ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಂಕಿಂಗ್, ಉಳಿತಾಯ, ಹೂಡಿಕೆ, ಷೇರು ಮಾರುಕಟ್ಟೆ ಬಗ್ಗೆ ಪಾಠ: 956 ಪಬ್ಲಿಕ್ ಶಾಲೆಗಳಲ್ಲಿ ಜಾರಿ
ಮೊದಲ ಹಂತದಲ್ಲಿ ರಾಜ್ಯದಾದ್ಯಂತ ಇರುವ 956 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಈ ಉಪಕ್ರಮವನ್ನು ಜಾರಿಗೊಳಿಸಲಾಗುವುದು.

ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಬ್ಯಾಂಕಿಂಗ್, ಉಳಿತಾಯ, ಹೂಡಿಕೆ ಮತ್ತು ಷೇರು ಮಾರುಕಟ್ಟೆಯ ಮೂಲಭೂತ ಅಂಶಗಳನ್ನು ಕಲಿಸಲಾಗುವುದು. ರಾಜ್ಯ ಸರ್ಕಾರದ ಹೊಸ ಹಣಕಾಸು ಸಾಕ್ಷರತಾ ಉಪಕ್ರಮದ ಭಾಗವಾಗಿ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದೆ.
ಮೊದಲ ಹಂತದಲ್ಲಿ ರಾಜ್ಯದಾದ್ಯಂತ ಇರುವ 956 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಈ ಉಪಕ್ರಮವನ್ನು ಜಾರಿಗೊಳಿಸಲಾಗುವುದು. ಪ್ರೌಢಶಾಲೆ ಮತ್ತು ಪದವಿಪೂರ್ವ ಹಂತದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿರುವ ಈ ಕಾರ್ಯಕ್ರಮದ ಉದ್ದೇಶ ವಿದ್ಯಾರ್ಥಿಗಳಲ್ಲಿ ಹಣಕಾಸು ಯೋಜನೆ ಮತ್ತು ಹಣ ನಿರ್ವಹಣೆಯ ಅರಿವು ಮೂಡಿಸುವುದಾಗಿದೆ.
ಈ ಕುರಿತು ಕರ್ನಾಟಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ, ಕಾರ್ಯಕ್ರಮದಡಿ ಬ್ಯಾಂಕ್ ಅಧಿಕಾರಿಗಳು, ಹಣಕಾಸು ಸಲಹೆಗಾರರು ಹಾಗೂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜುಗಳ ಬೋಧಕ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಉಳಿತಾಯ, ಡಿಜಿಟಲ್ ಪಾವತಿ, ಜವಾಬ್ದಾರಿಯುತ ಸಾಲ ಪಡೆಯುವಿಕೆ, ವಿಮೆ ಮತ್ತು ತೆರಿಗೆಯ ಮೂಲಭೂತ ಅಂಶಗಳ ಕುರಿತು ತರಗತಿಗಳನ್ನು ನಡೆಸಲಿದ್ದಾರೆ ಎಂದು ತಿಳಿಸಲಾಗಿದೆ.
ಪಠ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳಿಗೆ ಷೇರು ಮಾರುಕಟ್ಟೆಯ ಪರಿಕಲ್ಪನೆಗಳು, ಷೇರುಗಳು, ವಹಿವಾಟು ಮತ್ತು ಹೂಡಿಕೆಗಳ ಬಗ್ಗೆ ಪರಿಚಯಿಸಲಾಗುವುದು. ಇದರಿಂದ ಚಿಕ್ಕ ವಯಸ್ಸಿನಲ್ಲೇ ಹಣಕಾಸು ವ್ಯವಸ್ಥೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವರಿಗೆ ನೆರವಾಗಲಿದೆ.
ಹಣಕಾಸು ವಂಚನೆಗಳ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಅವುಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಮಾರ್ಗಗಳ ಕುರಿತು ತಿಳಿಸುವುದಕ್ಕೂ ಕಾರ್ಯಕ್ರಮದಲ್ಲಿ ಒತ್ತು ನೀಡಲಾಗುವುದು.
