ಸಿಸಿಟಿವಿ ಕ್ಯಾಮೆರಾ ಇದೆ ಆದರೆ, ಬ್ಯಾಕಪ್ ಇಲ್ಲ; ಪೊಲೀಸ್ ಠಾಣೆಗಳ CCTVs, UPS ವ್ಯವಸ್ಥೆ ಕುರಿತು ಹೈಕೋರ್ಟ್ ಕಳವಳ, ತನಿಖೆಗೆ ಸೂಚನೆ
ವಿವಿಧ ಪೊಲೀಸ್ ಠಾಣೆಗಳಲ್ಲಿ ಅಳವಡಿಸಿರುವ ಸಿಸಿಟಿವಿ ಮತ್ತು ಯುಪಿಎಸ್ ವ್ಯವಸ್ಥೆಗಳ ಕುರಿತು ಸಲ್ಲಿಸಲಾದ ವರದಿಯಲ್ಲಿ ಹಲವು ಆತಂಕಕಾರಿ ಅಂಶಗಳಿವೆ ಎಂದು ನ್ಯಾಯಾಲಯ ಗಮನಿಸಿದೆ.

ಬೆಂಗಳೂರು: ರಾಜ್ಯದ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಪವರ್ ಬ್ಯಾಕಪ್ (ಯುಪಿಎಸ್) ವ್ಯವಸ್ಥೆ ಸಮರ್ಪಕವಾಗಿ ಕೆಲಸ ಮಾಡದಿರುವ ಬಗ್ಗೆ ಕರ್ನಾಟಕ ಹೈಕೋರ್ಟ್ ತೀವ್ರ ಕಳವಳ ಮತ್ತು ಆಕ್ರೋಶ ವ್ಯಕ್ತಪಡಿಸಿದೆ.
ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ತಮಗೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ರಾಜ್ಯದ ಎಲ್ಲ ಪೊಲೀಸ್ ಠಾಣೆಗಳು ಹಾಗೂ ಪೊಲೀಸ್ ಘಟಕಗಳಲ್ಲಿ ಸಿಸಿಟಿವಿ ಮತ್ತು ಯುಪಿಎಸ್ ವ್ಯವಸ್ಥೆಯ ಕಾರ್ಯನಿರ್ವಹಣೆ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದೆ.
ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರು (DG & IGP) ಈ ವಿಚಾರವನ್ನು ವೈಯಕ್ತಿಕವಾಗಿ ಪರಿಶೀಲಿಸಿ, ಸಮಗ್ರ ವಿಚಾರಣೆ ನಡೆಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.
ವಿವಿಧ ಪೊಲೀಸ್ ಠಾಣೆಗಳಲ್ಲಿ ಅಳವಡಿಸಿರುವ ಸಿಸಿಟಿವಿ ಮತ್ತು ಯುಪಿಎಸ್ ವ್ಯವಸ್ಥೆಗಳ ಕುರಿತು ಸಲ್ಲಿಸಲಾದ ವರದಿಯಲ್ಲಿ ಹಲವು ಆತಂಕಕಾರಿ ಅಂಶಗಳಿವೆ ಎಂದು ನ್ಯಾಯಾಲಯ ಗಮನಿಸಿದೆ.
ಯುಪಿಎಸ್ ಸ್ಥಿತಿಗೆ ಸಂಬಂಧಿಸಿದ ಕಾಲಂನಲ್ಲಿ ‘ಕಾರ್ಯನಿರ್ವಹಿಸುತ್ತಿಲ್ಲ’ ಎಂಬುದರ ಬದಲು ‘ನಿಲ್’ ಎಂದು ನಮೂದಿಸಲಾಗಿದೆ. ಇದರಿಂದ ರಾಜ್ಯದ ಎಲ್ಲ ಸಿಸಿಟಿವಿ ಕ್ಯಾಮೆರಾಗಳು 24 ಗಂಟೆ, ವರ್ಷದ 365 ದಿನವೂ ಕಾರ್ಯನಿರ್ವಹಿಸುತ್ತಿವೆ ಎಂಬಂತೆ ತೋರುತ್ತಿದೆ.
