ಬಾಲಿವುಡ್

AI ವಿರುದ್ಧ ಸಿಡಿದೆದ್ದ ಕನ್ನಡ ನಟಿ; ಅಮೆರಿಕದ ಎಐ ಕಂಪನಿಗೆ ₹7,000 ಕೋಟಿ ಶಾಕ್ ಕೊಟ್ಟ ಊರ್ವಶಿ ರೌಟೇಲಾ!

ನಟ ದರ್ಶನ್ ಅಭಿನಯದ ಐರಾವತ ಚಿತ್ರದ ನಾಯಕಿ ಊರ್ವಶಿ ರೌಟೇಲಾ ಅವರು, ತಮ್ಮ ಅನುಮತಿಯಿಲ್ಲದೆ ತಮ್ಮ ಡಿಜಿಟಲ್ ಗುರುತನ್ನು ಬಳಸಿದ್ದಕ್ಕಾಗಿ ಅಮೆರಿಕದ AI ಕಂಪನಿಯೊಂದರ ವಿರುದ್ಧ ಬರೋಬ್ಬರಿ ₹7,000 ಕೋಟಿ ನಷ್ಟ ಪರಿಹಾರ ಕೇಳಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

AI ವಿರುದ್ಧ ಸಿಡಿದೆದ್ದ ಕನ್ನಡ ನಟಿ; ಅಮೆರಿಕದ ಎಐ ಕಂಪನಿಗೆ ₹7,000 ಕೋಟಿ ಶಾಕ್ ಕೊಟ್ಟ ಊರ್ವಶಿ ರೌಟೇಲಾ!
ಊರ್ವಶಿ ರೌಟೇಲಾ — Online Desk
Published On :

ನಟ ದರ್ಶನ್ ಅಭಿನಯದ ಐರಾವತ ಚಿತ್ರದ ನಾಯಕಿ ಊರ್ವಶಿ ರೌಟೇಲಾ ಅವರು, ತಮ್ಮ ಅನುಮತಿಯಿಲ್ಲದೆ ತಮ್ಮ ಡಿಜಿಟಲ್ ಗುರುತನ್ನು ಬಳಸಿದ್ದಕ್ಕಾಗಿ ಅಮೆರಿಕದ ಎಐ (AI) ಕಂಪನಿಯೊಂದರ ವಿರುದ್ಧ ಬರೋಬ್ಬರಿ ₹7,000 ಕೋಟಿ ನಷ್ಟ ಪರಿಹಾರ ಕೇಳಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಏನಿದು ವಿವಾದ?

ಅಮೆರಿಕದ ಲಾಸ್ ಏಂಜಲೀಸ್ ಮೂಲದ Bollywood.AI ಮತ್ತು Hollywood.AI ಎಂಬ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಂಸ್ಥೆಯ ಸ್ಥಾಪಕ ಮತ್ತು ಸಿಇಒ ಶಿರಾಜ್ ಹಸನ್ ವಿರುದ್ಧ ಊರ್ವಶಿ ತಂಡ ಈ ಆರೋಪ ಮಾಡಿದ್ದು, ಊರ್ವಶಿ ಅವರ ಅನುಮತಿ ಅಥವಾ ಯಾವುದೇ ಮುನ್ಸೂಚನೆ ಇಲ್ಲದೆ ಅವರ ಹೆಸರು, ಫೋಟೋ ಹಾಗೂ ವೀಡಿಯೋಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಅಕ್ರಮವಾಗಿ ಬಳಸಿಕೊಳ್ಳಲಾಗಿದೆ ಎಂದು ದೂರಿದ್ದಾರೆ.

₹7,000 ಕೋಟಿ ಪರಿಹಾರಕ್ಕೆ ಬೇಡಿಕೆ?

