ರಾಜ್ಯ

ಕೋರ್ಟ್ ಕೇಸ್‌ಗಳಲ್ಲಿ ನಿರ್ಲಕ್ಷ್ಯ ಸಹಿಸಲ್ಲ, ಮಾರ್ಗಸೂಚಿ ಪಾಲಿಸದಿದ್ದರೆ ಕಠಿಣ ಕ್ರಮ: BDAಗೆ ಹೈಕೋರ್ಟ್ ಚಾಟಿ

ಬಿಡಿಎ ಸಲ್ಲಿಸಿದ್ದ ಮೇಲ್ಮನವಿಗಳನ್ನು ಪುರಸ್ಕರಿಸಿದ ವಿಭಾಗೀಯ ಪೀಠ, ಬನಶಂಕರಿ 6ನೇ ಹಂತದ ಬಡಾವಣೆ ಯೋಜನೆ ಬಹುತೇಕ ಅನುಷ್ಠಾನಗೊಂಡಿದ್ದು, ಹಲವು ಪ್ರಕರಣಗಳಲ್ಲಿ ನ್ಯಾಯಾಲಯದ ಮಾನ್ಯತೆಯನ್ನೂ ಪಡೆದಿದೆ.

ಕೋರ್ಟ್ ಕೇಸ್‌ಗಳಲ್ಲಿ ನಿರ್ಲಕ್ಷ್ಯ ಸಹಿಸಲ್ಲ, ಮಾರ್ಗಸೂಚಿ ಪಾಲಿಸದಿದ್ದರೆ ಕಠಿಣ ಕ್ರಮ: BDAಗೆ ಹೈಕೋರ್ಟ್ ಚಾಟಿ
ಹೈಕೋರ್ಟ್
Published On :

ಬೆಂಗಳೂರು: ನ್ಯಾಯಾಲಯದ ಮೊಕದ್ದಮೆಗಳನ್ನು ನಿರ್ವಹಿಸುವಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತೋರುತ್ತಿರುವ ಬೇಜವಾಬ್ದಾರಿತನ ಮತ್ತು ವೈಫಲ್ಯದ ವಿರುದ್ಧ ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಪ್ರಾಧಿಕಾರವು ಇನ್ನು ಮುಂದೆ ತನ್ನದೇ ಆದ 11 ಅಂಶಗಳ ಕಾನೂನು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ಪೀಠವು ಖಡಕ್ ಸೂಚನೆ ನೀಡಿದೆ.

ಈ ಮಾರ್ಗಸೂಚಿಗಳು ಮತ್ತು ಸುತ್ತೋಲೆಗಳನ್ನು ಪಾಲಿಸುವ ಕುರಿತು ಬಿಡಿಎ ಆಯುಕ್ತರು ಸಲ್ಲಿಸಿರುವ ಅಫಿಡವಿಟ್‌ಗೂ ಬದ್ಧವಾಗಿರಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಸುತ್ತೋಲೆ ಮತ್ತು ಮಾರ್ಗಸೂಚಿಗಳ ಪಾಲನೆಯಲ್ಲಿ ಯಾವುದೇ ಲೋಪ ಕಂಡುಬಂದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಇಂತಹ ಉಲ್ಲಂಘನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.