ಹೆಚ್ಚಿನ ಪೊಲೀಸ್ ಠಾಣೆಗಳಲ್ಲಿ ಸರಾಸರಿ ನಾಲ್ಕು ಸಿಸಿಟಿವಿ ಕ್ಯಾಮೆರಾಗಳಿದ್ದರೂ, ಅವುಗಳಿಗೆ ಒದಗಿಸಿರುವ ಯುಪಿಎಸ್ ಸಾಮರ್ಥ್ಯದಲ್ಲಿ ಭಾರಿ ವ್ಯತ್ಯಾಸವಿದೆ ಎಂದು ವರದಿ ತಿಳಿಸಿದೆ. ಕೆಲವು ಠಾಣೆಗಳಲ್ಲಿ ಕೇವಲ 0.5 ಕೆವಿಎ ಅಥವಾ 1 ಕೆವಿಎ ಸಾಮರ್ಥ್ಯದ ಯುಪಿಎಸ್ ಇದ್ದರೆ, ಇನ್ನು ಕೆಲವು ಕಡೆ 600 ಕೆವಿಎವರೆಗೆ ಸಾಮರ್ಥ್ಯದ ವ್ಯವಸ್ಥೆ ಇದೆ. ಕೆಲವೆಡೆ ಸಿಸಿಟಿವಿ ವ್ಯವಸ್ಥೆಯನ್ನು ಪೊಲೀಸ್ ಠಾಣೆಯ ಮುಖ್ಯ ಯುಪಿಎಸ್‌ಗೆ ಮಾತ್ರ ಸಂಪರ್ಕಿಸಲಾಗಿದೆ.
ಇಷ್ಟೊಂದು ವ್ಯತ್ಯಾಸದ ಸಾಮರ್ಥ್ಯದ ಯುಪಿಎಸ್‌ಗಳನ್ನು ಏಕೆ ಅಳವಡಿಸಲಾಗಿದೆ ಎಂಬುದನ್ನು ವರದಿ ವಿವರಿಸಿಲ್ಲ. ವಿದ್ಯುತ್ ಕಡಿತದ ಸಂದರ್ಭದಲ್ಲಿ ಸಿಸಿಟಿವಿ ವ್ಯವಸ್ಥೆ ನಿರಂತರವಾಗಿ ಕಾರ್ಯನಿರ್ವಹಿಸಲು ಈ ಯುಪಿಎಸ್‌ಗಳು ಸಾಕಷ್ಟು ಸಾಮರ್ಥ್ಯ ಹೊಂದಿವೆಯೇ ಎಂಬುದೂ ಸ್ಪಷ್ಟವಾಗಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಅಲ್ಲದೆ, ಸಿಸಿಟಿವಿಗೆ ಮೀಸಲಾದ ಯುಪಿಎಸ್ ಪ್ರತ್ಯೇಕ ವ್ಯವಸ್ಥೆಯೇ ಅಥವಾ ಪೊಲೀಸ್ ಠಾಣೆಯ ಇತರ ವಿದ್ಯುತ್ ಉಪಕರಣಗಳೊಂದಿಗೆ ಸಾಮಾನ್ಯ ಬ್ಯಾಕಪ್ ವ್ಯವಸ್ಥೆಯ ಭಾಗವೇ ಎಂಬುದೂ ಸ್ಪಷ್ಟವಾಗಿಲ್ಲ. ಈ ಕೊರತೆಗಳು ಪೊಲೀಸ್ ಠಾಣೆಗಳಲ್ಲಿ ನಿರಂತರ ನಿಗಾ ವಹಿಸುವ ಉದ್ದೇಶದ ಸಿಸಿಟಿವಿ ವ್ಯವಸ್ಥೆಯ ಬ್ಯಾಕಪ್ ಮೂಲಸೌಕರ್ಯ ಮತ್ತು ಪರಿಣಾಮಕಾರಿತ್ವದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಎಂದು ಹೈಕೋರ್ಟ್ ಹೇಳಿದೆ.
2024ರ ಸೆಪ್ಟೆಂಬರ್ 4ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 2.30ರ ನಡುವಿನ ಅವಧಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ಸಿಸಿಟಿವಿ ವ್ಯವಸ್ಥೆ ಮುಖ್ಯ ವಿದ್ಯುತ್ ಸಂಪರ್ಕ ಇದ್ದಾಗ ಮಾತ್ರ ಕಾರ್ಯನಿರ್ವಹಿಸುತ್ತಿತ್ತು ಎಂದು ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ವಿದ್ಯುತ್ ಕಡಿತವಾದಾಗ ಕಾರ್ಯನಿರ್ವಹಿಸುವ ಯುಪಿಎಸ್ ಅಗತ್ಯವಿತ್ತು. ಆದರೆ, ಸೆಪ್ಟೆಂಬರ್ 4, 2024ರಂದು ನಡೆದ ಘಟನೆ ಸೇರಿದಂತೆ ಸುಮಾರು 11 ತಿಂಗಳ ಕಾಲ ಯುಪಿಎಸ್ ಕಾರ್ಯನಿರ್ವಹಿಸಿರಲಿಲ್ಲ ಎಂದು ತಿಳಿಸಲಾಯಿತು.
