'ಶಕ್ತಿ' ಹೆಸರಲ್ಲಿ ಬೊಕ್ಕಸ ಲೂಟಿ: ನೌಕರರ ಹೊಟ್ಟೆಗೆ ಹೊಡೆಯುತ್ತಿರುವ ಮುಖ್ಯಮಂತ್ರಿಗಳೇ.. ಸಾರಿಗೆ ಸಂಸ್ಥೆಗಳ ಸರ್ವನಾಶ ಮಾಡುವುದೇ ನಿಮ್ಮ 'ಮಾದರಿ' ಆಡಳಿತವೇ..?
ಶಕ್ತಿ ತುಂಬುತ್ತೇವೆ ಎಂದು ಬೊಗಳೆ ಬಿಟ್ಟು ಈಗ ಸಾರಿಗೆ ಸಂಸ್ಥೆಗಳನ್ನೇ ದಿವಾಳಿ ಮಾಡಿದೆ. ರಾತ್ರಿ-ಹಗಲು ಕಷ್ಟಪಟ್ಟು ದುಡಿಯುವ ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರಿಗೆ ಈ ತಿಂಗಳು ವೇತನ ಸಿಗುವುದು ಅನುಮಾನವಾಗಿದೆ.

ಬೆಂಗಳೂರು: ಶಕ್ತಿ ಹೆಸರಲ್ಲಿ ಬೊಕ್ಕಸ ಲೂಟಿ ಮಾಡಿ, ನೌಕರರ ಹೊಟ್ಟೆಗೆ ಹೊಡೆಯುತ್ತಿರುವ ಮುಖ್ಯಮಂತ್ರಿಗಳೇ ಮತ್ತು ಸಾರಿಗೆ ಸಚಿವರೇ, ಸಾರಿಗೆ ಸಂಸ್ಥೆಗಳನ್ನು ಸರ್ವನಾಶ ಮಾಡುವುದೇ ನಿಮ್ಮ 'ಮಾದರಿʼ ಆಡಳಿತವೇ? ಎಂದು ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರನ್ನು ಬಿಜೆಪಿ ಪ್ರಶ್ನೆ ಮಾಡಿದೆ.
ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಬಿಎಂಟಿಸಿ ಚಾಲಕರು ಹಾಗೂ ನಿರ್ವಾಹಕರಿಗೆ ಈ ತಿಂಗಳ ವೇತನ ಸಿಗುವುದು ಅನುಮಾನವಾಗಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಶಕ್ತಿ ತುಂಬುತ್ತೇವೆ ಎಂದು ಬೊಗಳೆ ಬಿಟ್ಟು ಈಗ ಸಾರಿಗೆ ಸಂಸ್ಥೆಗಳನ್ನೇ ದಿವಾಳಿ ಮಾಡಿದೆ. ರಾತ್ರಿ-ಹಗಲು ಕಷ್ಟಪಟ್ಟು ದುಡಿಯುವ ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರಿಗೆ ಈ ತಿಂಗಳು ವೇತನ ಸಿಗುವುದು ಅನುಮಾನವಾಗಿದೆ.
ನೌಕರರ ಭವಿಷ್ಯದ ಭದ್ರತೆಗಾಗಿ ಮೀಸಲಿಟ್ಟಿದ್ದ ಭವಿಷ್ಯ ನಿಧಿ (PF) ಹಾಗೂ ಇನ್ಶೂರೆನ್ಸ್ ಹಣವನ್ನು ಬೇರೆ ಉದ್ದೇಶಗಳಿಗೆ ಅಕ್ರಮವಾಗಿ ಬಳಸಿಕೊಳ್ಳಲಾಗಿದೆ. ಬಸ್‌ಗಳಿಗೆ ಇಂಧನ ಪೂರೈಸುವ ತೈಲ ಕಂಪನಿಗಳಿಗೆ ರೂ.650 ಕೋಟಿ ಬಾಕಿ ಉಳಿಸಿಕೊಂಡಿದೆ.
ಬಿಡಿಭಾಗಗಳ ಖರೀದಿಗೆ ಕನಿಷ್ಠ ರೂ.50 ಕೋಟಿ ಇಲ್ಲದೇ, ಕಳಪೆ ಸ್ಥತಿಯ ಬಸ್‌ಗಳನ್ನು ರಸ್ತೆಗೆ ಇಳಿಸಲಾಗುತ್ತಿದೆ. ಬಸ್‌ಗಳ ಸಮರ್ಪಕ ದುರಸ್ತಿ ನಡೆಯದ ಹಿನ್ನೆಲೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಚಾಲಕರು ಮತ್ತು ನಿರ್ವಾಹಕರನ್ನೇ ಹೊಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದೆ.
ಶಕ್ತಿ ಯೋಜನೆಯ ಹೆಸರಿನಲ್ಲಿ ರಾಜ್ಯದ ಬೊಕ್ಕಸಕ್ಕೆ ಹೊರೆ ಹಾಕಿ, ಸಾರಿಗೆ ನೌಕರರ ಹಿತಾಸಕ್ತಿಯನ್ನೂ ಕಡೆಗಣಿಸಲಾಗುತ್ತಿದೆ ಎಂದು ಟೀಕಿಸಿರುವ ಬಿಜೆಪಿ, ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರು ಕೂಡಲೇ ನೌಕರರ ವೇತನ, ಪಿಎಫ್ ಹಣ ಹಾಗೂ ಸಾರಿಗೆ ಸಂಸ್ಥೆಗಳ ಬಾಕಿ ಮೊತ್ತವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದೆ. ಇಲ್ಲದಿದ್ದರೆ ನೌಕರರ ಹಕ್ಕುಗಳಿಗಾಗಿ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



