ವಾರಸುದಾರರಿಲ್ಲದ ಜಮೀನು ಇನ್ಮುಂದೆ 'ಸರ್ಕಾರ'ದ ವಶಕ್ಕೆ: ವಂಚನೆ ತಡೆಯಲು ಕಠಿಣ ನಿಯಮ ಜಾರಿ; ಭೂ ಮಾಫಿಯಾಗೆ ಬಿಗ್ ಶಾಕ್..!
ರಾಜ್ಯದ ಕಂದಾಯ ಆಯುಕ್ತಾಲಯವು ಮೇ 20, 2026 ರಂದು ಅತ್ಯಂತ ಮಹತ್ವದ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಮೃತ ಭೂಮಾಲೀಕರಿಗೆ ಯಾವುದೇ ಕಾನೂನುಬದ್ಧ ವಾರಸುದಾರರು ಇಲ್ಲದಿರುವ ಜಮೀನುಗಳ ದುರುಪಯೋಗವನ್ನು ತಡೆಯಲು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.

ಬೆಳಗಾವಿ: ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಭೂ ಅಕ್ರಮ, ನಕಲಿ ದಾಖಲೆ ಸೃಷ್ಟಿ ಹಾಗೂ ಅಕ್ರಮ ಪಹಣಿ (RTC) ಬದಲಾವಣೆಗಳಿಗೆ ಕಡಿವಾಣ ಹಾಕಲು ಕರ್ನಾಟಕ ಕಂದಾಯ ಆಯುಕ್ತಾಲಯ (KRC) ಮಹತ್ವದ ನಿರ್ಧಾರ ಕೈಗೊಂಡಿದೆ.
ರಾಜ್ಯದ ಕಂದಾಯ ಆಯುಕ್ತಾಲಯವು ಮೇ 20, 2026 ರಂದು ಅತ್ಯಂತ ಮಹತ್ವದ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಮೃತ ಭೂಮಾಲೀಕರಿಗೆ ಯಾವುದೇ ಕಾನೂನುಬದ್ಧ ವಾರಸುದಾರರು ಇಲ್ಲದಿರುವ ಜಮೀನುಗಳ ದುರುಪಯೋಗವನ್ನು ತಡೆಯಲು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.
ಕಂದಾಯ ಆಯುಕ್ತಾಲಯದ ‘ಭೂಮಿ ಉಸ್ತುವಾರಿ ವಿಭಾಗ’ ನೀಡಿರುವ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಹೊಸ ನಿಯಮಾವಳಿಗಳ ಪ್ರಕಾರ, ಸರ್ಕಾರದ ಇ-ಪೌತಿ ತಂತ್ರಾಂಶ ಮತ್ತು ಆಧಾರ್ ಜೋಡಣೆ ಪರಿಶೀಲನೆಯ ಸಂದರ್ಭದಲ್ಲಿ, ಯಾವುದೇ ಒಬ್ಬ ಮೃತ ಜಮೀನು ಮಾಲೀಕನಿಗೆ ಕಾನೂನುಬದ್ಧ ವಾರಸುದಾರರು ಇಲ್ಲ ಎಂಬುದು ಗ್ರಾಮ ಆಡಳಿತಾಧಿಕಾರಿಗಳ ಪರಿಶೀಲನೆಯಲ್ಲಿ ದೃಢಪಟ್ಟರೆ, ಅಂತಹ ಜಮೀನುಗಳನ್ನು ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ “ಸರ್ಕಾರಿ ಮೀಸಲು” ಎಂದು ದಾಖಲಿಸಲಾಗುತ್ತದೆ.