ನ್ಯಾಯಾಲಯದ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಕಂಡುಬಂದಿರುವ ಲೋಪದೋಷಗಳು ಹಾಗೂ ವ್ಯವಸ್ಥೆಯಲ್ಲಿನ ವೈಫಲ್ಯಗಳನ್ನು ಸರಿಪಡಿಸುವ ಉದ್ದೇಶದಿಂದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಮತ್ತು ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಇದೇ ವೇಳೆ, ಎರಡು ಪ್ರತ್ಯೇಕ ರಿಟ್ ಅರ್ಜಿಗಳಲ್ಲಿ 2024ರ ಮಾರ್ಚ್ 7 ಮತ್ತು 2023ರ ಆಗಸ್ಟ್ 18ರಂದು ನೀಡಿದ್ದ ಆದೇಶಗಳ ವಿರುದ್ಧ ಬಿಡಿಎ ಸಲ್ಲಿಸಿದ್ದ ಮೇಲ್ಮನವಿಗಳನ್ನು ಪೀಠ ಪುರಸ್ಕರಿಸಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಗುಬ್ಬಲಾಲ ಸಮೀಪದ ಎರಡು ಪ್ರತ್ಯೇಕ ಭೂಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳಲು ಹೊರಡಿಸಿದ್ದ ಅಧಿಸೂಚನೆಯನ್ನು ಈ ಹಿಂದೆ ರದ್ದುಗೊಳಿಸಲಾಗಿತ್ತು. ಕನಕಪುರದಿಂದ ಬನಶಂಕರಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಹಾಗೂ ಬನಶಂಕರಿ 6ನೇ ಹಂತದ ಬಡಾವಣೆಯ ವಿಸ್ತರಣೆಗೆ ಈ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಲಾಗಿತ್ತು.

ಬಿಡಿಎ ಸಲ್ಲಿಸಿದ್ದ ಮೇಲ್ಮನವಿಗಳನ್ನು ಪುರಸ್ಕರಿಸಿದ ವಿಭಾಗೀಯ ಪೀಠ, ಬನಶಂಕರಿ 6ನೇ ಹಂತದ ಬಡಾವಣೆ ಯೋಜನೆ ಬಹುತೇಕ ಅನುಷ್ಠಾನಗೊಂಡಿದ್ದು, ಹಲವು ಪ್ರಕರಣಗಳಲ್ಲಿ ನ್ಯಾಯಾಲಯದ ಮಾನ್ಯತೆಯನ್ನೂ ಪಡೆದಿದೆ ಎಂದು ಹೇಳಿದೆ.

ಈ ಹಿನ್ನೆಲೆಯಲ್ಲಿ, ಪ್ರಕರಣದಲ್ಲಿರುವ ಭೂಮಿಯಂತಹ ಸಣ್ಣ ಸಣ್ಣ ಜಮೀನುಗಳ ತುಂಡುಗಳಲ್ಲಿ ಪ್ರತ್ಯೇಕ ದ್ವೀಪದಂತಿರುವ ಬಡಾವಣೆಗಳನ್ನು ನಿರ್ಮಿಸಲು ಬಿಡಿಎಗೆ ಅವಕಾಶವಿಲ್ಲ ಎಂಬ ಭೂಮಾಲೀಕರ ಪರ ಹಿರಿಯ ವಕೀಲರ ವಾದಕ್ಕೆ ಆಧಾರವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ನ್ಯಾಯಾಲಯಕ್ಕೆ ಸಲ್ಲಿಸಿರುವ ಕಚೇರಿ ಆದೇಶದಲ್ಲಿ ಬಿಡಿಎ, ನ್ಯಾಯಾಲಯಗಳಲ್ಲಿ ತನ್ನ ವಿರುದ್ಧ ಪ್ರತಿಕೂಲ ಆದೇಶಗಳು ಬಂದಾಗಲೆಲ್ಲ ಮೇಲ್ಮನವಿ ಸಲ್ಲಿಸುವ ಮೂಲಕ ಸಮಯ ಮತ್ತು ಹಣ ವ್ಯರ್ಥ ಮಾಡುವ ಬದಲು, ಮೊದಲು ಪ್ರಕರಣಗಳನ್ನು ಪರಿಶೀಲಿಸುವುದು ಸೂಕ್ತ ಎಂದು ತಿಳಿಸಿದೆ.

