ನಾನೂ ರೈತನ ಮಗ; ನಿಮ್ಮ ನೋವು ಕಡಿಮೆ ಮಾಡುತ್ತೇನೆ: ಶಿವರಾಮ ಕಾರಂತ ಬಡಾವಣೆ ಭೂ ಮಾಲೀಕರಿಗೆ ಪರಿಹಾರ ವಿತರಿಸಿದ ಡಿ.ಕೆ ಶಿವಕುಮಾರ್
ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರಿಂದ ಶಿವರಾಮ ಕಾರಂತ ಬಡವಾಣೆಯ ಭೂ ಮಾಲೀಕರಿಗೆ ಪರಿಹಾರ ನೀಡುವುದು ತಡವಾಯಿತು. ನಿವೇಶನ ಹಂಚಿಕೆಗೆ ಅರ್ಜಿ ಹಾಕಲು ಆಹ್ವಾನ ನೀಡಲು ಮುಂದಾದಾಗ ಕೋರ್ಟ್ ತಡೆಯಾಜ್ಞೆ ನೀಡಿತ್ತು.

ಬೆಂಗಳೂರು: ನಾನೊಬ್ಬ ರೈತರ ಮಗ, ನಮ್ಮದೂ ದೊಡ್ಡ ಚರಿತ್ರೆ ಇದೆ. ರೈತ ಆಸ್ತಿ ಕಳೆದುಕೊಳ್ಳಬೇಕಾದರೆ ಆಗುವ ನೋವಿನ ಅರಿವಿದೆ. ಆ ನೋವನ್ನು ಕಡಿಮೆ ಮಾಡಬೇಕೆನ್ನುವ ಉದ್ದೇಶವೂ ಇದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಡಾ ಕೆ ಶಿವರಾಮ ಕಾರಂತ ಬಡಾವಣೆಗೆ ಭೂಮಿ ನೀಡಿದ ಭೂಮಾಲೀಕರು, ರೈತರಿಗೆ ನೆಹರು ತಾರಾಲಯದಲ್ಲಿ ಶಿವಕುಮಾರ್ ಅವರು ಭೂ ಪರಿಹಾರ ವಿತರಣೆ ಮಾಡಿ ಸೋಮವಾರ ಮಾತನಾಡಿದರು. ಮೂರು ವರ್ಷಗಳಿಂದಲೇ ಪರಿಹಾರ ನೀಡುವ ಪ್ರಯತ್ನ ಮಾಡಿ ಅರ್ಜಿಗಳನ್ನು ಕರೆಯಲಾಗಿತ್ತು.
ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರಿಂದ ಶಿವರಾಮ ಕಾರಂತ ಬಡವಾಣೆಯ ಭೂ ಮಾಲೀಕರಿಗೆ ಪರಿಹಾರ ನೀಡುವುದು ತಡವಾಯಿತು. ನಿವೇಶನ ಹಂಚಿಕೆಗೆ ಅರ್ಜಿ ಹಾಕಲು ಆಹ್ವಾನ ನೀಡಲು ಮುಂದಾದಾಗ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದರಿಂದ ಸರ್ಕಾರಕ್ಕೆ ಪ್ರತಿ ವರ್ಷ ₹1000 ಕೋಟಿ ನಷ್ಟವಾಗಿದೆ" ಎಂದು ತಿಳಿಸಿದರು.
"ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಿಡದಿ ಕೈಗಾರಿಕಾ ಟೌನ್ ಮಾಡಲು ಮಾಜಿ ಮುಖ್ಯಮಂತ್ರಿ ದೇವೇಗೌಡರು ಹೊರಟರು. ಆಗ ರೈತರ ಬಳಿ ಚರ್ಚಿಸಿ 5-6 ಲಕ್ಷ ರೂ.ಗಳಂತೆ ಪ್ರತಿ ಎಕರೆಯಂತೆ ಜಮೀನು ಪಡೆಯಲಾಗಿತ್ತು. ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಬಿಡದಿಯಲ್ಲಿಯೇ ಟೌನ್ ಶಿಪ್ ಮಾಡಲು ಅಧಿಸೂಚನೆ ಹೊರಡಿಸಿದ್ದ ಸ್ಥಳದಲ್ಲಿಯೇ ಜಪಾನ್ ಟೌನ್ ಶಿಪ್ ಮಾಡಲು ಮುಂದಾದ ಸಂದರ್ಭದಲ್ಲಿ ವಿರೋಧ ವ್ಯಕ್ತವಾದ ಕಾರಣಕ್ಕೆ ಅದನ್ನು ಕೈಬಿಡಲಾಯಿತು" ಎಂದರು.
ಅರ್ಕಾವತಿ, ಕೆಂಪೇಗೌಡ ಬಡಾವಣೆ, ಶಿವರಾಮ ಕಾರಂತ ಬಡಾವಣೆ ಇವೆಲ್ಲ ಈಗ ಆಗಿದೆ. ಬೆಂಗಳೂರು ಸುತ್ತಮುತ್ತ ಬಡಾವಣೆಗಳು ನಿರ್ಮಾಣಗೊಳ್ಳಲು ಎಲ್ಲಾ ಸರ್ಕಾರಗಳು ಕೊಡುಗೆ ನೀಡಿವೆ" ಎಂದರು.