ಹೀಗಾಗಿ, ವಿದ್ಯುತ್ ಕಡಿತದ ಸಂದರ್ಭದಲ್ಲಿ ಯುಪಿಎಸ್ ಕಾರ್ಯನಿರ್ವಹಿಸದ ಕಾರಣ, ಆರೋಪಿಸಲಾದ ಘಟನೆಯ ವೀಡಿಯೋ ಸಿಸಿಟಿವಿಯಲ್ಲಿ ದಾಖಲಾಗಿರಲಿಲ್ಲ ಎಂದು ಸರ್ಕಾರದ ಪರ ವಕೀಲರು ಹೇಳಿದರು. ಈ ವಾದವು ನ್ಯಾಯಾಲಯಕ್ಕೆ ಯಾವುದೇ ವಿಶ್ವಾಸ ಮೂಡಿಸುವಂತಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.
ಪೊಲೀಸ್ ಠಾಣೆಗಳಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾ ಇಡಲು ಹಾಗೂ ಠಾಣೆಗಳಲ್ಲಿ ನಡೆಯುವ ದೌರ್ಜನ್ಯ ಸೇರಿದಂತೆ ವಿವಿಧ ದೂರುಗಳ ಹಿನ್ನೆಲೆಯಲ್ಲಿ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಸುಪ್ರೀಂ ಕೋರ್ಟ್ ‘ಶಫಿ ಮೊಹಮ್ಮದ್ ವಿರುದ್ಧ ಹಿಮಾಚಲ ಪ್ರದೇಶ ಸರ್ಕಾರ’ ಪ್ರಕರಣದಲ್ಲಿ ನಿರ್ದೇಶನ ನೀಡಿರುವುದನ್ನೂ ನ್ಯಾಯಾಲಯ ನೆನಪಿಸಿತು.
ಹೈಕೋರ್ಟ್ ಸೂಚಿಸಿದ ಪ್ರಮುಖ ಸೂಚನೆಗಳು...
ರಾಜ್ಯದ ಪ್ರತಿ ಪೊಲೀಸ್ ಠಾಣೆಯ ಸಿಸಿಟಿವಿ ವ್ಯವಸ್ಥೆಯ ಸಂಪೂರ್ಣ ತಾಂತ್ರಿಕ ಮತ್ತು ಆಡಳಿತಾತ್ಮಕ ಪರಿಶೀಲನೆ ನಡೆಸಬೇಕು.
ಸಿಸಿಟಿವಿ ವ್ಯವಸ್ಥೆಗೆ ಒದಗಿಸಿರುವ ವಿದ್ಯುತ್ ಬ್ಯಾಕಪ್ ಹಾಗೂ ವಿದ್ಯುತ್ ಪೂರೈಕೆಯ ಸಂಪೂರ್ಣ ವಿವರಗಳನ್ನು ಪರಿಶೀಲಿಸಬೇಕು.
ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಮತ್ತು ಯುಪಿಎಸ್ ವ್ಯವಸ್ಥೆಗಳು ಸದಾ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಹೊಂದಿರುವ ಅಧಿಕಾರಿಗಳನ್ನು ಗುರುತಿಸಬೇಕು.
ಸಿಸಿಟಿವಿ ಅಳವಡಿಕೆ, ಕಾರ್ಯನಿರ್ವಹಣೆ, ನಿರ್ವಹಣೆ ಹಾಗೂ ದೃಶ್ಯಾವಳಿಗಳ ಸಂರಕ್ಷಣೆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ಸಂಪೂರ್ಣವಾಗಿ ಪಾಲಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು.
ಸಿಸಿಟಿವಿ ಅಥವಾ ವಿದ್ಯುತ್ ಬ್ಯಾಕಪ್ ವ್ಯವಸ್ಥೆ ದೀರ್ಘಕಾಲ ಕಾರ್ಯನಿರ್ವಹಿಸದಿರುವುದು ಕಂಡುಬಂದರೆ ಜವಾಬ್ದಾರಿ ನಿಗದಿಪಡಿಸಬೇಕು.
ರಾಜ್ಯದ ಪ್ರತಿ ಪೊಲೀಸ್ ಠಾಣೆ ಹಾಗೂ ಅಲ್ಲಿರುವ ಪ್ರತಿಯೊಂದು ಸಿಸಿಟಿವಿ ಕ್ಯಾಮೆರಾದ ಕಾರ್ಯಸ್ಥಿತಿಯನ್ನು ತೋರಿಸುವ ಕೇಂದ್ರೀಕೃತ ಡ್ಯಾಶ್‌ಬೋರ್ಡ್ ರಚಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