ಕಾರ್ಯಾಗಾರಗಳು, ಸಂವಾದಾತ್ಮಕ ತರಗತಿಗಳು, ಪ್ರದರ್ಶನಗಳು, ಅನುಭವಾಧಾರಿತ ಕಲಿಕಾ ಕಾರ್ಯಕ್ರಮಗಳು ಮತ್ತು ಇತರ ಚಟುವಟಿಕೆಗಳ ಮೂಲಕ ಈ ಉಪಕ್ರಮವನ್ನು ಜಾರಿಗೊಳಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಮಾರ್ಗದರ್ಶನ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ಶಾಲೆಗಳು ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು, ಚಾರ್ಟರ್ಡ್ ಅಕೌಂಟೆಂಟ್‌ಗಳು, ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರಗಳು ಹಾಗೂ ಸಮೀಪದ ಕಾಲೇಜುಗಳೊಂದಿಗೆ ಸಮನ್ವಯ ಸಾಧಿಸುವಂತೆ ಸೂಚಿಸಲಾಗಿದೆ.
ಮಕ್ಕಳಿಗೆ ಹಣಕಾಸು ಜ್ಞಾನಕ್ಕೆ ಮುನ್ನಡೆ
ವಿದ್ಯಾರ್ಥಿಗಳಿಗೆ ಷೇರು ಮಾರುಕಟ್ಟೆ, ಷೇರುಗಳು, ವಹಿವಾಟು ಮತ್ತು ಹೂಡಿಕೆಯ ಮೂಲಭೂತ ಅಂಶಗಳನ್ನು ಪರಿಚಯಿಸಲಾಗುವುದು. ಮಾರುಕಟ್ಟೆಯ ಕಾರ್ಯನಿರ್ವಹಣೆ ಮತ್ತು ಹಣಕಾಸು ವಹಿವಾಟಿನ ಬಗ್ಗೆ ಪ್ರಾಯೋಗಿಕ ಅನುಭವ ಒದಗಿಸಲು ಬೆಂಗಳೂರು ಷೇರು ವಿನಿಮಯ ಕೇಂದ್ರ ಅಥವಾ ಇದೇ ರೀತಿಯ ಹಣಕಾಸು ಮಾರುಕಟ್ಟೆ ಸಂಸ್ಥೆಗಳಿಗೆ ಶೈಕ್ಷಣಿಕ ಪ್ರವಾಸಗಳನ್ನು ಆಯೋಜಿಸುವ ಉದ್ದೇಶವೂ ಕಾರ್ಯಕ್ರಮದಲ್ಲಿದೆ.
ಇದರ ಭಾಗವಾಗಿ ಬಜೆಟ್ ಸಿದ್ಧಪಡಿಸುವ ಕಸರತ್ತು, ಸರಳ ಬಡ್ಡಿ ಲೆಕ್ಕಾಚಾರ, ಉಳಿತಾಯದ ಕುರಿತು ಜಾಗೃತಿ ಅಭಿಯಾನಗಳು, ಪೋಸ್ಟರ್ ತಯಾರಿ ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗುವುದು.
ಯುಪಿಐ ಮತ್ತು ಎಟಿಎಂ ಬಳಕೆಯ ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳು, ಅಣಕು ಬ್ಯಾಂಕಿಂಗ್ ಚಟುವಟಿಕೆಗಳು, ಬ್ಯಾಂಕ್‌ಗಳಿಗೆ ಶೈಕ್ಷಣಿಕ ಪ್ರವಾಸಗಳು, ಷೇರು ಮಾರುಕಟ್ಟೆ ಜಾಗೃತಿ ಅಭಿಯಾನಗಳು, ಹೂಡಿಕೆ ಜಾಗೃತಿ ಕಾರ್ಯಕ್ರಮಗಳು ಹಾಗೂ ಡಿಜಿಟಲ್ ಹಣಕಾಸು ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಚಟುವಟಿಕೆಗಳನ್ನೂ ಹಮ್ಮಿಕೊಳ್ಳಲಾಗುವುದು.
ಸುತ್ತೋಲೆಯ ಪ್ರಕಾರ, ಶಾಲೆಗಳು ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಮತ್ತು ಚಾರ್ಟರ್ಡ್ ಅಕೌಂಟೆಂಟ್‌ಗಳೊಂದಿಗೆ ಸಮನ್ವಯ ಸಾಧಿಸಿ ವಿವಿಧ ಚಟುವಟಿಕೆಗಳ ವೇಳಾಪಟ್ಟಿಯನ್ನು ಸಿದ್ಧಪಡಿಸಬೇಕಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



