ರಾಜ್ಯ

ಕಂದಾಯ ಇಲಾಖೆ ಸಂಪೂರ್ಣ ಡಿಜಿಟಲೀಕರಣಕ್ಕೆ ಸರ್ಕಾರ ನಿರ್ಧಾರ: ಸಚಿವ ಕೃಷ್ಣ ಬೈರೇಗೌಡ

ಐದು ವರ್ಷಕ್ಕಿಂತ ಹೆಚ್ಚು ಕಾಲ ಬಾಕಿ ಉಳಿದಿದ್ದ 32,782 ಪ್ರಕರಣಗಳಲ್ಲಿ ಇದೀಗ ಕೇವಲ 3,155 ಪ್ರಕರಣಗಳು ಮಾತ್ರ ಉಳಿದಿದ್ದು, ಮುಂದಿನ ಎರಡು ತಿಂಗಳಲ್ಲಿ ಅವುಗಳನ್ನೂ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಕಂದಾಯ ಇಲಾಖೆ ಸಂಪೂರ್ಣ ಡಿಜಿಟಲೀಕರಣಕ್ಕೆ ಸರ್ಕಾರ ನಿರ್ಧಾರ: ಸಚಿವ ಕೃಷ್ಣ ಬೈರೇಗೌಡ
ಕಂದಾಯ ಸಚಿವ ಕೃಷ್ಣ ಬೈರೇಗೌಡ
Published On :

ಗದಗ: ರಾಜ್ಯದ ಕಂದಾಯ ಇಲಾಖೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಿ ಸಾರ್ವಜನಿಕರಿಗೆ ಪಾರದರ್ಶಕ ಸೇವೆ ನೀಡುವ ಹಾಗೂ ಮಧ್ಯವರ್ತಿಗಳ ಹಾವಳಿಯನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸೋಮವಾರ ಹೇಳಿದ್ದಾರೆ.

ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಮಾತನಾಡಿದ ಸಚಿವರು, “ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ತಹಶೀಲ್ದಾರ್ ಕಚೇರಿಗಳಲ್ಲಿ 10,774 ಪ್ರಕರಣಗಳು ಬಾಕಿ ಇದ್ದವು. ವಿಶೇಷ ಅಭಿಯಾನದ ಮೂಲಕ ಅವುಗಳನ್ನು ಇತ್ಯರ್ಥಗೊಳಿಸಿ ಈಗ ಕೇವಲ 478 ಪ್ರಕರಣಗಳು ಮಾತ್ರ ಉಳಿದಿವೆ ಎಂದು ಹೇಳಿದರು.

ಐದು ವರ್ಷಕ್ಕಿಂತ ಹೆಚ್ಚು ಕಾಲ ಬಾಕಿ ಉಳಿದಿದ್ದ 32,782 ಪ್ರಕರಣಗಳಲ್ಲಿ ಇದೀಗ ಕೇವಲ 3,155 ಪ್ರಕರಣಗಳು ಮಾತ್ರ ಉಳಿದಿದ್ದು, ಮುಂದಿನ ಎರಡು ತಿಂಗಳಲ್ಲಿ ಅವುಗಳನ್ನೂ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

‘ನನ್ನ ಭೂಮಿ ಅಭಿಯಾನ’ ಮೂಲಕ ಬಗರ್ ಹುಕುಂ ರೈತರ ಭೂಮಿ ಮತ್ತು RTC ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ. 2025 ಜನವರಿಯಿಂದ ಆರಂಭಿಸಿದ ಅಭಿಯಾನದಲ್ಲಿ ರಾಜ್ಯಾದ್ಯಂತ 1.93 ಲಕ್ಷ ಪ್ರಕರಣಗಳಲ್ಲಿ ಸರ್ವೇ ಮತ್ತು ಭೂ ಹಕ್ಕು ಪತ್ರ ತಿದ್ದುಪಡಿ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

ತಾಂಡಾ ಹಾಗೂ ಹಟ್ಟಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಯೋಜನೆಯಡಿ ಕಳೆದ ಆರು ವರ್ಷಗಳಲ್ಲಿ 1 ಲಕ್ಷ ಹಕ್ಕು ಪತ್ರ ವಿತರಿಸಲಾಗಿದ್ದು, ಪ್ರಸ್ತುತ ಸರ್ಕಾರದ ಅವಧಿಯಲ್ಲಿ 1.10 ಲಕ್ಷ ಜನರಿಗೆ ಹಕ್ಕು ಪತ್ರ ನೀಡಲಾಗಿದೆ. ಫೆಬ್ರವರಿ 14ರಂದು ಹಾವೇರಿಯಲ್ಲಿ ಮತ್ತಷ್ಟು ಹಕ್ಕು ಪತ್ರ ವಿತರಣೆ ನಡೆಯಲಿದೆ ಎಂದು ಹೇಳಿದರು.

ಮೃತರ ಹೆಸರಿನಲ್ಲಿ ಉಳಿದಿರುವ 49 ಲಕ್ಷ ಭೂಮಿಗಳನ್ನು ವಾರಸುದಾರರಿಗೆ ವರ್ಗಾಯಿಸುವ ಕಾರ್ಯ ನಡೆಯುತ್ತಿದ್ದು, ಈಗಾಗಲೇ 12 ಲಕ್ಷ ಜನರಿಗೆ ಭೂಮಿ ಹಸ್ತಾಂತರಿಸಲಾಗಿದೆ. ಗ್ರಾಮ ಲೆಕ್ಕಿಗರಿಗೆ 5,000 ಲ್ಯಾಪ್‌ಟಾಪ್ ಮತ್ತು ಸುಧಾರಿತ ಸರ್ವೇ ಉಪಕರಣಗಳನ್ನು ಒದಗಿಸಲಾಗಿದೆ ಎಂದು ಸಚಿವರು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸೇರಿದಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.