ಪತ್ನಿ ಹತ್ಯೆಗೈದಿದ್ದವ 23 ವರ್ಷಗಳ ಬಳಿಕ ಬಂಧನ: ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಹೇಗೆ?
74 ವರ್ಷದ ಹನುಮಂತಪ್ಪ ಹುಸೇನಪ್ಪ ಬಂಧಿತ ಆರೋಪಿ. ಕೊಲೆ ಮಾಡಿದ್ದಾಗ ಆರೋಪಿಗೆ 49 ವರ್ಷ ವಯಸ್ಸಾಗಿತ್ತು. ಪತ್ನಿಯ ಕೊಲೆ ಆರೋಪದಡಿ 2002ರಲ್ಲಿ ನಗರ ಪೊಲೀಸರು ಬಂಧಿಸಿದ್ದರು.

ಕೊಪ್ಪಳ: ಪತ್ನಿಯ ಹತ್ಯೆಗೈದು ತೀರ್ಪು ವೇಳೆ ಕೋರ್ಟ್‌ನಿಂದ ಪರಾರಿಯಾಗಿದ್ದ ಕೊಲೆ ಆರೋಪಿಯನ್ನು 23 ವರ್ಷಗಳ ನಂತರ ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದು, ನ್ಯಾಯಾಂಗ ಬಂಧನಕ್ಕೆ ಗುರುವಾರ ಒಪ್ಪಿಸಿದ್ದಾರೆ.
74 ವರ್ಷದ ಹನುಮಂತಪ್ಪ ಹುಸೇನಪ್ಪ ಬಂಧಿತ ಆರೋಪಿ. ಕೊಲೆ ಮಾಡಿದ್ದಾಗ ಆರೋಪಿಗೆ 49 ವರ್ಷ ವಯಸ್ಸಾಗಿತ್ತು. ಪತ್ನಿಯ ಕೊಲೆ ಆರೋಪದಡಿ 2002ರಲ್ಲಿ ನಗರ ಪೊಲೀಸರು ಬಂಧಿಸಿದ್ದರು.
ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತೀರ್ಪು ನೀಡುವ ದಿನ ಪ್ರಕಟವಾಗಿತ್ತು. ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ್ ಅವರು ಹನುಮಂತಪ್ಪ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ, 10,000 ರೂ. ದಂಡವನ್ನು ಪಾವತಿಸಲು ಆದೇಶಿಸಿದ್ದರು. ನ್ಯಾಯಾಧೀಶರು ತೀರ್ಪು ಪ್ರಕಟಿಸಿದ ಬಳಿಕ ಶಿಕ್ಷೆಯ ಭಯದಿಂದ ಹನುಮಂತಪ್ಪ ಪರಾರಿಯಾಗಿದ್ದ.
ಈ ನಡುವೆ ನಗರ ಠಾಣೆಯಲ್ಲಿನ ಹಳೇ ಪ್ರಕರಣವನ್ನು ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಈ ಪ್ರಕರಣವನ್ನು ಎಎಸ್‌ಐ ಅತೀಕ್ ಅಹ್ಮದ್ ತಂಡಕ್ಕೆ ಒಪ್ಪಿಸಲಾಗಿತ್ತು.
ರಾಯಚೂರು ಜಿಲ್ಲೆಯ ಸಿರವಾರದಲ್ಲಿರುವ ಬಗ್ಗೆ ಮಾಹಿತಿ ಪಡೆದ ತಂಡ, ಆರೋಪಿಯನ್ನು ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಹನುಮಂತಪ್ಪ ಕೊಪ್ಪಳ ಜಿಲ್ಲೆಯ ಬಾದರ್ಲಿ ಗ್ರಾಮದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಈತನ ಮೊದಲ ಪತ್ನಿ ಅನಾರೋಗ್ಯದಿಂದ ನಿಧನರಾಗಿದ್ದರು. ನಂತರ ಹನುಮಂತಪ್ಪ ಮತ್ತೊಬ್ಬ ಮಹಿಳೆಯನ್ನು ವಿವಾಹವಾಗಿದ್ದ. ಆದರೆ, ಆಕೆ, ಕೆಲವು ವರ್ಷಗಳ ನಂತರ ಅವರು ಈತನನ್ನು ತೊರೆದು ತನ್ನ ಹೆತ್ತವರ ಮನೆಗೆ ಹೋಗಿದ್ದರು.
