ರಾಜ್ಯ

ಶಕ್ತಿ ಯೋಜನೆ ಎಫೆಕ್ಟ್: ಆರ್ಥಿಕ ಸಂಕಷ್ಟದಲ್ಲಿ BMTC; ಸಾವಿರಾರು ಕೋಟಿ ರೂ ಬಾಕಿ; ವಿಫಲವಾಯಿತೇ ಸರ್ಕಾರ..?

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯಗಳನ್ನು ಪಡೆದಿದ್ದರೂ ಅದರ ಆರ್ಥಿಕ ಹೊರೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮೇಲೆ ಬೀರಿದೆ.

ಶಕ್ತಿ ಯೋಜನೆ ಎಫೆಕ್ಟ್: ಆರ್ಥಿಕ ಸಂಕಷ್ಟದಲ್ಲಿ BMTC; ಸಾವಿರಾರು ಕೋಟಿ ರೂ ಬಾಕಿ; ವಿಫಲವಾಯಿತೇ ಸರ್ಕಾರ..?
ಸಂಗ್ರಹ ಚಿತ್ರ
Published On :

ಬೆಂಗಳೂರು: ರಾಜ್ಯ ಸರ್ಕಾರ ತಮ್ಮ ಗ್ಯಾರಂಟಿ ಯೋಜನೆಗಳಿಂದಲೇ ಪಾಪರ್​ ಆಗುತ್ತಿದೆ, ಸರ್ಕಾರ ದಿವಾಳಿಯಾಗಿದೆ, ಸರ್ಕಾರದ ಬಳಿ ದುಡ್ಡಿಲ್ಲ ಎಂದು ಬಿಜೆಪಿ ನಾಯಕರು ಗಂಭೀರ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಪುರಾವೆ ಎಂಬಂತೆ ಪ್ರಮುಖ ಗ್ಯಾರಂಟಿ ಯೋಜನೆಯಾದ ಶಕ್ತಿ ಯೋಜನೆ ಬಾಕಿ ಹಣ ಸಾರಿಗೆ ಇಲಾಖೆಗೆ ತಲುಪಿಲ್ಲ ಎನ್ನಲಗುತ್ತಿದ್ದು, ಇದರಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸಂಕಷ್ಟಕ್ಕೆ ಸಿಲುಕಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯಗಳನ್ನು ಪಡೆದಿದ್ದರೂ ಅದರ ಆರ್ಥಿಕ ಹೊರೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮೇಲೆ ಬೀರಿದೆ.

ಸರ್ಕಾರದಿಂದ ನೀಡಬೇಕಿದ್ದ ಪರಿಹಾರ ಮೊತ್ತದಲ್ಲಿ ಸುಮಾರು 850 ಕೋಟಿ ರೂ. ಬಾಕಿ ಉಳಿದಿರುವುದು ಇದೀಗ ಸಾರಿಗೆ ಇಲಾಖೆಯ ಚಿಂತೆಗೆ ಕಾರಣವಾಗಿದೆ.

ಸರ್ಕಾರ ಒಟ್ಟು 3,097.27 ಕೋಟಿ ರೂ. ಪರಿಹಾರ ನೀಡಬೇಕಿದ್ದರೂ, ಇದುವರೆಗೆ ಕೇವಲ 2,247.35 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ಇದರಿಂದ ಬಿಎಂಟಿಸಿ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂದು ತಿಳಿದುಬಂದಿದೆ.

ಶಕ್ತಿ ಯೋಜನೆ ಪ್ರಾರಂಭವಾದ ನಂತರ 2026ರ ಫೆಬ್ರವರಿವರೆಗೆ ಕರ್ನಾಟಕದಾದ್ಯಂತ ಮಹಿಳೆಯರು 680.87 ಕೋಟಿ ಉಚಿತ ಪ್ರಯಾಣಗಳನ್ನು ಮಾಡಿದ್ದಾರೆ. ಅದರಲ್ಲಿ 217.62 ಕೋಟಿ ಪ್ರಯಾಣಗಳನ್ನು ಬಿಎಂಟಿಸಿ ಮೂಲಕವೇ ನೀಡಲಾಗಿದೆ. ಈ ಅಂಕಿಅಂಶಗಳು ವಿಧಾನ ಪರಿಷತ್‌ನಲ್ಲಿ ಎಚ್.ಎಸ್. ಗೋಪಿನಾಥ್ ಕೇಳಿದ ಪ್ರಶ್ನೆಗೆ ಉತ್ತರವಾಗಿ ಸರ್ಕಾರ ನೀಡಿದೆ.