ವಿಚಾರಣೆ ಮತ್ತು ನ್ಯಾಯಾಂಗ ಪ್ರಕ್ರಿಯೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಬಿಡಿಎ ರೂಪಿಸಿರುವ 11 ಮಾರ್ಗಸೂಚಿಗಳ ಪ್ರಕಾರ, ಯಾವುದೇ ವಕೀಲರು, ಅಧಿಕಾರಿ ಅಥವಾ ಇಲಾಖೆಗೆ ನೋಟಿಸ್, ಅರ್ಜಿ, ಮನವಿ, ಸಮನ್ಸ್, ನ್ಯಾಯಾಲಯದ ಆದೇಶ, ತೀರ್ಪು, ನ್ಯಾಯಾಂಗ ನಿಂದನೆ ನೋಟಿಸ್ ಅಥವಾ ಇತರ ಕಾನೂನು ಸಂಬಂಧಿತ ಪತ್ರಗಳು ಬಂದರೆ, ಅವುಗಳನ್ನು ಅದೇ ದಿನ ಅಥವಾ ಗರಿಷ್ಠ ಮರುದಿನದೊಳಗೆ ಮುಖ್ಯ ಕಾನೂನು ಅಧಿಕಾರಿಗೆ ರವಾನಿಸಬೇಕು.

ನ್ಯಾಯಾಲಯದಿಂದ ಸ್ವೀಕರಿಸುವ ನೋಟಿಸ್‌ಗಳನ್ನು ಎಲ್ಲ ವಕೀಲರು ಅದೇ ದಿನ ಬಿಡಿಎಯ ಕಾನೂನು ವಿಭಾಗದ ವಾಟ್ಸ್‌ಆ್ಯಪ್ ಗುಂಪಿನಲ್ಲಿ ಅಪ್‌ಲೋಡ್ ಮಾಡಬೇಕು. ಬಳಿಕ ಮುಖ್ಯ ಕಾನೂನು ಅಧಿಕಾರಿ ಸಂಬಂಧಪಟ್ಟ ವಲಯ ಆಯುಕ್ತರಿಗೆ ತಕ್ಷಣವೇ ಅಥವಾ ಗರಿಷ್ಠ 48 ಗಂಟೆಗಳೊಳಗೆ ಕಳುಹಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು.

ಆಯುಕ್ತರ ಅನುಮತಿಯಿಲ್ಲದೆ ಯಾವುದೇ ಪ್ರಕರಣವನ್ನು ಹಿಂಪಡೆಯುವಂತಿಲ್ಲ, ಇತ್ಯರ್ಥಪಡಿಸುವಂತಿಲ್ಲ ಅಥವಾ ರಾಜಿ ಮಾಡಿಕೊಳ್ಳುವಂತಿಲ್ಲ ಎಂದೂ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಅಗತ್ಯವಿದ್ದಲ್ಲಿ, ಇಂತಹ ಪ್ರಸ್ತಾವನೆಗಳನ್ನು ಮೊದಲು ಪ್ರಕರಣಗಳ ಪರಿಶೀಲನಾ ಸಮಿತಿಯ ಮುಂದೆ ಮಂಡಿಸಿ ಪರಿಶೀಲನೆ ನಡೆಸಬೇಕು.

ಎಲ್ಲ ನ್ಯಾಯಾಂಗ ಪ್ರಕರಣಗಳ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ಇ-ಆಫೀಸ್ ವ್ಯವಸ್ಥೆಯ ಮೂಲಕ ನಿರ್ವಹಿಸಬೇಕು. ಪ್ರಕರಣಗಳ ಸಮರ್ಥ ನಿರ್ವಹಣೆಗಾಗಿ ವಿದ್ಯುನ್ಮಾನ ಸಂವಹನ, ಡಿಜಿಟಲ್ ಪ್ರಕರಣ ನಿರ್ವಹಣಾ ವ್ಯವಸ್ಥೆ, ಕಾನೂನು ದತ್ತಾಂಶ ಸಂಗ್ರಹ ಹಾಗೂ ಕೃತಕ ಬುದ್ಧಿಮತ್ತೆ ಸೇರಿದಂತೆ ತಂತ್ರಜ್ಞಾನ ಆಧಾರಿತ ಸಾಧನಗಳನ್ನು ಅನುಮತಿ ಇರುವ ಕಡೆಗಳಲ್ಲಿ ಬಳಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.