ನಗರದ ವಿದ್ಯಾರ್ಥಿಗಳಿಗೆ ಹಳ್ಳಿ ಜೀವನದ ಪಾಠ: Gramanubhav ಯೋಜನೆಗೆ ಸರ್ಕಾರ ಚಾಲನೆ!
ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಸಾಂಸ್ಕೃತಿಕ ಹಾಗೂ ಸಾಮಾಜಿಕ ಅಂತರವನ್ನು ಕಡಿಮೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಬೆಂಗಳೂರು: ನಗರ ಪ್ರದೇಶದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕು ಹಾಗೂ ಕೃಷಿ ಚಟುವಟಿಕೆಗಳ ಪ್ರಾಯೋಗಿಕ ಜ್ಞಾನವನ್ನು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು ‘ಗ್ರಾಮಾನುಭವ’ (ಗ್ರಾಮೀಣ ಅನುಭವ ಕಾರ್ಯಕ್ರಮ) ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ.
ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯ ‘ಮೊದಲ 100 ದಿನಗಳ’ ಕಾರ್ಯಸೂಚಿಯ ಭಾಗವಾಗಿ ಈ ಯೋಜನೆಗೆ ಅಧಿಕೃತ ಅನುಮೋದನೆ ದೊರೆತಿದೆ.
ಇದರದಂತೆ ರಾಜ್ಯದಾದ್ಯಂತ ‘ಗ್ರಾಮಾನುಭವ’ (Gramanubhav) ಕಾರ್ಯಕ್ರಮವನ್ನು ಜಾರಿಗೊಳಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಘೋಷಿಸಿದೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಸಾಂಸ್ಕೃತಿಕ ಹಾಗೂ ಸಾಮಾಜಿಕ ಅಂತರವನ್ನು ಕಡಿಮೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ನಗರದ ವಿದ್ಯಾರ್ಥಿಗಳು ಕೇವಲ ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ಬದಲು, ನೇರವಾಗಿ ಹಳ್ಳಿಗಳಿಗೆ ಭೇಟಿ ನೀಡಿ, ಅಲ್ಲಿನ ರೈತರೊಂದಿಗೆ ಕಾಲ ಕಳೆಯಲು ಈ ಕಾರ್ಯಕ್ರಮ ವೇದಿಕೆ ಕಲ್ಪಿಸಲಿದೆ.
ಜಿಲ್ಲಾ ಕೇಂದ್ರಗಳ ವ್ಯಾಪ್ತಿಯಲ್ಲಿರುವ ನಗರ ಪ್ರದೇಶಗಳ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ 8, 9 ಮತ್ತು 11ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಗ್ರಾಮಗಳಿಗೆ ಕರೆದೊಯ್ದು, ಅವರಿಗೆ ಗ್ರಾಮೀಣ ಬದುಕಿನ ನೇರ ಅನುಭವ ನೀಡಲಾಗುತ್ತದೆ.
ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಕಲೆ ಹಾಗೂ ಸಂಸ್ಕೃತಿ ಸೇರಿದಂತೆ ಗ್ರಾಮೀಣ ಜೀವನದ ವಿವಿಧ ಆಯಾಮಗಳನ್ನು ವಿದ್ಯಾರ್ಥಿಗಳು ನೇರವಾಗಿ ಅರಿತುಕೊಳ್ಳುವ ಅವಕಾಶವನ್ನು ಈ ಕಾರ್ಯಕ್ರಮದ ಮೂಲಕ ಕಲ್ಪಿಸಲಾಗುತ್ತದೆ.
ವಿದ್ಯಾರ್ಥಿಗಳು ಎರಡು ದಿನಗಳ ಕಾಲ ಗ್ರಾಮದಲ್ಲೇ ವಾಸ್ತವ್ಯ ಹೂಡಲಿದ್ದು, ಒಂದು ರಾತ್ರಿ ಅಲ್ಲಿಯೇ ತಂಗಲಿದ್ದಾರೆ. ಈ ವೇಳೆ ಗ್ರಾಮೀಣ ಜೀವನಶೈಲಿ ಹಾಗೂ ಕೃಷಿ ಚಟುವಟಿಕೆಗಳ ಕುರಿತು ಅವರಿಗೆ ಮಾಹಿತಿ ಮತ್ತು ಪ್ರಾಯೋಗಿಕ ಅನುಭವ ನೀಡಲಾಗುತ್ತದೆ.
‘ಎಕ್ಸ್‌ಪೋಶರ್ ವಿಸಿಟ್ ಫ್ರೇಮ್‌ವರ್ಕ್’ ಅಡಿಯಲ್ಲಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ಪ್ರತಿ ಶೈಕ್ಷಣಿಕ ವರ್ಷದ ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ಜಾರಿಗೊಳಿಸಲಾಗುತ್ತದೆ. ಶಾಲಾ ಮಟ್ಟದಲ್ಲಿ ಕಾರ್ಯಕ್ರಮದ ಕುರಿತು ಮಾಹಿತಿ ಮತ್ತು ಸಂವಹನ ಕಾರ್ಯಗಳನ್ನು ಜನವರಿ ಅಥವಾ ಫೆಬ್ರವರಿಯಲ್ಲಿ ಕೈಗೊಳ್ಳಲಾಗುತ್ತದೆ.
ನಗರ ಪ್ರದೇಶಗಳಲ್ಲಿರುವ ಪಿಎಂಶ್ರೀ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲೂ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