ಯೋಜನೆ ಆರಂಭಕ್ಕೂ ಮುನ್ನವೇ ಬಿಎಂಟಿಸಿ ಸುಮಾರು 1,383.86 ಕೋಟಿ ರೂ. ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿತ್ತು. ಇಂಧನ ಕಂಪನಿಗಳಿಗೆ ಬಾಕಿ, ಭವಿಷ್ಯ ನಿಧಿ (PF) ಮತ್ತು ಪೂರೈಕೆದಾರರಿಗೆ ಪಾವತಿಸಬೇಕಾದ ಹಣ ಸೇರಿದಂತೆ ಹಲವು ಆರ್ಥಿಕ ಒತ್ತಡಗಳು ಸಂಸ್ಥೆಯನ್ನು ಸಂಕಷ್ಟಕ್ಕೆ ದೂಡಿದ್ದವು.

ನಂತರ ಡೀಸೆಲ್ ಬೆಲೆ ಏರಿಕೆ, ಸಿಬ್ಬಂದಿ ವೇತನ ಪರಿಷ್ಕರಣೆ ಹಾಗೂ ನಿರ್ವಹಣಾ ವೆಚ್ಚಗಳ ಏರಿಕೆಯಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ.

ಇದರ ನಡುವೆ ಸರ್ಕಾರ, ಶಕ್ತಿ ಯೋಜನೆಯಡಿ ಪ್ರತಿ ತಿಂಗಳು ಮುಂಗಡವಾಗಿ ಹಣ ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದೆ.

ಬಿಎಂಟಿಸಿ ಆರ್ಥಿಕ ಸ್ಥಿರತೆಗಾಗಿ 589.20 ಕೋಟಿ ರೂ. ಸಾಲ ಪಡೆಯಲು ಸರ್ಕಾರ ಭರವಸೆ ನೀಡಿದ್ದು, ಅದನ್ನು ತೀರಿಸಲು ಬಜೆಟ್ ಸಹಾಯ ಒದಗಿಸುವುದು ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದೆ.

ಇನ್ನೊಂದೆಡೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಕ್ರಮ ಕೈಗೊಂಡಿದ್ದು, ಡೀಸೆಲ್ ಹಾಗೂ ವಿದ್ಯುತ್ ಬಸ್‌ಗಳನ್ನು ಹೆಚ್ಚಿಸುವ ಕಾರ್ಯವನ್ನು ಕೈಗೊಳ್ಳುತ್ತಿದೆ. ಪ್ರಧಾನಮಂತ್ರಿ ಇ-ಡ್ರೈವ್ ಯೋಜನೆಯಡಿ 4,500 ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಅನುಮೋದನೆ ನೀಡಲಾಗಿದೆ. ಜೊತೆಗೆ 2026–27ರ ಬಜೆಟ್‌ನಲ್ಲಿ 1,000 ಡೀಸೆಲ್ ಬಸ್‌ಗಳನ್ನು ಸೇರಿಸುವ ಘೋಷಣೆಯನ್ನೂ ಮಾಡಿದೆ.

ಒಟ್ಟಾರೆ, ಶಕ್ತಿ ಯೋಜನೆ ಮಹಿಳೆಯರ ಪ್ರಯಾಣಕ್ಕೆ ದೊಡ್ಡ ನೆರವಾಗಿದ್ದರೂ, ಅದರ ಆರ್ಥಿಕ ಹೊರೆ ಸಾರಿಗೆ ಸಂಸ್ಥೆಗಳ ಮೇಲೆ, ವಿಶೇಷವಾಗಿ ಬಿಎಂಟಿಸಿಯ ಮೇಲೆ ಹೆಚ್ಚುತ್ತಿರುವುದು ಗಮನಾರ್ಹ ವಿಚಾರವಾಗಿದೆ. ಭವಿಷ್ಯದಲ್ಲಿ ಯೋಜನೆ ಮುಂದುವರಿಸಲು ಆರ್ಥಿಕ ಸಮತೋಲನ ಸಾಧಿಸುವುದು ಸರ್ಕಾರದ ಮುಂದಿರುವ ಪ್ರಮುಖ ಸವಾಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.