ನಟಿಯ ಕಾನೂನು ತಂಡದ ಪ್ರಕಾರ, ಆ ಎಐ ಸಂಸ್ಥೆಯು ಊರ್ವಶಿ ಅವರ ಡಿಜಿಟಲ್ ಗುರುತನ್ನು ಬಳಸಿಕೊಂಡು ಬಿಲಿಯನ್ ಡಾಲರ್ ಮೌಲ್ಯದ ವ್ಯವಹಾರ ಮತ್ತು ಆದಾಯವನ್ನು ಗಳಿಸಿದೆ. ಈ ಹಿನ್ನೆಲೆಯಲ್ಲಿ ಉಂಟಾಗಿರುವ ಹಾನಿಯನ್ನು ಸುಮಾರು $840 ಮಿಲಿಯನ್ (ಪ್ರಸ್ತುತ ₹7,000 ಕೋಟಿ) ಎಂದು ಅಂದಾಜಿಸಲಾಗಿದ್ದು, ಸೂಕ್ತ ಪರಿಹಾರಕ್ಕಾಗಿ ಕಾನೂನು ಮಾರ್ಗಗಳನ್ನು ಅನುಸರಿಸಲಾಗುತ್ತಿದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಣೆ ಹಂಚಿಕೊಳ್ಳಲಾಗಿದೆ. ಇದೇ ವೇಳೆ, ಊರ್ವಶಿ ತಂಡವು ಸಂಸ್ಥೆಗೆ ಎಚ್ಚರಿಕೆ ನೀಡುತ್ತಾ, "ನಿಮ್ಮ ಎಐ ಕಂಪನಿಯನ್ನು ಬೆಳೆಸಿಕೊಳ್ಳಿ, ನಿಮ್ಮ ಬ್ರ್ಯಾಂಡ್ ನಿರ್ಮಿಸಿಕೊಳ್ಳಿ. ಆದರೆ ಅನುಮತಿ ಇಲ್ಲದೆ ಊರ್ವಶಿ ಹೆಸರನ್ನು ನಿಮ್ಮ ಬಿಸಿನೆಸ್‌ಗೆ ಬಳಸಬೇಡಿ" ಎಂದು ಖಡಕ್ ಆಗಿ ಹೇಳಿದೆ.

ಎಐ ಕಂಪನಿಯ ಪ್ರತಿಕ್ರಿಯೆ ಏನು?

ಈ ₹7,000 ಕೋಟಿಯ ದಾವೆಗೆ ಪ್ರತಿಕ್ರಿಯಿಸಿರುವ ಕಂಪನಿಯ ಮುಖ್ಯಸ್ಥ ಶಿರಾಜ್ ಹಸನ್, ಈ ಆರೋಪಗಳು ಹಾಸ್ಯಾಸ್ಪದ ಎಂದಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಊರ್ವಶಿ ಅವರಿಗೆ ಬಾಲಿವುಡ್ ಮತ್ತು ಎಐ ಬಗ್ಗೆ ಪ್ರಶ್ನೆ ಕೇಳಿದಾಗ, ಅವರು ನೀಡಿದ ಸ್ವಂತ ಹೇಳಿಕೆಗಳೇ ವೈರಲ್ ಆಗಿದ್ದವು. ಹೀಗಾಗಿ, "ನಾವು ನಿಮ್ಮ ಬಾಯಿಗೆ ಮಾತುಗಳನ್ನು ತುರುಕಿಲ್ಲ. ಮನರಂಜನಾ ಜಗತ್ತಿನ ಭವಿಷ್ಯವಾದ ಎಐ ಬಗ್ಗೆ ಮೊದಲು ಅರಿವು ಮೂಡಿಸಿಕೊಳ್ಳಿ" ಎಂದು ತಿರುಗೇಟು ನೀಡಿದ್ದಾರೆ.

ಏತನ್ಮಧ್ಯೆ, ಪ್ರಸ್ತುತ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸೆಲೆಬ್ರಿಟಿಗಳ ಧ್ವನಿ, ಫೋಟೋ ಮತ್ತು ಮುಖವನ್ನು ಎಐ ಹಾಗೂ ಡೀಪ್‌ಫೇಕ್ ಮೂಲಕ ದುರ್ಬಳಕೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿಂದೆ ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್, ಪ್ರೀತಿ ಜಿಂಟಾ, ಮೋಹನ್‌ಲಾಲ್, ಮತ್ತು ಚಿರಂಜೀವಿ ಅವರಂತಹ ಹಿರಿಯ ನಟರು ಕೂಡ ತಮ್ಮ ಪರ್ಸನಾಲಿಟಿ ರೈಟ್ಸ್ ರಕ್ಷಣೆಗಾಗಿ ಕೋರ್ಟ್ ಮೆಟ್ಟಿಲೇರಿ ಮಧ್ಯಂತರ ಪರಿಹಾರ ಪಡೆದಿದ್ದಾರೆ. ಆದರೆ, ಊರ್ವಶಿ ರೌಟೇಲಾ ಕೇಳಿರುವ ₹7,000 ಕೋಟಿಯ ಬೃಹತ್ ಮೊತ್ತ ಇತಿಹಾಸದಲ್ಲೇ ಅತ್ಯಂತ ದೊಡ್ಡ ಕಾನೂನು ಸಮರಗಳಲ್ಲಿ ಒಂದಾಗಿ ಗಮನ ಸೆಳೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.