ನಂತರ ಇಂದಿರಗಿ ಗ್ರಾಮದ ರೇಣುಕಮ್ಮ ಎಂಬುವವರನ್ನು ಹನುಮಂತಪ್ಪ ವಿವಾಹವಾಗಿದ್ದ. ವಿವಾಹದ ಬಳಿಕ ಹನುಮಂತಪ್ಪ ರೇಣುಕಮ್ಮಳ ಮೇಲೆ ಅನುಮಾನಗೊಂಡು ಆಗಾಗ್ಗೆ ಜಗಳವಾಡುತ್ತಿದ್ದ. 2002 ರಲ್ಲಿ ಆಕೆಯನ್ನು ಹತ್ಯೆ ಮಾಡಿದ್ದ.
ಹತ್ಯೆ ಬಳಿಕ ಆಕೆಯ ಶವವನ್ನು ಗೋಣಿ ಚೀಲದಲ್ಲಿ ತುಂಬಿಸಿ ಗಂಗಾವತಿ-ಕಂಪ್ಲಿ ಬಸ್ಸಿನಲ್ಲಿ ಹಾಕಿದ್ದ. ಸಂಬಂಧಿಕರು ಪಾರ್ಸೆಲ್ ತೆಗೆದುಕೊಳ್ಳುತ್ತಾರೆಂದು ಕಂಡಕ್ಟರ್'ಗೆ ಹೇಳಿದ್ದೆ. ಆದರೆ, ಪಾರ್ಸೆಲ್'ನ್ನು ಯಾರೂ ತೆಗೆದುಕೊಳ್ಳಲು ಬಾರದಿದ್ದಾಗ ಮೂಟೆಯನ್ನು ತೆಗೆದು ನೋಡಿದಾಗ ಶವ ಇರುವುದು ಪತ್ತೆಯಾಗಿದೆ. ಬಳಿಕ ಕಂಡಕ್ಟರ್ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿ, ಬಂಧಿಸಿದ್ದರು. ಈ ನಡುವೆ ಶಿಕ್ಷೆ ಪ್ರಕಟದ ವೇಳೆ ಹನುಮಂತಪ್ಪ ಪರಾರಿಯಾಗಿದ್ದ.
ಹನುಮಂತಪ್ಪ 49 ವರ್ಷದ ಪ್ರಾಯದಲ್ಲಿದ್ದಾಗ ಪತ್ನಿಯನ್ನು ಕೊಲೆ ಮಾಡಿದ್ದ, ಈಗ ಆತನಿಗೆ 75 ವರ್ಷ ವಯಸ್ಸಾಗಿದೆ. ಕಳೆದ ಎರಡು ದಶಕದಿಂದ ಅಲೆಮಾರಿ ಜೀವನ ನಡೆಸುತ್ತಿದ್ದ ಹನುಮಂತ ಹುಸೇನಪ್ಪ, ಕೊನೆಗೆ ಸಿರವಾರ್ ತಾಲೂಕಿನ ಆತನೂರ ಗ್ರಾಮದಲ್ಲಿರುವುದನ್ನು ಪತ್ತೆಹಚ್ಚಿ ಪೊಲೀಸರು ಬಲೆ ಬೀಳಿಸಿದ್ದಾರೆ.
ಕಳೆದ ಆರು ತಿಂಗಳಿಂದ ಆರೋಪಿ ಚಲನವಲನದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದ ಗಂಗಾವತಿ ನಗರಠಾಣೆಯ ಸಿಬ್ಬಂದಿಗಳಾದ ಆತಿಕ್ ಅಹ್ಮದ್, ಸುಭಾಶ್ಚಂದ್ರಗೌಡ ಪಾಟೀಲ್ ಹಾಗೂ ಯಮನೂರಪ್ಪ ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