ಒಮ್ಮೆ ಈ ರೀತಿ ದಾಖಲಾದ ತಕ್ಷಣವೇ, ಆ ಜಮೀನುಗಳ ಖರೀದಿ, ಮಾರಾಟ, ಹಸ್ತಾಂತರ ಅಥವಾ ನೋಂದಣಿಯನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಸರ್ಕಾರದ ‘ಕಾವೇರಿ’ ತಂತ್ರಾಂಶದಲ್ಲಿ ಆಸ್ತಿಯ ವಹಿವಾಟನ್ನು ಲಾಕ್ ಮಾಡಲಾಗುತ್ತದೆ. ಇದರಿಂದಾಗಿ ಯಾವುದೇ ವ್ಯಕ್ತಿ ಆ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಲು ಅಥವಾ ತನ್ನ ಹೆಸರಿಗೆ ವರ್ಗಾಯಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಹೀಗೆ ವಾರಸುದಾರರಿಲ್ಲದ ಜಮೀನುಗಳ ಪ್ರಕರಣಗಳನ್ನು ಕಂದಾಯ ನ್ಯಾಯಾಲಯ ಪ್ರಕರಣ ನಿರ್ವಹಣಾ ವ್ಯವಸ್ಥೆಯ ಮೂಲಕ ನೇರವಾಗಿ ತಹಶೀಲ್ದಾರ್ ಗ್ರೇಡ್-1 ನ್ಯಾಯಾಲಯಗಳಿಗೆ ವರ್ಗಾಯಿಸಿ, ಅವುಗಳನ್ನು ವಿವಾದಿತ ಪ್ರಕರಣಗಳೆಂದು ಪರಿಗಣಿಸಲಾಗುತ್ತದೆ.
ತಹಶೀಲ್ದಾರರು ಇಂತಹ ಭೂಮಿಯ ಬಗ್ಗೆ ಸಾರ್ವಜನಿಕ ಪ್ರಕಟಣೆ ಅಥವಾ ನೋಟಿಸ್ ಹೊರಡಿಸಿ, ಸಮಗ್ರ ತನಿಖೆ ನಡೆಸಲಿದ್ದಾರೆ. ತನಿಖೆಯ ನಂತರವೂ ಯಾವುದೇ ನೈಜ ವಾರಸುದಾರರು ಪತ್ತೆಯಾಗದಿದ್ದಲ್ಲಿ, ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಅಡಿಯಲ್ಲಿ ಆ ಜಮೀನನ್ನು ಸಂಪೂರ್ಣವಾಗಿ ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳಲಿದೆ.
ಒಂದು ವೇಳೆ ಜಮೀನಿನ ಅಸಲಿ ವಾರಸುದಾರರು ತಡವಾಗಿ ಕಂದಾಯ ಅಧಿಕಾರಿಗಳ ಮುಂದೆ ಹಾಜರಾದರೆ, ಅವರು ಸೂಕ್ತ ದಾಖಲೆಗಳನ್ನು ಒದಗಿಸಿ ಸಂಬಂಧಪಟ್ಟ ಉಪವಿಭಾಗಾಧಿಕಾರಿಗಳ ಮೂಲಕ "ಸರ್ಕಾರಿ ಮೀಸಲು" ಸ್ಥಾನಮಾನವನ್ನು ರದ್ದುಪಡಿಸಿಕೊಂಡು ಜಮೀನನ್ನು ಮರಳಿ ಪಡೆಯಲು ಕಂದಾಯ ಇಲಾಖೆ ಅವಕಾಶ ಕಲ್ಪಿಸಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಮೀನಿನ ಅಸಲಿ ಮಾಲೀಕರು ಅಥವಾ ವಾರಸುದಾರರು ಇಲ್ಲದಿರುವುದನ್ನು ಬಂಡವಾಳ ಮಾಡಿಕೊಳ್ಳುತ್ತಿದ್ದ ಭೂಮಾಫಿಯಾದವರು, ಕೆಲವು ಭ್ರಷ್ಟ ಕಂದಾಯ ಅಧಿಕಾರಿಗಳ ಜೊತೆ ಶಾಮೀಲಾಗಿ ನಕಲಿ ದಾಖಲೆಗಳ ಮೂಲಕ ಪಹಣಿಯಲ್ಲಿ ತಮ್ಮ ಹೆಸರುಗಳನ್ನು ಸೇರಿಸಿಕೊಳ್ಳುತ್ತಿದ್ದರು, ಈ ಬಗ್ಗೆ ಹಲವು ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.
ಸರ್ಕಾರದ ಈ ಹೊಸ ಡಿಜಿಟಲ್ ವ್ಯವಸ್ಥೆ ಮತ್ತು ಕಟ್ಟುನಿಟ್ಟಿನ ನಿಯಮದಿಂದಾಗಿ ಇಂತಹ ಭೂ ಕಬಳಿಕೆ ದಂಧೆಗೆ ಸಂಪೂರ್ಣವಾಗಿ ಬ್ರೇಕ್ ಬೀಳಲಿದೆ ಎಂದು ಹಿರಿಯ ಕಂದಾಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