ಶಿವರಾಮ ಕಾರಂತ ಬಡಾವಣೆಗೆ ಜಮೀನುಕೊಟ್ಟ 3200 ರೈತರ ಹೆಸರುಗಳನ್ನು ವಾಲ್ ಆಫ್ ಗ್ರಾಟಿಟ್ಯೂಡ್ ಮೇಲೆ ಬರೆಸಲಾಗುವುದು" ಎಂದರು.
ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ 16 ಸಾವಿರ ಕೋಟಿ ಹೂಡಿಕೆ
"ಅರ್ಕಾವತಿ, ಕೆಂಪೇಗೌಡ ಬಡಾವಣೆಗಳ ವಿಚಾರದಲ್ಲಿ ತಕರಾರು ನಡೆಯಿತು. ಡಾ. ಕೆ. ಶಿವರಾಮ ಕಾರಂತ ಬಡಾವಣೆಯ ಪ್ರಕ್ರಿಯೆಯೂ ಹಲವು ವರ್ಷಗಳ ಕಾನೂನು ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಒಳಗೊಂಡಿತ್ತು. ಬಡಾವಣೆ ನಿರ್ಮಾಣಕ್ಕೆ 16 ಸಾವಿರ ಕೋಟಿ ಹೂಡಿಕೆಯಾಗಿದೆ. ಭೂಸ್ವಾಧೀನಕ್ಕೆ ಸಂಬಂಧಿಸಿದ ವಿಚಾರಗಳು ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಹಾಗೂ ವಿಭಾಗೀಯ ಪೀಠದ ಹಂತಗಳನ್ನು ದಾಟಿ ಸುಪ್ರೀಂ ಕೋರ್ಟ್ ವರೆಗೂ ಸಾಗಿದ್ದವು. ನ್ಯಾಯಾಲಯಗಳ ನಿರ್ದೇಶನಗಳು ಹಾಗೂ ಸರ್ಕಾರದ ಆದೇಶಗಳ ಹಿನ್ನೆಲೆಯಲ್ಲಿ ಬಿಡಿಎ ಭೂಸ್ವಾಧೀನ ಮತ್ತು ಬಡಾವಣೆಯ ಅಭಿವೃದ್ಧಿ ಪ್ರಕ್ರಿಯೆಯನ್ನು ಮುಂದುವರಿಸಿದೆ" ಎಂದರು.
"ಖಾಸಗಿಯವರಿಗೆ 55% ನಿವೇಶನ ನೀಡಲು ಸಾಧ್ಯವಾಗುತ್ತದೆ. ಆದರೆ ನಾವು ಅತ್ಯುತ್ತಮ ರಸ್ತೆಗಳು, ಸಾರ್ವಜನಿಕ ಸೌಲಭ್ಯ ಕಲ್ಪಿಸಿದ್ದು, 42% ಮಾತ್ರ ನಿವೇಶನಗಳನ್ನು ನೀಡಲು ಸಾಧ್ಯವಾಗಿದೆ. ಎಕರೆಗೆ ಶೇ. 40% ಕೊಡಲು ಭೂ ಮಾಲೀಕರಿಗೆ ನಿವೇಶನ ಕೊಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ" ಎಂದರು.
"ನಾನು ಬರುವ ಮೊದಲು ಬಿಡಿಎ ಎಂದರೆ ಬ್ರೋಕರ್ ಅಭಿವೃದ್ಧಿ ಪ್ರಾಧಿಕಾರವಾಗಿತ್ತು. 2008 ರಲ್ಲಿಯೇ ಶಿವರಾಮ ಕಾರಂತ ಬಡಾವಣೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದರು. ತಮ್ಮ ಭೂಮಿ ಕಳೆದುಕೊಳ್ಳುವಾಗ ರೈತರು ಲಂಚ ಕೊಡಬೇಕಾದ ಪರಿಸ್ಥಿತಿ ಇತ್ತು. ಆಗ “ರೈತರ ಮಕ್ಕಳು” ಎಂದು ಹೇಳಿಕೊಳ್ಳುವವರ ಕಾಲದಲ್ಲಿಯೇ 2008 ರಲ್ಲಿಯೇ ಅಧಿಸೂಚನೆ ಹೊರಡಿಸಿದ್ದು, ಅವರ ಕಾಲದಲ್ಲಿಯೇ ಇದು ನಡೆದದ್ದು. ಈಗ ಮಾತನಾಡಲು ಅವರಿಗೆ ಧಮ್ ಇಲ್ಲವೇ? ಬೆಂಗಳೂರಿನ ಸುತ್ತಮುತ್ತ ಅವರ ಜಮೀನುಗಳಿವೆ ಅವುಗಳನ್ನು ಯೋಜನೆಗಳ ಸ್ವಾಧೀನಕ್ಕೆ ಕೊಟ್ಟಿದ್ದಾರೆಯೇ? ಅವರ ಜಮೀನನ್ನು ಮಾತ್ರ ಬಿಡಿಸಿಕೊಂಡರು. ಅವರದ್ದು ಎಷ್ಟು ಎಕರೆ ಇದೆ ಎಂಬುದು ನನಗೆ ಅರಿವಿದೆ" ಎಂದು ಪರೋಕ್ಷವಾಗಿ ಕುಟುಕಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



