1,000 ಮೆಗಾವ್ಯಾಟ್ ವಿದ್ಯುತ್ ಕೊರತೆಯಿದ್ದರೂ ಲೋಡ್ ಶೆಡ್ಡಿಂಗ್ ಇಲ್ಲ; ಕೃಷಿ ಪಂಪ್‌ಸೆಟ್‌ಗಳಿಗೆ 1 ಗಂಟೆ ಹೆಚ್ಚುವರಿ ಪೂರೈಕೆ: ಕೆ.ಜೆ ಜಾರ್ಜ್
ನಾನು ಅಧಿಕಾರಕ್ಕೆ ಬಂದಾಗ, (ರಾಜ್ಯದಲ್ಲಿ ವಿದ್ಯುತ್‌ಗೆ) ಬೇಡಿಕೆಯು ಸುಮಾರು 9,000 ದಿಂದ 10,000 ಮೆಗಾವ್ಯಾಟ್‌ನಷ್ಟಿತ್ತು. ಈಗ ಅದು ದ್ವಿಗುಣಗೊಂಡು 20,000 ಮೆಗಾವ್ಯಾಟ್‌ಗೆ ತಲುಪಿದೆ," ಎಂದು ಹೇಳಿದರು.

ಮೈಸೂರು: ರಾಜ್ಯದಲ್ಲಿ ಸುಮಾರು 1,000 ಮೆಗಾವ್ಯಾಟ್ ವಿದ್ಯುತ್ ಕೊರತೆ ಇದ್ದರೂ, ಸದ್ಯಕ್ಕೆ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ (ವಿದ್ಯುತ್ ಕಡಿತ) ಮಾಡುವ ಪ್ರಶ್ನೆಯೇ ಇಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ವಿದ್ಯುತ್ ಬೇಡಿಕೆ ಹೆಚ್ಚಳವಾದ ಸಮಯದಲ್ಲಿಯೇ ಕೆಟ್ಟು ಹೋಗಿದ್ದ ರಾಯಚೂರು ಉಷ್ಣ ವಿದ್ಯುತ್ ಸ್ಥಾವರ ಸರಿಪಡಿಸಲಾಯಿತು. ರಾಜ್ಯದಲ್ಲಿ ಎರಡು ದಿನ ವಿದ್ಯುತ್ ಪೂರೈಕೆ ಕಷ್ಟವಾಗಿತ್ತು. ಕೃಷಿ ಚಟುವಟಿಕೆಗಳಿಗೆ ಒಂದು ತಾಸು ವಿದ್ಯುತ್ ಕಡಿತಗೊಳಿಸಲಾಗಿತ್ತು. ಈಗ ವಿದ್ಯುತ್ ಕಡಿತ ಕೈಬಿಡಲಾಗುವುದು ಎಂದು ತಿಳಿಸಿದರು.
ರಾಜ್ಯವು ಕಳೆದ ಏಳು ತಿಂಗಳುಗಳಿಂದ ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆ ಎಂದು ತಿಳಿಸಿದರು. ರಾಜ್ಯವು ಹಣ ಪಾವತಿಸಲು ಸಿದ್ಧವಿದ್ದರೂ, ಇತರ ರಾಜ್ಯಗಳಿಂದ ವಿದ್ಯುತ್ ಖರೀದಿಸುವುದು ಕಷ್ಟಕರವಾಗಿದೆ. ಇಡೀ ದೇಶವೇ ಈ ಸಮಸ್ಯೆಯನ್ನು ಎದುರಿಸುತ್ತಿದೆ. ಆದರೂ, ವಿವಿಧ ರಾಜ್ಯಗಳಿಂದ ವಿದ್ಯುತ್ ಖರೀದಿಸುವ ಮೂಲಕ ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ ಎಂದು ಅವರು ಹೇಳಿದರು. ಕರ್ನಾಟಕದೊಳಗೆ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದೂ ಸಚಿವರು ತಿಳಿಸಿದರು.
ಭವಿಷ್ಯದಲ್ಲಿ ಪರಿಸ್ಥಿತಿ ಹದಗೆಟ್ಟರೆ, ಮುಖ್ಯಮಂತ್ರಿಯವರೊಂದಿಗೆ ಸಮಾಲೋಚಿಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು. ಆದರೆ ಸದ್ಯಕ್ಕೆ ಎಲ್ಲಿಯೂ ಲೋಡ್ ಶೆಡ್ಡಿಂಗ್ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ಕಳೆದ ವಾರ ತಾಂತ್ರಿಕ ಸಮಸ್ಯೆಯಿಂದಾಗಿ ಒಂದೆರಡು ದಿನಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ಅಲ್ಪ ವ್ಯತ್ಯಯ ಉಂಟಾಗಿತ್ತು. ಆದರೆ ಕೃಷಿ ಮತ್ತು ಗೃಹಬಳಕೆ ಎರಡಕ್ಕೂ ಸಾಕಷ್ಟು ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ," ಎಂದು ಅವರು ಹೇಳಿದರು. ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯ ಕುರಿತು ಮಾತನಾಡುತ್ತಾ, ಇನ್ನು ಮೂರ್ನಾಲ್ಕು ದಿನಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಹಿಂದಿನಂತೆ ಏಳು ತಾಸು ವಿದ್ಯುತ್ ಪೂರೈಸಲಾಗುವುದು ಎಂದು ಕೆ.ಜೆ.ಜಾರ್ಜ್ ಭರವಸೆ ನೀಡಿದ್ದಾರೆ.
"ನಾನು ಅಧಿಕಾರಕ್ಕೆ ಬಂದಾಗ, (ರಾಜ್ಯದಲ್ಲಿ ವಿದ್ಯುತ್‌ಗೆ) ಬೇಡಿಕೆಯು ಸುಮಾರು 9,000 ದಿಂದ 10,000 ಮೆಗಾವ್ಯಾಟ್‌ನಷ್ಟಿತ್ತು. ಈಗ ಅದು ದ್ವಿಗುಣಗೊಂಡು 20,000 ಮೆಗಾವ್ಯಾಟ್‌ಗೆ ತಲುಪಿದೆ," ಎಂದು ಹೇಳಿದರು.
ಹೆಚ್ಚಿದ ಬೇಡಿಕೆಯಿಂದಾಗಿ ಕಳೆದ ಒಂದು ವಾರದಿಂದ ಕೃಷಿ ಪಂಪ್‌ಸೆಟ್‌ಗಳಿಗೆ ದಿನಕ್ಕೆ ಒಂದು ಗಂಟೆ ಲೋಡ್ ಶೆಡ್ಡಿಂಗ್ ಜಾರಿಯಲ್ಲಿದೆ ಎಂದು ಅವರು ತಿಳಿಸಿದರು. ಆದರೆ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯನ್ನು ಹೆಚ್ಚುವರಿಯಾಗಿ ಒಂದು ಗಂಟೆ, ಅಂದರೆ ಆರು ಗಂಟೆಯಿಂದ ಏಳು ಗಂಟೆಗೆ ಹೆಚ್ಚಿಸಲು ನಾವು ನಿರ್ಧರಿಸಿದ್ದೇವೆ. ಮುಂದಿನ ತಿಂಗಳು ನಡೆಯಲಿರುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು," ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



