ. ಕೆ. ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ಪಡೆಯಲು ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ 15 ವರ್ಷಗಳ ನಿವಾಸ ಪ್ರಮಾಣಪತ್ರ ಪಡೆಯುವಲ್ಲಿನ ವಿಳಂಬ ಅಡ್ಡಿಯಾಗಿದೆ. ನೋಂದಣಿ ಶುಲ್ಕ ಪಾವತಿಸಿ ಚಲನ್‌ ಪಡೆದಿರುವ 9,442 ಅರ್ಜಿದಾರರ ಪೈಕಿ ಕೇವಲ 2,639 ಮಂದಿ ಮಾತ್ರ ತಮ್ಮ ಅರ್ಜಿಗಳನ್ನು ಸಂಪೂರ್ಣವಾಗಿ ಸಲ್ಲಿಸಿದ್ದಾರೆ.

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು, ವಿಶೇಷವಾಗಿ 15 ವರ್ಷಗಳ ನಿವಾಸ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕಿದೆ ಎಂದು ಬಿಡಿಎಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರಂಭದಲ್ಲಿ ಕಂದಾಯ ಇಲಾಖೆಯು 15 ವರ್ಷಗಳ ನಿವಾಸ ಪ್ರಮಾಣಪತ್ರ ನೀಡಲು ಹಿಂದೇಟು ಹಾಕಿ, ಬದಲಿಗೆ 10 ವರ್ಷಗಳ ನಿವಾಸ ಪ್ರಮಾಣಪತ್ರಗಳನ್ನು ನೀಡುತ್ತಿತ್ತು. ಇದರಿಂದ ಅನೇಕ ಅರ್ಜಿದಾರರಲ್ಲಿ ಗೊಂದಲ ಉಂಟಾಗಿತ್ತು. ಈ ಸಮಸ್ಯೆ ಬಿಡಿಎ ಗಮನಕ್ಕೆ ಬಂದ ಕೂಡಲೇ ಕಂದಾಯ ಇಲಾಖೆಯೊಂದಿಗೆ ಚರ್ಚಿಸಿ ಪರಿಹರಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಅರ್ಜಿದಾರರಿಗೆ ಪ್ರಕ್ರಿಯೆಯನ್ನು ಸುಲಭಗೊಳಿಸುವ ಉದ್ದೇಶದಿಂದ, ಸದ್ಯ 10 ವರ್ಷಗಳ ನಿವಾಸದ ಪುರಾವೆ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ. ಉಳಿದ ಐದು ವರ್ಷಗಳ ನಿವಾಸವನ್ನು ದೃಢೀಕರಿಸುವ ದಾಖಲೆಗಳನ್ನು ನಂತರ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

ಆರಂಭಿಕ ಹಂತದಲ್ಲಿ ಉಂಟಾದ ಈ ಗೊಂದಲದಿಂದಾಗಿ ಅನೇಕರು ಅರ್ಜಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಇದೇ ಕಾರಣವನ್ನು ಮುಂದಿಟ್ಟುಕೊಂಡು ಅರ್ಜಿ ಸಲ್ಲಿಕೆಯ ಗಡುವು ವಿಸ್ತರಿಸುವಂತೆ ಅರ್ಜಿದಾರರು ಅಧಿಕಾರಿಗಳಿಗೆ ಮನವಿ ಮಾಡಿದ್ದರು ಎಂದು ಹೇಳಿದ್ದಾರೆ.

ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಲು ಅರ್ಜಿದಾರರು ನಮೂನೆಯನ್ನು ಭರ್ತಿ ಮಾಡಬೇಕು. ಸರ್ಕಾರದಿಂದ ಹಂಚಿಕೆಯಾದ ಬೇರೆ ಯಾವುದೇ ನಿವೇಶನ ತಮ್ಮ ಹೆಸರಿನಲ್ಲಿ ಇಲ್ಲ ಎಂಬುದನ್ನು ದೃಢೀಕರಿಸುವ ನೋಟರಿ ಪ್ರಮಾಣೀಕೃತ ಅಫಿಡವಿಟ್‌ ಅನ್ನು ಅಪ್‌ಲೋಡ್ ಮಾಡಬೇಕು. ಜೊತೆಗೆ, ಪಾವತಿಸಿದ ಶುಲ್ಕದ ಚಲನ್‌ ರಸೀದಿಯನ್ನೂ ಅರ್ಜಿಗೆ ಲಿಂಕ್ ಮಾಡಬೇಕಿದೆ ಎಂದು ವಿವರಿಸಿದ್ದಾರೆ.

ಅಕ್ಟೋಬರ್ 12ರ ವೇಳೆಗೆ 2,050 ಇದ್ದ ಪೂರ್ಣಗೊಂಡ ಅರ್ಜಿಗಳ ಸಂಖ್ಯೆ ಒಂದೇ ದಿನದಲ್ಲಿ 2,639ಕ್ಕೆ ಏರಿಕೆಯಾಗಿದೆ. ಇದು ನಿವೇಶನಗಳಿಗೆ ಹೆಚ್ಚಿನ ಬೇಡಿಕೆ ಇರುವುದನ್ನು ಸೂಚಿಸುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆದರೆ, ನಿವಾಸ ಪ್ರಮಾಣಪತ್ರಗಳನ್ನು ಪಡೆಯುವಲ್ಲಿನ ಸಮಸ್ಯೆ ಹಾಗೂ ದಾಖಲೆಗಳನ್ನು ಸಿದ್ಧಪಡಿಸಲು ಬೇಕಾಗುವ ಸಮಯದಿಂದಾಗಿ ಅರ್ಜಿಗಳ ಅಂತಿಮ ಸಲ್ಲಿಕೆ ವಿಳಂಬವಾಗುತ್ತಿದೆ.

ಪ್ರಸ್ತುತ ಅರ್ಜಿ ಸಲ್ಲಿಕೆಗೆ ಲಭ್ಯವಿರುವ 2,815 ನಿವೇಶನಗಳ ಜೊತೆಗೆ ಇನ್ನೂ ಸುಮಾರು 150 ನಿವೇಶನಗಳನ್ನು ಸೇರ್ಪಡೆಗೊಳಿಸಲು ಬಿಡಿಎ ಯೋಜನೆ ರೂಪಿಸುತ್ತಿದೆ.

ಬಿಡಿಎ ಮಾಹಿತಿ ಪ್ರಕಾರ, ಹಂಚಿಕೆಗೆ ಲಭ್ಯವಿರುವ ನಿವೇಶನಗಳಲ್ಲಿ 9x12 ಮೀಟರ್ ಅಳತೆಯ 2,500 ನಿವೇಶನಗಳು, 12x18 ಮೀಟರ್ ಅಳತೆಯ 300 ನಿವೇಶನಗಳು ಹಾಗೂ 15x24 ಮೀಟರ್ ಅಳತೆಯ 15 ನಿವೇಶನಗಳಿವೆ. ಈ ನಿವೇಶನಗಳಿಗೆ ಕ್ರಮವಾಗಿ 2,000 ರೂ., 4,000 ರೂ. ಮತ್ತು 5,000 ರೂ. ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.